Lockdown Effect: ಬಿಹಾರಿ ಕಾರ್ಮಿಕನ ಗೋಳಿಗೆ ಮಿಡಿದ ಬಾಗಲಕೋಟೆ ಅನ್ನದಾತರು!

ಬಿಹಾರದಿಂದ ಬಾಗಲಕೋಟೆಗೆ ಕೆಲಸಕ್ಕೆ ಬಂದಿರುವ ಚಂದ್ರಕಾಂತ ಝಾ ಎಂಬ ಕಾರ್ಮಿಕನ  ಕಣ್ಣೀರಿಗೆ ಮಿಡಿದ ನಾವಲಗಿ, ಜಗದಾಳ ಗ್ರಾಮದ ತೋಟದ  ರೈತರು ಮೇ 8ರಿಂದ ಮನೆಗೆ ಕರೆದು ಬೆಳಿಗ್ಗೆ ಉಪಹಾರ, ಎರಡು ಹೊತ್ತು ಊಟದ ವ್ಯವಸ್ಥೆ ಮಾಡುತ್ತಿದ್ದಾರೆ.

news18-kannada
Updated:May 31, 2020, 11:06 PM IST
Lockdown Effect: ಬಿಹಾರಿ ಕಾರ್ಮಿಕನ ಗೋಳಿಗೆ ಮಿಡಿದ ಬಾಗಲಕೋಟೆ ಅನ್ನದಾತರು!
ಬಿಹಾರದ ಕಾರ್ಮಿಕ ಚಂದ್ರಕಾಂತ್
  • Share this:
ಬಾಗಲಕೋಟೆ (ಮೇ 31): ಬಿಹಾರ ರಾಜ್ಯದಿಂದ ಸೋಲಾರ್ ಕಂಪನಿ ಕೆಲಸಕ್ಕೆ ಬಂದಿದ್ದ ಕಾರ್ಮಿಕನಿಗೆ 3 ತಿಂಗಳ ಸಂಬಳವೂ ಇಲ್ಲ, ಅನ್ನವೂ ಇಲ್ಲದೆ ಪರದಾಡುತ್ತಿರುವುದನ್ನು ಕಂಡು ಬಾಗಲಕೋಟೆ ಅನ್ನದಾತರು ನಿತ್ಯ ಊಟೋಪಚಾರ ವ್ಯವಸ್ಥೆ ಕಲ್ಪಿಸಿ ಬಿಹಾರಿ  ಕಾರ್ಮಿಕನಿಗೆ ಮಾನವೀಯತೆ ತೋರಿದ್ದಾರೆ. ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ನಾವಲಗಿ, ಜಗದಾಳ ಗ್ರಾಮದ ಬಳಿ ರಾಜಸ್ಥಾನ ಮೂಲದ ರಾಯ್ಸ್  ಪವರ್ ಇನ್ಫ್ರಾ ಪ್ರೈವೇಟ್ ಲಿಮಿಟೆಡ್ ಕಂಪನಿ ಸೋಲಾರ್ ಪ್ಲಾಂಟ್ ಅಳವಡಿ‌ಸುತ್ತಿದೆ.

ಗುತ್ತಿಗೆದಾರನ ಮೂಲಕ  ಬಿಹಾರದಿಂದ ಬಾಗಲಕೋಟೆಗೆ ಬಂದಿರುವ ಚಂದ್ರಕಾಂತ ಝಾ ಎಂಬ ಕಾರ್ಮಿಕನಿಗೆ 3 ತಿಂಗಳ ಸಂಬಳವೂ ಕೊಟ್ಟಿಲ್ಲ. ಜೊತೆಗೆ ಲಾಕ್​ಡೌನ್ ಸಂದರ್ಭದಲ್ಲಿ ಊಟೋಪಚಾರ ವ್ಯವಸ್ಥೆ ಮಾಡದೆ ಅಮಾನವೀಯತೆ ತೋರಿದ್ದಾರೆ. ಕಂಪನಿಯ ಗುತ್ತಿಗೆದಾರ ಹಾಗೂ ಸೋಲಾರ್ ಕಂಪನಿ ಮ್ಯಾನೇಜರ್  ತಿಕ್ಕಾಟ ಮಧ್ಯೆ ಕಾರ್ಮಿಕ ಅತಂತ್ರನಾಗಿದ್ದಾನೆ. ಇತ್ತ ಕೈಯಲ್ಲಿ ಬಿಡಿಗಾಸು ಇಲ್ಲದೆ  ಸ್ವರಾಜ್ಯಕ್ಕೆ ಹೋಗಲಾಗದೆ ಬಿಹಾರ ಮೂಲದ ಕಾರ್ಮಿಕನ ಕಣ್ಣೀರು ಹಾಕುತ್ತಿದ್ದಾನೆ. ಕಾರ್ಮಿಕನ  ಕಣ್ಣೀರಿಗೆ ಮಿಡಿದ ನಾವಲಗಿ, ಜಗದಾಳ ಗ್ರಾಮದ ತೋಟದ  ರೈತರು ಮೇ 8ರಿಂದ ಮನೆಗೆ ಕರೆದು ಬೆಳಿಗ್ಗೆ ಉಪಹಾರ, ಎರಡು ಹೊತ್ತು ಊಟದ ವ್ಯವಸ್ಥೆ ಮಾಡುತ್ತಿದ್ದಾರೆ.

Bagalkot Farmers Feeding Food to Bihar Migrant Labor
ಬಿಹಾರದ ಕಾರ್ಮಿಕನಿಗೆ ಊಟ ಬಡಿಸುತ್ತಿರುವ ರೈತ


ಇನ್ನು ರೈತರಿಗೆ ಬಿಹಾರಿ ಕಾರ್ಮಿಕನ ಹಿಂದಿ ಭಾಷೆ ಅರ್ಥವಾಗದಿದ್ದರೂ ಅಂತಃಕರಣ, ಪ್ರೀತಿ, ವಾತ್ಸಲ್ಯದಿಂದ ಅನ್ನದಾನ ಮಾಡುತ್ತಿದ್ದಾರೆ. ಬಿಹಾರಿ ಕಾರ್ಮಿಕ ಸಂಕಷ್ಟದಲ್ಲಿ ರೈತರು ಮಾಡುತ್ತಿರುವ  ಮಾನವೀಯ ಕಾರ್ಯವನ್ನು ನೆನೆಯುತ್ತಾನೆ. ಇನ್ನು ಬಿಹಾರಿ ಕಾರ್ಮಿಕನನ್ನು ನಡುನೀರಲ್ಲಿ ಕೈಬಿಟ್ಟ ಗುತ್ತಿಗೆದಾರ ಪುನೀತ್ ನನ್ನು ಕೇಳಿದರೆ ಸೋಲಾರ್ ಕಂಪನಿಯವರು ನಮಗೆ ಸಂಬಳ ಕೊಟ್ಟಿಲ್ಲ. ಹಾಗಾಗಿ,  ಕಾರ್ಮಿಕನಿಗೆ ಸಂಬಳ ಕೊಟ್ಟಿಲ್ಲ ಎನ್ನುತ್ತಿದ್ದರೆ ‌ಇತ್ತ ಗುತ್ತಿಗೆದಾರನಿಗೆ ಸಂಬಳ ಕೊಟ್ಟಿದ್ದೇವೆ ಅಂತಿದ್ದಾರೆ ಸೋಲಾರ್ ಕಂಪನಿ ಮ್ಯಾನೇಜರ್.

ಇದನ್ನೂ ಓದಿ: ನಾಳೆಯಿಂದ ಕರ್ನಾಟಕದಲ್ಲಿ ಮುಂಗಾರು ಮಳೆ ಆರಂಭ

ಇವರಿಬ್ಬರ ತಿಕ್ಕಾಟದ ಮಧ್ಯೆ ಅನ್ಯ ರಾಜ್ಯದ ಕಾರ್ಮಿಕ ಅತಂತ್ರನಾಗಿ ನರಳಾಡುವಂತಾಗಿದೆ. ಇನ್ನು ಬಿಹಾರ ರಾಜ್ಯದಿಂದ ಗುತ್ತಿಗೆದಾರರು 16 ಕಾರ್ಮಿಕರನ್ನು ಕರೆತಂದಿದ್ದಾರೆ. ಲಾಕ್  ಡೌನ್ ಮುನ್ನ 15 ಮಂದಿ  ಕಾರ್ಮಿಕರು ಬಿಹಾರಕ್ಕೆ ವಾಪಾಸ್ ಹೋಗಿದ್ದಾರೆ. ಓರ್ವ ಕಾರ್ಮಿಕ ಚಂದ್ರಕಾಂತ ಮಾತ್ರ ಸೋಲಾರ್ ಕಂಪನಿಯಲ್ಲೇ ಉಳಿದುಕೊಂಡಿದ್ದಾನೆ. ಇದೀಗ ಲಾಕ್ ಡೌನ್ ಸಡಿಲಿಕೆಯಾಗಿದೆ. ನೊಂದ ಕಾರ್ಮಿಕ ಹೆಂಡತಿ ಮಕ್ಕಳ ಜೀವ ನೆನಪಾಗುತ್ತಿದೆ. ಮೂರು ತಿಂಗಳ ಸಂಬಳ ಕೊಡಿ ಬಿಹಾರಕ್ಕೆ ಹೋಗುತ್ತೇನೆ ಎನ್ನುತ್ತಿದ್ದಾನೆ. ಆದರೆ  ಗುತ್ತಿಗೆದಾರ ಮಾತ್ರ ಕಾರ್ಮಿಕನ ಗೋಳಿಗೆ ಸ್ಪಂದಿಸುತ್ತಿಲ್ಲ. ಬಿಹಾರಕ್ಕೆ ಕಾರ್ಮಿಕನನ್ನು ಕಳುಹಿಸಬೇಕೆಂದರೆ  ನಮ್ಮ ಬಳಿಯೂ ಹಣ ಇಲ್ಲ, ಅವರಿಗೆ ಊಟೋಪಚಾರದ ವ್ಯವಸ್ಥೆಯನ್ನಷ್ಟೇ ಮಾಡುತ್ತಿದ್ದೇವೆ ಅಂತಿದ್ದಾರೆ ರೈತರಾದ ಸಿದ್ದಪ್ಪ, ಬಸಪ್ಪ.

ಇನ್ನು, ಬಿಹಾರಿ ಕಾರ್ಮಿಕನಿಗೆ ಸಂಬಳವೂ ಕೊಡದೇ ಊಟೋಪಚಾರ ವ್ಯವಸ್ಥೆ ಮಾಡದ ಸೋಲಾರ್ ಕಂಪನಿ, ಗುತ್ತಿಗೆದಾರ, ಮಾಲೀಕರ ನಡೆಗೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದು, ಸೋಲಾರ್ ಕಂಪನಿ ಮಾಲೀಕರು, ಗುತ್ತಿಗೆದಾರರು ಕೂಡಲೇ ಕಾರ್ಮಿಕನಿಗೆ ಮೂರು ತಿಂಗಳ ಸಂಬಳ ಕೊಟ್ಟು ಜೊತೆಗೆ ಬಿಹಾರಕ್ಕೆ ಕಳುಹಿಸಲು ಆಗ್ರಹಿಸಿದ್ದಾರೆ.
First published: May 31, 2020, 11:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading