ಬೆಂಗಳೂರು(ಮಾ. 28): ಲಾಕ್ ಡೌನ್ ಅವಧಿಯಲ್ಲಿ ಜನರು ಏನಾದರೂ ಕಾರಣವೊಡ್ಡಿ ಮನೆಯಿಂದ ಹೊರಗೆ ಬರುತ್ತಿರುವುದು ರಾಜ್ಯಾದ್ಯಂತ ಸಾಮಾನ್ಯವಾಗಿದೆ. ರಸ್ತೆ ಖಾಲಿ ಇದೆ ಎಂದು ವಾಹನದಲ್ಲಿ ಸುತ್ತಾಡುವವರ ಸಂಖ್ಯೆಯೂ ಕಡಿಮೆ ಇಲ್ಲ. ಹೀಗಾಗಿ, ರಸ್ತೆಗಳಲ್ಲಿ ಮಾಮೂಲಿಯ ಜನಸಂಚಾರ ಇದ್ದಂತಿದೆ. ಕೊರೋನಾ ಹರಡುವಿಕೆ ತಡೆಯುವ ಸರ್ಕಾರದ ಮೂಲ ಉದ್ದೇಶವೇ ಹಳ್ಳ ಹಿಡಿಯುವಂತಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ವಾಹನ ಸಂಚಾರ ನಿಲ್ಲಿಸುವ ನಿಟ್ಟಿನಲ್ಲಿ ಪೆಟ್ರೋಲ್ ಬಂಕ್ಗಳನ್ನೇ ಬಂದ್ ಮಾಡುವ ಯೋಚನೆಯಲ್ಲಿದೆ ಎನ್ನುತ್ತಿವೆ ಮೂಲಗಳು.
ಕಲಬುರ್ಗಿಯಲ್ಲಿ ಈಗ ಪೆಟ್ರೋಲ್ಗೆ ನಿರ್ಬಂಧ ಇದೆ. ಪೆಟ್ರೋಲ್ ಮತ್ತು ಡೀಸೆಲ್ ಹಾಕಿಸದಂತೆ ಕಲಬುರ್ಗಿ ಜಿಲ್ಲಾಧಿಕಾರಿಯವರು ಸಾರ್ವಜನಿಕಗೆ ನಿರ್ಬಂಧ ವಿಧಿಸಿದ್ದಾರೆ. ಈಗ ರಾಜ್ಯಾದ್ಯಂತ ಪೆಟ್ರೋಲ್ಗೆ ನಿರ್ಬಂಧ ಹೇರುವ ಸಾಧ್ಯತೆ ಇದೆ.
ಇದನ್ನೂ ಓದಿ: ಲಾಕ್ ಡೌನ್ ಇದ್ದರೂ ರಸ್ತೆಗೆ ಬಂದವರಿಗೆ ಕಪ್ಪೆ ಜಿಗಿತದ ಶಿಕ್ಷೆ ; ಜನರ ಕಾಟಕ್ಕೆ ತಾಳದೆ ಪೆಟ್ರೋಲ್ ಬಂಕ್ ಬಂದ್ ಗೆ ಆದೇಶ
ರಾಜ್ಯ ಪೆಟ್ರೋಲ್ ವ್ಯಾಪಾರಿಗಳ ಸಂಘದ ಅಧಕ್ಷರು ಮೊನ್ನೆಮೊನ್ನೆಯಷ್ಟೇ ಈ ಐಡಿಯಾ ನೀಡಿದ್ದರು. ಪೊಲೀಸ್, ವೈದ್ಯರು ಮೊದಲಾದ ಅಗತ್ಯ ಸೇವೆ ನೀಡುವ ವಾಹನಗಳಿಗೆ ಮಾತ್ರ ಕೆಲ ಪೆಟ್ರೋಲ್ ಬಂಕ್ಗಳನ್ನು ತೆರೆದು ಉಳಿದವೆಲ್ಲವನ್ನೂ ಮುಚ್ಚಬೇಕೆಂದು ಅವರು ಸಲಹೆ ನೀಡಿದ್ದರು. ರಾಜ್ಯ ಸರ್ಕಾರ ಕೂಡ ಇದೇ ನಿಟ್ಟಿನಲ್ಲಿ ಯೋಜನೆ ಹಾಕಿದೆ. ಅಗತ್ಯ ಸೇವೆಗಳ ವಾಹನ ಹೊರತುಪಡಿಸಿ ಉಳಿದವರಿಗೆ ಪೆಟ್ರೋಲ್ ಮತ್ತು ಡೀಸೆಲ್ ಹಾಕಬೇಡಿ ಎಂದು ಎಲ್ಲಾ ಪೆಟ್ರೋಲ್ ವಿತರಕರಿಗೂ ರಾಜ್ಯ ಸರ್ಕಾರ ಮೌಖಿಕ ಸೂಚನೆ ನೀಡಿದೆ. ಹಂತ ಹಂತವಾಗಿ ಪೆಟ್ರೋಲ್ ನಿರ್ಬಂಧ ಹಾಕುವುದು ಸರ್ಕಾರದ ಉದ್ದೇಶವಾಗಿದೆ.
ಮೂಲಗಳ ಪ್ರಕಾರ, ರಾಜ್ಯ ಸರ್ಕಾರ ಈ ವಿಚಾರದಲ್ಲಿ ಬಹಳ ಗಂಭೀರವಾಗಿದೆ. ಮೊನ್ನೆ ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫೆರೆನ್ಸಿಂಗ್ ಮಾಡುವ ವೇಳೆ ಯಡಿಯೂರಪ್ಪ ಜೊತೆಯೂ ಮಾತನಾಡಿದ್ಧರು. ಆಗ ಅವರು ಕರ್ನಾಟಕದಲ್ಲಿ ಸರಿಯಾಗಿ ಲಾಕ್ ಡೌನ್ ಕಾರ್ಯ ಆಗುತ್ತಿಲ್ಲ. ಜನರು ಸುಖಾಸುಮ್ಮನೆ ಹೊರಬರುತ್ತಿದ್ದಾರೆ ಎಂದು ಪ್ರಧಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಲಾಕ್ ಡೌನ್ ಕಾರ್ಯವನ್ನು ತುಸು ಗಂಭೀರವಾಗಿಯೇ ಪರಿಗಣಿಸಿದ್ದಾರೆ. ಅದರ ಭಾಗವಾಗಿ ಪೆಟ್ರೋಲ್ ಬಂಕ್ ಬಂದ್ ಮಾಡುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ