HOME » NEWS » Coronavirus-latest-news » KARNATAKA KERALA BORDER CLOSURE RIGHT VERSUS LEFT SHADOW BOXING OR A FIGHT AGAINST CORONA SNVS

ಕೊರೋನಾ ಹೆಸರಲ್ಲಿ ಕರ್ನಾಟಕ-ಕೇರಳ ಮಧ್ಯೆ ಎಡ-ಬಲ ಹೋರಾಟ? ರಾಜ್ಯ ಸರ್ಕಾರದ ಹಠಕ್ಕೆ ಹಲವರ ಅಸಮಾಧಾನ

ಕರ್ನಾಟಕ ಸರ್ಕಾರ ಕೇರಳ ಗಡಿ ಬಂದ್ ಮಾಡಿದ ಕ್ರಮದಿಂದ ಆಗುವ ರಾಜಕೀಯ ಪರಿಣಾಮ ಏನು ಎಂಬುದು ಲಾಕ್ ಡೌನ್ ನಂತರ ಗೊತ್ತಾಗುತ್ತದೆ ಎಂದು ಕೆಲ ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

news18-kannada
Updated:April 6, 2020, 1:43 PM IST
ಕೊರೋನಾ ಹೆಸರಲ್ಲಿ ಕರ್ನಾಟಕ-ಕೇರಳ ಮಧ್ಯೆ ಎಡ-ಬಲ ಹೋರಾಟ? ರಾಜ್ಯ ಸರ್ಕಾರದ ಹಠಕ್ಕೆ ಹಲವರ ಅಸಮಾಧಾನ
ಪ್ರಾತಿನಿಧಿಕ ಚಿತ್ರ
  • Share this:
ಬೆಂಗಳೂರು(ಏ. 06): ಕೊರೋನಾ ವೈರಸ್ ಸೋಂಕು ಈಗ ಕರ್ನಾಟಕ ಮತ್ತು ಕೇರಳ ಮಧ್ಯೆ ಹೊಸ ಜಗಳಕ್ಕೆ ಎಡೆ ಮಾಡಿಕೊಟ್ಟಿದೆ. ಎರಡು ವಾರಗಳ ಹಿಂದೆ ದೇಶವ್ಯಾಪಿ ಲಾಕ್ ಡೌನ್ ಘೋಷಣೆಯಾದ ಕೂಡಲೇ ಕೇರಳದ ಗಡಿಭಾಗವನ್ನು ಕರ್ನಾಟಕ ಸರ್ಕಾರ ಬಂದ್ ಮಾಡಿತು. ಗಡಿಭಾಗದಲ್ಲಿರುವ ಕಾಸರಗೋಡಿನಲ್ಲಿ ಕೊರೋನಾ ಸೋಂಕು ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಸೋಂಕು ಹರಡೀತು ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ಗಡಿ ಬಂದ್ ಮಾಡಿತು ಎನ್ನಲಾಗಿದೆ. ಕೇರಳದ ಗಡಿಭಾಗ ತೆರೆದು ವಾಹನ ಮತ್ತು ಜನಸಂಚಾರಕ್ಕೆ ಅವಕಾಶ ಕೊಟ್ಟರೆ ಕೇರಳ ಗಡಿಗೆ ಹೊಂದಿಕೊಂಡಿರುವ ಮಂಗಳೂರು, ಕೊಡಗು ಮತ್ತು ಮೈಸೂರು ಜಿಲ್ಲೆಗಳಿಗೆ ಕೊರೋನಾ ಸೋಂಕು ಹರಡುವ ಅಪಾಯವಿತ್ತು.

ಕೇರಳಕ್ಕೆ ಸಂಪರ್ಕಿಸುವ ಎಲ್ಲಾ 23 ರಸ್ತೆಗಳನ್ನ ಕರ್ನಾಟಕ ಸರ್ಕಾರ ಬಂದ್ ಮಾಡಿತು. ತುರ್ತು ಅಗತ್ಯ ಸೇವೆಯ ಆ್ಯಂಬುಲೆನ್ಸ್​ಗಳ ಸಂಚಾರಕ್ಕೂ ಅವಕಾಶ ನೀಡಲಿಲ್ಲ. ತುರ್ತು ಆರೋಗ್ಯ ಸಂದರ್ಭವಿದ್ದರೂ ಕರ್ನಾಟಕ ಅಮಾನವೀಯ ಕ್ರಮ ಕೈಗೊಂಡಿದೆ ಎಂದು ಕೇರಳ ಆಕ್ರೋಶಪಟ್ಟಿತು. ಆ್ಯಂಬುಲೆನ್ಸ್ ಮೊದಲಾದ ತುರ್ತು ವಾಹನಗಳ ಸಂಚಾರಕ್ಕೆ ಅವಕಾಶ ಕೊಡಬೇಕು ಎಂದು ಕೇರಳ ಹೈಕೋರ್ಟ್ ಕೂಡ ಸೂಚನೆ ನೀಡಿತು. ಆದರೂ ಕರ್ನಾಟಕ ಸರ್ಕಾರ ಬಗ್ಗಲಿಲ್ಲ.

ಯಾವುದೇ ಕಾರಣಕ್ಕೆ ಗಡಿ ತೆರೆಯುವುದಿಲ್ಲ ಎಂದು ರಾಜ್ಯ ಸರ್ಕಾರ ಪಟ್ಟು ಹಿಡಿದಿದೆ. ಕೇಂದ್ರ ಸರ್ಕಾರದ ಆದೇಶವನ್ನಿಟ್ಟುಕೊಂಡು ತಾನು ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ಹೇಳಿದೆ. ಇದೇ ವೇಳೆ, ಆಡಳಿತಾರೂಢ ಬಿಜೆಪಿಯ ಕೆಲ ಮುಖಂಡರು ಸೋಷಿಯಲ್ ಮೀಡಿಯಾದಲ್ಲಿ ರಾಜ್ಯ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ಧಾರೆ. ಕೇರಳದ ವೈದ್ಯಕೀಯ ಸೌಲಭ್ಯದ ಬಗ್ಗೆ ಟೀಕೆ ಮಾಡಿದ್ದಾರೆ.

ಇದನ್ನೂ ಓದಿ: ಭಾರತ ಸರ್ಕಾರ ಶಿಫಾರಸು ಮಾಡಿದ ಔಷಧಿಗೆ ವಿಶ್ವಾದ್ಯಂತ ಭಾರೀ ಬೇಡಿಕೆ

ಕೆಲ ರಾಜಕೀಯ ವಿಶ್ಲೇಷಕರ ಪ್ರಕಾರ, ಕರ್ನಾಟಕ ಸರ್ಕಾರ ಕೇರಳದ ಗಡಿಭಾಗ ಮುಚ್ಚಲು ಕೊರೋನಾ ಸೋಂಕಿನ ಭಯ ಕಾರಣವಲ್ಲ. ಕೇರಳದಲ್ಲಿರುವುದು ಪಿಣಾರಯಿ ವಿಜಯನ್ ನೇತೃತ್ವದ ಕಮ್ಯೂನಿಸ್ಟ್ ಸರ್ಕಾರ. ಕೊರೋನಾ ವಿರುದ್ಧದ ಹೋರಾಟದಲ್ಲಿ ಕೇರಳ ಸರ್ಕಾರ ಮುಂಚೂಣಿಯಲ್ಲಿದೆ ಎಂದು ಬಿಂಬಿತವಾಗುತ್ತಿದೆ. ಕರ್ನಾಟಕದ ಬಿಜೆಪಿ ಮುಖಂಡರು ಈ ಸಂದರ್ಭವನ್ನು ಬಳಸಿಕೊಂಡು ಕೇರಳದ ಕಮ್ಯೂನಿಸ್ಟ್ ಸರ್ಕಾರ ವಿಫಲವಾಗಿದೆ ಎಂದು ಬಿಂಬಿಸಲು ಹೊರಟಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಕೊರೋನಾ ಸೋಂಕು ನಿಗ್ರಹಿಸಲು ವ್ಯವಸ್ಥಿತವಾಗಿ ಕ್ರಮ ಕೈಗೊಳ್ಳುತ್ತಿರುವ ಅಲ್ಲಿನ ಕಮ್ಯೂನಿಸ್ಟ್ ಸರ್ಕಾರದ ಕಾರ್ಯನಿರ್ವಹಣೆ ಸಾಕಷ್ಟು ಪ್ರಶಂಸೆಗೆ ಒಳಗಾಗಿದೆ. ಅದೇ ವೇಳೆ, ಉತ್ತರ ಪ್ರದೇಶ ಸೇರಿದಂತೆ ಉತ್ತರ ಭಾರತದಲ್ಲಿರುವ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಸರಿಯಾದ ವೈದ್ಯಕೀಯ ಸೌಲಭ್ಯಗಳಿಲ್ಲ ಎಂದು ಕೇರಳಿಗರು ಲೇವಡಿ ಮಾಡುತ್ತಿದ್ಧಾರೆ. ಇದು ಬಿಜೆಪಿ ನಾಯಕತ್ವದ ಕೆಂಗಣ್ಣಿಗೆ ಕಾರಣವಾಗಿದೆ.

ಈ ಹಿನ್ನೆಲೆಯಲ್ಲಿ ಕೇರಳದ ಗಡಿಭಾಗವನ್ನು ಬಂದ್ ಮಾಡಿದ ಕ್ರಮವನ್ನು ಮುಂದುವರಿಸಲು ರಾಜ್ಯದ ಬಿಜೆಪಿ ಮತ್ತು ಆರೆಸ್ಸೆಸ್ ಮುಖಂಡರು ಪಟ್ಟು ಹಿಡಿದಿದ್ಧಾರೆ. ಗಡಿಭಾಗವನ್ನು ತೆರೆಯಬೇಕೆಂದು ಕೇರಳ ಸರ್ಕಾರ ಕೇಳಿಕೊಳ್ಳುತ್ತಿರುವುದು ಅಲ್ಲಿ ಸರಿಯಾದ ವೈದ್ಯಕೀಯ ಸವಲತ್ತುಗಳಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ. ಅದಕ್ಕೆ ಅಲ್ಲಿಯ ಕೊರೋನಾ ರೋಗಿಗಳು ಚಿಕಿತ್ಸೆಗಾಗಿ ಕರ್ನಾಟಕಕ್ಕೆ ಬರಲು ಹೊರಟಿದ್ದಾರೆ ಎಂದು ಬಿಜೆಪಿ ನಾಯಕರು ಟೀಕಿಸುತ್ತಾರೆ.ಈ ವಿಚಾರದಲ್ಲಿ ಬಿಜೆಪಿ ನಾಯಕ ಹಾಗೂ ಸಚಿವ ಸಿ.ಟಿ. ರವಿ ಅವರು ಪತ್ರಕರ್ತೆ ಅನುಷಾ ಸೂದ್ ಅವರೊಂದಿಗೆ ಟ್ವಿಟ್ಟರ್​ನಲ್ಲಿ ನಡೆಸಿದ ಸಂವಾದವು ಕಮ್ಯೂನಿಸ್ಟ್ ಕೇರಳದ ಬಗ್ಗೆ ಬಿಜೆಪಿಗಿರುವ ಅಸಂತುಷ್ಟಿಯನ್ನು ತೋರಿಸುತ್ತದೆ.

ಇದನ್ನೂ ಓದಿ: Viral Video: ಕೊರೋನಾ ವೈರಸ್​ ಓಡಿಸಲು ಪಿಸ್ತೂಲ್​ನಿಂದ ಗುಂಡು ಹಾರಿಸಿದ ಬಿಜೆಪಿ ನಾಯಕಿ!

ಆರೋಗ್ಯ ಸೌಲಭ್ಯ ಪರಿಶೀಲಿಸಲು ಕೇರಳಕ್ಕೆ ಭೇಟಿ ನೀಡಬೇಕೆಂದಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಲೇವಡಿ ಮಾಡಿದ್ದು ಯಾರು? ಕೋವಿಡ್-19 ಸೋಂಕು ತಡೆಯಲು ಮೊದಲು ಗಡಿ ಮುಚ್ಚಿದ್ದು ಯಾರು? ಕಮ್ಯೂನಿಸ್ಟರು ಯಾವಾಗಲೂ ದ್ವಂದ್ವ ನಿಲುವು ತಾಳಲು ಸಾಧ್ಯವಿಲ್ಲ ಎಂದು ಸಿ.ಟಿ. ರವಿ ಟ್ವೀಟ್ ಮಾಡಿದ್ದರು.





ಹಾಗೆಯೇ, ಕೇರಳದಿಂದಾಗಿ ಕರ್ನಾಟಕ ಬೆಲೆ ತೆರಬೇಕಾ? ಕೇರಳ ಸರ್ಕಾರ ತುರ್ತು ಆರೋಗ್ಯ ಸೌಲಭ್ಯಗಳಿಗಾಗಿ 20 ಸಾವಿರ ಕೋಟಿ ರೂ ಪ್ಯಾಕೇಜ್ ಘೋಷಿಸಿದೆ. ಅಲ್ಲಿನ ಜನರು ಹೊಗಳಿಕೆ ಗಳಿಸುವ ಪ್ರಯತ್ನದ ಬದಲು ಸರಿಯಾಗಿ ಪರಿಸ್ಥಿತಿ ನಿಭಾಯಿಸಲಿ ಎಂದು ಸಿ.ಟಿ. ರವಿ ಸವಾಲು ಎಸೆದಿದ್ದರು.

ಕುತೂಹಲದ ವಿಚಾರವೆಂದರೆ ಸಿ.ಟಿ. ರವಿ ಮತ್ತಿತರ ಬಿಜೆಪಿ ನಾಯಕರ ಈ ಹಠಮಾರಿ ನಿಲುವು ರಾಜ್ಯದಲ್ಲೇ ಹಲವರಿಗೆ ಅಸಮಾಧಾನ ತಂದಿದೆ. ಕಾಸರಗೋಡು ಕನ್ನಡಿಗರು ಹೆಚ್ಚಾಗಿರುವ ಜಿಲ್ಲೆಯಾಗಿದೆ. ಭಾಷಾವಾರು ರಾಜ್ಯ ವಿಂಗಡಣೆಯಾಗುವಾಗ ಅದು ಕೇರಳದ ಪಾಲಾಗಿಹೋಗಿತ್ತು. ಕರ್ನಾಟಕ ಸರ್ಕಾರ ಈಗಲೂ ಕೂಡ ಕಾಸರಗೋಡು ತನಗೆ ಸೇರಿದ್ದು ಎಂದು ಪ್ರತಿಪಾದನೆ ಮಾಡಿಕೊಂಡು ಬರುತ್ತಿದೆ. ಹೀಗಿರುವಾಗ ಕಾಸರಗೋಡಿನಿಂದ ಜನರು ಕರ್ನಾಟಕಕ್ಕೆ ಬರದಂತೆ ಗಡಿ ಬಂದ್ ಮಾಡಿರುವುದು ಯಡವಟ್ಟಿನ ನಿರ್ಧಾರ ಎಂದು ಕನ್ನಡಪರ ಕಾರ್ಯಕರ್ತರು ಅಭಿಪ್ರಾಯಪಟ್ಟಿದ್ದಾರೆ.

ಕೇರಳದ ಗಡಿ ಬಂದ್ ಮಾಡಿರುವ ಕ್ರಮದ ಹಿಂದೆ ಆರೆಸ್ಸೆಸ್ ಕೈವಾಡ ಇದೆ ಎಂದು ಹೊಸ ತಲೆಮಾರಿನ ಕನ್ನಡ ಹೋರಾಟಗಾರ ಗಣೇಶ್ ಚೇತನ್ ಹೇಳುತ್ತಾರೆ.

ಯೋಗಿ ಆದಿತ್ಯನಾಥ್ ಅವರಿಗೆ ಸಂತೋಷ ತರಲು ಮತ್ತು ಕಮ್ಯೂನಿಸ್ಟರ ಮೇಲೆ ಮುಯ್ಯಿ ತೀರಿಸಿಕೊಳ್ಳಲು ರಾಜ್ಯ ಬಿಜೆಪಿ ನಾಯಕರು ಕಾಸರಗೋಡಿನ ಕನ್ನಡಿಗರಿಗೆ ಹಾನಿ ಮಾಡುತ್ತಿದ್ದಾರೆ. ಅಲ್ಲಿಯ ಕನ್ನಡಿಗರು ಇದನ್ನು ಮರೆಯುವುದಿಲ್ಲ. ತುರ್ತು ವೈದ್ಯಕೀಯ ಚಿಕಿತ್ಸೆಯ ಸಂದರ್ಭದಲ್ಲಿ ಗಡಿ ಮುಚ್ಚುವುದು ನಾಚಿಕೆಗೇಡಿತನದ ಸಂಗತಿ. ರಾಜ್ಯ ಸರ್ಕಾರದ ಕ್ರಮಕ್ಕೆ ನಮ್ಮ ಬೆಂಬಲ ಇಲ್ಲ ಎಂದು ಗಣೇಶ್ ಚೇತನ್ ತಿಳಿಸುತ್ತಾರೆ.

ಇದನ್ನೂ ಓದಿ: ತಬ್ಲಿಘಿ ಜಮಾತ್‌ ಬಗ್ಗೆ ವರದಿ ಮಾಡಿದ್ದಕ್ಕೆ ಆ್ಯಂಕರ್​ಗಳಿಗೆ ಜೀವ ಬೆದರಿಕೆ; ಕ್ರಮಕ್ಕೆ ಎನ್​ಬಿಎ ಮನವಿ

ರಾಜ್ಯದ ವಿಪಕ್ಷಗಳ ಮುಖಂಡರೂ ಕೂಡ ಸರ್ಕಾರದ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ಧಾರೆ. ಆಂಬುಲೆನಸ್ ಮತ್ತಿತರ ತುರ್ತು ಸೇವೆಗಳಿಗೆ ರಸ್ತೆಗಳನ್ನ ತೆರಯಬೇಕು. ಮೊದಲಿಂದಲೂ ಕಾಸರಗೋಡಿನ ಜನರು ವೈದ್ಯಕೀಯ ಚಿಕಿತ್ಸೆಗೆ ನೆರೆಯ ಮಂಗಳೂರಿಗೆ ಬರುವುದುಂಟು. ಕಾಸರಗೋಡಿಗೆ ಮಂಗಳೂರು ಬಹಳ ಸಮೀಪ ಇರುವುದು ಇದಕ್ಕೆ ಕಾರಣ. ಈಗ ಗಡಿ ಮುಚ್ಚಿರುವುದರಿಂದ ಜನರು ದೂರದ ಕೊಚ್ಚಿ ಅಥವಾ ಕೋಳಿಕೋಡ್​ಗೆ ಹೋಗಲು ಹೆಚ್ಚು ಸಮಯ ಹಿಡಿಯುತ್ತದೆ. ಈ ಬಿಕ್ಕಟ್ಟಿನಲ್ಲಿ ರಾಜಕೀಯ ಮಾಡಬಾರದು ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಹೇಳಿದ್ದಾರೆ.

ವಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಗೌಡರ ಅಭಿಪ್ರಾಯಗಳಿಗೆ ಸಹಮತ ವ್ಯಕ್ತಪಡಿಸಿದ್ದಾರೆ. ಆದರೂ ಕೂಡ ಸಿಎಂ ಯಡಿಯೂರಪ್ಪ ಅವರು ತಮ್ಮ ನಿಲುವು ಸಡಿಲಿಸದರಿರಲು ನಿರ್ಧರಿಸಿದ್ದಾರೆ. ಇದು ಆರೆಸ್ಸೆಸ್​ನ ಪಿತೂರಿ, ಕಮ್ಯೂನಿಸ್ಟರ ವಿರುದ್ಧ ತೀರಿಸಿಕೊಳ್ಳುತ್ತಿರುವ ಸೇಡು ಎಂಬ ಆರೋಪವನ್ನು ತಳ್ಳಿಹಾಕಿದ ಬಿಎಸ್​ವೈ, ಕೊರೋನಾ ಸೋಂಕು ಹರಡದಂತೆ ಕಡಿವಾಣ ಹಾಕಲು ತೆಗೆದುಕೊಂಡ ಕ್ರಮ ಎಂದು ಸಮರ್ಥಿಸಿಕೊಂಡಿದ್ಧಾರೆ.

ಅತ್ತ, ಕೇರಳ ಸಿಎಂ ಪಿಣಾರಯಿ ವಿಜಯನ್ ಅವರು ಈ ವಿಚಾರವನ್ನು ಹೆಚ್ಚು ಮುಂದುವರಿಸಿಕೊಂಡು ಹೋಗದಿರಲು ನಿಶ್ಚಯಿಸಿದ್ಧಾರೆ. ಕಾಸರಗೋಡಿನ ಜನರಿಗೆ ಸೂಕ್ತ ವೈದ್ಯಕೀಯ ಸೌಲಭ್ಯಗಳನ್ನ ಒದಗಿಸಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ.

ತಮಿಳುನಾಡಿಗೆ ಹೊಂದಿಕೊಂಡಿರುವ ಕೇರಳದ ಗಡಿಭಾಗವನ್ನು ಮುಚ್ಚುವುದಿಲ್ಲ ಎಂದು ಹೇಳುವ ಮೂಲಕ ಅವರು ಕರ್ನಾಟಕ ಸರ್ಕಾರಕ್ಕೆ ಪರೋಕ್ಷವಾಗಿ ಪೆಟ್ಟು ನೀಡಿದ್ದಾರೆ. ಕೇರಳ ಮತ್ತು ತಮಿಳುನಾಡು ಅಣ್ಣತಮ್ಮಂದಿರಂತೆ ಇದ್ದೇವೆ. ಇಂಥ ಬಿಕ್ಕಟ್ಟಿನಲ್ಲಿ ನಾವು ಪರಸ್ಪರ ಸಹಾಯ ಮಾಡಬೇಕಿದೆ ಎಂದು ಪಿಣಾರಯಿ ವಿಜಯನ್ ಹೇಳಿಕೆ ನೀಡಿದ್ದಾರೆ.

ಕರ್ನಾಟಕ ಸರ್ಕಾರ ಕೇರಳ ಗಡಿ ಬಂದ್ ಮಾಡಿದ ಕ್ರಮದಿಂದ ಆಗುವ ರಾಜಕೀಯ ಪರಿಣಾಮ ಏನು ಎಂಬುದು ಲಾಕ್ ಡೌನ್ ನಂತರ ಗೊತ್ತಾಗುತ್ತದೆ ಎಂದು ಕೆಲ ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

ವರದಿ: ಡಿ.ಪಿ. ಸತೀಶ್

First published: April 6, 2020, 1:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories