ಹೆಚ್ಚುತ್ತಿರುವ ಕೋವಿಡ್; ಸಿಎಂ ನೇತೃತ್ವದಲ್ಲಿ ಸಭೆ; ನಿಯಂತ್ರಣಕ್ಕೆ ಸರ್ಕಾರ ಕೈಗೊಳ್ಳಲಿರುವ ಕ್ರಮಗಳಿವು

Meeting Led by CM Basavaraja Bommai- ಕೋವಿಡ್ ಪ್ರಕರಣಗಳು ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಅದನ್ನ ನಿಗ್ರಹಿಸಲು ಕೈಗೊಳ್ಳಬಹುದಾದ ವಿವಿಧ ಕ್ರಮಗಳನ್ನ ನಿರ್ಧರಿಸಲು ಸಿಎಂ ಇಂದು ತಜ್ಞರು, ಅಧಿಕಾರಿಗಳ ಸಭೆ ನಡೆಸಿದರು. ಅದರ ಹೈಲೈಟ್ಸ್ ಇಲ್ಲಿದೆ.

ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆ

ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆ

 • Share this:
  ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಗಣನೀಯವಾಗಿ ಏರಿಕೆ ಆಗುತ್ತಿದೆ. ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ರಾಜ್ಯಕ್ಕೆ ಅಪಾಯ ಹೆಚ್ಚುತ್ತಿದೆ. ಇದರ ಜೊತೆಗೆ ವಿದೇಶಗಳಲ್ಲಿ ಬಹಳ ಅಪಾಯಕಾರಿಯಾದ ಹೊಸ ರೂಪಾಂತರಿ ತಳಿ ಹರಡುತ್ತಿದೆ. ಭಾರತಕ್ಕೆ ಯಾವ ಕ್ಷಣ ಬೇಕಾದರೂ ಇದು ಕಾಣಿಸಿಕೊಳ್ಳಬಹುದು. ಈ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಇಂದು ಜಿಲ್ಲಾಧಿಕಾರಿಗಳು ಹಾಗೂ ತಜ್ಞರ ಜೊತೆ ಸಭೆ ನಡೆಸಿ ವಿವಿಧ ಕ್ರಮಗಳ ಅವಲೋಕನ ನಡೆಸಿದರು.

  ಕೋವಿಡ್ ಹೆಚ್ಚಾಗುತ್ತಿರುವ ಪ್ರದೇಶಗಳು, ಗಡಿ ಜಿಲ್ಲೆಗಳಲ್ಲಿ ಕೈಗೊಂಡಿರುವ ಕ್ರಮಗಳು ಮೊದಲಾದ ಮಾಹಿತಿಯನ್ನ ಅಧಿಕಾರಿಗಳು ಈ ಸಭೆಯಲ್ಲಿ ಸಿಎಂಗೆ ನೀಡಿದರು. ಆಫ್ರಿಕಾದ ಬೋಟ್ಸ್​ವಾನ ದೇಶದಲ್ಲಿ ಮೊದಲು ಕಾಣಿಸಿಕೊಂಡ ಓಮಿಕ್ರಾನ್ ಎಂಬ ಹೊಸ ಕೋವಿಡ್ ತಳಿಯ ಬಗ್ಗೆ ಕೋವಿಡ್ ತಜ್ಞರು ಸಿಎಂಗೆ ಮಾಹಿತಿ ನೀಡಿದರು. ನಮ್ಮ ದೇಶದಲ್ಲಿ ಈ ಹೊಸ ತಳಿ ಇನ್ನೂ ಪತ್ತೆಯಾಗಿಲ್ಲ ಎಂಬುದನ್ನು ತಿಳಿಸಿದರು.

  ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಿಂದ ಬರುವ ಜನರಿಗೆ ಆರ್​ಟಿ-ಪಿಸಿಆರ್ ಪರೀಕ್ಷೆ ಕಡ್ಡಾಯವಾಗಿ ಮಾಡಬೇಕು; ಕೋವಿಡ್ ಅಪಾಯ ಹೆಚ್ಚಿರುವ ಸ್ಥಳಗಳಲ್ಲಿ ಕೆಲಸ ಮಾಡುವವರು ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಪಡೆದಿರಬೇಕು, ಕಾಲೇಜುಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ರದ್ದುಗೊಳಿಸಬೇಕು ಇವೇ ಮುಂತಾದ ಕ್ರಮಗಳನ್ನ ಅವಲೋಕಿಸಲಾಯಿತು. ನಾಳೆ ಸರ್ಕಾರದಿಂದ ಅಧಿಕೃತ ಮಾರ್ಗಸೂಚಿ ಪ್ರಕಟವಾಗುವ ನಿರೀಕ್ಷೆ ಇದೆ.

  ಇದನ್ನೂ ಓದಿ: Omicron Covid- ಹೊಸ ಅಪಾಯಕಾರಿ ವೈರಸ್; ಬೆಂಗಳೂರು ಮತ್ತು ಕರ್ನಾಟಕದಲ್ಲಿ ಕಟ್ಟೆಚ್ಚರ

  ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೈಗೊಂಡ ಮುಖ್ಯ ತೀರ್ಮಾನಗಳು:

  * ಕೇರಳ ಮತ್ತು ಮಹಾರಾಷ್ಟ್ರ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ.
  * ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಿಗಿ ವಿಚಕ್ಷಣೆ ಕೈಗೊಳ್ಳುವುದು
  * ಕೇರಳ ಮತ್ತು ಮಹಾರಾಷ್ಟ್ರದಿಂದ ರಾಜ್ಯ ಪ್ರವೇಶಿಸುವವರಿಗೆ ಆರ್.ಟಿ.ಪಿ.ಸಿ.ಆರ್ ನೆಗೆಟಿವ್ ರಿಪೋರ್ಟ್ ಕಡ್ಡಾಯ.
  * ಗಡಿ ಜಿಲ್ಲೆಗಳಲ್ಲಿ ಮೂರು ಶಿಫ್ಟ್ ಗಳಲ್ಲಿ ಕೆಲಸ ಮಾಡುವಂತೆ ಡಿಸಿಗಳಿಗೆ ಸೂಚನೆ. ಇದಕ್ಕೆ ಎಲ್ಲ ಇಲಾಖೆಗಳ ಸಹಕಾರ ಪಡೆಯುವುದು.
  * 16 ದಿನಗಳ ಹಿಂದೆ ಕೇರಳದಿಂದ ಬಂದ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಮಾಡಿಸಬೇಕು
  * ಹಾಸ್ಟೆಲ್ ಗಳಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿಗಳಿಗೆ ನೆಗಟಿವ್ ರಿಪೋರ್ಟ್ ಬಂದ ನಂತರದ 7 ನೇ ದಿನಕ್ಕೆ ಮತ್ತೊಮ್ಮೆ ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಮಾಡುವುದು.
  * ಕೇರಳ ಮತ್ತು ಮಹಾರಾಷ್ಟ್ರದಿಂದ ರಾಜ್ಯಕ್ಕೆ ಆಗಮಿಸುವವರನ್ನು ಕಡ್ಡಾಯವಾಗಿ ಪರೀಕ್ಷೆಗೊಳಪಡಿಸಬೇಕು.
  * ಹೋಟೇಲು, ರೆಸ್ಟೋರೆಂಟ್‌ಗಳು, ಸಿನಿಮಾ ಹಾಲ್‌ಗಳು, ಈಜುಗೊಳ, ಸಾರ್ವಜನಿಕ ಗ್ರಂಥಾಲಯ, ಮೃಗಾಲಯಗಳು ಮತ್ತು ಜೈವಿಕ ಉದ್ಯಾನವನಗಳು,  ಕೆಲಸ ಮಾಡುವವರು ಕಡ್ಡಾಯವಾಗಿ ಎರಡು ಡೋಸ್
  ಪಡೆದಿರಬೇಕು.
  * ವೈದ್ಯಕೀಯ ಕಾಲೇಜು ಮತ್ತು ನರ್ಸಿಂಗ್ ಕಾಲೇಜುಗಳ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆಗಳನ್ನು ಹೆಚ್ಚಿಸುವುದು.
  * ಸರ್ಕಾರಿ ಕಚೇರಿಗಳಲ್ಲಿ ಹಾಗೂ ಮಾಲ್‌ಗಳಲ್ಲಿ ಕೆಲಸ ಮಾಡುವವರು ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಪಡೆಯಬೇಕು.  ಸರ್ಕಾರಿ ಕಚೇರಿ ಹಾಗೂ ಮಾಲ್‌ಗಳಲ್ಲಿಯೇ ಲಸಿಕೆ ನೀಡಲು ವ್ಯವಸ್ಥೆ ಕಲ್ಪಿಸುವುದು
  * ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪಾಸಣೆಗಳನ್ನು ತೀವ್ರಗೊಳಿಸುವುದು. ನೆಗಟಿವ್ ಇದ್ದವರಿಗೆ ನಗರ ಪ್ರವೇಶಕ್ಕೆ ಅನುಮತಿ.
  * ಪಾಸಿಟಿವ್ ಇದ್ದವರಿಗೆ ಚಿಕಿತ್ಸೆಗೆ ಆಸ್ಪತ್ರೆಗೆ ಕಳುಹಿಸುವುದು.

  ಇದನ್ನೂ ಓದಿ: Omicron: ದಕ್ಷಿಣ ಆಫ್ರಿಕಾ ವೈರಸ್​ಗೆ WHO 'ಓಮಿಕ್ರಾನ್'​ ಎಂದು ಹೆಸರಿಟ್ಟಿದ್ದು ಈ ಕಾರಣಕ್ಕೆ!

  ಆರ್ ಅಶೋಕ್ ಸುದ್ದಿಗೋಷ್ಠಿ:

  ಸಿಎಂ ನೇತೃತ್ವದ ಸಭೆಯಲ್ಲಿ ಪಾಲ್ಗೊಂಡಿದ್ದ ಕಂದಾಯ ಸಚಿವ ಆರ್ ಅಶೋಕ್ ಅವರು ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾಧ್ಯಮಗಳಿಗೆ ಮೇಲಿನ ಅಂಶಗಳನ್ನ ತಿಳಿಸಿದರು. ಮುಂದಿನ ತಿಂಗಳ ಅಂತ್ಯಕ್ಕೆ ಬರುವ ಹೊಸ ವರ್ಷಾಚರಣೆ ವೇಳೆ ಕೋವಿಡ್ ಅಪಾಯ ಹೆಚ್ಚಾಗುವ ಬಗ್ಗೆ ಮಾತನಾಡಿದ ಸಚಿವರು, ಕ್ರಿಸ್ಮಸ್ ಹಬ್ಬ ಮತ್ತು ನ್ಯೂ ಇಯರ್ ಸೆಲಬ್ರೇಶನ್ ಬಗ್ಗೆ ಸಿಎಂ ಪ್ರತ್ಯೇಕ ಸಭೆ ಮಾಡಿ ನಿರ್ಧಾರ ಮಾಡುತ್ತಾರೆ ಎಂದು ತಿಳಿಸಿದರು.

  ಕೋವಿಡ್ ವಾರಿಯರ್ಸ್ ಮತ್ತು ಫ್ರಂಟ್ ಲೈನ್ ವರ್ಕರ್ಸ್​ಗೆ ಬೂಸ್ಟರ್ ಡೋಸ್ ನೀಡುವ ಬಗ್ಗೆ ಕೇಂದ್ರದ ಅನುಮತಿ ಕೇಳಿದ್ದೇವೆ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪರೀಕ್ಷೆಗಳನ್ನ ಕಡ್ಡಾಯಗೊಳಿಸುವುದು ಮತ್ತು ಹೆಚ್ಚಳ ಮಾಡಲು ಸೂಚನೆ ನೀಡಲಾಗಿದೆ ಎಂದು ಆರ್ ಅಶೋಕ್ ಮಾಹಿತಿ ನೀಡಿದರು.

  ಸಿಎಂ ಗೃಹ ಕಚೇರಿಯಲ್ಲಿ ನಡೆದ ಸಭೆಯಲ್ಲಿ, ಬೆಂಗಳೂರು, ಧಾರವಾಡ, ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ, ಕೊಡಗು ಮತ್ತು ಮೈಸೂರು ಸೇರಿ ಏಳು ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಸಚಿವರಾದ ಆರ್ ಅಶೋಕ್, ಡಾ. ಅಶ್ವತ್ಥ ನಾರಾಯಣ, ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮಾ, ಸಿಎಂ ಪ್ರಧಾನ ಕಾರ್ಯದರ್ಶಿ ಎಸ್ ಮಂಜುನಾಥ್ ಪ್ರಸಾದ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್, ಆರೋಗ್ಯ ಇಲಾಖೆ ಕಾರ್ಯದರ್ಶಿ ಟಿ.ಕೆ. ಅನಿಲ್ ಕುಮಾರ್, ಆಯುಕ್ತ ರಂದೀಪ್, ಕೋವಿಡ್ ತಜ್ಞರ ಸಮಿತಿ ಮುಖ್ಯಸ್ಥ ಡಾ. ಸುದರ್ಶನ್ ಮೊದಲಾದವರು ಪಾಲ್ಗೊಂಡಿದ್ದರು.
  Published by:Vijayasarthy SN
  First published: