ಕೊರೋನಾ ಸೋಂಕಿತನೊಂದಿಗೆ ಸಂಪರ್ಕ; ರಾಜ್ಯದ ಡಿಸಿಎಂ ಸೇರಿ ನಾಲ್ವರು ಸಚಿವರು ಕ್ವಾರಂಟೈನ್​

Karnataka Coronavirus Updates: ಕೊರೋನಾ ಸೋಂಕಿತ ಪತ್ರಕರ್ತ ಐದಾರು ಸಚಿವರ ಸುದ್ದಿಗೋಷ್ಠಿಗಳಲ್ಲಿ ಭಾಗವಹಿಸಿದ್ದ ವಿಷಯ ಹೊರಬಿದ್ದಿತ್ತು. ಹೀಗಾಗಿ, ಆ ಸಚಿವರೆಲ್ಲರೂ ಕೊರೋನಾ ತಪಾಸಣೆ ಮಾಡಿಸಿಕೊಂಡಿದ್ದು, ವೈದ್ಯಕೀಯ ವರದಿಯಲ್ಲಿ ನೆಗೆಟಿವ್ ಬಂದಿದೆ.

 ಡಿಸಿಎಂ ಡಾ ಅಶ್ವಥ್ ನಾರಾಯಣ್

ಡಿಸಿಎಂ ಡಾ ಅಶ್ವಥ್ ನಾರಾಯಣ್

 • Share this:
  ಬೆಂಗಳೂರು (ಏ. 30): ರಾಜ್ಯದೆಲ್ಲೆಡೆ ಕೊರೋನಾ ಅಟ್ಟಹಾಸ ಹೆಚ್ಚಾಗಿದೆ. ಈಗಾಗಲೇ ರಾಜ್ಯದಲ್ಲಿ 534 ಜನರಿಗೆ ಕೊರೋನಾ ಸೋಂಕು ತಗುಲಿದೆ, 21 ಜನರು ಸಾವನ್ನಪ್ಪಿದ್ದಾರೆ. ಸೋಂಕಿತರೊಂದಿಗೆ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್​ನಲ್ಲಿ ಇರಿಸುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರ ಆದೇಶ ನೀಡಿದೆ. ಹೀಗಾಗಿ, ಕೊರೋನಾ ಸೋಂಕಿತ ಪತ್ರಕರ್ತನ ಸಂಪರ್ಕಕ್ಕೆ ಬಂದಿದ್ದ ಕರ್ನಾಟಕದ ನಾಲ್ವರು ಸಚಿವರು ಕೂಡ ಹೋಂ ಕ್ವಾರಂಟೈನ್ ಆಗಿದ್ದಾರೆ.

  ಮಹಾರಾಷ್ಟ್ರದಲ್ಲಿ 55ಕ್ಕೂ ಹೆಚ್ಚು ಪತ್ರಕರ್ತರಿಗೆ ಕೊರೋನಾ ಸೋಂಕು ತಗುಲಿದ್ದರಿಂದ ಕಳೆದ ವಾರ ಕರ್ನಾಟಕದ ಪತ್ರಕರ್ತರಿಗೆ ಕೊರೋನಾ ತಪಾಸಣೆ ನಡೆಸಲಾಗಿತ್ತು. ಈ ವೇಳೆ ಓರ್ವ ಪತ್ರಕರ್ತನಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದರಿಂದ ಅವರ ಜೊತೆ ಸಂಪರ್ಕದಲ್ಲಿದ್ದ ಎಲ್ಲ ಪತ್ರಕರ್ತರನ್ನೂ ಕ್ವಾರಂಟೈನ್​ನಲ್ಲಿ ಇರಿಸಲಾಗಿತ್ತು. ಈ ವೇಳೆ, ಸೋಂಕಿತ ಪತ್ರಕರ್ತ ಡಿಸಿಎಂ ಅಶ್ವತ್ಥ ನಾರಾಯಣ ಸೇರಿದಂತೆ ಇನ್ನೂ ಐದಾರು ಸಚಿವರ ಸುದ್ದಿಗೋಷ್ಠಿಗಳಲ್ಲಿ ಭಾಗವಹಿಸಿದ್ದ ವಿಷಯ ಹೊರಬಿದ್ದಿತ್ತು. ಹೀಗಾಗಿ, ಆ ಸಚಿವರೆಲ್ಲರೂ ಕೊರೋನಾ ತಪಾಸಣೆ ಮಾಡಿಸಿಕೊಂಡಿದ್ದು, ವೈದ್ಯಕೀಯ ವರದಿಯಲ್ಲಿ ನೆಗೆಟಿವ್ ಬಂದಿದೆ.

  ಇದನ್ನೂ ಓದಿ: ಬೆಂಗಳೂರಿಗರೆ ಹಸಿ ಕಸ, ಒಣ ಕಸದ ಜೊತೆ ಮಾಸ್ಕ್ ಬೆರೆಸಿ ಕೊಟ್ಟರೆ ಬೀಳುತ್ತೆ ಭಾರೀ ದಂಡ

  ಈ ಬಗ್ಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದು, ನಾನು ಕೊರೋನಾ ವೈದ್ಯಕೀಯ ತಪಾಸಣೆ ಮಾಡಿಸಿಕೊಂಡಿದ್ದೇನೆ. ನನ್ನ ಗಂಟಲು ದ್ರವದ ಪರೀಕ್ಷೆ ಮಾಡಿಸಿದ್ದು, ಅದು ನೆಗೆಟಿವ್ ಬಂದಿರುತ್ತದೆ. ನಾನು ಆರೋಗ್ಯದಿಂದಿದ್ದು, ಸ್ವತಃ ಕ್ವಾರಂಟೈನ್​ಗೆ ಒಳಗಾಗಿದ್ದೇನೆ ಎಂದು ತಿಳಿಸಿದ್ದಾರೆ.  ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ ಕೂಡ ಟ್ವೀಟ್ ಮಾಡಿದ್ದು, ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದಿರಬಹುದು ಎಂಬ ಮಾಹಿತಿ ಸಿಕ್ಕಿದ್ದರಿಂದ ಹೋಂ ಕ್ವಾರಂಟೈನ್​ ಆಗಿದ್ದೇನೆ. ವೈದ್ಯಕೀಯ ಪರೀಕ್ಷೆಯಲ್ಲಿ ಕೊರೋನಾ ನೆಗೆಟಿವ್ ಬಂದಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದೇನೆ ಎಂದು ತಿಳಿಸಿದ್ದಾರೆ.  ರಾಜ್ಯ ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ ಕೂಡ ಸೋಂಕಿತ ಪತ್ರಕರ್ತನ ಜೊತೆ ನಿಕಟ ಸಂಪರ್ಕಕ್ಕೆ ಬಂದಿದ್ದರು. ಈ ಹಿನ್ನೆಲೆಯಲ್ಲಿ ಅವರು ಕೂಡ ವೈದ್ಯಕೀಯ ತಪಾಸಣೆ ಮಾಡಿಸಿಕೊಂಡಿದ್ದು, ನೆಗೆಟಿವ್ ಬಂದಿದೆ.  ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಕೂಡ ವೈದ್ಯಕೀಯ ತಪಾಸಣೆ ಮಾಡಿಸಿಕೊಂಡಿದ್ದು, ವರದಿಯ್ಲಲಿ ನೆಗೆಟಿವ್ ಬಂದಿದೆ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ 7 ದಿನಗಳ ಕಾಲ ಹೋಂ ಕ್ವಾರಂಟೈನ್​ ಆಗಿದ್ದು, ಮನೆಯಿಂದಲೇ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.


  ಇದನ್ನೂ ಓದಿ: ಗಲ್ಫ್​ ರಾಷ್ಟ್ರಗಳಲ್ಲಿರುವ ಭಾರತೀಯರನ್ನು ಸೇನಾ ಹಡಗಿನ ಮೂಲಕ ಕರೆತರಲು ಮುಂದಾದ ಮೋದಿ ಸರ್ಕಾರ

   
  First published: