ಚೀನಾದಿಂದ ಕಾಲ್ತೆಗೆಯಲಿರುವ ದಕ್ಷಿಣ ಕೊರಿಯಾದ ಕಂಪನಿಗಳ ಚಿತ್ತ ಭಾರತದತ್ತ?

ಕೋವಿಡ್-19 ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತಕ್ಕೆ ಸಹಾಯ ಮಾಡಲು ದಕ್ಷಿಣ ಕೊರಿಯಾ ತೋರುತ್ತಿರುವ ಆಸಕ್ತಿ ಗಮನಾರ್ಹವಾದುದು. ಕೋವಿಡ್ ಟೆಸ್ಟ್ ಕಿಟ್​ಗಳನ್ನು ಭಾರೀ ಪ್ರಮಾಣದಲ್ಲಿ ಉತ್ಪಾದಿಸಲು ಕೊರಿಯನ್ ಕಂಪನಿಗಳು ಒಪ್ಪಿಕೊಂಡಿವೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ನವದೆಹಲಿ(ಏ. 21): ಕೊರೋನಾ ವೈರಸ್ ಬಿಕ್ಕಟ್ಟು ಹೊಸ ಜಾಗತಿಕ ಆರ್ಥಿಕ ಸಮೀಕರಣ ಸೃಷ್ಟಿಸುವ ಸಾಧ್ಯತೆ ಗೋಚರವಾಗುತ್ತಿದೆ. ಚೀನಾದ ಬಗ್ಗೆ ಅನೇಕ ರಾಷ್ಟ್ರಗಳಿಗೆ ಇರುವ ಒಳಬೇಗುದಿ ಈಗ ಇನ್ನಷ್ಟು ಹೆಚ್ಚಾಗುತ್ತಿದೆ. ತಯಾರಿಕಾ ಕ್ಷೇತ್ರದಲ್ಲಿ (ಮ್ಯಾನುಫ್ಯಾಕ್ಚರಿಂಗ್) ಚೀನಾ ಮೇಲೆ ಅತಿ ಹೆಚ್ಚು ಅವಲಂಬಿತವಾಗಿದ್ದ ದೇಶಗಳಿಗೆ ಈಗ ದಿಗಿಲು ಮೂಡುತ್ತಿದೆ. ಈ ಹಿನ್ನೆಲೆಯಲ್ಲಿ ಅವೆಲ್ಲವೂ ಚೀನಾದಿಂದ ಕಾಲ್ತೆಗೆಯಲು ಒಳ್ಳೆಯ ಅವಕಾಶಕ್ಕಾಗಿ ಕಾಯುತ್ತಿವೆ. ಅಮೆರಿಕ, ಜಪಾನ್, ದಕ್ಷಿಣ ಕೊರಿಯಾದಂಥ ದೇಶಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿವೆ. ದಕ್ಷಿಣ ಕೊರಿಯಾದ ಕಂಪನಿಗಳು ಚೀನಾದಲ್ಲಿರುವ ತಮ್ಮ ತಯಾರಿಕಾ ಘಟಕಗಳನ್ನ ಬೇರೆಡೆಗೆ ಸ್ಥಳಾಂತರ ಮಾಡುವ ಯೋಚನೆಯಲ್ಲಿವೆ. ಮೂಲಗಳ ಪ್ರಕಾರ, ಭಾರತದಲ್ಲಿ ಮ್ಯಾನುಫ್ಯಾಕ್ಚರಿಂಗ್ ಯೂನಿಟ್​ಗಳನ್ನು ಸ್ಥಾಪಿಸಲು ದಕ್ಷಿಣ ಕೊರಿಯಾ ಯೋಜಿಸಿದೆ.

  ದಕ್ಷಿಣ ಕೊರಿಯಾಗೆ ಭಾರತದ ರಾಯಭಾರಿಯಾಗಿರುವ ಶ್ರೀಪ್ರಿಯಾ ರಂಗನಾಥನ್ ಅವರು ಈ ಬಗ್ಗೆ ಸ್ವಲ್ಪ ಸುಳಿವು ನೀಡಿದ್ಧಾರೆ. ದಕ್ಷಿಣ ಕೊರಿಯಾ ರಾಜಧಾನಿ ಸೋಲ್​ನಲ್ಲಿರುವ ಶ್ರೀಪ್ರಿಯಾ ಅವರು ಅಲ್ಲಿಂದಲೇ ದೂರವಾಣಿ ಮೂಲಕ ನ್ಯೂಸ್18 ಜೊತೆ ಮಾತನಾಡಿದ್ದಾರೆ. ಅವರ ಪ್ರಕಾರ, ದಕ್ಷಿಣ ಕೊರಿಯಾದ ಕಂಪನಿಗಳು ಚೀನಾದಿಂದ ತಮ್ಮ ಘಟಕಗಳನ್ನ ಬೇರೆಡೆಗೆ ಶಿಫ್ಟ್ ಮಾಡಲಿವೆ. ಇದರ ಲಾಭ ಭಾರತಕ್ಕೆ ಆಗುವ ಸಾಧ್ಯತೆ ಇದೆ ಎಂದರು.

  ಇದನ್ನೂ ಓದಿ: ಶಸ್ತ್ರಚಿಕಿತ್ಸೆ ಬಳಿಕ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಆರೋಗ್ಯ ಸ್ಥಿತಿ ಗಂಭೀರ?

  “ಈಗಲೇ ಈ ಬೆಳವಣಿಗೆ ಆಗುವುದಿಲ್ಲ. ಮುಂದಿನ ಕೆಲ ತಿಂಗಳ ನಂತರ ದಕ್ಷಿಣ ಕೊರಿಯಾದ ಕಂಪನಿಗಳು ಈ ನಿರ್ಧಾರಕ್ಕೆ ಬರಬಹುದು. ಭಾರತದಲ್ಲಿ ಉತ್ಪಾದನಾ ಘಟಕ ಪ್ರಾರಂಭಿಸಿದರೆ ಭಾರತದ ಬೇಡಿಕೆಗಳನ್ನು ಅಲ್ಲಿಂದಲೇ ಪೂರೈಸಲು ಸಾಧ್ಯವಾಗಬಹುದು ಎಂಬ ಆಲೋಚನೆ ಸರಿ ಎನಿಸಬಹುದು” ಎಂದು ಶ್ರೀಪ್ರಿಯಾ ರಂಗನಾಥನ್ ಹೇಳಿದರು.

  ಕೋವಿಡ್-19 ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತಕ್ಕೆ ಸಹಾಯ ಮಾಡಲು ದಕ್ಷಿಣ ಕೊರಿಯಾ ತೋರುತ್ತಿರುವ ಆಸಕ್ತಿ ಗಮನಾರ್ಹವಾದುದು. ಕೋವಿಡ್ ಟೆಸ್ಟ್ ಕಿಟ್​ಗಳನ್ನು ಭಾರೀ ಪ್ರಮಾಣದಲ್ಲಿ ಉತ್ಪಾದಿಸಲು ಕೊರಿಯನ್ ಕಂಪನಿಗಳು ಒಪ್ಪಿಕೊಂಡಿವೆ. ಹುಮಾಸಿಸ್ ಎಂಬ ಕೊರಿಯಾ ಕಂಪನಿ 5 ಲಕ್ಷ ರ್ಯಾಪಿಡ್ ಟೆಸ್ ಕಿಟ್ ಪೂರೈಸಲು ಒಪ್ಪಂದ ಮಾಡಿಕೊಂಡಿದೆ. ಶ್ರೀಪ್ರಿಯಾ ರಂಗನಾಥನ್ ಕೂಡ ಇದೇ ಅಂಶವನ್ನು ಎತ್ತಿತೋರಿಸುತ್ತಾರೆ.

  “ದಕ್ಷಿಣ ಕೊರಿಯಾ ಕಂಪನಿಗಳು ಕೋವಿಡ್-19 ಟೆಸ್ಟಿಂಗ್ ಕಿಟ್​ಗಳ ಉತ್ಪಾದನೆಯ ಪ್ರಮಾಣವನ್ನು ಬಹಳಷ್ಟು ಹೆಚ್ಚಿಸಿವೆ. ಅದರ ಈ ಸಾಮರ್ಥ್ಯದ ಸಂಪೂರ್ಣ ಉಪಯೋಗವನ್ನು ಹಾಗೂ ಭಾರತದ ಬಗ್ಗೆ ದಕ್ಷಿಣ ಕೊರಿಯಾಗೆ ಇರುವ ಒಲವನ್ನು ನಾವು ಸರಿಯಾಗಿ ಬಳಸಿಕೊಳ್ಳಬೇಕು” ಎಂದು ಭಾರತದ ರಾಯಭಾರಿ ಹೇಳುತ್ತಾರೆ.

  ಇದನ್ನೂ ಓದಿ: ರಾಷ್ಟ್ರಪತಿ ಭವನಕ್ಕೂ ತಟ್ಟಿದ ಕೊರೋನಾ ಭೀತಿ; ಓರ್ವ ಸಿಬ್ಬಂದಿಗೆ ಸೋಂಕು, 125 ಕುಟುಂಬಗಳ ಕ್ವಾರಂಟೈನ್

  ಇದೇ ವೇಳೆ, ಜಪಾನ್ ದೇಶ ಕೂಡ ಚೀನಾದಿಂದ ತಮ್ಮ ಕಂಪನಿಗಳನ್ನು ಬೇರೆಡೆ ಶಿಫ್ಟ್ ಮಾಡುವ ಯೋಚನೆಯಲ್ಲಿದೆ. ಗುಜರಾತ್ ಸರ್ಕಾರ ಜಪಾನ್ ಕಂಪನಿಗಳನ್ನ ಸೆಳೆಯಲು ಗಂಭೀರವಾಗಿ ಪ್ರಯತ್ನಿಸುತ್ತಿದೆ. ಅದಕ್ಕಾಗಿ 2.2 ಬಿಲಿಯನ್ ಡಾಲರ್ (ಸುಮಾರು 16 ಸಾವಿರ ರೂಪಾಯಿ) ಪ್ಯಾಕೇಜ್ ಘೋಷಿಸಿದೆ. ಚೀನಾದಿಂದ ತಮ್ಮ ಘಟಕಗಳನ್ನ ಹಿಂಪಡೆದು ಗುಜರಾತ್​ನಲ್ಲಿ ಸ್ಥಾಪಿಸುವಂತೆ ಕೋರಿ ಗುಜರಾತ್ ಸರ್ಕಾರ ಜಪಾನ್​ಗೆ ಪತ್ರ ಕೂಡ ಬರೆದಿದೆ.

  ಅಮೆರಿಕ ದೇಶ ಕೂಡ ಚೀನಾದೊಂದಿಗಿನ ಬಂಧವನ್ನು ಆದಷ್ಟೂ ಬಿಡಿಸಿಕೊಳ್ಳಲು ತುದಿಗಾಲಿನಲ್ಲಿದೆ. ಆ್ಯಪಲ್​ನಂಥ ಹಲವು ಅಮೆರಿಕನ್ ಕಂಪನಿಗಳು ಚೀನಾದಲ್ಲಿ ನೆಲೆಯೂರಿವೆ. ಅಷ್ಟೂ ಕಂಪನಿಗಳು ಭಾರತಕ್ಕೆ ವಲಸೆ ಬಂದರೆ ಸಾಕಷ್ಟು ಆರ್ಥಿಕ ಲಾಭವಾಗಲಿದೆ ಎಂಬ ಲೆಕ್ಕಾಚಾರ ಇದೆ.

  ವರದಿ: ಮಹಾ ಸಿದ್ದಿಕಿ, CNN-News18

  First published: