ಬೆಂಗಳೂರು (ಮೇ 15): ದೇಶದಲ್ಲಿ 3ನೇ ಹಂತದ ಲಾಕ್ಡೌನ್ ಮುಗಿಯಲು ಎರಡೇ ದಿನ ಬಾಕಿ ಉಳಿದಿದೆ. ಆದರೆ, ಕರ್ನಾಟಕದಲ್ಲಿ ಕೊರೋನಾ ಅಬ್ಬರ ಹೆಚ್ಚುತ್ತಲೇ ಇದೆ. ಇಂದು ಒಂದೇ ದಿನ ರಾಜ್ಯದಲ್ಲಿ 69 ಕೊರೋನಾ ಪ್ರಕರಣಗಳು ಪತ್ತೆಯಾಗುವ ಮೂಲಕ ಮಾರಕ ಸೋಂಕಿನ ಭೀತಿ ಹೆಚ್ಚಾಗಿದೆ. ಈ ಮೂಲಕ ಕರ್ನಾಟಕದಲ್ಲಿ 1,056 ಕೊರೋನಾ ಕೇಸ್ಗಳು ಪತ್ತೆಯಾಗಿವೆ.
ರಾಜ್ಯದಲ್ಲಿ ಕೊರೋನಾ ಕೇಸ್ಗಳು 1 ಸಾವಿರದ ಗಡಿ ದಾಟಿವೆ. 480 ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 36 ರೋಗಿಗಳು ಕೊರೋನಾದಿಂದ ಸಾವನ್ನಪ್ಪಿದ್ದಾರೆ. ಓರ್ವ ಕೊರೋನಾ ರೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 11 ರೋಗಿಗಳ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು ಪತ್ತೆಯಾಗಿರುವ ಹೊಸ ಕೊರೋನಾ ಕೇಸುಗಳ ಪೈಕಿ ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ಆಗಮಿಸಿದ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ದುಬೈನಿಂದ 2 ದಿನಗಳ ಹಿಂದೆ ಮಂಗಳೂರಿಗೆ ಆಗಮಿಸಿದ 21 ಪ್ರಯಾಣಿಕರಿಗೆ ಕೊರೋನಾ ದೃಢಪಟ್ಟಿದೆ. ಇಂದು ಬೆಂಗಳೂರಿನಲ್ಲಿ 13, ದಕ್ಷಿಣ ಕನ್ನಡ, 16, ಮಂಡ್ಯ- 13, ಬೀದರ್- 7, ಕಲಬುರ್ಗಿ- 3 ಹಾಸನ- 4, ಉಡುಪಿ- 5, ಚಿತ್ರದುರ್ಗ- 2, ಶಿವಮೊಗ್ಗ-1, ಬಾಗಲಕೋಟೆ- 1, ಕೋಲಾರ- 1, ಉತ್ತರ ಕನ್ನಡ- 1 ಕೊರೋನಾ ಕೇಸುಗಳು ಪತ್ತೆಯಾಗಿವೆ.
ಇದನ್ನೂ ಓದಿ: ದುಬೈ ಪ್ರಯಾಣಿಕರಿಂದ ಮಂಗಳೂರಲ್ಲಿ ಕೊರೋನಾ ಭೀತಿ ಹೆಚ್ಚಳ; ಜಿಲ್ಲಾಡಳಿತಕ್ಕೆ ತಲೆನೋವಾದ ಸುರತ್ಕಲ್ ಸೋಂಕಿತೆ
ಇಂದು ಬೀದರ್ನ ಚಿತ್ರಗುಪ್ತ ನಗರದ ಕೊರೋನಾ ರೋಗಿಯೊಬ್ಬರು ಸಾವನ್ನಪ್ಪಿದ್ದಾರೆ. ಹೈದರಾಬಾದ್ಗೆ ತೆರಳಿದ್ದ 52 ವರ್ಷದ ರೋಗಿಗೆ ಕೊರೋನಾ ಲಕ್ಷಣಗಳು ಕಂಡುಬಂದಿದ್ದರಿಂದ ಮೇ 12ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಇಂದು ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೊರೋನಾದಿಂದ 36 ರೋಗಿಗಳು ಸಾವನ್ನಪ್ಪಿದಂತಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ