HOME » NEWS » Coronavirus-latest-news » KARNATAKA MINISTER DR K SUDHAKAR CLARIFIED ON KARNATAKA KERALA BORDER CLOSED ALLEGATION OF CM PINARAYI VIJAYAN SCT

ಕರ್ನಾಟಕ ಗಡಿ ಪ್ರವೇಶಕ್ಕೆ ನಿರ್ಬಂಧ ಹೇರಿಲ್ಲ; ಕೇರಳ ಸಿಎಂ ಆರೋಪಕ್ಕೆ ಸಚಿವ ಡಾ. ಸುಧಾಕರ್ ಸ್ಪಷ್ಟನೆ

Karnataka Coronavirus: ನಮ್ಮ ಸರ್ಕಾರ ಕೇರಳದ ಪ್ರಯಾಣಿಕರಿಗೆ ನಿರ್ಬಂಧ ಹೇರಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ 72 ಗಂಟೆಯೊಳಗಿನ ಕೊರೋನಾ ನೆಗೆಟಿವ್ ವರದಿ ನೀಡುವಂತೆ ಸೂಚಿಸಿದ್ದೇವೆ. ಸುಳ್ಳು ಆರೋಪ ಮಾಡಿ ನಮ್ಮ ಸರ್ಕಾರದ ವಿರುದ್ಧ ಪ್ರಧಾನಿಗೆ ದೂರು ನೀಡಲಾಗಿದೆ ಎಂದು ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.

news18-kannada
Updated:February 24, 2021, 12:56 PM IST
ಕರ್ನಾಟಕ ಗಡಿ ಪ್ರವೇಶಕ್ಕೆ ನಿರ್ಬಂಧ ಹೇರಿಲ್ಲ; ಕೇರಳ ಸಿಎಂ ಆರೋಪಕ್ಕೆ ಸಚಿವ ಡಾ. ಸುಧಾಕರ್ ಸ್ಪಷ್ಟನೆ
ಸಚಿವ ಕೆ. ಸುಧಾಕರ್.
  • Share this:
ಬೆಂಗಳೂರು (ಫೆ. 24): ನೆರೆಯ ರಾಜ್ಯವಾದ ಕೇರಳದಲ್ಲಿ ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇರಳ- ಕರ್ನಾಟಕ ಗಡಿಯಲ್ಲಿ ನಿರ್ಬಂಧಗಳನ್ನು ವಿಧಿಸಲಾಗಿದೆ. ಈ ಕುರಿತು ಕೇರಳ ಸರ್ಕಾರ ಈಗಾಗಲೇ ಪ್ರಧಾನಿ ಮೋದಿಗೆ ಪತ್ರ ಬರೆದಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಈ ಹಿಂದೆ ಕರ್ನಾಟಕದಲ್ಲಿ ಕೊರೋನಾ ಕೇಸ್​ಗಳು ಹೆಚ್ಚಾಗಿದ್ದಾಗ ಕೇರಳದವರು ಗಡಿಯಲ್ಲಿ ನಿರ್ಬಂಧ ಹೇರಿರಲಿಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ನಮ್ಮ ಸರ್ಕಾರ ಕೇರಳದ ಪ್ರಯಾಣಿಕರಿಗೆ ನಿರ್ಬಂಧ ಹೇರಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ 72 ಗಂಟೆಯೊಳಗಿನ ಕೊರೋನಾ ನೆಗೆಟಿವ್ ವರದಿ ನೀಡುವಂತೆ ಸೂಚಿಸಿದ್ದೇವೆ ಅಷ್ಟೇ. ಆದರೂ ಸುಳ್ಳು ಆರೋಪ ಮಾಡಿ ನಮ್ಮ ಸರ್ಕಾರದ ವಿರುದ್ಧ ಪ್ರಧಾನಿಗೆ ದೂರು ನೀಡಲಾಗಿದೆ ಎಂದಿದ್ದಾರೆ.

ಮೋದಿಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಪತ್ರ ಬರೆದಿರುವುದಕ್ಕೆ ಟಾಂಗ್ ನೀಡಿರುವ ಸಚಿವ ಡಾ. ಕೆ. ಸುಧಾಕರ್, ಕೇರಳದಲ್ಲಿ ಕೊರೋನಾ ಕೇಸ್‌ಗಳ ಸಂಖ್ಯೆ ಬಹಳ ಕಡಿಮೆ ಇದ್ದಾಗ ಅವರು ಕರ್ನಾಟಕದ ಮೇಲೆ ನಿಷೇಧ ಹೇರಿರಲಿಲ್ಲವೇ? ಕೇರಳ ಮುಖ್ಯಮಂತ್ರಿಗಳು ಯಾಕೆ ಹಾಗೆ ಪತ್ರ ಬರೆದರು ಅಂತ ಗೊತ್ತಿಲ್ಲ. ಅಂತಾರಾಜ್ಯ ಪ್ರಯಾಣಿಕರಿಗೆ ಸರ್ಕಾರ ನಿಷೇಧ ಮಾಡಿಲ್ಲ. ಅಂತಹ ವಿಚಾರ ಏನಾದರೂ ಇದ್ದರೆ ನಾವು ಸರ್ಕಾರದ ಬಳಿ ಮಾತನಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಯಾವುದೇ ಕಾರಣಕ್ಕೂ ಅಂತಾರಾಜ್ಯ ಪ್ರಯಾಣವನ್ನೂ ಕರ್ನಾಟಕ ನಿಷೇಧ ಮಾಡಿಲ್ಲ. ಅಂತಹ ದೊಡ್ಡ ತೀರ್ಮಾನ ತೆಗೆದುಕೊಳ್ಳಲು ಸಿಎಂ ಬಳಿ ಮಾತನಾಡುತ್ತೇವೆ. ಕೇರಳ ಮತ್ತು ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದೆ. ನಾವು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಸಚಿವ ಸುಧಾಕರ್ ಹೇಳಿದ್ದಾರೆ.
ಕೇರಳದ ಗಡಿಯಿಂದ ಕರ್ನಾಟಕ ಪ್ರವೇಶಿಸಲು ನಿಬಂಧನೆಗಳನ್ನು ಹೇರಲಾಗಿದೆ. ಇದರಿಂದ ಕಾಸರಗೋಡಿನಿಂದ ಮಂಗಳೂರು ಭಾಗಕ್ಕೆ ಸಂಚರಿಸುತ್ತಿದ್ದವರಿಗೆ ಸಮಸ್ಯೆಯಾಗುತ್ತಿದೆ ಎಂದು ಕೇರಳ ಆಕ್ರೋಶ ವ್ಯಕ್ತಪಡಿಸಿತ್ತು. ಗಡಿ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವ ಕರ್ನಾಟಕದ ವಿರುದ್ಧ ಕೇರಳ ಸರ್ಕಾರದ ಸಿಎಂ ಪಿಣರಾಯಿ ವಿಜಯನ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ಈ ವಿಷಯದಲ್ಲಿ ಮಧ್ಯ ಪ್ರವೇಶಿಸಬೇಕು ಒತ್ತಾಯಿಸಿದ್ದರು.ಇದನ್ನೂ ಓದಿ: Bengaluru Coronavirus: ಬೆಂಗಳೂರಿನಲ್ಲಿ ಹೆಚ್ಚಿದ ಕೊರೋನಾ ಕೇಸ್; ಬೆಳ್ಳಂದೂರಿನ ಅಪಾರ್ಟ್​ಮೆಂಟ್ ಸೀಲ್​ಡೌನ್

ನಿನ್ನೆ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದ ಕೇರಳ ಸಿಎಂ ಪಿಣರಾಯಿ ವಿಜಯನ್, ಅಂತರಾಜ್ಯ ಗಡಿ ಬಂದ್ ಮಾಡುವುದು ಮತ್ತು ನಿರ್ಬಂಧ ವಿಧಿಸುವುದು ಕೇಂದ್ರ ಸರ್ಕಾರದ ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ. ಅಂತರಾಜ್ಯ ಪ್ರಯಾಣಕ್ಕೆ ಯಾವುದೇ ರಾಜ್ಯ ನಿರ್ಬಂಧ ಹೇರುವಂತಿಲ್ಲ. ನೆರೆಯ ರಾಜ್ಯಕ್ಕೆ ಪ್ರಯಾಣಿಸುವಾಗ ಜನರು ಎದುರಿಸುತ್ತಿರುವ ಕಷ್ಟಗಳನ್ನು ಪರಿಹರಿಸಲು ಪ್ರಧಾನಿ ಮೋದಿ ತುರ್ತು ಮಧ್ಯ ಪ್ರವೇಶಿಸಬೇಕು ಎಂದು ಆಗ್ರಹಿಸಿದ್ದರು.

ಕರ್ನಾಟಕದ ನಿರ್ಬಂಧಗಳಿಂದಾಗಿ ಅಗತ್ಯ ಸರಕುಗಳನ್ನು ಸಾಗಿಸುವ ಟ್ರಕ್‌ಗಳು, ವಿದ್ಯಾರ್ಥಿಗಳು, ವೈದ್ಯಕೀಯ ಚಿಕಿತ್ಸೆಗಾಗಿ ಹೋಗುವ ರೋಗಿಗಳು ಸೇರಿದಂತೆ ಅನೇಕ ಜನರು ರಾಜ್ಯದ ಗಡಿಯಲ್ಲಿ ಅನಗತ್ಯ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಅಂತರರಾಜ್ಯ ಸಂಚಾರಕ್ಕೆ ನಿರ್ಬಂಧ ಹೇರುವುದು ಭಾರತ ಸರ್ಕಾರದ ಸೂಚನೆಗೆ ವಿರುದ್ಧವಾಗಿದೆ ಎಂದು ಪತ್ರದಲ್ಲಿ ಹೇಳಲಾಗಿತ್ತು.

ಕೇರಳದಿಂದ ಕರ್ನಾಟಕಕ್ಕೆ ಬರುವವರಿಗೆ ಆರ್ ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯಗೊಳಿಸಲಾಗಿದೆ. ಹಾಗೇ, ಕಾಸರಗೋಡು ಸೇರಿದಂತೆ ಕರ್ನಾಟಕಕ್ಕೆ ಕೇರಳದಿಂದ ಪ್ರವೇಶಿಸುವ ಕೆಲವು ಮಾರ್ಗಗಳನ್ನು ಸಹ ಬಂದ್ ಮಾಡಲಾಗಿದೆ. ಆದರೆ, ಉಳಿದೆಡೆ ಮಾರ್ಗಗಳು ಓಪನ್ ಆಗಿದ್ದು, 72 ಗಂಟೆಯೊಳಗೆ ಪರೀಕ್ಷೆ ಮಾಡಿಸಿದ ಕೊರೋನಾ ನೆಗೆಟಿವ್ ವರದಿ ನೀಡಿದರೆ ಕರ್ನಾಟಕದೊಳಗೆ ಬರಲು ಅವಕಾಶವಿದೆ.
Published by: Sushma Chakre
First published: February 24, 2021, 12:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories