ರಾಜ್ಯದಲ್ಲಿ ಕರ್ಫ್ಯೂ ಜಾರಿ: ಬೆಂಗಳೂರಿನ ಎಲ್ಲಾ ಫ್ಲೈಓವರ್, MG ರಸ್ತೆ-ಬ್ರಿಗೇಡ್ ರಸ್ತೆ ಬಂದ್..!

Karnataka Curfew Flyovers In Bengaluru Closed After 9 PM

Karnataka Curfew Flyovers In Bengaluru Closed After 9 PM

  • Share this:
ಬೆಂಗಳೂರು (ಏ.21) : ರಾಜ್ಯದಲ್ಲಿ ಕೊರೋನಾ ಚೈನ್​ ಲಿಂಕ್​ ಕಟ್​​ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕರ್ಫ್ಯೂ ರಾತ್ರಿ 9 ಗಂಟೆಯಿಂದ ಜಾರಿಯಾಗಿದೆ. ಇಂದಿನಿಂದ ನೈಟ್​ ಕರ್ಫ್ಯೂ ರಾತ್ರಿ 10 ಗಂಟೆಗೆ ಬದಲಾಗಿ ರಾತ್ರಿ 9 ಗಂಟೆಯಿಂದಲೇ ಜಾರಿಯಾಗಿದೆ. ಬೆಳಗ್ಗೆ 6 ಗಂಟೆವರೆಗೆ ಕರ್ಫ್ಯೂ ಜಾರಿ ಇರಲಿದ್ದು, ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ವಾಹನಗಳು ಸಂಚರಿಸುವಂತಿಲ್ಲ. ನೈಟ್​ ಕರ್ಫ್ಯೂ ಜಾರಿ ಹಿನ್ನೆಲೆಯಲ್ಲಿ ಬೆಂಗಳೂರಿನ ಎಲ್ಲಾ ಫ್ಲೈಓವರ್​ಗಳನ್ನು ಬಂದ್​ ಮಾಡಲಾಗಿದೆ.  ನಗರದ ಎಂಜಿರಸ್ತೆ, ಬ್ರಿಗೆಡ್ ರಸ್ತೆ, ಚರ್ಚ್ ಸ್ಟ್ರೀಟ್, ಮೈಸೂರು ರಸ್ತೆ ಸೇರಿ ನಗರದ ಬಹುತೇಕ ರಸ್ತೆಗಳನ್ನು ಬಂದ್​ ಮಾಡಲಾಗಿದೆ.

ಹೊಸ ಮಾರ್ಗಸೂಚಿಯಂತೆ ನೈಟ್​ ಕರ್ಫ್ಯೂ ಕಟ್ಟುನಿಟ್ಟಿನ ಜಾರಿಗೆ ಬೆಂಗಳೂರಿನಾದ್ಯಂತ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ರಸ್ತೆಗಳನ್ನು ಬ್ಯಾರಿಕೇಡ್​ಗಳ ಮೂಲಕ ಬಂದ್​ ಮಾಡಿದ್ದಾರೆ. ಜನರ ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕಲು ಬೆಂಗಳೂರಿನಾದ್ಯಂತ ಪೊಲೀಸರು ರಸ್ತೆಗಿಳಿದಿದ್ದಾರೆ. ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಎಲ್ಲಾ ಚಟುವಟಿಗಳಿಗೆ ಬ್ರೇಕ್​ ಬೀಳಲಿದೆ. ಆದರೆ ಬಸ್​, ರೈಲ್ವೆ ಸಂಚಾರ ಇರಲಿದೆ. ಅಗತ್ಯ ಸೇವೆಗಳಿಗೆ ಸಂಬಂಧಪಟ್ಟ ಸಂಚಾರಕ್ಕೂ ಯಾವುದೇ ತೊಂದರೆ ಇಲ್ಲ.

ರಾಜ್ಯದಲ್ಲಿ ಕಳೆದ 10 ದಿನಗಳಿಂದ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ನೈಟ್​ಕರ್ಫ್ಯೂ ಹೇರಲಾಗಿತ್ತು. ಇಂದಿನಿಂದ ಹೆಚ್ಚುವರಿ 2 ಗಂಟೆಗಳ ಕಾಲ ನೈಟ್​ಕರ್ಫ್ಯೂವನ್ನು ವಿಸ್ತರಿಸಲಾಗಿದೆ. ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ನೈಟ್​ಕರ್ಫ್ಯೂ ಜಾರಿಯಲ್ಲಿರಲಿದೆ. ಹೀಗಾಗಿ ಸಾರ್ವಜನಿಕರು ರಾತ್ರಿ 9 ಗಂಟೆಯೊಳಗೆ ಮನೆಗಳಿಗೆ ತೆರಳುತ್ತಿದ್ದ ದೃಶ್ಯಗಳು ಎಲ್ಲೆಡೆಯೂ ಕಂಡು ಬಂತು. ಇನ್ನು ರಾತ್ರಿ 9 ಗಂಟೆ ಬಳಿಕ ಅನಗತ್ಯವಾಗಿ ರಸ್ತೆಗಿಳಿದವರಿಗೆ ಪೊಲೀಸರು ಲಾಠಿ ರುಚಿ ತೋರಿಸುತ್ತಿದ್ದಾರೆ.

ಇದನ್ನು ಓದಿ: Vaccination: ಲಸಿಕೆ ಪಡೆದ ಶೇ.99.96ರಷ್ಟು ಜನರಿಗೆ ಕೊರೋನಾ ಬಂದಿಲ್ಲ, ಇನ್ನಾದ್ರೂ ವ್ಯಾಕ್ಸಿನ್​ಗೆ ಮುಂದಾಗಿ-ಸುಧಾಕರ್​​

ರಾಜ್ಯದಲ್ಲಿ ಕೊರೋನಾ ಸೋಂಕು ಅಂಕೆ ಮೀರಿದ್ದು, ದಾಖಲೆ ಪ್ರಮಾಣದ ಪ್ರಕರಣಗಳು ಇಂದು ವರದಿಯಾಗಿದೆ. ಕಳೆದ 24 ಗಂಟೆಯೊಳಗೆ ರಾಜ್ಯದಲ್ಲಿ 23,558 ಕೊರೋನಾ ಪ್ರಕರಣ ಪತ್ತೆಯಾಗಿದ್ದು, 116 ಜನ ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ. ಈ ಅಂಕಿ ಅಂಶಗಳನ್ನು ಗಮನಿಸಿದರೆ ರಾಜ್ಯದಲ್ಲಿ ಕೋವಿಡ್​ ಸೋಂಕು ನಿಯಂತ್ರಣ ಮೀರಿರುವುದು ಸ್ಪಷ್ಟವಾಗಿದೆ. ರಾಜಧಾನಿಯಲ್ಲಿಯೇ ಇಂದು  13,640 ಮಂದಿ ಸೋಂಕಿಗೆ ತುತ್ತಾಗಿದ್ದು, 70 ಮಂದಿ ಕೊರೊನಾ ಸೋಂಕಿತರು ಸಾವನ್ನಪ್ಪಿರುವುದು ಮತ್ತಷ್ಟು ಆತಂಕ ಮೂಡಿಸಿದೆ. ರಾಜ್ಯದಲ್ಲಿ ಒಟ್ಟು 1,76,188 ಸಕ್ರಿಯ ಪ್ರಕರಣಗಳಿದ್ದು, ಇದುವರೆಗೂ 13,762 ಜನ ಸಾವನ್ನಪ್ಪಿದ್ದಾರೆ. ರಾಜಧಾನಿ ಹೊರತು ಪಡಿಸಿ ತುಮಕೂರು 1176, ಮೈಸೂರಿನಲ್ಲಿ 975, ಬಳ್ಳಾರಿ 792 ಉಡುಪಿ 471, ಬೆಂಗಳೂರು ಗ್ರಾಮಾಂತರ 544 ಪ್ರಕರಣ ಪತ್ತೆಯಾಗಿದೆ.

ರಾಜಧಾನಿಯಲ್ಲಿ ಸಾವಿನ ಸಂಖ್ಯೆಯಲ್ಲಿ ಏರಿಕೆ ಕಂಡಿದ್ದು, ಚಿತಾಗಾರದ ಮುಂದೆ ಸೋಂಕಿತರ ಅಂತ್ಯ ಸಂಸ್ಕಾರಕ್ಕೆ ಅಂಬ್ಯುಲೆನ್ಸ್​ ಸಾಲುಗಳು ಮುಂದುವರೆದಿದೆ. ಚಿತಾಗಾರದ ಸಿಬ್ಬಂದಿಗಳಿಂದ ಬಿಡುವಿಲ್ಲದೇ ಅಂತ್ಯ  ಕ್ರಿಯೆ ನಡೆಯುತ್ತಿದೆ. ಕೂಡ್ಲು ವಿದ್ಯುತ್ ಚಿತಾಗಾರದಲ್ಲಿ ಒಂದೇ ದಿನ 37 ಮೃತದೇಹ ಅಂತ್ಯಕ್ರಿಯೆ ನಡೆಸಲಾಗಿದ್ದು, ಅಂತ್ಯಕ್ರಿಯೆಯಿಂದಾಗಿ ಸಿಬ್ಬಂದಿ ಹೈರಾಣಾಗಿದ್ದಾರೆ. ಈ ಕುರಿತು ಅಳಲು ತೊಡಿಕೊಂಡಿರುವ ಸಿಬ್ಬಂದಿಗಳು ದಿನಾ ಹೀಗೆ ಆದ್ರೆ ಹೇಗೆ ಸರ್ ಏನಾದ್ರು ವ್ಯವಸ್ಥೆ ಮಾಡಿ ಎಂದಿದ್ದಾರೆ.
Published by:Kavya V
First published: