ಚಿಕ್ಕಮಗಳೂರು; 55 ದಿನಗಳ ಕಾಲ ಶಾಂತವಾಗಿದ್ದ ಕಾಫಿನಾಡು ಚಿಕ್ಕಮಗಳೂರನ್ನು ಮಹಾಮಾರಿ ಕೊರೋನಾ ಹುಡುಕಿಕೊಂಡು ಬಂದಿದೆ. ಸುಮಾರು 2 ತಿಂಗಳಿಂದ ಗ್ರೀನ್ ಝೋನ್ ಹಣೆಪಟ್ಟಿ ಹೊತ್ಕೊಂಡಿದ್ದ ಜಿಲ್ಲೆಗೆ ಮಂಗಳವಾರ ಬರಸಿಡಿಲು ಬಡಿದಂತಾಗಿದೆ. ನಾವು ಕೊರೋನಾದಿಂದ ಬಚಾವಾದ್ವಿ, ಈ ಮಹಾಮಾರಿ ನಮ್ಮೂರಿಗೆ ಕಾಲಿಡೋದೆ ಬೇಡ ಅಂತ ಕಾಫಿನಾಡಿಗರು ಬಯಸಿದ್ದರು. ಆದರೆ, ಜಿಲ್ಲೆಯ ಓರ್ವ ವೈದ್ಯ ಹಾಗೂ ಗರ್ಭಿಣಿ ಸೇರಿದಂತೆ ಐವರಿಗೆ ಸೋಂಕು ತಗುಲಿರುವುದನ್ನು ಕಂಡು ಜನರು ಶಾಕ್ ಆಗಿದ್ದಾರೆ. ಆದರೆ, ಈ ಐವರಲ್ಲಿ ಎರಡು ಪ್ರಕರಣಗಳಿಂದ ಮುಂದಿನ ದಿನಗಳಲ್ಲಿ ಬರಬಹುದಾದ ಪಾಸಿಟಿವ್ ಪ್ರಕರಣಗಳನ್ನ ಊಹಿಸುವುದಕ್ಕೂ ಅಸಾಧ್ಯ ಎಂಬಂತಾಗಿದೆ.
ಕಾಫಿನಾಡು, ಮಲೆನಾಡು, ಮಳೆನಾಡು ಅಂತೆಲ್ಲಾ ಕರೆಸಿಕೊಳ್ಳುತ್ತಿದ್ದ ಚಿಕ್ಕಮಗಳೂರು ಕೊರೋನಾ ಗೆದ್ದು ನಿನ್ನೆವರೆಗೂ ಗ್ರೀನ್ ಝೋನ್ ಜಿಲ್ಲೆಯಾಗಿತ್ತು. ಆದರೆ, ಇಂದು ಆ ಗ್ರೀನ್ ಲೇಬಲ್ ಕಳಚಿ ಬಿದ್ದಿದೆ. ಕಾಫಿನಾಡಲ್ಲೂ ಮೂವರು ಮುಂಬೈನಿಂದ ಬಂದವರು ಸೇರಿದಂತೆ ಐವರಿಗೆ ಕೊರೋನಾ ಪಾಸಿಟಿವ್ ಬಂದಿರೋದು ಕಾಫಿನಾಡಿಗರನ್ನು ಆತಂಕಕ್ಕೀಡು ಮಾಡಿದೆ. ಇಲ್ಲಿವರೆಗೂ ಜಿಲ್ಲೆಯಲ್ಲಿ ಒಂದೇ ಒಂದು ಕೊರೋನಾ ಪಾಸಿಟಿವ್ ಪ್ರಕರಣಗಳಿರಲಿಲ್ಲ. ಜಿಲ್ಲೆಯ ಓರ್ವ ಸರ್ಕಾರಿ ವೈದ್ಯ, ಗರ್ಭಿಣಿ ಸೇರಿದಂತೆ ಐವರಲ್ಲಿ ಕೊರೋನಾ ಕಾಣಿಸಿಕೊಂಡಿದೆ. ಅದರಲ್ಲಿ 43 ವರ್ಷದ ವೈದ್ಯನ ಟ್ರಾವೆಲ್ ಹಿಸ್ಟರಿ, ಕಾಂಟೆಕ್ಟ್ ಹಿಸ್ಟರಿ ಬೆಚ್ಚಿ ಬೀಳಿಸುವಂತದ್ದು. ವೈದ್ಯರೊಂದಿಗೆ ನೇರವಾಗಿ ಸಂಪರ್ಕಕಕ್ಕೆ ಬಂದಿದ್ದ ಜನ ಇದೀಗ ಆತಂಕಕ್ಕೀಡಾಗಿದ್ದಾರೆ.
ಪಿ- 1295, ಮೂಡಿಗೆರೆ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯನಾಗಿದ್ದು, 15 ದಿನದಲ್ಲಿ ಕನಿಷ್ಠ 500 ಮಂದಿಗೆ ಚಿಕಿತ್ಸೆ ನೀಡಿರುವ ಮಾಹಿತಿ ಸಿಕ್ಕಿದೆ. ಅಲ್ಲದೇ ಅಕ್ಕಪಕ್ಕದ ನಿವಾಸಿಗಳು, ಸ್ನೇಹಿತರ ಜೊತೆ ವೈದ್ಯನ ಒಡನಾಟವಿತ್ತು. ಈಗ ಅವರು ಕೂಡ ಭಯಭೀತರಾಗಿದ್ದಾರೆ. ಇತ್ತೀಚೆಗೆ ಬೆಂಗಳೂರು, ಕೊಡಗಿಗೂ ಕೂಡ ವೈದ್ಯ ಹೋಗಿ ಬಂದಿದ್ದರು ಅನ್ನೋ ಮಾಹಿತಿ ಇದೆ. ನೇರವಾಗಿ ಸಂಪರ್ಕದಲ್ಲಿದ್ದ 800ಕ್ಕೂ ಹೆಚ್ಚು ಮಂದಿಯ ಮಾಹಿತಿ ಪಡೆದ ಜಿಲ್ಲಾಡಳಿತ ಎಲ್ಲರನ್ನೂ ಕ್ವಾರೆಂಟೈನ್ ಮಾಡಲು ಸೂಚಿಸಿದೆ.
ಇನ್ನೂ ತರೀಕೆರೆಯ 27 ವರ್ಷದ ಗರ್ಭೀಣಿಯ ಪ್ರಕರಣ ಕೂಡ ಜಿಲ್ಲಾಡಳಿತಕ್ಕೆ ತಲೆನೋವಾಗಿದೆ. ಗರ್ಭಿಣಿಗೆ ಸೋಂಕು ತಗುಲಿರೋದು ಆಕೆಯ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಾ ಅನ್ನೋ ಶಂಕೆ ಕೂಡ ವ್ಯಕ್ತವಾಗಿದೆ. ಸಾಲದಕ್ಕೆ ಇಬ್ಬರಿಗೂ ಸೋಂಕು ಎಲ್ಲಿಂದ ಬಂತು, ಯಾರಿಂದ ಬಂತು, ಹೇಗೆ ಬಂತು ಎಂಬ ಖಚಿತ ಮಾಹಿತಿ ಜಿಲ್ಲಾಡಳಿತ ಬಳಿಯಿಲ್ಲ. ಮೇಲ್ನೋಟಕ್ಕೆ ಗರ್ಭಿಣಿ ಮಹಿಳೆಗೆ ಗುಜರಿ ವ್ಯಾಪಾರಿ ಆಕೆಯ ಗಂಡನಿಂದಲೇ ಸೋಂಕು ತಗುಲಿರಬಹುದುದೆಂದು ಹೇಳಲಾಗುತ್ತಿದೆ. ಹಾಗಾಗಿ, ಇಬ್ಬರಿಗೂ ಸೋಂಕು ಎಲ್ಲಿಂದ ಬಂತು ಎಂದು ಹುಡುಕಲು ಜಿಲ್ಲಾಡಳಿತ ತಲೆಕೆಡಿಸಿಕೊಂಡಿದೆ.
ಒಂದೆಡೆ ಸೋಂಕಿನ ಮೂಲದ ಹುಡುಕಾಟ, ಮತ್ತೊಂದೆಡೆ ಸೋಂಕಿತರ ಸಂಪರ್ಕದಲ್ಲಿದ್ದವರ ಹುಡುಕಾಟ ಎರಡೂ ಕೂಡ ಜಿಲ್ಲಾಡಳಿತಕ್ಕೆ ಕಬ್ಬಿಣದ ಕಡಲೆಯಾಗಿದೆ. ಈ ಮಧ್ಯೆ ಎನ್.ಆರ್.ಪುರ ತಾಲೂಕಿನ ಮೂಲದವರು ಮುಂಬೈನಿಂದ ಹಿಂದಿರುಗಿ ಬಂದ ಏಳು ಹಾಗೂ ಹತ್ತು ವರ್ಷದ ಬಾಲಕ ಹಾಗೂ 17 ವರ್ಷದ ಯುವತಿಯಲ್ಲೂ ಸೋಂಕು ಕಂಡುಬಂದಿದ್ದು 55 ದಿನಗಳ ಬಳಿಕ ಒಂದೇ ದಿನಕ್ಕೆ ಮಲೆನಾಡು ಕಂಗಾಲಾಗಿದೆ.
ಇದನ್ನು ಓದಿ: ಕರ್ನಾಟಕದಲ್ಲಿಂದು ದಾಖಲೆಯ 149 ಕೊರೋನಾ ಕೇಸ್ ಪತ್ತೆ; ಮಂಡ್ಯ, ದಾವಣಗೆರೆಯಲ್ಲಿ ಅತಿಹೆಚ್ಚು ಸೋಂಕಿತರು
ಒಟ್ಟಾರೆ, ಐದು ಪ್ರಕರಣಗಳಲ್ಲಿ ವೈದ್ಯನ ಪ್ರಕರಣವಂತೂ ಸಂಚಲನವನ್ನೇ ಸೃಷ್ಟಿಸಿದೆ. ವೈದ್ಯನ ಪ್ರಾಥಮಿಕ ಸಂಪರ್ಕದಲ್ಲಿ ಇದ್ದವರ ಪಟ್ಟಿ ಹತ್ತಿರ ಹತ್ತಿರ ಸಾವಿರದ ಸಮೀಪವಿದೆ. ಇದರಲ್ಲಿ ವೈದ್ಯನಿಂದ ಚಿಕಿತ್ಸೆ ಪಡೆದವರೇ ಹೆಚ್ಚು. ಇನ್ನೂ ಡಾಕ್ಟರ್ಗೆ ದೊಡ್ಡ ಸಂಖ್ಯೆಯ ಸ್ನೇಹಿತರ ಬಳಗವಿದ್ದು, ಆ ಸಂಪರ್ಕ ಇದೀಗ ಎಲ್ಲಿ ನಮಗೆ ಮುಳ್ಳಾಗುತ್ತೋ ಎಂದು ವೈದ್ಯನ ಸ್ನೇಹಿತರು ಟೆನ್ಷನ್ ಆಗಿದ್ದಾರೆ. ಒಟ್ಟಾರೆ, 55 ದಿನಗಳ ಬಳಿಕ ಒಂದೇ ದಿನಕ್ಕೆ ಐದು ಪ್ರಕರಣಗಳು ಕಾಣಿಸಿಕೊಂಡಿದ್ದು, ಇಡೀ ಜಿಲ್ಲೆಯನ್ನೇ ಆತಂಕಕ್ಕೆ ದೂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ