news18-kannada Updated:May 12, 2020, 10:06 AM IST
ಸಾಂದರ್ಭಿಕ ಚಿತ್ರ
ಬಾಗಲಕೋಟೆ(ಮೇ.12): ಕೊರೋನಾ ಲಾಕ್ಡೌನ್ನಿಂದ ಸಂಕಷ್ಟದಲ್ಲಿರುವ ಕಾರ್ಮಿಕರು ತಮ್ಮ ತವರಿಗೆ ವಾಪಸ್ಸಾಗುತ್ತಿದ್ದಾರೆ. ಇತ್ತೀಚೆಗೆ ರಾಜ್ಯ ಸರ್ಕಾರ ರೈಲು ಕ್ಯಾನ್ಸಲ್ ಮಾಡುವ ಮೂಲಕ ವಲಸೆ ಕಾರ್ಮಿಕರಿಗೆ ಕೈಕೊಟ್ಟ ಬಳಿಕವಂತೂ ಅವರು ಯಾರನ್ನು ನಂಬಿಕೊಂಡಿಲ್ಲ. ಇಲ್ಲಿ ಗುತ್ತಿಗೆದಾರರು ಸಂಬಳವೂ ನೀಡುತ್ತಿಲ್ಲ, ಸರ್ಕಾರವೂ ನಮಗೆ ಯಾವುದೇ ಸಹಾಯ ಮಾಡುತ್ತಿಲ್ಲ. ಹಾಗಾಗಿ ನಾವು ನಮ್ಮ ಪಾಡಿಗೆ ಕಾಲ್ನಡಿಗೆ ಮೂಲಕ ಮನೆ ಸೇರುತ್ತೇವೆ ಎಂದು ಕಾರ್ಮಿಕರು ತಮ್ಮ ರಾಜ್ಯಗಳಿಗೆ ಪ್ರಯಾಣ ಬೆಳೆಸುತ್ತಿದ್ಧಾರೆ. ಇವರು ಹೊಟ್ಟೆಗೆ ಊಟ ಇಲ್ಲದೇ ಪರದಾಡುತ್ತ ನಡೆದುಕೊಂಡು ಹೋಗುವ ದೃಶ್ಯಗಳನ್ನು ಕಂಡರೇ ಎಂಥವರ ಮನಸ್ಸಾದರೂ ಮರುಗುತ್ತದೆ.
ಹೀಗೆ 40ಕ್ಕೂ ಹೆಚ್ಚು ಮಂದಿ ವಲಸೆ ಕಾರ್ಮಿಕರು ಬಾಗಲಕೋಟೆಯಿಂದ ರಾಜಸ್ತಾನದತ್ತ ತೆರಳಿದ್ದರು. ಇವರನ್ನು ಸಂಭಾಳಿಸುವುದೇ ಜಿಲ್ಲಾಡಳಿತಕ್ಕೆ ಸವಾಲಾಗಿ ಪರಿಣಮಿಸಿತ್ತು. ಹೀಗಾಗಿ ಬಾಗಲಕೋಟೆ ಪೊಲೀಸರು ದಾರಿ ಮಧ್ಯೆಯೇ ಈ ಕಾರ್ಮಿಕರನ್ನು ತಡೆದು ಗುತ್ತಿಗೆದಾರನಿಗೆ ಒಪ್ಪಿಸಿ ಎಲ್ಲಾ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದಾರೆ.
ಯಾವುದೇ ಪಾಸ್ ಇಲ್ಲದೇ ತೆರಳುತ್ತಿದ್ದ ಕಾರ್ಮಿಕರನ್ನು ಬಾಗಲಕೋಟೆ ನಗರದ ಮುಚಖಂಡಿ ಕ್ರಾಸ್ ಬಳಿ ತಡೆದ ಪೊಲೀಸ್ ಅಧಿಕಾರಿಗಳ ತಂಡ ತವರಿಗೆ ಹೋಗುವುದನ್ನು ತಡೆದರು. ಬಳಿಕ ಇವರನ್ನು ಗುತ್ತಿಗೆದಾರರನಿಗೆ ಅವರಿಗೆ ಬೇಕಾದ ವ್ಯವಸ್ಥೆ ಮಾಡುವಂತೆ ಸೂಚಿಸಿ ಮಾನವೀಯತೆ ಮೆರೆದರು.
ಇದನ್ನೂ ಓದಿ: ಕೊರೋನಾ ವಿರುದ್ಧ ಹೋರಾಟ: ಕೇಂದ್ರದಿಂದ 13 ರಾಜ್ಯಗಳಿಗೆ 6,195 ಕೋಟಿ ರೂ. ಬಿಡುಗಡೆ; ಕರ್ನಾಟಕಕ್ಕಿಲ್ಲ ನಯಾಪೈಸೆ
ಇನ್ನು, ಬಾಗಲಕೋಟೆ ಜಿಲ್ಲಾಡಳಿತವೂ ರಾಜಸ್ತಾನ ಸೇರಿದಂತೆ ಇತರ ರಾಜ್ಯಗಳ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಕಾರ್ಮಿಕ ವರ್ಗವನ್ನು ಸಾರಿಗೆ ಬಸ್ ಮೂಲಕ ಅವರ ತವರಿಗೆ ಕಳುಹಿಸಿದೆ. ಹೀಗೆ ಸಾವಿರಾರು ಕಾರ್ಮಿಕರನ್ನು ಅವರ ರಾಜ್ಯಗಳಿಗೆ ಕಳುಹಿಸಿದ ಬಳಿಕವೂ ಮತ್ತಷ್ಟು ಕಾರ್ಮಿಕರು ತವರಿಗೆ ಹೋಗಬೇಕೆಂದು ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಅವರಿಗೆ ವಾಹನಗಳ ವ್ಯವಸ್ಥೆ ಮಾಡಿ ಕಳುಹಿಸುವುದು ಸಮಸ್ಯೆ ಆಗಿ ಪರಿಣಮಿಸಿದೆ.
First published:
May 12, 2020, 9:12 AM IST