news18-kannada Updated:May 25, 2020, 2:05 PM IST
ಸಾಂದರ್ಭಿಕ ಚಿತ್ರ
ಕೊರೋನಾ ಹಾವಳಿಗೆ ಅಂತ್ಯ ಹಾಡಲು ದೇಶಾದ್ಯಂತ ಲಾಕ್ಡೌನ್ ಘೋಷಿಸಿ ಎರಡು ತಿಂಗಳು ಪೂರ್ಣಗೊಂಡಿದೆ. ಸಿನಿಮಾ ಶೂಟಿಂಗ್, ಪ್ರದರ್ಶನ ಮಾತ್ರವಲ್ಲ ಕಿರುತೆರೆ ಕಾರ್ಯಕ್ರಮಗಳು, ಸೀರಿಯಲ್ಗಳು, ರಿಯಾಲಿಟಿ ಶೋಗಳ ಚಿತ್ರೀಕರಣಕ್ಕೂ ಬ್ರೇಕ್ ಬಿದ್ದಿತ್ತು. ಈ ಹಿನ್ನೆಲೆಯಲ್ಲಿ ಕೆಲವೇ ದಿನಗಳಲ್ಲಿ ಟಿವಿ ಸೀರಿಯಲ್ಗಳ ಬ್ಯಾಕಪ್ ಮುಗಿದ ಬಳಿಕ ಎಲ್ಲವೂ ಹಳೆಯ ಎಪಿಸೋಡ್ಗಳನ್ನೇ ಮತ್ತೆ ಟೆಲಿಕಾಸ್ಟ್ ಮಾಡಲು ಪ್ರಾರಂಭಿಸಿದ್ದವು. ಹೀಗಾಗಿ ಮನರಂಜನೆ ಚಾನಲ್ಗಳ ರೇಟಿಂಗ್ ಕೂಡ ವಾರದಿಂದ ವಾರಕ್ಕೆ ಕುಸಿಯಲಾರಂಭಿಸಿತ್ತು.
ಇನ್ನು ಧಾರಾವಾಹಿ ಶೂಟಿಂಗ್ ಮಾಡಲು ಸಿನಿಮಾ ಚಿತ್ರೀಕರಣದಂತೆ ನೂರಾರು ಜನರ ಟೀಂ ಬೇಕಿಲ್ಲ. 10 ಮಂದಿ ಕಲಾವಿದರು 20 ಮಂದಿ ತಂತ್ರಜ್ಞರು ಹಾಗೂ ಕಾರ್ಮಿಕರಿದ್ದರೆ ಸಾಕು. ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಶೂಟಿಂಗ್ ಪ್ರಾರಂಭಿಸಲು ಸೀರಿಯಲ್ ಟೀಂಗಳು ನಿರ್ಧರಿಸಿದವು. ಅದಕ್ಕೆ ಪೂರಕವಾಗಿ ವಾಹಿನಿಗಳೂ ಸಹ ಕೆಲ ಕಟ್ಟುನಿಟ್ಟಿನ ಕ್ರಮಗಳನ್ನು ಪಾಲಿಸಲೇಬೇಕು ಅಂತ ಪಟ್ಟಿ ಮಾಡಿ ನೀಡಿದ್ದವು. ಈಗ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿರುವ ಧಾರಾವಾಹಿ ತಂಡಗಳು ರಂಜಾನ್ ಹಬ್ಬದ ಶುಭದಿನದಂದೇ ಸೀರಿಯಲ್ ಶೂಟಿಂಗ್ ಆರಂಭಿಸಿವೆ.
ಅದಕ್ಕೂ ಮುನ್ನ ವೈದ್ಯರಿಂದ ಶೂಟಿಂಗ್ ಸ್ಥಳದಲ್ಲಿ ಯಾವೆಲ್ಲಾ ಎಚ್ಚರಿಕಾ ಕ್ರಮಗಳ್ನನು ಕೈಗೊಳ್ಳಬೇಕು? ಶೂಟಿಂಗ್ಗೆ ಬಂದ ತಕ್ಷಣ ಮಾಡಬೇಕಾದ ಕೆಲಸವೇನು? ಚಿತ್ರೀಕರಣ ಪೂರ್ಣಗೊಂಡ ಮೇಲೆ ಏನು ಮಾಡಬೇಕು? ಸ್ಯಾನಿಟೈಸರ್ ಯಾವಾಗ ಬಳಸಬೇಕು? ಯಾವಾಗ ಹ್ಯಾಂಡ್ ವಾಶ್ ಮಾಡಬೇಕು? ಮಾಸ್ಕ್ ಯಾಕೆ ಯಾವಾಗಲೂ ಧರಿಸಬೇಕು? ಸಾಮಾಜಿಕ ಅಂತರ ಯಾಕೆ ಮುಖ್ಯ? ಹೀಗೆ ಹಲವು ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲಾಗಿದೆ.ಇನ್ನು ಶೂಟಿಂಗ್ಗೂ ಮುನ್ನ ಕ್ಯಾಮರಾ, ಲೈಟ್ಸ್ಗೆ ಔಷಧಿ ಸ್ಪ್ರೇ ಮಾಡಿ ನಂತರವಷ್ಟೇ ಬಳಸಲಾಗುತ್ತಿದೆ. ಶೂಟಿಂಗ್ನಲ್ಲಿ ಭಾಗವಹಿಸುವ ಎಲ್ಲ ಕಲಾವಿದರು, ತಂತ್ರಜ್ಱರು ಹಾಗೂ ಕಾರ್ಮಿಕರಿಗೆ ಮಾಸ್ಕ್ ಕಡ್ಡಾಯ ಮಾಡಲಾಗಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿಂದು 69 ಮಂದಿಗೆ ಕೋವಿಡ್-19: 2,158ಕ್ಕೆ ಏರಿದ ಸೋಂಕಿತರ ಸಂಖ್ಯೆ
ಇನ್ನು ಕಲಾವಿದರೊಂದಿಗೆ ತುಂಬಾ ಹತ್ತಿರದಿಂದ ಕೆಲಸ ಮಾಡುವ ಮೇಕಪ್ ಮ್ಯಾನ್ ಹಾಗೂ ಹೇರ್ ಸ್ಟೈಲಿಸ್ಟ್ಗಳಿಗೆ ಮಾಸ್ಕ್ ಜತೆಗೆ ಫೇಸ್ ಶೀಲ್ಡ್ ಹಾಗೂ ಗ್ಲೌಸ್ಗಳನ್ನೂ ಕಡ್ಡಾಯ ಮಾಡಲಾಗಿದೆ. ಅದೇ ರೀತಿ ಶೂಟಿಂಗ್ನ ಆಯಕಟ್ಟಿನ ಜಾಗಗಳಲ್ಲಿ ಸ್ಯಾನಿಟೈಸರ್ಗಳನ್ನು ಇಡಲಾಗಿದ್ದು, ತಂಡದ ಎಲ್ಲ ಸದಸ್ಯರು ಆಗಾಗ ಬಳಸಲು ಸೂಚಿಸಲಾಗಿದೆ. ಹೀಗೆ ಕಿರುತೆರೆ ಕಾರ್ಯಕ್ರಮಗಳ ಚಿತ್ರೀಕರಣವೇನೋ ಪ್ರಾರಂಭವಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಹೊಸ ಹೊಸ ಎಪಿಸೋಡ್ಗಳು ಪ್ರಸಾರವಾಗಲಿವೆ.
First published:
May 25, 2020, 2:05 PM IST