ಲಾಕ್​ಡೌನ್ ಎಫೆಕ್ಟ್: ಜನರಿಗೆ ಸರಳತೆಯ ಪಾಠ; ಸಿಂಪಲ್ ಮದುವೆಗೆ ಸಾಕ್ಷಿಯಾಯ್ತು ದೊಡ್ಡಬಳ್ಳಾಪುರ

Karnataka Lockdown News: ಅದ್ದೂರಿ ಮದುವೆಗಳಲ್ಲಿ ನೆಮ್ಮದಿ ಕಡಿಮೆಯೇ. ಮನೆ ಮುಂದೆ ಚಪ್ಪರ ಹಾಕಿ ಖುದ್ದು ಅಡುಗೆ ಮಾಡುತ್ತಾ ಸವಿಯೋದರಲ್ಲಿ ಇರುವ ನೆಮ್ಮದಿ ಆಡಂಬರದ ಮದುವೆಗಳಲ್ಲಿ ಸಿಗೋದಿಲ್ಲ ಎಂದು ವಧುವಿನ ತಂದೆ ಹೇಳುತ್ತಾರೆ.

ದೊಡ್ಡಬಳ್ಳಾಪುರದಲ್ಲಿ ನಡೆದ ಒಂದು ಸರಳ ಮದುವೆ

ದೊಡ್ಡಬಳ್ಳಾಪುರದಲ್ಲಿ ನಡೆದ ಒಂದು ಸರಳ ಮದುವೆ

  • Share this:
ದೊಡ್ಡಬಳ್ಳಾಪುರ: ಕೊರೋನದಿಂದ ಇಡೀ ಪ್ರಪಂಚವೇ ತತ್ತರಿಸಿ ಹೋಗ್ತಿದೆ. ಹಲವು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅದೆಷ್ಟೋ ಮಂದಿ ಭಯದಿಂದ ಜೀವನ ನಡೆಸುತ್ತಿದ್ದಾರೆ. ಹಲವರು ಸೋಂಕಿನಿಂದ ನರಳುತ್ತಾ ಆಸ್ಪತ್ರೆಗಳಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಇದರ ಮಧ್ಯೆ ಕೊರೋನಾ ಲಾಕ್​ಡೌನ್ ಕೆಲ ಪಾಸಿಟಿವ್ ಸಂಗತಿಗಳಿಗೂ ಕಾರಣವಾಗುತ್ತಿರುವುದು ಸುಳ್ಳಲ್ಲ. ನಮ್ಮ ಅಹಮಿಕೆ, ನಮ್ಮ ಅವಶ್ಯಕತೆಗಳು ಕುಸಿದಿವೆ. ಸಂತೃಪ್ತಿ ಹೊಂದಲು ಎಷ್ಟು ಅಗತ್ಯ ಎಂಬ ಪಾಠ ಸಿಕ್ಕಿದೆ. ವೈಭವೋಪೇತ ಆಚರಣೆಗಳ ಭ್ರಮೆ ಕಡಿಮೆಯಾಗಿವೆ.

ಅದೆಷ್ಟೋ ಮನೆಗಳಲ್ಲಿ ಕೆಲಸದ ನಡುವೆ ಚೌಕಾಭಾರ, ಕೇರಂ, ಆನೆಘಟ್ಟ ಸೇರಿದಂಥೆ ಹತ್ತು ಹಲವು ಗ್ರಾಮೀಣ ಆಟಗಳಲ್ಲಿ ತಲ್ಲೀನವಾಗಿದ್ದು, ಮನೆಯವರೆಲ್ಲಾ ಒಟ್ಟಾಗಿ ಕುಳಿತು ಆಟ ಆಡುವುದರ ಜೊತೆಗೆ ಅಡುಗೆ, ಸ್ಪೆಷಲ್ ಖಾದ್ಯಗಳೊಂದಿಗೆ ದಿನ ಕಳೆಯುತ್ತಿದಾರೆ. ಇನ್ನೊಂದು ಪಾಸಿಟಿವ್ ಬದಲಾವಣೆ ಎಂದರೆ ಸರಳ ಹಾಗೂ ಸರಳಾತಿ ಸರಳ ಮದುವೆ ಸಮಾರಂಭಗಳು. ಲಾಕ್ ಡೌನ್ ಕಾರಣದಿಂದ ದೊಡ್ಡ ಛತ್ರಗಳಲ್ಲಿ ವಿವಾಹ ಸಾಧ್ಯವಿಲ್ಲದೆ ಮನೆಯಲ್ಲೋ, ದೇವಸ್ಥಾನಗಳಲ್ಲೋ ಮದುವೆ ನಡೆಸಿ ಸಂತೃಪ್ತರಾಗುತ್ತಿದ್ದೆ. 30-40 ವರ್ಷದ ಹಿಂದೆ ನಡೆಯುತ್ತಿದ್ದಂತೆಯೇ ಈಗ ಮದುವೆ ಸಮಾರಂಭಗಳು ನಡೆಯುತ್ತಿರುವುದು ಗಮನಾರ್ಹ. ಇದು ಕೊರೋನಾದಿಂದ ಉದ್ಭವಿಸಿದ ಪಾಸಿಟಿವ್ ಅಂಶವೇ.

ಇದನ್ನೂ ಓದಿ: ಮೂರು ವರ್ಷದ ಮಗು ಬಲಿ ಪಡೆದಿದ್ದ ಚಿರತೆ ಸೆರೆ ; ನಿಟ್ಟುಸಿರುಬಿಟ್ಟ ಗ್ರಾಮಸ್ಥರು

ಇಂಥದ್ದೊಂದು ಸಾಂಪ್ರದಾಯಿಕ ಹಳ್ಳಿ ಸೊಗಡಿನ ಮದುವೆಗೆ ಸಾಕ್ಷಿಯಾಗಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ವೆಂಕಟೇಶ್-ಚಂದ್ರಕಲಾ ದಂಪತಿ. ಇವರು ತಮ್ಮ ಮಗಳು ಸಹನಾ ಹಾಗೂ ಗೋಪಿ ಅವರ ಮದುವೆಯನ್ನು ಊರ ದೇವಸ್ಥಾನದ ಮುಂದೆ ನೆರವೇರಿಸಿದರು. ಬಹಳ ಸರಳವಾಗಿ ಹಾಗೂ ಸಂಪ್ರದಾಯಬದ್ಧವಾಗಿ ಊರ ಜನರ ಸಮ್ಮುಖದಲ್ಲಿ ಈ ಮದುವೆ ನಡೆಯಿತು.

ಇಂಥ ಸರಳ ಸಮಾರಂಭದಲ್ಲಿ ಛತ್ರ, ತೋರಿಕೆ, ಬಡವ ಶ್ರೀಮಂತ ಎಂಬ ಭೇದಭಾವ ಇಲ್ಲದೆ ಎಲ್ಲರೂ ಒಂದೇ ಎಂಬ ಭಾವನೆ ಮೂಡುತ್ತದೆ. ಸಾಲ ಸೋಲ ಮಾಡಿ ಅದ್ದೂರಿಯಾಗಿ ಮಾಡುವ ಮದುವೆಗಳಲ್ಲಿ ನೆಮ್ಮದಿ ಕಡಿಮೆಯೇ. ಮನೆ ಮುಂದೆ ಚಪ್ಪರ ಹಾಕಿ ಖುದ್ದು ಅಡುಗೆ ಮಾಡುತ್ತಾ ಸವಿಯೋದರಲ್ಲಿ ಇರುವ ನೆಮ್ಮದಿ ಆಡಂಬರದ ಮದುವೆಗಳಲ್ಲಿ ಸಿಗೋದಿಲ್ಲ. ಮನೆಯವರ ಜೊತೆ ಟೆನ್ಷನ್ ಇಲ್ಲದೆ ಖುಷಿಯಿಂದ ನಡೆಯೋ ಆಚರಣೆಗಳಿಂದ ಮದುವೆಗಳು ಸಾರ್ಥಕ ಎನಿಸುತ್ತದೆ ಎಂದು ವಧುವಿನ ತಂದೆ ವೆಂಕಟೇಶ್ ಹೇಳುತ್ತಾರೆ.

ಕೊರೋನಾ ಬಿಕ್ಕಟ್ಟಿನಿಂದ ಇಡೀ ಜನಜೀವನ ಹೈರಾಣಾಗಿದ್ದರೂ ಜನರು ತಮ್ಮತನವನ್ನು ಮತ್ತು ಸೊಡಗನ್ನು ಕಂಡುಕೊಳ್ಳಲು ಅವಕಾಶ ಸಿಕ್ಕಿರುವುದಂತೂ ಹೌದು.
First published: