ನವದೆಹಲಿ(ಏ.28): ಕೇರಳದಲ್ಲಿಂದು ಮತ್ತೆ 4 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಎಂದು ಸಿಎಂ ಪಿಣರಾಯ್ ವಿಜಯನ್ ನೇತೃತ್ವದ ಎಡ ಸರ್ಕಾರ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದೆ. ಈ ಮೂಲಕ ಇಲ್ಲಿಯವರೆಗೂ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 485ಕ್ಕೆ ಏರಿಯಾಗಿದೆ. ಇಂದು ಕಣ್ಣೂರು ಮತ್ತು ಕಾಸರಗೋಡಿನಲ್ಲಿ ತಲಾ ಎರಡು ಕೇಸು ಪತ್ತೆಯಾಗಿವೆ.
ಇನ್ನು, 485 ಕೇಸುಗಳ ಪೈಕಿ 362 ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕೇವಲ 123 ಆ್ಯಕ್ಟೀವ್ ಕೇಸುಗಳು ಇವೆ. 20,773 ಮಂದಿಯ ಮೇಲೆ ತೀವ್ರ ನಿಗಾವಹಿಸಲಾಗಿದೆ. 581 ಮಂದಿಗೆ ಪ್ರತ್ಯೇಕವಾಗಿ ಆಸ್ಪತ್ರಗಳಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. 23,980 ಜನರಿಗೆ ಕೊರೋನಾ ಟೆಸ್ಟ್ ಮಾಡಲಾಗಿದ್ದು, 23,277 ಮಂದಿಗೆ ನೆಗಿಟಿವ್ ಬಂದಿದೆ ಎಂದು ಕೇರಳ ಸರ್ಕಾರ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ನೀಡಿದ ಕರೆಯಂತೆ ಮೇ 3ರವರೆಗೂ ಕೇರಳ ಲಾಕ್ಡೌನ್ ಮಾಡಲಾಗಿದೆ. ಅಗತ್ಯ ಮತ್ತು ತುರ್ತು ಸೇವೆಗಳನ್ನು ಹೊರತುಪಡಿಸಿ ಕೇರಳದಲ್ಲಿ ಮತ್ಯಾವ ಸೇವೆಯೂ ಲಭ್ಯವಿರುವುದಿಲ್ಲ. ರಾಜ್ಯದ ಗಡಿಭಾಗಗಳಲ್ಲಿ ನಿರ್ಬಂಧ ಹಾಕಲಾಗಿದೆ. ಸಾರ್ವಜನಿಕ ಸಾರಿಗೆ ಲಭ್ಯವಿಲ್ಲ, ಖಾಸಗಿ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಪೆಟ್ರೋಲ್, ಎಲ್ಪಿಜಿ ಗ್ಯಾಸ್ ದೊರೆಯುತ್ತದೆ.
ಇದನ್ನೂ ಓದಿ: ಕೊರೋನಾ ವಿರುದ್ಧ ಹೋರಾಟ: ಆಶಾ ಕಾರ್ಯಕರ್ತೆಯರಿಗೆ ಕೇಂದ್ರದಿಂದ ಸಿಹಿಸುದ್ದಿ; 2 ಸಾವಿರ ವಿಶೇಷ ಭತ್ಯೆ ಘೋಷಣೆ
ರಾಜ್ಯದ ಎಲ್ಲಾ ರೆಸ್ಟೋರೆಂಟ್ಗಳನ್ನು ಮುಚ್ಚಲಾಗಿದೆ. ಆದರೆ ಹೋಮ್ ಡೆಲಿವರಿ ಸೌಲಭ್ಯ ಇರುತ್ತದೆ. ಅಗತ್ಯ ವಸ್ತುಗಳ ವಿತರಣೆ ಲಭ್ಯವಿರುತ್ತದೆ. ಸಾರ್ವಜನಿಕರು ಆದಷ್ಟು ಮನೆಯೊಳಗೆ ಇರುವಂತೆ ಕೇರಳ ಸಿಎಂ ಮನವಿ ಮಾಡಿದ್ದಾರೆ. ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಿಳಿಸಿದ್ದಾರೆ. ಬೇರೆ ರಾಜ್ಯಗಳಿಂದ ಕೇರಳಕ್ಕೆ ಆಗಮಿಸುವವರನ್ನು 14 ದಿನ ಕಡ್ಡಾಯವಾಗಿ ನಿಗಾ ಘಟಕದಲ್ಲಿ ಇರಿಸಲಾಗುತ್ತದೆ ಎಂದು ಸಿಎಂ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ