ಆಟೋ,ಕ್ಯಾಬ್ ಚಾಲಕರಿಗೆ ಯಾವಾಗ ಬರುತ್ತೆ 5000 ಪರಿಹಾರಧನ?: ಹಣ ಪಡೆಯಲು ಇವೆ ಹತ್ತಾರು ಷರತ್ತುಗಳು

ವಾಹನ ಮಾಲೀಕರಿಗಿಂತ ಡ್ರೈವರ್‌ಗಳೇ ಹೆಚ್ಚಾಗಿದ್ದಾರೆ. ಈ ಯೋಜನೆಯಿಂದ ಮಾಲೀಕರಿಗಷ್ಟೆ ಲಾಭವಾಗಲಿದ್ದು,  ವಾಹನ ಬಾಡಿಗೆ ಪಡೆದ ಯಾವೊಬ್ಬ ಚಾಲಕನಿಗೂ ಈ ಯೋಜನೆಯ ಹಣ ಸಿಗಲ್ಲ ಅಂತ ಆರೋಪ ಕೇಳಿ ಬಂದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮೈಸೂರು: ಲಾಕ್‌ಡೌನ್ ಪರಿಣಾಮ ಆಟೋ ಮತ್ತು ಕ್ಯಾಬ್ ಡ್ರೈವರ್‌ಗಳಿಗೆ ಸರ್ಕಾರ ಪರಿಹಾರ ಘೋಷಣೆ ಮಾಡಿ ತಿಂಗಳು ಕಳೆದರೂ ಯಾವೊಬ್ಬ ಚಾಲಕನಿಗೂ ಪರಿಹಾರದ ಹಣ ಮಾತ್ರ ಸಿಕ್ಕಿಲ್ಲ. ಮೈಸೂರಿನಲ್ಲೂ ಆಟೋ ಕ್ಯಾಬ್‌ ಡ್ರೈವರ್‌ಗಳಿಗೆ ಇನ್ನು ಸಹ ಪರಿಹಾರ ಹಣ ತಲುಪಿಲ್ಲ. ಅರ್ಜಿ ಹಾಕಿ ಕಾಯುತ್ತಿರುವ ಆಟೋ, ಕ್ಯಾಬ್ ಡ್ರೈವರ್‌ಗಳು ಸಿಎಂ ಬಿಎಸ್‌ವೈ ಘೋಷಿಸಿರುವ 5000 ರೂ. ಪರಿಹಾರ ಧನ ಯಾವಾಗ ಸಿಗಲಿದೆ ಎಂದು ಕಾಯುತ್ತಿದ್ದಾರೆ. ಪರಿಹಾರ ಪಡೆಯಲು ಹಲವಾರು ಷರತ್ತುಗಳು ಇದ್ದು ಎಲ್ಲ ಷರತ್ತುಗಳನ್ನು ನಿಭಾಯಿಸಿದರೂ ಪರಿಹಾರದ ಹಣ ಮಾತ್ರ ಬಂದಿಲ್ಲ.

ಈ ಪರಿಹಾರದ ಹಣ ಪಡೆಯೋಕೆ‌ ಆಟೋ ಅಥವಾ ಟ್ಯಾಕ್ಸಿ ಮಾಲೀಕರಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆಯಾಗಬೇಕು. ಅರ್ಜಿ ಜೊತೆಯಲ್ಲಿ ವಾಹನದ ಆರ್‌ಸಿ, ಚಾಲಕರ ಡಿಎಲ್, ಇನ್ಸುರೇನ್ಸ್ ಸಲ್ಲಿಕೆಯಾಗಿರಬೇಕು. ವಾಹನದ ಮಾಲೀಕನೆ ಚಾಲಕನಾಗಿದ್ದರೆ ಮಾತ್ರ ಪರಿಹಾರ ಧನ ಲಭ್ಯವಾಗೋದು, ಕೇವಲ ಚಾಲಕನಾದರೆ 5000 ಪರಿಹಾರ ಧನ ಸಿಗೋಲ್ಲ. ಇನ್ನು ಕ್ಯಾಬ್‌ಗಳಿಗೆ ವಾಹನದ ಚಾರ್ಸಿ ನಂಬರ್ ಹಾಕಿದರೆ ಮಾತ್ರ ಓಟಿಪಿ ಬರೋದು. ಆದ್ರೆ ಚಾರ್ಸಿ ನಂಬರ್ ಅನ್ನು ಪೂರ್ಣಪ್ರಮಾಣದಲ್ಲಿ ಆನ್‌ಲೈನ್ ವೆಬ್‌ಸೈಟ್ ಸ್ವೀಕರಿಸುತ್ತಿಲ್ಲ. ಮೊದಲು ಪೋಸ್ಟ್ ಆಫೀಸ್‌ನಲ್ಲಿ ಅರ್ಜಿ ಹಾಕಿ ನಂತರ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುತ್ತಿರೋದು ಗೊಂದಲದ ವಾತಾವರಣ ನಿರ್ಮಾಣವಾಗಿದೆ.

ಮೈಸೂರಿನಲ್ಲಿ 25 ಸಾವಿರಕ್ಕೂ ಹೆಚ್ಚು ಆಟೋಗಳು ಓಡಾಡುತ್ತಿದ್ದು, ಈ ಎಲ್ಲ ಅರ್ಹತೆ ಹೊಂದಿರುವ 20 ಸಾವಿರ ಚಾಲಕರು ಸರ್ಕಾರದ ಯೋಜನೆಯ ಫಲಾನುಭವಿಗಳಾಗಬಹುದಾಗಿದೆ. ಆದರೆ ಈವರೆಗೂ ಒಬ್ಬ ಚಾಲಕನಿಗೂ ಪರಿಹಾರ ಹಣ ಸಿಗದೆ, ಹಣಕ್ಕಾಗಿ ಚಾಲಕರು ಕಾಯುತ್ತಲೇ ಇದ್ದಾರೆ. ಇತ್ತ ಮೈಸೂರಿನಲ್ಲಿರುವ 5000ಕ್ಕೂ ಹೆಚ್ಚು ಕ್ಯಾಬ್‌ಗಳ ಡ್ರೈವರ್‌ಗಳು ಸಹ ಸರ್ಕಾರದ ಪರಿಹಾರದ ಫಲಾನುಭವಿಗಳಾಗಲು ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ 3000ಕ್ಕೂ ಹೆಚ್ಚು ಕ್ಯಾಬ್ ಡ್ರೈವರ್‌ಗಳು ಅರ್ಜಿ ಸಲ್ಲಿಸಿದ್ದು ಈವರೆಗೂ ಯಾರೋಬ್ಬರಿಗು ಹಣ ಬಂದಿಲ್ಲ. ಆದರೆ ವಾಹನ ಮಾಲೀಕರಿಗಿಂತ ಡ್ರೈವರ್‌ಗಳೇ ಹೆಚ್ಚಾಗಿದ್ದಾರೆ. ಈ ಯೋಜನೆಯಿಂದ ಮಾಲೀಕರಿಗಷ್ಟೆ ಲಾಭವಾಗಲಿದ್ದು,  ವಾಹನ ಬಾಡಿಗೆ ಪಡೆದ ಯಾವೊಬ್ಬ ಚಾಲಕನಿಗೂ ಈ ಯೋಜನೆಯ ಹಣ ಸಿಗಲ್ಲ ಅಂತ ಆರೋಪ ಕೇಳಿ ಬಂದಿದೆ. ಆಟೋಗಳ ಲೋನ್ ಇಎಂಗೆ ದುಪ್ಪಟ್ಟು ಬಡ್ಡಿ ವಿಧಿಸಿದ್ದು, ಮೂರು ತಿಂಗಳು ಇಎಂಐ ಕಟ್ಟದಿದ್ದಕ್ಕೆ ದುಪ್ಪಟ್ಟು ಬಡ್ಡಿ ಹಾಕಿರುವ ಖಾಸಗಿ ಫೈನಾನ್ಸ್ ಕಂಪನಿಗಳು ಬಡ್ಡಿ ಕಟ್ಟುವಂತೆ ಪಿಡಸುತ್ತಿವೆ. ಪರಿಹಾರ ಧನಕ್ಕಿಂತ ಸಮಸ್ಯೆಗಳನ್ನ ಪರಿಹರಿಸಿ ಎಂದು ಆಟೋ ಹಾಗೂ ಕ್ಯಾಬ್ ಡ್ರೈವರ್‌ಗಳು ಮನವಿ ಮಾಡಿದ್ದಾರೆ.

ಇದನ್ನು ಓದಿ: Bangalore Lockdown: ಬೆಂಗಳೂರಿನಲ್ಲಿ ರಾತ್ರಿ 9ರಿಂದ ಬೆಳಗ್ಗೆ 5ರವರೆಗೆ ಕರ್ಫ್ಯೂ; ಕಮಿಷನರ್ ಆದೇಶ

ಈ ನಡುವೆ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಲಾಕ್‌ಡೌನ್ ನಿಯಮಗಳು ಸಹ ತೀವ್ರತರದ ತಲೆನೋವಾಗಿವೆ. ಆಟೋಗಳಲ್ಲಿ ಒನ್ ಪ್ಲಸ್ ಟೂ ಹಾಗೂ ಟ್ಯಾಕ್ಸಿಯಲ್ಲಿ ಒನ್ ಪ್ಲಸ್ ತ್ರೀ ನಿಯಮದಿಂದಾಗಿ ಹೆಚ್ಚು ನಷ್ಟವಾಗುತ್ತಿದ್ದು, ಎರಡು ತಿಂಗಳ ಇಎಂಐ ಕಟ್ಟಲು ಸಹ ನಮಗೆ ಹಣ ದುಡಿಯಲು ಆಗುತ್ತಿಲ್ಲ. ಸರ್ಕಾರ ನಮಗೆ ಮೊದಲಿನಂತೆ ಆಟೋ ಟ್ಯಾಕ್ಸಿ ಓಡಿಸಲು ಅವಕಾಶ ಕೊಡಬೇಕು. ಅಂತರಜಿಲ್ಲೆ,ಅಂತರರಾಜ್ಯ ಮುಕ್ತವಾಗಿ ಓಡಾಡಲು ಅವಕಾಶ ನೀಡಬೇಕು. ಇವರು ನೀಡುವ 5000  ಪರಿಹಾರ ಹಣ ಬೇಡ. ಆದರರೆ ನಮಗೆ ಆಗಿರುವ ಸಮಸ್ಯೆಗಳಿಗೆ ಪರಿಹಾರ ಹುಡುಕಿ ಸಮಸ್ಯೆ ದೂರ ಮಾಡಬೇಕು ಎಂದು ಆಟೋ ಮತ್ತು ಕ್ಯಾಬ್ ಚಾಲಕರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಎರಡು ತಿಂಗಳ ಲಾಕ್‌ಡೌನ್‌ನಲ್ಲಿ ಆಟೋ ಟ್ಯಾಕ್ಸಿಗಳ ಚಕ್ರಗಳು ತಿರುಗದೆ ಆಟೋ ಡ್ರೈವರ್‌ಗಳ ಬದುಕಿನ ಬಂಡಿ ಸಹ ನಿಂತಂತೆ ಆಗಿದೆ.
First published: