ನವದೆಹಲಿ: ದೇಶದಲ್ಲಿ ಕೊರೋನಾದಿಂದ ತೀವ್ರವಾಗಿ ಹಾನಿಗೊಳಗಾಗಿರುವುದು ರಾಜ್ಯ ದೆಹಲಿ. ಸೋಂಕಿತರ ಸಂಖ್ಯೆ, ಸಾವಿನ ಪ್ರಮಾಣದಲ್ಲಿ ಎಲ್ಲಾ ದಾಖಲೆಗಳನ್ನು ಸರಿಗಟ್ಟಿ ಘನಘೋರ ಪರಿಸ್ಥಿತಿಯನ್ನು ಕೊರೋನಾ ದೆಹಲಿಯಲ್ಲಿ ನಿರ್ಮಿಸಿದೆ. ಆಕ್ಸಿಜನ್ ಕೊರತೆ ನಿಭಾಯಿಸಲು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸರ್ಕಾರ ಪರದಾಡುತ್ತಿದೆ. ಕೇಂದ್ರ ಸರ್ಕಾರದಿಂದ ಅಗತ್ಯ ಪ್ರಮಾಣದ ಆಕ್ಸಿಜನ್ ಪಡೆಯಲು ಹರಸಾಹಸ ಪಡುತ್ತಿದೆ. ಈ ಮಧ್ಯೆ ಸಿಎಂ ಕೇಜ್ರಿವಾಲ್ ಕೊರೋನಾದಿಂದ ದೆಹಲಿಯನ್ನು ಬಚಾವ್ ಮಾಡಲು ಹೊಸ ಪ್ಲಾನ್ವೊಂದನ್ನು ಹೇಳಿದ್ದಾರೆ. ಕೇಂದ್ರ ಸರ್ಕಾರ ನನ್ನ ಲೆಕ್ಕವನ್ನು ಒಪ್ಪಿದರೆ ಕೊರೋನಾ ಯುದ್ಧದಲ್ಲಿ ದೆಹಲಿ ಗೆಲ್ಲಬಹುದು ಎನ್ನುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಸದ್ಯ ದೆಹಲಿಯಲ್ಲಿ ಲಸಿಕಾ ಅಭಿಯಾನ ಸಮರೋಪಾದಿ ನಡೆಯುತ್ತಿದೆ. ನಿತ್ಯ 1 ಲಕ್ಷ ಡೋಸ್ ವ್ಯಾಕ್ಸಿನ್ ನೀಡಲಾಗುತ್ತಿದೆ. ಇದನ್ನು 3 ಲಕ್ಷ ಡೋಸ್ಗೆ ಹೆಚ್ಚಿಸಬೇಕು. ಒಂದು ತಿಂಗಳಲ್ಲಿ 85 ಲಕ್ಷ ಡೋಸ್ ಲಸಿಕೆ ಲಭ್ಯವಾದರೆ 3 ತಿಂಗಳಲ್ಲಿ ದೆಹಲಿಯ ಎಲ್ಲರಿಗೂ ವ್ಯಾಕ್ಸಿನ್ ಹಾಕಬಹುದು. ಮೂರೇ ತಿಂಗಳಲ್ಲಿ ದೆಹಲಿ ವ್ಯಾಕ್ಸಿನೇಷನ್ ಮೂಲಕ ಕೊರೋನಾ ವಿರುದ್ಧ ಗೆಲ್ಲಬಹುದು ಎಂದಿದ್ದಾರೆ. ನನ್ನ ಈ ಲೆಕ್ಕವನ್ನು ಕೇಂದ್ರ ಸರ್ಕಾರ ಒಪ್ಪಿ 2.8 ಕೋಟಿ ಡೋಸ್ ವ್ಯಾಕ್ಸಿನ್ ನೀಡಬೇಕು. ಆಗ ನನ್ನ ಲಸಿಕಾ ಪ್ಲಾನ್ ಸಕ್ಸಸ್ ಆಗಲಿದೆ ಎಂದು ಕೇಜ್ರಿವಾಲ್ ತಮ್ಮ ವಾದವನ್ನು ಮುಂದಿಟ್ಟಿದ್ದಾರೆ.
ಕೇಂದ್ರ ಸರ್ಕಾರ ದೆಹಲಿಯಲ್ಲಿ ಸೃಷ್ಟಿಯಾಗಿರುವ ಆರೋಗ್ಯ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ನನ್ನ ಪ್ಲಾನ್ ಅನುಸರಿಸಬೇಕು ಎಂದು ಒತ್ತಾಯಿಸಿದ್ದಾರೆ. ಕೇಂದ್ರ ಸರ್ಕಾರ ನಾನು ಹೇಳಿದಷ್ಟು ಲಸಿಕೆ ಕೊಟ್ಟರೆ ಮೂರೇ ತಿಂಗಳಲ್ಲಿ ದೆಹಲಿಯನ್ನು ಸೋಂಕಿನಿಂದ ಬಚಾವ್ ಮಾಡಬಹುದು ಎಂದಿದ್ದಾರೆ. ಇದರ ಜೊತೆಗೆ ದೆಹಲಿಯಲ್ಲಿ ಲಸಿಕಾ ಕೇಂದ್ರಗಳ ಸಂಖ್ಯೆಯನ್ನೂ ಹೆಚ್ಚಿಸಬೇಕು. ಪಕ್ಕದ ನೋಯ್ಡ, ಗಾಜಿಯಾಬಾದ್ನಿಂದಲೂ ಜನ ಲಸಿಕೆಗಾಗಿ ದೆಹಲಿಗೆ ಆಗಮಿಸುತ್ತಿದ್ದಾರೆ. ಹೀಗಾಗಿ ದೆಹಲಿಗೆ ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ ಲಸಿಕೆ ನೀಡಬೇಕು ಎಂದು ಸಿಎಂ ಕೇಜ್ರಿವಾಲ್ ಆಗ್ರಹಿಸಿದರು.
ಕೊರೋನಾ 2ನೇ ಅಲೆಯಿಂದಲೇ ತತ್ತರಿಸಿರುವ ದೆಹಲಿಗೆ ಕೊರೋನಾ 3ನೇ ಅಲೆಯ ಆತಂಕವೂ ಇದೆ. ಲಸಿಕೆಯೊಂದೇ ನಮಗಿರುವ ಮಾರ್ಗ. ಹೀಗಾಗಿ ದೆಹಲಿಗೆ ಹೆಚ್ಚುವರಿ ಲಸಿಕೆಯ ಅಗತ್ಯವಿದೆ ಎಂದು ಆಗ್ರಹಿಸಿದರು. ಇನ್ನು 18 ವರ್ಷದೊಳಗಿನವರಿಗೂ ಲಸಿಕೆ ಕಂಡು ಹಿಡಿಯುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಸಿಎಂ ಕೇಜ್ರಿವಾಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ