ಕೊರೋನಾ ವಾರ್ಡ್​ನಲ್ಲಿ ಟ್ಯಾಬ್ ವ್ಯವಸ್ಥೆ: ರೋಗಿಗಳ ಜೊತೆ ಸಂಬಂಧಿಕರ ಸಂಪರ್ಕಕ್ಕೆ ವಿನೂತನ ತಂತ್ರ

ಸಂಬಂಧಿಕರಿಗೆ ಅವರೊಂದಿಗೆ ಮಾತನಾಡಲು ಟ್ಯಾಬ್ ವ್ಯವಸ್ಥೆ ಮಾಡಲಾಗುತ್ತಿದೆ. ಸಂಬಂಧಿಕರಿಗೆ ಇಡುವ ಅನುಮಾನಗಳನ್ನು ದೂರ ಮಾಡಲು ಈ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ

ಟ್ಯಾಬ್​​

ಟ್ಯಾಬ್​​

  • Share this:
ಕಲಬುರ್ಗಿ: ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 55ಕ್ಕೇರಿದೆ. ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಜನರನ್ನು ಆತಂಕಕ್ಕೀಡು ಮಾಡಿದೆ. ಮತ್ತೊಂದೆಡೆ ಸೋಂಕಿತರಿಗೆ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಕೊರೋನಾ ಸೋಂಕಿತರಿಗೆ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲವೆಂಬ ಆರೋಪ ನಿರಾಧಾರವಾಗಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಸ್ಪಷ್ಟಪಡಿಸಿದ್ದಾರೆ.

ಸೋಂಕಿತರಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ಸಂಬಂಧಿಕರಿಗೆ ಐಸೋಲೇಷನ್ ವಾರ್ಡ್​ಗೆ ಬಿಡಲಾಗಲ್ಲ. ಹೀಗಾಗಿ ಕೆಲವೊಬ್ಬರು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಇವೆಲ್ಲ ಗೊಂದಲಗಳ ನಿವಾರಣೆಗೆ ಐಸೋಲೇಷನ್ ವಾರ್ಡ್ ನಲ್ಲಿ ಟ್ಯಾಬ್ ಇಡುವ ವ್ಯವಸ್ಥೆ ಮಾಡಲಾಗುತ್ತಿದೆ. ರೆಸಿಪ್ಶನ್ ನಲ್ಲಿಯೂ ಟ್ಯಾಬ್ ಗಳನ್ನು ಇಡಲಾಗುತ್ತಿದೆ. ವಾರ್ಡ್ ನಲ್ಲಿ ನಾಲ್ಕು ಟ್ಯಾಬ್ ಹಾಗೂ ರೆಸಿಪ್ಶನ್ ಬಳಿ ನಾಲ್ಕು ಟ್ಯಾಬ್ ವ್ಯವಸ್ಥೆ ಮಾಡಲಾಗುತ್ತಿದೆ. ಟ್ಯಾಬ್ ಮೂಲಕ ರೋಗಿಗಳನ್ನು ತೋರಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಸಂಬಂಧಿಕರಿಗೆ ಅವರೊಂದಿಗೆ ಮಾತನಾಡಲು ಟ್ಯಾಬ್ ವ್ಯವಸ್ಥೆ ಮಾಡಲಾಗುತ್ತಿದೆ. ಸಂಬಂಧಿಕರಿಗೆ ಇಡುವ ಅನುಮಾನಗಳನ್ನು ದೂರ ಮಾಡಲು ಈ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ ಎಂದು ಹೇಳಿದ ಕಾರಜೋಳ, ಟ್ಯಾಬ್ ಗಳನ್ನು ಪ್ರದರ್ಶಿಸಿ ತೋರಿಸಿದರು.

ಹೆಚ್ಚುವರಿ ಟೆಸ್ಟ್ ಲ್ಯಾಬ್ ಗೆ ವ್ಯವಸ್ಥೆ:

ಕಲಬುರ್ಗಿ ಜಿಲ್ಲೆಯಲ್ಲಿ ಕೊರೋನಾ ವ್ಯಾಪಕಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಟೆಸ್ಟ್ ಲ್ಯಾಬ್ ಗೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಡಿಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ಕಲಬುರ್ಗಿಯ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಕೊರೋನಾ ಸಭೆ ನಡೆಸಿದ ನಂತರ ಮಾತನಾಡಿದ ಅವರು, ಕಲಬುರ್ಗಿ ಟೆಸ್ಟಿಂಗ್ ಲ್ಯಾಬ್ ಮೇಲೆ ಒತ್ತಡ ಹೆಚ್ಚಾಗಿದೆ. ಕಲಬುರ್ಗಿ ಜೊತೆ ಬೀದರ್, ಯಾದಗಿರಿ, ವಿಜಯಪುರ ಜಿಲ್ಲೆಗಳ ಸ್ಯಾಂಪಲ್ ಗಳು ಸಹ ಇಲ್ಲಿಗೆ ಬರುತ್ತಿವೆ. ಹೀಗಾಗಿ ಕೆಲ ಜಿಲ್ಲೆಗಳಲ್ಲಿ ಖಾಲಿ ಇರೋ ಟೆಸ್ಟ್ ಲ್ಯಾಬ್ ಕಲಬುರ್ಗಿ ಕಳುಹಿಸಿಕೊಡಲು ಮನವಿ ಮಾಡಲಾಗಿದೆ. 10 ಜಿಲ್ಲೆಗಳಲ್ಲಿ ಲ್ಯಾಬ್ ಗಳು ಖಾಲಿ ಇವೆ. ಅವುಗಳನ್ನು ಕಲಬುರ್ಗಿಗೆ ಕಳಿಸಿಕೊಡಲು ಸಿಎಂಗೆ ಮನವಿ ಮಾಡಿದ್ದು, ಸೂಕ್ತ ಕ್ರಮ ಕೈಗೊಳ್ಳೋದಾಗಿ ಸಿಎಂ ರಿಂದ ಭರವಸೆ ನೀಡಿದ್ದಾರೆ. ಇದರಿಂದ ಕಲಬುರ್ಗಿ, ಬೀದರ್, ಯಾದಗಿರಿ, ವಿಜಯಪುರ ಜಿಲ್ಲೆಗಳಿಗೆ ಅನುಕೂಲವಾಗಲಿದೆ ಎಂದರು.

ಆಟೋ ಚಾಲಕರು, ಕ್ಷೌರಿಕರಿಗೆ ದಿನಸಿ ಕಿಟ್:

ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಕಲಬುರ್ಗಿ ಜಿಲ್ಲೆಯಲ್ಲಿ ಆಟೋ ಚಾಲಕರು, ಕ್ಷೌರಿಕರೂ ತೊಂದರೆಗೆ ಒಳಗಾಗಿದ್ದಾರೆ. ಜಿಲ್ಲೆಯ 16 ಸಾವಿರ ಆಟೋ ಚಾಲಕರಿಗೆ ಮತ್ತು 3500 ಕ್ಷೌರಿಕರಿಗೂ ದಿನಸಿ ಕಿಟ್ ವಿತರಿಸಲು ತೀರ್ಮಾನಿಸಲಾಗಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದ್ದಾರೆ. ಡಿಸಿ ಕಛೇರಿಯಲ್ಲಿಯೇ ಕ್ಷೌರಿಕರಿಗೆ ದಿನಸಿ ಕಿಟ್ ವಿತರಿಸಿದರು. ಅಕ್ಕಿ, ಬೇಳೆ ಇತ್ಯಾದಿಗಳನ್ನೊ ಕಿಟ್ ಒಳಗೊಂಡಿದ್ದು, ಮೂರು ದಿನಗಳಲ್ಲಿ ಎಲ್ಲರಿಗೂ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆಯಿಂದ ವಸತಿ ನಿಲಯಗಳಲ್ಲಿ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಕೊರೋನಾ ಸೋಂಕಿತರಿಗೆ ಮೊಟ್ಟೆ ಮತ್ತು ಹಾಲು ಕೊಡುವಂತೆ ಸೂಚಿಸಲಾಗಿದೆ. ಅಗತ್ಯವಿದ್ದವರು ಕೇಳಿ ಪಡೆಯಬಹುದು. ಪೌಷ್ಠಿಕ ಆಹಾರ ನೀಡಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ವಿವಿಧ ನಿಗಮಗಳಿಂದ ತರಕಾರಿ, ಹಣ್ಣು ಮಾರೋ ಮಹಿಳೆಯರಿಗೆ ಸಾಲ ವಿತರಿಸಲು ತೀರ್ಮಾನಿಸಲಾಗಿದ್ದು, 50 ಸಾವಿರ ರೂಪಾಯಿಯಿಂದ 1 ಲಕ್ಷ ರೂಪಾಯಿವರೆಗೆ ಸಾಲ ಕೊಡಲಾಗುತ್ತಿದೆ. ರೈತರು ಬೆಳೆದ ಬೆಳೆಗಳನ್ನು ಹಾಪ್ ಕಾಮ್ಸ್ ದರದಲ್ಲಿ ಖರೀದಿಗೆ ಸೂಚನೆ ನೀಡಲಾಗಿದೆ ಎಂದು ಇದೇ ಸಂದರ್ಭದಲ್ಲಿ ಕಾರಜೋಳ ಮಾಹಿತಿ ನೀಡಿದ್ದಾರೆ.

ರೆಡ್ ನಿಂದ ಆರೆಂಜ್ ಝೋನ್ ಗೆ ಬಂದ ಕಲಬುರ್ಗಿ:

ಇಲ್ಲಿಯವರೆಗೂ ರೆಡ್ ಝೋನ್ ನಲ್ಲಿದ್ದ ಕಲಬುರ್ಗಿ ಜಿಲ್ಲೆ ಆರೆಂಜ್ ಝೋನ್ ಗೆ ಬಂದಿದೆ. ಹೀಗಾಗಿ ಕೆಲವೊಂದು ನಿಯಮಗಳ ಸಡಿಲಿಕೆ ಮಾಡಲಾಗಿದೆ. ಕೈಗಾರಿಕೆ ಪುನರಾರಾಂಭಕ್ಕೆ ಅವಕಾಶ ಕಲ್ಪಿಸಲಾಗಿದೆ. ವಾಣಿಜ್ಯ ವಹಿವಾಟು ನಡೆಸಲು ಅವಕಾಶ ನೀಡಲಾಗಿದೆ. ಆಟೋ, ಟ್ಯಾಕ್ಸಿ, ಕಾರು ಓಡಾಟಕ್ಕೆ ಅನುಮತಿ ಕೊಡಲಾಗಿದೆ. ಸಾಮಾಜಿಕ ಅಂತರ ಕಾಪಾಡಿಕೊಂಡು ಪ್ರಯಾಣಿಸಲು ಅವಕಾಶ ನೀಡಲಾಗಿದೆ. ಕೋರಿಯರ್, ಪೋಸ್ಟ್ ವಹಿವಾಟಿಗೂ ಅವಕಾಶ ಕಲ್ಪಿಸಲಾಗಿದೆ. ಕೇಂದ್ರದ ನಿರ್ದೇಶನದಂತೆ ಮೇ 4 ರಿಂದ ಇದು ಜಾರಿಗೆ ಬರಲಿದೆ. ಆದರೆ ಕಂಟೈನ್ಮೆಂಟ್ ಝೋನ್ ಗಳಲ್ಲಿ ಮಾತ್ರ ನಿರ್ಬಂಧ ಮುಂದುವರಿಕೆಯಲಿದೆ ಎಂದು ಗೋವಿಂದ ಕಾರಜೋಳ ತಿಳಿಸಿದ್ದಾರೆ.

ಇದನ್ನೂ ಓದಿ : ರಾಯಚೂರಲ್ಲಿ ಕೊರೋನಾ ಎಫೆಕ್ಟ್: ಸಂಕಷ್ಟದಲ್ಲಿ ಬದನೆಕಾಯಿ ಬೆಳೆದ ರೈತ

ಕೊರೋನಾ ನಿಯಂತ್ರಣಕ್ಕೆ ಶ್ರಮಿಸಿದವರಿಗೆ ಅಭಿನಂದನಾ ಪತ್ರ ನೀಡಲಾಗುವುದು. ನಗರದ ಎಂ.ಆರ್. ವೈದ್ಯಕೀಯ ಕಾಲೇಜು, ಕೆ.ಬಿ.ಎನ್. ಕಾಲೇಜು, ಆಶಾ ಕಾರ್ಯಕರ್ತೆಯರು, ವೈದ್ಯರು ಮತ್ತಿತರರಿಗೆ ಅಭಿನಂದನಾ ಪತ್ರ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
First published: