ಬೆಂಗಳೂರು(ಮೇ 18): ಆರ್ಥಿಕ ಪುನಶ್ಚೇತನ ಗುರಿಯ ಭಾಗವಾಗಿ ಕೇಂದ್ರ ಸರ್ಕಾರ ಕಾರ್ಮಿಕ ಕಾಯ್ದೆಯ ತಿದ್ದುಪಡಿ ಮಾಡಲು ಹೊರಟಿದೆ. ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಕೂಡ ಕೇಂದ್ರದ ನಡೆಯನ್ನು ಅನುಸರಿಸಲು ನಿರ್ಧರಿಸಿದೆ. ಆದರೆ, ಕಾರ್ಮಿಕ ಕಾಯ್ದೆ ತಿದ್ದುಪಡಿಗೆ ರಾಜ್ಯ ಬಿಜೆಪಿಯೊಳಗೆಯೇ ವಿರೋಧ ಸೃಷ್ಟಿಯಾಗಿದೆ.
ಲಾಕ್ಡೌನ್ನಿಂದಾಗಿ ಕಾರ್ಮಿಕ ಸ್ಥಿತಿ ಶೋಚನೀಯವಾಗಿದೆ. ಇಂಥ ಸಂದರ್ಭದಲ್ಲಿ ಕಾಯ್ದೆಗೆ ತಿದ್ದುಪಡಿ ಬೇಡ ಎಂಬುದು ಬಿಜೆಪಿಯ ಒಂದು ವಲಯದಲ್ಲಿ ಕೇಳಿಬರುತ್ತಿರುವ ಅಭಿಪ್ರಾಯವಾಗಿದೆ. ಹಿರಿಯ ಬಿಜೆಪಿ ಮುಖಂಡ ಆಯನೂರು ಮಂಜುನಾಥ್ ಅವರು ಕಾರ್ಮಿಕ ಕಾಯ್ದೆ ತಿದ್ದುಪಡಿ ಮಾಡದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಬೇರೆ ರಾಜ್ಯದ ಮುಖ್ಯಮಂತ್ರಿಗಳು ಕಾಯ್ದೆ ವಿಚಾರದಲ್ಲಿ ಯಾವುದೇ ತೀರ್ಮಾನ ಮಾಡಲಿ. ಆದರೆ, ನೀವು ಮಾತ್ರ ಅಂತಹ ತೀರ್ಮಾನ ಮಾಡಬೇಡಿ. ನೀವು ಜನಪರ, ರೈತಪರ ಮತ್ತು ಕಾರ್ಮಿಕರ ಪರ ಒಲವುಳ್ಳವರು. ನೀವು ಕಾರ್ಮಿಕ ವಿರೋಧಿಯಾಗಬೇಡಿ. ಈಗ ಇರುವ ಕಾಯ್ದೆಯನ್ನ ಅಮಾನ್ಯ ಮಾಡುವುದಾಗಲೀ, ತಿದ್ದುಪಡಿ ತರುವುದಾಗಲೀ ಮಾಡಬೇಡಿ ಎಂದು ಆಯನೂರು ಮಂಜುನಾಥ್ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಇನ್ನೆರಡು ದಿನ ಲಾಕ್ಡೌನ್ ವಿಸ್ತರಣೆ; ರಾಜ್ಯ ಸರ್ಕಾರ ಘೋಷಣೆ
ಕೇಂದ್ರ ಸರ್ಕಾರದ ನಿರ್ಧಾರದಂತೆ ಉತ್ತರ ಪ್ರದೇಶ, ಮಧ್ಯ ಪ್ರದೇಶ ಸೇರಿದಂತೆ ಕೆಲವಾರು ರಾಜ್ಯಗಳು ಕಾರ್ಮಿಕ ಕಾಯ್ದೆಯಲ್ಲಿ ಬದಲಾವಣೆ ತಂದಿವೆ. ಕಾಯ್ದೆಗೆ ಆಗುತ್ತಿರುವ ತಿದ್ದುಪಡಿ ವಿರುದ್ಧ ದೇಶಾದ್ಯಂತ ಬಹುತೇಕ ಕಾರ್ಮಿಕ ಸಂಘಟನೆಗಳು, ವಿಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಬಿಜೆಪಿ ಬೆಂಬಲಿತ ಭಾರತೀಯ ಮಜ್ದೂರ್ ಸಂಘ ಹೊರತುಪಡಿಸಿ ಉಳಿದ ಬಹುತೇಕ ಕಾರ್ಮಿಕ ಸಂಘಟನೆಗಳು ಮೇ 22ರಂದು ದೇಶವ್ಯಾಪಿ ಪ್ರತಿಭಟನೆ ನಡೆಸಲು ನಿರ್ಧರಿಸಿವೆ.
ಕಾರ್ಮಿಕರ ದಿನದ ಕೆಲಸದ ಅವಧಿಯನ್ನು 8 ಗಂಟೆಯಿಂದ 12 ಗಂಟೆಗೆ ವಿಸ್ತರಿಸಲಾಗಿದೆ. ಇದು ಫ್ಯಾಕ್ಟರೀಸ್ ಆ್ಯಕ್ಟ್ನ ಉಲ್ಲಂಘನೆಯಾಗಿದೆ. ಲಾಕ್ಡೌನ್ ಪರಿಸ್ಥಿತಿಯನ್ನು ದುರುಪಯೋಗಿಸಿಕೊಂಡು ಕಾರ್ಮಿಕರನ್ನು ಶೋಷಿಸಲಾಗುತ್ತಿದೆ ಎಂಬುದು ವಿರೋಧ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ