ಬೆಂಗಳೂರು (ಜೂನ್ 13): ಸುಮಾರು ಒಂದೂವರೆ ತಿಂಗಳ ಕಾಲ ಸ್ತಬ್ಧವಾಗಿದ್ದ ಕರ್ನಾಟಕ ನಾಳೆಯಿಂದ ಕೊಂಚ ಮಾಮೂಲಿ ಸ್ಥಿತಿಗೆ ಬರಲಿದೆ. ನಾಳೆಯಿಂದ ಬೆಂಗಳೂರು ಸೇರಿದಂತೆ 19 ಜಿಲ್ಲೆಗಳಲ್ಲಿ ಲಾಕ್ಡೌನ್ ಸಡಿಲಗೊಳ್ಳಲಿದೆ. ನಾಳೆಯಿಂದ ಅನ್ಲಾಕ್ ಘೋಷಣೆಯಾಗಿದ್ದರೂ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಇನ್ನು, ಕೊರೋನಾ ಪಾಸಿಟಿವಿಟಿ ರೇಟ್ ಹೆಚ್ಚಾಗಿರುವ 11 ಜಿಲ್ಲೆಗಳಲ್ಲಿ ನಾಳೆಯಿಂದ ಜೂನ್ 21ರವರೆಗೆ ಲಾಕ್ಡೌನ್ ವಿಸ್ತರಣೆ ಮಾಡಲಾಗಿದೆ.
ರಾಜ್ಯದಲ್ಲಿ ಸೋಂಕು ಪ್ರಮಾಣ ಹೆಚ್ಚಿರುವ ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಮೈಸೂರು, ಚಾಮರಾಜನಗರ, ಹಾಸನ, ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಬೆಳಗಾವಿ ಹಾಗೂ ಕೊಡಗು ಜಿಲ್ಲೆಗಳಲ್ಲಿ ನಾಳೆಯಿಂದ 1 ವಾರ ಲಾಕ್ಡೌನ್ ಮುಂದುವರೆಯಲಿದೆ.
ಜೂನ್ 14ರಿಂದ ಹಂತ ಹಂತವಾಗಿ ಕ್ರಮೇಣ ಕೊರೊನಾ ನಿರ್ಬಂಧಗಳನ್ನು ಸಡಿಲಗೊಳಿಸಲು ನಿರ್ಧರಿಸಲಾಗಿದ್ದು, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಹಾಸನ, ಮಂಡ್ಯ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಕೊಡಗು ಜಿಲ್ಲೆಗಳಲ್ಲಿ ಪ್ರಸ್ತುತ ಮಾರ್ಗಸೂಚಿಯಲ್ಲಿ ಜಾರಿಯಲ್ಲಿರುವ ನಿಯಮಗಳು ಯಥಾಸ್ಥಿತಿ ಮುಂದುವರೆಯಲಿದೆ. ಈಗಾಗಲೇ ಜಾರಿಯಲ್ಲಿರುವ ಲಾಕ್ಡೌನ್ ನಿಯಮಗಳ ಮಾರ್ಗಸೂಚಿಗಳು ಈ 11 ಜಿಲ್ಲೆಗಳಿಗೆ ಅನ್ವಯವಾಗಲಿವೆ. ಅಗತ್ಯವಿದ್ದರೆ ಇನ್ನೂ ಕಠಿಣ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.
ಈ 11 ಜಿಲ್ಲೆಗಳಲ್ಲಿ ಜೂನ್ 21ರವರೆಗೆ ಲಾಕ್ಡೌನ್ ಮುಂದುವರೆಯಲಿದ್ದು, ಉಳಿದ ಜಿಲ್ಲೆಗಳಲ್ಲಿ ಸೆಮಿ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಅಂದರೆ, ಅನ್ಲಾಕ್ ಆದರೂ ಕೆಲವು ವಲಯಗಳಿಗೆ ಮಾತ್ರ ಅನುಮತಿ ನೀಡಲಾಗಿದ್ದು, ಕೆಲವು ನಿರ್ಬಂಧಗಳನ್ನೂ ವಿಧಿಸಲಾಗಿದೆ. ಅನ್ಲಾಕ್ ಇರುವ ಜಿಲ್ಲೆಗಳ ಪರಿಷ್ಕೃತ ಮಾರ್ಗಸೂಚಿಗಳು ಜೂನ್ 14ರ ಬೆಳಿಗ್ಗೆ 6 ಗಂಟೆಯಿಂದ ದಿನಾಂಕ ಜೂನ್ 21ರ ಬೆಳಿಗ್ಗೆ 6 ಗಂಟೆಯವರೆಗೆ ಜಾರಿಯಲ್ಲಿರುತ್ತದೆ.
ಇದನ್ನೂ ಓದಿ: Karnataka Weather Today: ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಅಬ್ಬರ; ಇಂದಿನಿಂದ ಜೂನ್ 17ರವರೆಗೆ ಆರೆಂಜ್ ಅಲರ್ಟ್ ಘೋಷಣೆ
ಹಾಗಾದರೆ, ಅನ್ಲಾಕ್ ಆಗುವ 19 ಜಿಲ್ಲೆಗಳಲ್ಲಿ ನಾಳೆಯಿಂದ ಜೂನ್ 21ರವರೆಗೆ ಯಾವುದಕ್ಕೆಲ್ಲ ಅನುಮತಿ? ಯಾವುದಕ್ಕೆ ನಿರ್ಬಂಧ? ಇಲ್ಲಿದೆ ಮಾಹಿತಿ...
ಯಾವುದಕ್ಕೆ ಅನುಮತಿ?:
1. ಎಲ್ಲಾ ಕಾರ್ಖಾನೆಗಳಲ್ಲಿ ಶೇ. 50ರಷ್ಟು ಸಿಬ್ಬಂದಿಯ ಹಾಜರಿಯೊಂದಿಗೆ ಕಾರ್ಯ ನಿರ್ವಹಿಸಲು ಅನುಮತಿ
2. ಗಾರ್ಮೆಂಟ್ ಕೈಗಾರಿಕೆಗಳಿಗೆ ಮಾತ್ರ ಶೇ. 30ರಷ್ಟು ಸಿಬ್ಬಂದಿಯ ಹಾಜರಿಯೊಂದಿಗೆ ಕಾರ್ಯ ನಿರ್ವಹಿಸಲು ಅನುಮತಿ.
3. ಎಲ್ಲಾ ಅಗತ್ಯ ಪದಾರ್ಥ ಖರೀದಿಸುವುದಕ್ಕೆ ಅನುವು ಮಾಡಿಕೊಡಲು ಅಂಗಡಿಗಳನ್ನು ಈಗಿರುವ ಸಮಯ ಬೆಳಿಗ್ಗೆ 6 ರಿಂದ 10 ಗಂಟೆಯನ್ನು ವಿಸ್ತರಿಸಿ ಮಧ್ಯಾಹ್ನ 2 ಗಂಟೆಯವರೆಗೆ ಅವಕಾಶ
4. ಎಲ್ಲಾ ನಿರ್ಮಾಣ ಚಟುವಟಿಕೆಗಳನ್ನು ಪ್ರಾರಂಭಿಸಲು ಅನುಮತಿ
ನಿಮಾಣ ಚಟುವಟಿಕೆಗೆ ಸಂಬಂಧಿಸಿದ ಅಂಗಡಿಗಳನ್ನು ವಿಶೇಷವಾಗಿ ಸಿಮೆಂಟ್ ಹಾಗೂ ಸ್ಟೀಲ್ ತೆರೆಯಲು ಅವಕಾಶ
5. ಪಾರ್ಕ್ ಗಳನ್ನು ಬೆಳಿಗ್ಗೆ 5 ರಿಂದ 10 ಗಂಟೆಯವರೆಗೆ ತೆರೆಯಲು ಅವಕಾಶ
6. ಬೀದಿ ಬದಿ ವ್ಯಾಪಾರಿಗಳು ಬೆಳಿಗ್ಗೆ 6ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವ್ಯಾಪಾರ ಮಾಡಲು ಅವಕಾಶ
7. ಆಟೋ ಮತ್ತು ಟ್ಯಾಕ್ಸಿಗಳಲ್ಲಿ ಇಬ್ಬರು ಪ್ರಯಾಣಿಕರಿಗೆ ಸಂಚರಿಸಲು ಅವಕಾಶ
8. ಅಗತ್ಯವಿದ್ದರೆ ಅಂತರ್ ಜಿಲ್ಲೆ ಸಂಚಾರಕ್ಕೆ ಅನುಮತಿ
9. ಅನಾರೋಗ್ಯ ಪೀಡಿತ ರೋಗಿಗಳ ತುರ್ತು ಸಂಚಾರಕ್ಕೆ ಅವಕಾಶ.
10. ಮೆಡಿಕಲ್ ಸಿಬ್ಬಂದಿಗೆ ಅವಕಾಶ
11. ಸರಕು ಸಾಗಣೆ ಮತ್ತು ಆನ್ ಲೈನ್ ಸೇವೆಗಳಿಗೆ ಅವಕಾಶ
12. ಅಂತರ್ಜಾಲ, ಟೆಲಿಕಾಂ ಸೇವೆ ಸಿಬ್ಬಂದಿ ಓಡಾಟಕ್ಕೆ ಅವಕಾಶ
13. ರಾತ್ರಿಪಾಳಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಐಡಿ ಕಾರ್ಡ್ ಇಟ್ಟುಕೊಂಡು ಸಂಚಾರಕ್ಕೆ ಅವಕಾಶ
14. ವಿಮಾನ ಮತ್ತು ರೈಲು ಸಂಚಾರಕ್ಕೆ ಅವಕಾಶ. ಟಿಕೆಟ್ ತೋರಿಸಿ ಪ್ರಯಾಣಿಸಬಹುದು.
15. ಬೆಳಗ್ಗೆ 6ರಿಂದ 2 ಗಂಟೆಯವರೆಗೆ ಕನ್ನಡಕದ ಅಂಗಡಿ ತೆರೆಯಲು ಅವಕಾಶ
ಇದನ್ನೂ ಓದಿ: Karnataka Politics: ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ವಿಚಾರ; ಜೂನ್ 18ಕ್ಕೆ ಯಡಿಯೂರಪ್ಪ ಭವಿಷ್ಯ ನಿರ್ಧಾರ?
ಯಾವುದಕ್ಕೆ ಅನುಮತಿ ಇಲ್ಲ?:
1. ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ ಸಂಚಾರ ಸ್ಥಗಿತ
2. ರಾತ್ರಿ 7 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಕೋವಿಡ್ ನೈಟ್ ಕರ್ಫ್ಯೂ ಜಾರಿ. ಈ ವೇಳೆ ಸಂಚಾರಕ್ಕೆ ನಿರ್ಬಂಧ
3. ವೀಕೆಂಡ್ ಕರ್ಫ್ಯೂ ಹಿನ್ನೆಲೆ ಶುಕ್ರವಾರ ರಾತ್ರಿ 7 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ಸಂಚಾರಕ್ಕೆ ನಿರ್ಬಂಧ
4. ಅಂತರ್ ರಾಜ್ಯ ಸಂಚಾರಕ್ಕೆ ನಿರ್ಬಂಧ
ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಮೈಸೂರು, ಚಾಮರಾಜನಗರ, ಹಾಸನ, ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ, ಮಂಡ್ಯ ಬೆಳಗಾವಿ ಹಾಗೂ ಕೊಡಗು ಜಿಲ್ಲೆಗಳಲ್ಲಿ ಈಗಿರುವಂತೆ ಲಾಕ್ಡೌನ್ ಮಾರ್ಗಸೂಚಿಯನ್ನು ಜೂ. 21ರವರೆಗೆ ಮುಂದುವರೆಸಬೇಕು. ಇದರಲ್ಲಿ ಯಾವುದೇ ಬದಲಾವಣೆಯೂ ಇರುವುದಿಲ್ಲ ಎಂದು ಸರ್ಕಾರ ಆದೇಶಿಸಿದೆ.
ಜೂ. 14ರಿಂದ 21ರವರೆಗೆ ಮಾರ್ಗಸೂಚಿಯಲ್ಲಿ ಬದಲಾವಣೆ ಮಾಡಿದ್ದು ದೈನಂದಿನ ಹಾಗೂ ವಾರಾಂತ್ಯದ ಕರ್ಫ್ಯೂ ಜಾರಿ ಮಾಡಿದೆ. ಇನ್ನು ಪರಿಸ್ಥಿತಿ ನೋಡಿಕೊಂಡು ಹಂತ ಹಂತವಾಗಿ ಅನ್ ಲಾಕ್ ಮಾಡಲಾಗುತ್ತದೆ. ಪ್ರತಿ ದಿನ ರಾತ್ರಿ 7 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ರಾತ್ರಿ ಕರ್ಫ್ಯೂ ಇರಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ