ಬೆಂಗಳೂರು(ಆ. 03): ಸಿಎಂ ಯಡಿಯೂರಪ್ಪ ಅವರಿಗೆ ಕೊರೋನಾ ಪಾಸಿಟಿವ್ ಬಂದು ಆಸ್ಪತ್ರೆಗೆ ದಾಖಲಾಗಿರುವ ಹಿನ್ನೆಲೆಯಲ್ಲಿ ಅವರೊಂದಿಗೆ ನಿಗದಿಯಾಗಿದ್ದ ಕೆಲ ಸಭೆಗಳು ರದ್ದಾಗುವ ಸಾಧ್ಯತೆ ಇದೆ. ಇಂದು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಬೆಳಗ್ಗೆ 11 ಗಂಟೆಗೆ ಅಧಿಕಾರಿಗಳ ಜೊತೆ ನಡೆಯಬೇಕಿದ್ದ ಸಿಎಂ ಸಭೆ ರದ್ದಾಗಿದೆ.
ಲಾಕ್ಡೌನ್ನಿಂದಾಗಿ ಸಿನಿಮಾ ಕ್ಷೇತ್ರ ಜರ್ಝರಿತಗೊಂಡ ಹಿನ್ನೆಲೆಯಲ್ಲಿ ಶಿವರಾಜ್ ಕುಮಾರ್ ನೇತೃತ್ವದಲ್ಲಿ ಚಿತ್ರರಂಗದ ಗಣ್ಣರು ಪರಿಹಾರ ಕೋರಿ ಮುಖ್ಯಮಂತ್ರಿಗಳನ್ನು ಇಂದು ಭೇಟಿ ಮಾಡುವುದಿತ್ತು. ಈಗ ಮುಖ್ಯಮಂತ್ರಿಗಳಿಗೆ ಕೋವಿಡ್ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಚಿತ್ರರಂಗದ ತಂಡವು ಬೆಳಗ್ಗೆ 10 ಗಂಟೆಗೆ ಉಪಮುಖ್ಯಮಂತ್ರಿ ಡಾ. ಸಿಎನ್ ಅಶ್ವಥನಾರಾಯಣ ಅವರನ್ನು ಭೇಟಿ ಮಾಡುತ್ತಿದ್ದಾರೆ.
ಇದನ್ನೂ ಓದಿ: ಸಿಎಂ ಯಡಿಯೂರಪ್ಪ ಶೀಘ್ರ ಗುಣಮುಖರಾಗಲೆಂದು ಹಾರೈಸಿದ ವಿವಿಧ ನಾಯಕರು
ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಕೋವಿಡ್-19 ಪಾಸಿಟಿವ್ ಇರುವುದು ನಿನ್ನೆ ಭಾನುವಾರ ರಾತ್ರಿ ದೃಢಪಟ್ಟಿದೆ. ರಾತ್ರಿ 10:30ಕ್ಕೆ ಅವರನ್ನು ಓಲ್ಡ್ ಏರ್ಪೋರ್ಟ್ ರಸ್ತೆಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಐದನೇ ಮಹಡಿಯ ವಿಶೇಷ ವಾರ್ಡ್ನಲ್ಲಿ ಸಿಎಂಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯ ಸ್ಥಿರವಾಗಿದ್ದು ಯಾವುದೇ ಏರುಪೇರು ಕಾಣುತ್ತಿಲ್ಲ. ಅವರ ಆರೋಗ್ಯದ ಬಗ್ಗೆ ನಿಗಾ ಇಡಲು ವೈದ್ಯರ ವಿಶೇಷ ತಂಡ ರಚಿಸಲಾಗಿದೆ.
ಇದೇ ವೇಳೆ, ಆಸ್ಪತ್ರೆ ಮುಂಭಾಗ ಬಿಗಿ ಭದ್ರತೆ ನಿಯೋಜಿಸಲಾಗಿದೆ. ನೂತನ ಪೊಲೀಸ್ ಕಮಿಷನರ್ ಕಮಲ್ ಪಂತ್ ಸೇರಿದಂತೆ ವಿವಿಧ ಪೊಲೀಸ್ ಅಧಿಕಾರಿಗಳು ಮಣಿಪಾಲ ಆಸ್ಪತ್ರೆಯಲ್ಲಿ ಭದ್ರತೆ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: Amit Shah: ಕೇಂದ್ರ ಗೃಹ ಸಚಿವ ಅಮಿತ್ ಶಾಗೂ ಕೊರೋನಾ ಪಾಸಿಟಿವ್, ಆಸ್ಪತ್ರೆಗೆ ದಾಖಲು
ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಿವಾಸದಲ್ಲಿದ್ದ ಕೆಲ ವ್ಯಕ್ತಿಗಳಿಗೆ ಈ ಹಿಂದೆ ಪಾಸಿಟಿವ್ ಬಂದಿತ್ತು. ಸಿಎಂ ಪ್ರತೀ ವಾರವೂ ತಪ್ಪದೇ ಕೊರೋನಾ ಪರೀಕ್ಷೆ ಮಾಡಿಸುತ್ತಿದ್ದರು. ಹಿಂದಿನ ವಾರ ಅವರಿಗೆ ನೆಗಟಿವ್ ಬಂದಿತ್ತು. ಈ ವಾರ ಪಾಸಿಟಿವ್ ಇರುವುದು ದೃಢಪಟ್ಟಿದೆ. ಭಾನುವಾರ ಬೆಳಗ್ಗೆ ಅವರು ಸ್ಯಾಂಪಲ್ ನೀಡಿದ್ದರು. ಸಂಜೆ ರಿಸಲ್ಟ್ ಬಂದು ಅವರಿಗೆ ಪಾಸಿಟಿವ್ ಇರುವುದು ದೃಢಪಟ್ಟಿದೆ. ಯಡಿಯೂರಪ್ಪಗೆ ಸೋಂಕು ಇದೆಯಾದರೂ ರೋಗಲಕ್ಷಣಗಳು ಇಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ