ಕೊರೋನಾ ಚಿಕಿತ್ಸೆಗೆ ಬೆಡ್ಗಳನ್ನು ಮೀಸಲಿಡುವ ವಿಚಾರ; ಇಂದು ಸಂಜೆ ಖಾಸಗಿ ಆಸ್ಪತ್ರೆಗಳ ಮಾಲೀಕರ ಜೊತೆ ಡಾ. ಕೆ. ಸುಧಾಕರ್ ಸಭೆ
ಈ ಹಿಂದೆ ಮಾತು ಕೊಟ್ಟಂತೆ ಖಾಸಗಿ ಆಸ್ಪತ್ರೆಗಳ ಮಾಲೀಕರು ಬೆಡ್ಗಳನ್ನು ಕೊಟ್ಟಿಲ್ಲ. ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದ್ದು, ಇಂದು ಸಂಜೆ 4.30ಕ್ಕೆ ಆಸ್ಪತ್ರೆಗಳ ಮಾಲೀಕರ ಜೊತೆ ಚರ್ಚೆ ನಡೆಸಲಿದ್ದೇನೆ ಎಂದು ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.
ಬೆಂಗಳೂರು (ಜು. 8): ಕೊರೋನಾ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳು ಬೆಡ್ಗಳನ್ನು ನೀಡಿಲ್ಲ. ಈ ಹಿಂದೆಯೇ ಹೇಳಿದಂತೆ ಅವರ ಆಸ್ಪತ್ರೆಯಲ್ಲಿ ಬೆಡ್ಗಳನ್ನು ನೀಡಲೇಬೇಕು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ಇಂದು ಸಂಜೆ ಖಾಸಗಿ ಆಸ್ಪತ್ರೆಗಳ ಮಾಲೀಕರ ಸಭೆ ಕರೆಯಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ಈ ಹಿಂದೆ ಮಾತು ಕೊಟ್ಟಂತೆ ಖಾಸಗಿ ಆಸ್ಪತ್ರೆಗಳ ಮಾಲೀಕರು ಬೆಡ್ ಗಳನ್ನು ಕೊಟ್ಟಿಲ್ಲ. ಈ ಹಿನ್ನೆಲೆ ಇಂದು ಅವರ ಸಭೆ ಕರೆಯಲಾಗಿದೆ. ಖಾಸಗಿ ಆಸ್ಪತ್ರೆಗಳ 4,500 ಬೆಡ್ಗಳನ್ನು ಕೊರೋನಾ ಚಿಕಿತ್ಸೆಗೆ ನೀಡುವಂತೆ ಕೇಳಲಾಗಿತ್ತು. ಆದರೆ, 1000 ಬೆಡ್ಗಳನ್ನು ಮಾತ್ರ ನೀಡಲಾಗಿದೆ. ಈ ಬಗ್ಗೆ ಇಂದು ಸಂಜೆ 4.30ಕ್ಕೆ ಆಸ್ಪತ್ರೆಗಳ ಮಾಲೀಕರ ಜೊತೆ ಚರ್ಚೆ ನಡೆಸಲಿದ್ದೇನೆ. ಅವರು ಕೊರೋನಾ ಚಿಕಿತ್ಸೆಗೆ ಬೆಡ್ ಕೊಡದೆ ಇರುವ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಈ ಹಿಂದೆ ಮಾತು ಕೊಟ್ಟಂತೆ ಅವರು ತಮ್ಮ ಆಸ್ಪತ್ರೆಗಳಲ್ಲಿ ಕೊರೋನಾಗೆ ಬೆಡ್ಗಳನ್ನು ಕೊಡಲೇಬೇಕು. ಬಿಐಇಸಿಯಲ್ಲಿ 10 ಸಾವಿರ ಬೆಡ್ ಗಳ ವ್ಯವಸ್ಥೆ ಮಾಡುತ್ತಿದ್ದೇವೆ. ಅಲ್ಲಿ 1000 ವೈದ್ಯರು, 1500 ಜನ ಸಿಬ್ಬಂದಿಯನ್ನು ವ್ಯವಸ್ಥೆ ಮಾಡುತ್ತೇವೆ. ಬೆಂಗಳೂರಿನಲ್ಲಿ ವೇಗವಾಗಿ ಕೊರೋನಾ ಸೋಂಕು ಹೆಚ್ಚುತ್ತಿದೆ. ಅದರ ನಿಯಂತ್ರಣಕ್ಕೆ ಎಲ್ಲ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ.
ಕೊರೋನಾ ನಿಯಂತ್ರಣ ಕ್ರಮಗಳ ಬಗ್ಗೆ ಸಿಎಂ ಯಡಿಯೂರಪ್ಪ ಚರ್ಚೆ ನಡೆಸಿದ್ದಾರೆ. ಕೊವೀಡ್ ಕೇರ್ ಸೆಂಟರ್ನ ಕ್ರಮದ ಬಗ್ಗೆ ವಿವರಿಸಿದ್ದೇವೆ. ನಾಳೆ ಸಿಎಂ ಯಡಿಯೂರಪ್ಪ ಅಲ್ಲಿಗೆ ಭೇಟಿ ನೀಡುತ್ತಾರೆ. ಬಿಐಇಸಿಗೆ ಸಿಎಂ ಯಡಿಯೂರಪ್ಪ ಭೇಟಿ ಕೊಟ್ಟು ಪರಿಶೀಲನೆ ನಡೆಸಲಿದ್ದಾರೆ. ಕೋವಿಡ್ ಕೇರ್ ಸೆಂಟರ್ನಲ್ಲಿ 2,000 ಹಾಸಿಗೆಗಳಿವೆ. ಪ್ರತಿದಿನ 200ರಿಂದ 300 ರೋಗಿಗಳು ಅಲ್ಲಿಗೆ ದಾಖಲಾಗುತ್ತಿದ್ದಾರೆ. ಕಂಟೇನ್ಮೆಂಟ್ ಜೋನ್ನಲ್ಲಿ ಕಠಿಣ ಕ್ರಮಕ್ಕೆ ಕೇಂದ್ರ ಸರ್ಕಾರದ ಆರೋಗ್ಯ ಅಧಿಕಾರಿಗಳ ತಂಡ ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ ಕಠಿಣ ಕ್ರಮಕ್ಕೆ ಸರ್ಕಾರ ನಿರ್ಧಾರ ಮಾಡಿದೆ ಎಂದು ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.
ವೈದ್ಯರಿಗೆ ನಾನೇ ರಾಯಭಾರಿ:
ಈ ವೇಳೆ ವೈದ್ಯರಿಗೆ ಆತ್ಮಸ್ಥೈರ್ಯ ತುಂಬಿದ ಸಚಿವ ಡಾ.ಕೆ. ಸುಧಾಕರ್, ವೈದ್ಯರು ಕೊರೋನಾಗೆ ಭಯಪಡುವ ಅಗತ್ಯ ಇಲ್ಲ. ನನ್ನ ಕುಟುಂಬದಲ್ಲೇ ಮೂವರಿಗೆ ಕೊರೋನಾ ಸೋಂಕು ಇತ್ತು. ಆದರೂ ನಾನು ಹೆದರಲಿಲ್ಲ. ಇದೇನೂ ಗುಣವಾಗದ ಕಾಯಿಲೆಯಲ್ಲ. ವೈದ್ಯರಿಗೆ ನಾನೇ ಬ್ರ್ಯಾಂಡ್ ಅಂಬಾಸಡರ್. ಒಬ್ಬ ವೈದ್ಯನಾಗಿ ನಾನು ಹೆದರಲಿಲ್ಲ. ವೈದ್ಯರು ಹೆದರದೇ ಕೊರೋನಾ ಕರ್ತವ್ಯಗಳಲ್ಲಿ ಧೈರ್ಯವಾಗಿ ತೊಡಗಿಸಿಕೊಳ್ಳಿ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸದ್ಯ 400 ಆ್ಯಂಬುಲೆನ್ಸ್ಗಳಿವೆ. ಹೆಚ್ಚುವರಿಯಾಗಿ 100 ಆ್ಯಂಬುಲೆನ್ಸ್ ಒದಗಿಸಲು ಸಿಎಂ ಸೂಚನೆ ಕೊಟ್ಟಿದ್ದಾರೆ. ಒಟ್ಟು 500 ಆ್ಯಂಬುಲೆನ್ಸ್ಗಳು ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸಲಿವೆ. ಕೋವಿಡ್ ಕೇರ್ ಸೆಂಟರ್ ಗೆ ಹೋಗಬೇಕಾದವರು ಆ್ಯಂಬುಲೆನ್ಸ್ ನಲ್ಲಿ ಹೋಗಬೇಕಾಗಿಲ್ಲ. ಕೆಲವೊಬ್ಬರನ್ನು ಟಿಟಿಯಲ್ಲಿ ಕರೆದುಕೊಂಡು ಹೋಗುತ್ತಾರೆ. ರೋಗ ಲಕ್ಷಣಗಳು ಇಲ್ಲದವರಿಗೆ ಆ್ಯಂಬುಲೆನ್ಸ್ ಅವಶ್ಯಕತೆ ಇಲ್ಲ ಎಂದು ಸಚಿವ ಡಾ. ಸುಧಾಕರ ಸ್ಪಷ್ಟನೆ ನೀಡಿದ್ದಾರೆ.
Published by:Sushma Chakre
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ