ಬೆಂಗಳೂರು(ಮೇ 29): ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದಾದ್ಯಂತ ಅನಿವಾಸಿ ಕನ್ನಡಿಗರು ಸಂಕಷ್ಟ ದಲ್ಲಿ ಸಿಲುಕಿದ್ದಾರೆ. ಚಿಕಿತ್ಸೆಗಾಗಿ ತವರಿಗೆ ಮರಳಲು ಹೊರಟು ನಿಂತ ಕ್ಯಾನ್ಸರ್, ಹೃದ್ರೋಗದಂತಹ ಗಂಭೀರ ಕಾಯಿಲೆ ಪೀಡಿತರು, ನೂರಕ್ಕೂ ಅಧಿಕ ಗರ್ಭಿಣಿ ಮಹಿಳೆಯರು ಮತ್ತು ಉದ್ಯೋಗ ಕಳೆದುಕೊಂಡ ಕಾರ್ಮಿಕರು ಸೌದಿ ಅರೇಬಿಯಾದಲ್ಲಿ ಸಿಲುಕಿಕೊಂಡಿದ್ದಾರೆ.
ಮಂಗಳೂರಿನ ಸುರತ್ಕಲ್‌ನ ಇಡ್ಯಾ ನಿವಾಸಿ ಜಬ್ಬಾರ್ ಅಹ್ಮದ್ ಒಂದೂವರೆ ವರ್ಷದಿಂದ ರಿಯಾದ್‌ನ ಖರ್ಜ್ನಲ್ಲಿ ಹೌಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು. ಇದೀಗ ಕಳೆದ ಒಂದು ತಿಂಗಳಿಂದ ತೀವ್ರ ಅಸ್ವಸ್ಥಗೊಂಡಿದ್ದು, ಕ್ಯಾನ್ಸರ್ ಪೀಡಿತರಾಗಿರುವುದು ತಿಳಿದುಬಂದಿದೆ. ಈಗಾಗಲೇ ಒಂದು ಶಸ್ತ್ರ ಚಿಕಿತ್ಸೆ ನಡೆದಿದ್ದು ತುರ್ತಾಗಿ ಇನ್ನೊಂದು ಶಸ್ತ್ರ ಚಿಕಿತ್ಸೆ ಮಾಡಬೇಕಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸೌದಿ ಅರೇಬಿಯಾದಲ್ಲಿ ಆ ಚಿಕಿತ್ಸೆ ಅತ್ಯಂತ ದುಬಾರಿಯಾಗಿದ್ದು ಸುಮಾರು ಎಂಟು ಲಕ್ಷ ರೂಪಾಯಿ ಖರ್ಚು ಮಾಡಬೇಕಾಗಿದೆ. ಈಗಾಗಲೇ ಜಬ್ಬಾರ್ ರವರ ಪ್ರಾಯೋಜಕನು ಒಂದು ತಿಂಗಳ ಹಿಂದೆ ವಿಸಾ ಎಕ್ಸಿಟ್ ಮಾಡಿದ್ದು ಇವರ ಚಿಕಿತ್ಸಾ ಖರ್ಚು ವೆಚ್ಚದ ಗೊಡವೆಗೆ ಹೋಗುತ್ತಿಲ್ಲ. ಜಬ್ಬಾರ್ ತನ್ನ ಸಂಬಂಧಿಗಳ ನೆರವಿನಿಂದ ಇದುವರೆಗೆ ಚಿಕಿತ್ಸಾ ವೆಚ್ಚವನ್ನು ಭರಿಸಿದ್ದು ಮುಂದಿನ ಚಿಕಿತ್ಸೆಗೆ ಭಾರತಕ್ಕೆ ಮರಳಲು ಬಯಸಿದ್ದರೂ ವಿಮಾನ ವ್ಯವಸ್ಥೆ ಇಲ್ಲದಿರುವುದರಿಂದ ಸಾಧ್ಯವಾಗುತ್ತಿಲ್ಲ.
ಸೌದಿ ಅರೇಬಿಯಾದಲ್ಲಿ ಕ್ಯಾನ್ಸರ್ನಂತಹ ಗಂಭೀರ ಕಾಯಿಲೆಯ ಚಿಕಿತ್ಸೆ ಮತ್ತು ಔಷಧಗಳು ದುಬಾರಿ ಮಾತ್ರವಲ್ಲದೆ ಪರಿಣಾಮಕಾರಿಯಲ್ಲ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಸ್ವತಃ ಕಾಯಿಲೆ ಪೀಡಿತ ಜಬ್ಬಾರ್ ಅವರ ವೈದ್ಯರು ಉತ್ತಮ ಚಿಕಿತ್ಸೆಗಾಗಿ ಭಾರತಕ್ಕೆ ಹಿಂದಿರುಗುವುದು ಉತ್ತಮವೆಂದು ಹೇಳಿದ್ದು ಜಬ್ಬಾರ್ ವಾಪಾಸಾತಿಗಾಗಿ ಕಾಯುತ್ತಿದ್ದಾರೆ. ತವರಿನಲ್ಲಿ ಜಬ್ಬಾರ್ ಕುಟುಂಬಸ್ಥರೂ ಆತಂಕದಲ್ಲಿ ಅವರ ವಾಪಾಸಾತಿಗಾಗಿ ಕಾಯುತ್ತಿದ್ದಾರೆ.
ಇದನ್ನೂ ಓದಿ: ಅಸಮಾಧಾನಿತರ ಸಭೆ ನಡೆಸಿದ್ದ ಉಮೇಶ್ ಕತ್ತಿ ಮೇಲೆ ಸಿಎಂ ಯಡಿಯೂರಪ್ಪ ಕೆಂಗಣ್ಣು
ಡಿಸೋಜಾ ಕಥೆ:
ಮಂಗಳೂರಿನ ಪಾಂಡೆಶ್ವರ ನಿವಾಸಿ 31 ವರ್ಷದ ಸವನ್ ಡಿಸೋಝಾರದ್ದು ಮತ್ತೊಂದು ಕರುಣಾಜನಕ ಕತೆ. ಸೌದಿ ಅರೇಬಿಯಾದ ದಮ್ಮಾಮ್ನಲ್ಲಿ ಕಳೆದ ಒಂದು ವರ್ಷದಿಂದ ಕಂಪೆನಿಯೊಂದರಲ್ಲಿ ದುಡಿಯುತ್ತಿದ್ದು ಕಳೆದ ಒಂದೂವರೆ ತಿಂಗಳಿಂದ ತೀವ್ರ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದೀಗ ಅವರ ವೈದ್ಯಕೀಯ ವರದಿ ಬಂದಿದ್ದು ಗಂಭೀರ ಕಾಯಿಲೆಯೊಂದನ್ನು ಎದುರಿಸುತ್ತಿರುವುದು ವೈದ್ಯಕೀಯ ವರದಿಯಿಂದ ತಿಳಿದುಬಂದಿದೆ. ತನ್ನ ವಾಪಸಾತಿಗಾಗಿ ರಾಯಭಾರಿ ಕಚೇರಿಗೆ ಮನವಿ ಸಲ್ಲಿಸಿದ್ದು ಕರ್ನಾಟಕಕ್ಕೆ ವಿಮಾನ ಏರ್ಪಾಡು ಆರಂಭವಾಗದೆ ಅದು ಸಾಧ್ಯವಾಗುತ್ತಿಲ್ಲ. ಸೌದಿ ಅರೇಬಿಯಾದಲ್ಲಿ ಇವರ ಕಾಯಿಲೆಗೆ ಚಿಕಿತ್ಸಾ ವೆಚ್ಚ ದುಬಾರಿಯಾಗಿರುವುದರಿಂದ ಕಂಗಾಲಾಗಿದ್ದಾರೆ.
ಜಬ್ಬಾರ್ ಮತ್ತು ಸವನ್ ಅವರಂತಹ ಗಂಭೀರ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿರುವ ನೂರಾರು ಮಂದಿ ಸೌದಿ ಅರೇಬಿಯಾದಲ್ಲಿ ಸಿಲುಕಿಕೊಂಡಿದ್ದಾರೆ. ಭಾರತಕ್ಕೆ ಹೋಲಿಸಿದರೆ ಸೌದಿ ಅರೇಬಿಯಾದ ಆಸ್ಪತ್ರೆಗಳಲ್ಲಿ ಹೆರಿಗೆ ವೆಚ್ಚ ದುಬಾರಿಯಾಗಿದ್ದು ದುಪ್ಪಟ್ಟು ಹಣ ವ್ಯಯಿಸಬೇಕಾಗುತ್ತದೆ. ಆರೋಗ್ಯ ವಿಮೆಯೂ ಇಲ್ಲದಿದ್ದರೆ ಅದು ಇನ್ನೂ ದುಬಾರಿಯಾಗುತ್ತದೆ. ಕಂಪೆನಿಗಳಲ್ಲಿ ಉದ್ಯೋಗದಲ್ಲಿರುವವರು ವಿಸಿಟಿಂಗ್ ವಿಸಾಗಳಲ್ಲಿ ತಮ್ಮ ಕುಟುಂಬವನ್ನು ಕರೆಸಿಕೊಂಡಿದ್ದು ಅವರಲ್ಲಿ ಹೆರಿಗೆಗಾಗಿ ಹೊರಟು ನಿಂತವರು ವಿಮಾನಯಾನ ರದ್ದಾಗಿರುವುದರಿಂದ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ.
ಸೌದಿ ಅರೇಬಿಯಾದಲ್ಲಿ ಅತ್ಯಧಿಕವಾಗಿ ಕೋವಿಡ್ 19 ವೈರಸ್ ತಗುಲಿಕೊಂಡವರು ಕಾರ್ಮಿಕ ಶಿಬಿರಗಳಲ್ಲಿ ನೆಲೆಸುವ ವಿದೇಶಿಗಳಾಗಿದ್ದಾರೆ. ಪ್ರತೀ ಕ್ಯಾಂಪ್ಗಳಲ್ಲಿ ಸಾವಿರಾರು ಮಂದಿ ಕಾರ್ಮಿಕರು ಒಟ್ಟಾಗಿ ವಾಸಿಸುತ್ತಿದ್ದು ಒಂದು ಕೊಠಡಿಯನ್ನು 6 ರಿಂದ 8 ಮಂದಿ ಹಂಚಿಕೊಳ್ಳುತ್ತಾರೆ. ಈ ಪರಿಸ್ಥಿತಿಯಲ್ಲಿ ಓರ್ವನಿಗೆ ವೈರಸ್ ತಗುಲಿದರೂ ಶಿಬಿರದಲ್ಲಿ ಉಳಿದ ಕಾರ್ಮಿಕರಿಗೆ ವೇಗವಾಗಿ ಹರಡುತ್ತದೆ. ಇದರಿಂದಾಗಿ ಕಾರ್ಮಿಕರು ಮಾನಸಿಕ ಭಯ ಮತ್ತು ಆತಂಕದಿಂದ ಜೀವಿಸುವಂತಾಗಿದೆ.
ಲಾಕ್ ಡೌನ್ನಿಂದ ಉಂಟಾಗುವ ನಷ್ಟವನ್ನು ಕಡಿಮೆಗೊಳಿಸುವುದಕ್ಕಾಗಿ ಕಂಪೆನಿಗಳು ತಮ್ಮ ಸಿಬ್ಬಂದಿಯನ್ನು ವೇತನ ರಹಿತ ರಜೆಯಲ್ಲಿ ಕಳಿಸುತ್ತಿವೆ. ಗಂಟೆಯ ಆಧಾರದಲ್ಲಿ ವೇತನ ಪಡೆಯುವವರ ಕೆಲಸದ ಅವಧಿಯನ್ನು ಕಡಿತಗೊಳಿಸುತ್ತಿವೆ. ಸಣ್ಣ ಕೈಗಾರಿಕೆಗಳು ತಾತ್ಕಾಲಿಕವಾಗಿ ಮುಚ್ಚಿದ್ದು ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಇಂಥ ಕಾರ್ಮಿಕರು ದೈನಂದಿನ ಖರ್ಚುವೆಚ್ಚಕ್ಕಾಗಿ ಹಣವಿಲ್ಲದೆ ಸಮಸ್ಯೆಗೆ ಸಿಲುಕಿದ್ದು ವಾಪಾಸಾತಿಗಾಗಿ ಸರಕಾರದ ವಿಮಾನ ಏರ್ಪಾಡನ್ನು ಕಾಯುತ್ತಿದ್ದಾರೆ.
ಇದನ್ನೂ ಓದಿ: ಶಾಸಕ, ಅಧಿಕಾರಿ ನಡುವೆ ಕೊರೋನಾ ಕಿತ್ತಾಟ ; ಶಾಸಕ ದತ್ತಾತ್ರೇಯ ಪಾಟೀಲ ಬೆಂಬಲಿಗರಿಂದ ಬೆದರಿಕೆ
ಸಮಸ್ಯೆಯಲ್ಲಿ ಉದ್ಯಮಿಗಳು:
ಸೌದಿ ಸರಕಾರದ ತೈಲ ಸಂಸ್ಕರಣಾ ಯೋಜನೆಗಳನ್ನು ಆಧರಿಸಿ ಉದ್ಯಮ ನಡೆಸುವ ಅನಿವಾಸಿ ಕನ್ನಡಿಗ ಉದ್ಯಮಿಗಳಿದ್ದು ತಾತ್ಕಾಲಿಕವಾಗಿ ಸಾವಿರಾರು ಮಂದಿ ಕಾರ್ಮಿಕರು ಮತ್ತು ಸಿಬ್ಬಂದಿಯನ್ನು ಭಾರತದಿಂದ ಕರೆತಂದವರಿದ್ದಾರೆ. ಯೋಜನೆಗಳು ತಾತ್ಕಾಲಿಕವಾಗಿ ಅನಿರ್ದಿಷ್ಠಾವಧಿಗೆ ನಿಂತಿರುವುದರಿಂದ ಈ ಕಾರ್ಮಿಕರಿಗೆ ಊಟ ವಸತಿ ಕಲ್ಪಿಸುವುದು ಅವರಿಗೆ ಕೋಟ್ಯಂತರ ರೂಪಾಯಿ ನಷ್ಟವುಂಟುಮಾಡಲಿದೆ. ಪವಿತ್ರ ಮೆಕ್ಕಾ ಮತ್ತು ಮದೀನಾಗಳಿಗೆ ಉಮ್ರಾ ವಿಸಾದಲ್ಲಿ ಒಂದು ತಿಂಗಳು ಅಥವಾ ಹದಿನೈದು ದಿನಗಳಿಗೆ ಆಗಮಿಸಿದ ಕನ್ನಡಿಗರು ಕೂಡ ಲಾಕ್ ಡೌನ್ನಿಂದಾಗಿ ಸಿಲುಕಿಕೊಂಡಿದ್ದಾರೆ. ಇವರಲ್ಲಿಯೂ ಹಿರಿಯರು, ರೋಗಿಗಳು ಮತ್ತು ಗರ್ಭಿಣಿಯರು ಇದ್ದು ತವರಿಗೆ ಮರಳಲು ಕಾತರರಾಗಿದ್ದಾರೆ. ಅಲ್ಲದೆ ಹಲವರು ಕ್ಯಾನ್ಸರ್, ಹೃದ್ರೋಗದಂತಹ ಗಂಭೀರ ಕಾಯಿಲೆಗೆ ಚಿಕಿತ್ಸೆ ಪಡೆಯುವವರಿದ್ದು ಒಂದು ತಿಂಗಳಿಗೆ ಬೇಕಾಗುವಷ್ಟು ಮಾತ್ರವೇ ಔಷಧಿ ತಂದವರಿದ್ದಾರೆ.
ಇದೀಗ ವಿಮಾನ ಯಾನ ಸ್ಥಗಿತಗೊಂಡಿರುವುದರಿಂದ ತವರಿಗೆ ಮರಳಲು ಸಾಧ್ಯವಾಗದೆ ನಿಯಮಿತ ವೈದ್ಯಕೀಯ ಪರೀಕ್ಷೆ ಮಾಡಲಾಗದೆ ಸಿಲುಕಿಕೊಂಡಿದ್ದಾರೆ. ರಾಜ್ಯ ಸರಕಾರವು ಮಧ್ಯಪ್ರವೇಶಿಸಿ ಜಿದ್ದಾ ಹಾಗೂ ಮದೀನಾ ಮೂಲಕ ಕರ್ನಾಟಕಕ್ಕೆ ತ್ವರಿತವಾಗಿ ವಿಶೇಷ ವಿಮಾನ ಏರ್ಪಡಿಸುವಂತೆ ಇಲ್ಲಿ ಸಿಲುಕಿಕೊಂಡಿರುವ ಅನಿವಾಸಿ ಕನ್ನಡಿಗರು ಒತ್ತಾಯಿಸುತ್ತಿದ್ದಾರೆ. ಜಿದ್ದಾ ಸುತ್ತಮುತ್ತ ಸಣ್ಣಪುಟ್ಟ ಕೆಲಸ ಮಾಡುವವರು ತಮ್ಮ ಕುಟುಂಬಿಕರನ್ನು ಉಮ್ರಾಗಾಗಿ ವಿಸಿಟ್ ವಿಸಾದಲ್ಲಿ ಕರೆತರುವುದು ಸಾಮಾನ್ಯ. ಇವರಲ್ಲಿ ಹಲವರು ಇದೀಗ ಉದ್ಯೋಗ ಕಳೆದುಕೊಂಡಿದ್ದಾರೆ, ಅಥವಾ ಅವರ ವೇತನ ಕಡಿತಗೊಂಡಿದೆ. ಈ ಪರಿಸ್ಥಿಯಲ್ಲಿ ರೂಮು ಬಾಡಿಗೆ ನೀಡಲಾಗದೆ, ದಿನನಿತ್ಯದ ಆಹಾರ ಮತ್ತು ಇತರ ಖರ್ಚಿಗೆ ಹಣವಿಲ್ಲದೆ ಮುಂದಿನ ದಾರಿ ಕಾಣದೆ ಆತಂಕದಲ್ಲಿ ಜೀವಿಸುತ್ತಿದ್ದಾರೆ. ಇಂಡಿಯನ್ ಸೋಶಿಯಲ್ ಫ಼ೋರಮ್, ಸೌದಿ ಅರೇಬಿಯಾ, ಕರ್ನಾಟಕ ಘಟಕವು ತುರ್ತು ವಾಪಸಾತಿಯ ಅಗತ್ಯವುಳ್ಳ ಅನಿವಾಸಿ ಕನ್ನಡಿಗರ ಪ್ರಕರಣವನ್ನು ಕೈಗೆತ್ತಿಕೊಂಡಿದ್ದು ಅವರನ್ನು ತವರಿಗೆ ಮರಳಿಸಲು ತೀವ್ರ ಪ್ರಯತ್ನ ನಡೆಸುತ್ತಿದೆ. ಆದರೆ ವಿಮಾನ ಯಾನ ಸೌಲಭ್ಯದ ಕೊರತೆಯ ಹಿನ್ನೆಲೆಯಲ್ಲಿ ಅದು ಸಾಧ್ಯವಾಗುತ್ತಿಲ್ಲ. ಡಿಸಿಎಂನ ಅಶ್ವಥ್ ನಾರಾಯಣ, ಕೇಂದ್ರ ಸಚಿವ ಡಿ ವಿ ಸದಾನಂದಗೌಡರೊಂದಿಗೆ ಅನಿವಾಸಿ ಕನ್ನಡಿಗರು ಈಗಾಗಲೇ ದೂರವಾಣಿ ಮೂಲಕ ಮಾತನಾಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಆದರೆ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ.
ವರದಿ: ಸೌಮ್ಯ ಕಳಸ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ