ಕೊರೋನಾ ರೋಗಿಯ ಶವವನ್ನು ಬಸ್​ಸ್ಟಾಂಡ್​ನಲ್ಲಿಟ್ಟ ಆಸ್ಪತ್ರೆ ಸಿಬ್ಬಂದಿ; ರಾಣೆಬೆನ್ನೂರಿನಲ್ಲೊಂದು ಅಮಾನವೀಯ ಘಟನೆ

Haveri Coronavirus: ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಆಸ್ಪತ್ರೆ ಸಿಬ್ಬಂದಿ ಸಾವನ್ನಪ್ಪಿದ ಕೊರೋನಾ ರೋಗಿಯ ಶವವನ್ನು ಪಿಪಿಇ ಕಿಟ್​ನಲ್ಲಿ ಸುತ್ತಿ, ಜನಸಂದಣಿ ಇರುವ ಬಸ್​ಸ್ಟಾಂಡ್​ನಲ್ಲಿ ಇಟ್ಟುಹೋಗಿದ್ದಾರೆ.

ಹಾವೇರಿಯ ರಾಣೆಬೆನ್ನೂರಿನ ಬಸ್​ಸ್ಟಾಂಡ್​ನಲ್ಲಿ ಸುತ್ತಿಟ್ಟ ಶವ

ಹಾವೇರಿಯ ರಾಣೆಬೆನ್ನೂರಿನ ಬಸ್​ಸ್ಟಾಂಡ್​ನಲ್ಲಿ ಸುತ್ತಿಟ್ಟ ಶವ

  • Share this:
ಹಾವೇರಿ (ಜು. 5): ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಮನುಷ್ಯರ ಜೀವ ಕಾಪಾಡುವ ವೈದ್ಯರು ಮಾನವೀಯತೆ ಮರೆತು ನಡೆದುಕೊಂಡಿರುವ ಘಟನೆಗಳು ಕೂಡ ಹೆಚ್ಚಾಗಿವೆ. ಹಾವೇರಿಯಲ್ಲಿ ಕೊರೋನಾ ರೋಗಿಯ ಮೃತದೇಹವನ್ನು ಪಿಪಿಇ ಕಿಟ್​ನಲ್ಲಿ ಸುತ್ತಿ, ಬಸ್​ಸ್ಟಾಂಡ್​ನಲ್ಲಿಟ್ಟು ಹೋಗಿರುವ ಅಮಾನವೀಯ ಘಟನೆ ನಡೆದಿದೆ.

ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಆಸ್ಪತ್ರೆ ಸಿಬ್ಬಂದಿ ಸಾವನ್ನಪ್ಪಿದ ಕೊರೋನಾ ರೋಗಿಯ ಶವವನ್ನು ಪಿಪಿಇ ಕಿಟ್​ನಲ್ಲಿ ಸುತ್ತಿ, ಜನಸಂದಣಿ ಇರುವ ಬಸ್​ಸ್ಟಾಂಡ್​ನಲ್ಲಿ ಇಟ್ಟುಹೋಗಿದ್ದಾರೆ. ಸುಮಾರು 3 ಗಂಟೆಗಳ ಕಾಲ ಅಲ್ಲೇ ಇದ್ದ ಶವದ ಬಳಿ ಹೋಗಲು ಸ್ಥಳೀಯರೂ ಹೆದರಿದ್ದಾರೆ. ಆಸ್ಪತ್ರೆಯ ಸಿಬ್ಬಂದಿಯ ಈ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಜು. 9ರವರೆಗೆ ಭಾರೀ ಮಳೆ; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ...

ಮಾರುತಿನಗರದ 45 ವರ್ಷದ ವ್ಯಕ್ತಿ ತೀವ್ರ ಜ್ವರದಿಂದ ಬಳಲುತ್ತಿದ್ದ. ಒಂದು ವಾರವಾದರೂ ಜ್ವರ ಕಡಿಮೆಯಾಗಿರಲಿಲ್ಲ. ಹೀಗಾಗಿ, ರಾಣೆಬೆನ್ನೂರಿನ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿಕೊಳ್ಳಲು ಆತ ನಿರ್ಧರಿಸಿದ್ದ. ಜೂನ್ 28ರಂದು ಆತನ ಸ್ವಾಬ್​ ಟೆಸ್ಟ್​ಗೆ ಕಳಿಸಲಾಗಿತ್ತು. ತನ್ನ ವೈದ್ಯಕೀಯ ವರದಿಯನ್ನು ತೆಗೆದುಕೊಳ್ಳಲು ಆಸ್ಪತ್ರೆಗೆ ಬಂದಿದ್ದ ಆತನ ವರದಿ ಇನ್ನೂ ಬಂದಿರಲಿಲ್ಲ. ಹೀಗಾಗಿ, ಅಲ್ಲಿಯವರೆಗೂ ಬಸ್​ ಸ್ಟಾಂಡ್​ನಲ್ಲಿ ಕುಳಿತುಕೊಳ್ಳಲು ಆತ ನಿರ್ಧರಿಸಿದ್ದ. ಆದರೆ, ಹಾಗೆ ಕುಳಿತಿದ್ದಾಗ ಬಸ್​ ಸ್ಟಾಂಡ್​ನಲ್ಲಿಯೇ ಆತ ಸಾವನ್ನಪ್ಪಿದ್ದ.

ಇದನ್ನೂ ಓದಿ: ನೂರಾರು ಗಣ್ಯರೊಂದಿಗೆ ಪಾರ್ಟಿ ಮಾಡಿದ್ದ ಹೈದರಾಬಾದ್ ಖ್ಯಾತ​ ಜ್ಯುವೆಲರಿ ಮಳಿಗೆ ಮಾಲೀಕ ಕೊರೋನಾಗೆ ಬಲಿ!

ಈ ವಿಷಯ ರಾಣೆಬೆನ್ನೂರಿನ ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗೆ ತಿಳಿದಿದ್ದರಿಂದ ಅವರು ತಕ್ಷಣೆ ಸ್ಥಳಕ್ಕೆ ಬಂದು, ಶವವನ್ನು ಶವಾಗಾರಕ್ಕೆ ತೆಗೆದುಕೊಂಡು ಹೋಗುವ ಬದಲು ಪಿಪಿಇ ಕಿಟ್​ನಲ್ಲಿ ಸುತ್ತಿಟ್ಟು ಹೋಗಿದ್ದರು. ಆತನ ಅಂತ್ಯಕ್ರಿಯೆಗೆಂದು ವಾಪಾಸ್​ ಬರುವಷ್ಟರಲ್ಲಿ ಆ ಹೆಣವನ್ನು ಬಸ್​ ಸ್ಟಾಂಡ್​ನಲ್ಲಿಟ್ಟ ವಿಡಿಯೋ ವೈರಲ್ ಆಗಿತ್ತು. ನಂತರ ಆ್ಯಂಬುಲೆನ್ಸ್​ನಲ್ಲಿ ಬಂದು ಶವವನ್ನು ತೆಗೆದುಕೊಂಡು ಹೋಗಿದ್ದರು.

ಆಸ್ಪತ್ರೆಯ ಸಿಬ್ಬಂದಿ ಯಾವ ಕಾರಣಕ್ಕೆ ಶವವನ್ನು ಪಿಪಿಇ ಕಿಟ್​ನಲ್ಲಿ ಸುತ್ತಿಟ್ಟಿದ್ದಾರೆ ಎಂದು ಗೊತ್ತಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವೈದ್ಯಕೀಯ ವರದಿಯಲ್ಲಿ ಆತನಿಗೆ ಕೊರೋನಾ ಇರುವುದು ಖಚಿತವಾಗಿದೆ.
Published by:Sushma Chakre
First published: