TV Serial: ಹೈದರಾಬಾದ್​ಗೆ ತೆರಳಿದ ಕನ್ನಡ ಧಾರಾವಾಹಿಗಳು, Lockdown ಮುಗಿಯೋತನಕ ಬರಲ್ವಂತೆ !

ಇಂದು ಬೆಳಗ್ಗೆ ಕನ್ನಡದ ಪ್ರಮುಖ ಮನರಂಜನಾ ಚಾನೆಲ್​ಗಳ ಮುಖ್ಯಸ್ಥರು ನಡೆಸಿದ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದ್ದು ಧಾರಾವಾಹಿಗಳ ಚಿತ್ರೀಕರಣವನ್ನು ಹೈದರಾಬಾದ್​ನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಹಾಗಾಗಿ ಇನ್ಮುಂದೆ ನೀವು ಮನೆಯ ಟಿವಿ ಪರದೆಯ ಮೇಲೆ ನೋಡಿ ಎಂಜಾಯ್ ಮಾಡುವ ನೆಚ್ಚಿನ ಧಾರಾವಾಹಿಗಳು ಹೈದರಾಬಾದ್​ನಿಂದ ಬರಲಿವೆ.

ಕನ್ನಡತಿ ಧಾರಾವಾಹಿ ಪೋಸ್ಟರ್

ಕನ್ನಡತಿ ಧಾರಾವಾಹಿ ಪೋಸ್ಟರ್

  • Share this:
TV Serial: ಕರ್ನಾಟಕದಲ್ಲಿ ಕೊರೊನಾ Lockdown ಕಳೆದ ಎರಡು ವಾರಗಳಿಂದ ನಡೆಯುತ್ತಿದೆ. ಸದ್ಯದ ಕೋವಿಡ್ ಪರಿಸ್ಥಿತಿಯನ್ನು ಗಮನಿಸಿದ್ರೆ ಇದು ಇನ್ನೂ ಮುಂದುವರೆಯುವ ಸಾಧ್ಯತೆ ಇದೆ. ಆದ್ರೆ ಕಳೆದ ಬಾರಿ ಕೋವಿಡ್ ಮೊದಲನೇ ಅಲೆಯಲ್ಲಿ ಭಾರೀ ಏಟು ತಿಂದಿದ್ದ ಟಿವಿ ಸೀರಿಯಲ್ ದುನಿಯಾ ಈ ಬಾರಿ ಈಸಬೇಕು, ಜಯಿಸಬೇಕು ಎಂದು ನಿರ್ಧರಿಸಿಬಿಟ್ಟಿದೆ. ಹಾಗಾಗಿ ನಿಯಮಗಳು ಸಡಿಲವಾಗಿರುವ, ತಮ್ಮ ಬಜೆಟ್​ಗೆ ಹೆಚ್ಚಿನ ಏಟು ಕೊಡದ ಬದಲಿ ವ್ಯವಸ್ಥೆ ಹುಡುಕಿಕೊಂಡಿವೆ. ಇಂದು ಬೆಳಗ್ಗೆ ಕನ್ನಡದ ಪ್ರಮುಖ ಮನರಂಜನಾ ಚಾನೆಲ್​ಗಳ ಮುಖ್ಯಸ್ಥರು ನಡೆಸಿದ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದ್ದು ಧಾರಾವಾಹಿಗಳ ಚಿತ್ರೀಕರಣವನ್ನು ಹೈದರಾಬಾದ್​ನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಹಾಗಾಗಿ ಇನ್ಮುಂದೆ ನೀವು ಮನೆಯ ಟಿವಿ ಪರದೆಯ ಮೇಲೆ ನೋಡಿ ಎಂಜಾಯ್ ಮಾಡುವ ನೆಚ್ಚಿನ ಧಾರಾವಾಹಿಗಳು ಹೈದರಾಬಾದ್​ನಿಂದ ಬರಲಿವೆ.

ಕಲರ್ಸ್ ಕನ್ನಡ ಚಾನೆಲ್​ನ ಕನ್ನಡತಿ, ಗಿಣಿರಾಮ್ ಮತ್ತು ಮಂಗಳ ಗೌರಿ ಮದುವೆ ಧಾರಾವಾಹಿಗಳ ತಂಡಗಳು ಈಗಾಗಲೇ ಬೆಂಗಳೂರು ಬಿಟ್ಟು ಮುತ್ತಿನ ನಗರಿ ಹೈದರಾಬಾದ್ ತಲುಪಿದ್ದಾರೆ. ಇನ್ನು ಜೀ ಕನ್ನಡದ ಜೊತೆ ಜೊತೆಯಲಿ, ನಾಗಿಣಿ ಮತ್ತು ಗಟ್ಟಿಮೇಳ ತಂಡಗಳು ಆಗಲೇ ಹೊರಡುವ ತಯಾರಿಯಲ್ಲಿವೆ. ಏಷ್ಯಾನೆಟ್ ಸುವರ್ಣ ಚಾನೆಲ್​ನ ಜೀವ ಹೂವಾಗಿದೆ, ಇಂತಿ ನಿಮ್ಮ ಆಶಾ ಮತ್ತು ಸರಸು ತಂಡಗಳು ತಮ್ಮ ಬ್ಯಾಗ್ ಪ್ಯಾಕ್ ಮಾಡಿಕೊಳ್ತಿವೆ.

Kannada TV serials shift base to Hyderabad continue to shoot from there because of lockdown and corona in Bengaluru
ಜೊತೆ ಜೊತೆಯಲಿ ಧಾರಾವಾಹಿ


ಈ ಎಲ್ಲಾ ಧಾರಾವಾಹಿಗಳಿಗೆ ಸಾಕಷ್ಟು ದೊಡ್ಡ ಅಭಿಮಾನಿ ಬಳಗವಿದೆ. ಕಳೆದ ಬಾರಿ ಅನಿವಾರ್ಯವಾಗಿ ಧಾರಾವಾಹಿಗಳ ಶೂಟಿಂಗ್ ದೀರ್ಘಕಾಲದವರಗೆ ನಿಂತು ಅದರಿಂದ ತಯಾರಕರು ಸಾಕಷ್ಟು ನಷ್ಟ ಅನುಭವಿಸಿದ್ದರು. ವೀಕ್ಷಕರು ಕೂಡಾ ನೆಚ್ಚಿನ ಸೀರಿಯಲ್ ಕತೆ ಏನಾಯ್ತು ಅನ್ನೋ ಕುತೂಹಲಕ್ಕೆ ಯಾವುದೇ ಉತ್ತರ ಸಿಗದೆ ಬೇಸರಿಸಿಕೊಂಡೇ ಸುಮ್ಮನಾಗಿದ್ದರು. ಆದರೆ ಈ ಬಾರಿ ಅಂಥಾ ದೊಡ್ಡ ಹೊಡೆತಗಳು ಬಾರದಂತೆ ತಡೆಯಲು ಚಾನೆಲ್​​ಗಳು ಹೈದರಾಬಾದ್ ಮಾರ್ಗ ಹಿಡಿದಿವೆ.

ಮೊದಲಿಗೆ 15 ದಿನಗಳ ಶೆಡ್ಯೂಲ್ ಪ್ಲಾನ್ ಮಾಡಿಕೊಂಡು ಧಾರಾವಾಹಿ ತಂಡಗಳು ಹೈದರಾಬಾದ್ ಹೋಗುತ್ತಿವೆ. 15 ದಿನಗಳ ಶೂಟಿಂಗ್​​ ಮಾಡಿದ್ರೆ ಕನಿಷ್ಟ 1 ತಿಂಗಳಿಗಾಗುಷ್ಟು ಎಪಿಸೋಡ್​ಗಳು ರೆಡಿಯಾಗುತ್ತವೆ. ಧಾರಾವಾಹಿಯ ಕತೆ ಮತ್ತು ಚಿತ್ರಕತೆಗಳನ್ನು ಇದಕ್ಕೆ ತಕ್ಕಂತೆ ಬದಲಿಸಿಕೊಳ್ಳಲಾಗಿದೆ. ತಂಡದ ಯಾರಿಗೆ ಸೋಂಕು ತಗುಲಿದೆ, ಯಾವ ಪಾತ್ರಧಾರಿಯ ಆರೋಗ್ಯ ಹೇಗಿದೆ ಎನ್ನುವುದರ ಆಧಾರದ ಮೇಲೆ ಕತೆ ಹೆಣೆಯಲಾಗುತ್ತಿದೆ.

ಇದನ್ನೂ ಓದಿ: https://kannada.news18.com/news/national-international/rajiv-gandhi-assasination-how-did-ltte-plan-and-execute-the-murder-of-indian-prime-minister-sktv-566999.html

ಅತ್ಯಂತ ಅಗತ್ಯವೆನಿಸುವ ಕೆಲವೇ ಕೆಲವು ಜನರನ್ನೊಳಗೊಂಡ ತಂಡಗಳು ಇದರಲ್ಲಿ ಇರಲಿವೆ. ಪ್ರತೀ ತಂಡದ ಎಲ್ಲಾ ಸದಸ್ಯರೂ ಇಲ್ಲಿಂದ ಹೊರಡುವ 48 ಗಂಟೆಗಳ ಮುಂಚೆ ಆರ್ಟಿಪಿಸಿಆರ್ ಪರೀಕ್ಷೆ ಮಾಡಿಸಿ ನೆಗೆಟಿವ್ ರಿಪೋರ್ಟ್ ಜೊತೆಗೆ ಹೊರಡುತ್ತಾರೆ. ಅಲ್ಲಿಂದ ವಾಪಸ್ ಬರುವ 48 ಗಂಟೆಗಳ ಮುನ್ನ ಮತ್ತೆ ಆರ್ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್ ರಿಪೋರ್ಟ್ ಜೊತೆಗೇ ಮರಳುತ್ತಾರೆ. ಇಲ್ಲದಿದ್ದರೆ ಎರಡೂ ರಾಜ್ಯಗಳ ಗಡಿಗಳನ್ನು ದಾಟುವುದು ಸಾಧ್ಯವಾಗುವುದಿಲ್ಲ.

ಧಾರಾವಾಹಿ ತಯಾರಕರಿಗೆ ಇದು ಸ್ವಲ್ಪ ಹೆಚ್ಚಿನ ಖರ್ಚು ಬೀಳುತ್ತದೆ. ಅಂದಾಜಿನ ಪ್ರಕಾರ ಒಂದಕ್ಕೆ ಒಂದೂವರೆ ಪಟ್ಟಿನಷ್ಟು ಖರ್ಚಾಗುತ್ತದೆ. ಆದರೂ ಸಂಪೂರ್ಣ ಕೆಲಸ ನಿಲ್ಲಿಸುವ ಬದಲು ಇದು ಅತ್ಯಂತ ಸೂಕ್ತ ಬದಲಿ ಮಾರ್ಗವಾಗಿದೆ. ಹೈದರಾಬಾದ್​ಗೆ ಹೋಗುವ ತಂಡದ ಉಳಿಯುವ ವ್ಯವಸ್ಥೆ, ಊಟ-ತಿಂಡಿ ಮುಂತಾದ ಎಲ್ಲಾ ವ್ಯವಸ್ಥೆಗಳಿಗೆ ಹೆಚ್ಚು ಖರ್ಚಾಗಲಿದೆ. ಜೊತೆಗೆ ಅಗತ್ಯವಿದ್ದಷ್ಟು ಮಾತ್ರ ಪರಿಕರಗಳನ್ನು ಬಳಸಲು ನಿರ್ಧರಿಸಲಾಗಿದೆ.

ಹೈದರಾಬಾದ್​ನಲ್ಲಿ ಶೂಟಿಂಗ್ ಎಂದ ಕೂಡಲೇ ಎಲ್ಲರೂ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣ ಎಂದುಕೊಳ್ಳಬಹುದು. ಖಂಡಿತಾ ಸೀರಿಯಲ್ ಶೂಟಿಂಗ್​ಗಳು ಅಲ್ಲಿ ನಡೆಯುವುದಿಲ್ಲ. ರಾಮೋಜಿ ಫಿಲ್ಮ್ ಸಿಟಿಯಲ್ಲಿ ಶೂಟಿಂಗ್ ಮಾಡಿದರೆ ತಂಡ ಅಲ್ಲೇ ಉಳಿಯಬೇಕಾಗುತ್ತದೆ, ಅವರ ಬಳಿಯೇ ಊಟ ತಿಂಡಿ ಕೊಳ್ಳಬೇಕಾಗುತ್ತದೆ..ಇದು ಒಟ್ಟಾರೆ ಬಜೆಟ್​ನ ಒಂದಕ್ಕೆ ಮೂರು ಪಟ್ಟು ಹೆಚ್ಚಾಗುತ್ತದೆ. ಈ ಎಲ್ಲಾ ಕಾರಣದಿಂದ ಹೈದಾರಾಬಾದ್​ನ ಬೇರೆ ಬೇರೆ ಲೊಕೇಶನ್​ಗಳಲ್ಲಿ ಚಿತ್ರೀಕರಣ ಮಾಡಲು ನಿರ್ಧರಿಸಲಾಗಿದೆ. ಒಟ್ನಲ್ಲಿ ಕೊರೊನಾ, ಲಾಕ್​ಡೌನ್ ಏನೇ ಇದ್ರೂ ನಿಮ್ಮ ನೆಚ್ಚಿನ ಧಾರಾವಾಹಿಗಳು ಅರ್ಧಕ್ಕೇ ನಿಂತು ಹೋಗುವ ಅಪಾಯವಂತೂ ಇಲ್ಲ. ನೆಮ್ಮದಿಯಾಗಿ ಅವುಗಳನ್ನು ನೋಡುತ್ತಾ ಕಾಳ ಕಳೆಯುವ ಅವಕಾಶ ವೀಕ್ಷಕರಿಗಿದೆ.
Published by:Soumya KN
First published: