ಕೊರೋನಾ ಸೋಂಕಿತರ ಚಿಕಿತ್ಸೆಗೆ ವೈದ್ಯರ ನಕಾರ - ದೇಶದ್ರೋಹದ ಕೇಸ್ ಹಾಕೋದಾಗಿ ಡಿಸಿ ಎಚ್ಚರಿಕೆ

ಒಂದು ವೇಳೆ ಯಾವುದೇ ವೈದ್ಯರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸದೇ ಇರುವುದು ಕಂಡು ಬಂದಲ್ಲಿ, ಅಂಥವರನ್ನು ದೇಶದ್ರೋಹಿಗಳೆಂದು ಪರಿಗಣಿಸಿ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಶರತ್​ ಬಿ ಎಚ್ಚರಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಕಲಬುರ್ಗಿ(ಏ.08): ಕಲಬುರ್ಗಿ ಜಿಲ್ಲೆಯಲ್ಲಿ ಕೊರೋನಾ ಸೋಂಕಿಗೆ ಎರಡನೆಯ ಬಲಿಯಾಗಿದೆ. ಇಂತಹ ಸಂದರ್ಭದಲ್ಲಿಯೂ ವೈದ್ಯರಿಂದ ವೃತ್ತಿ ಧರ್ಮಕ್ಕೆ ಅಪಮಾನ ಎಸಗಿದ ಆರೋಪ ಕೇಳಿಬಂದಿದೆ. ದೇಶದ ಮೊದಲ ಕೊರೋನಾ ಸಾವು ಕಲಬುರ್ಗಿಯಲ್ಲಿ ನಡೆದಿತ್ತು. ಇಂದಿನ ಸಾವಿನೊಂದಿಗೆ ಸಾವಿನ ಸಂಖ್ಯೆ ಎರಡಕ್ಕೆರಿದೆ. ಹಾಗೆಯೇ ಸೋಂಕಿತರ ಸಂಖ್ಯೆ ಒಂಬತ್ತಕ್ಕೇರಿದೆ. ಇಂತಹ ವೇಳೆ ರೋಗಿಗಳಿಗೆ ಚಿಕಿತ್ಸೆ ನೀಡಿ ಆಸ್ತಸ್ಥೈರ್ಯ ತುಂಬಬೇಕಾದ ವೈದ್ಯರು, ತಮ್ಮ ವೃತ್ತಿಯಿಂದ ವಿಮುಖಗೊಳ್ಳುತ್ತಿರುವ ಮಾತು ಕೇಳಿಬಂದಿದೆ.

  ಕೊರೋನಾ ರೋಗಕ್ಕೆ ನಾವು ಚಿಕಿತ್ಸೆ ನೀಡುವುದಿಲ್ಲ ಎಂದು ಕಲಬುರ್ಗಿಯ ಪ್ರತಿಷ್ಠಿತ ಎಂ.ಆರ್.ವೈದ್ಯಕೀಯ ಕಾಲೇಜಿನ ವೈದ್ಯರಿಂದ ಈ ಮಾತು ಬಂದಿರುವುದಕ್ಕೆ ಜಿಲ್ಲಾಧಿಕಾರಿ ಶರತ್ ಬಿ. ಗರಂ ಆಗಿದ್ದಾರೆ. ಎಂ.ಆರ್.ವೈದ್ಯಕೀಯ ಕಾಲೇಜಿಗೆ ಸಂಬಂಧಿಸಿದ ಬಸವೇಶ್ವರ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೊರೋನಾ ವಾರ್ಡ್ ಸ್ಥಾಪಿಸಲಾಗಿದೆ. ಈ ವಾರ್ಡ್ ಗೆ ಇ.ಎಸ್.ಐ. ಆಸ್ಪತ್ರೆಯಲ್ಲಿ ನೆಗೆಟಿವ್ ಎಂದು ವರದಿ ಬಂದ ಪ್ರಕರಣಗಳನ್ನು ಕಳುಹಿಸಿಕೊಡಲಾಗುತ್ತಿದೆ.

  ಇಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ ನಂತರ ಅವರನ್ನು ಡಿಸ್ಚಾರ್ಜ್ ಮಾಡಲಾಗುತ್ತದೆ. ಹೀಗೆ ನೆಗೆಟಿವ್ ಎಂದು ಬಂದ ರೋಗಿಗಳಿಗೂ ಚಿಕಿತ್ಸೆ ನೀಡಲು ವೈದ್ಯರು ನಿರಾಕರಿಸಿದ್ದಾರೆ ಎಂದು ಕೆಲ ರೋಗಿಗಳು ಆರೋಪಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಎಂ.ಆರ್.ವೈದ್ಯಕೀಯ ಕಾಲೇಜು ಡೀನ್ ಗೆ ಪತ್ರ ಬರೆದಿದ್ದಾರೆ. ಮೆಡಿಕಲ್ ಕಾಲೇಜ್ ಡೀ‌ನ್ ಡಾ. ಉಮೇಶ್ ಚಂದ್ರಗೆ ನೋಟಿಸ್ ನೀಡಿರುವ ಡಿಸಿ, ದೇಶಾದ್ಯಂತ ಕೊರೋನಾ ಸೋಂಕು ಹರಡುತ್ತಿದ್ದು, ಕಲಬುರ್ಗಿ ಜಿಲ್ಲೆಯಲ್ಲಿ ಸದ್ಯ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ.

  dc notice
  ನೋಟಿಸ್​ ಪ್ರತಿ


  ಇಂತಹ ಸಂದರ್ಭದಲ್ಲಿ ದೇಶಾದ್ಯಂತ ವೈದ್ಯರು ಹಗಲು-ರಾತ್ರಿ ಕೊರೋನಾ ಸೋಂಕಿತರ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ವೈದ್ಯರ ಪರಿಶ್ರಮದಿಂದ ಕೋರೋನಾ ಸೋಂಕನ್ನು ತಡೆಗಟ್ಟಲು ಯಶಸ್ವಿಯಾಗುವ ಸಾಧ್ಯತೆಗಳಿವೆ. ಆದರೆ, ಎಂ.ಆರ್.ಎಂ.ಸಿ.ಯ ಕೆಲ ವೈದ್ಯರು ತಮ್ಮ ಕರ್ತವ್ಯದಿಂದ ವಿಮುಖರಾಗುತ್ತಿದ್ದಾರೆ. ಜೊತೆಗೆ ಬೇರೆ ವೈದ್ಯರುಗಳನ್ನೂ ಕರ್ತವ್ಯ ನಿರ್ವಹಿಸದಂತೆ ಉತ್ತೇಜಿಸುತ್ತಿರುವುದು ಗಮನಕ್ಕೆ ಬಂದಿದೆ ಎಂದು ಡಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  ಇದನ್ನೂ ಓದಿ :  ಖಾಸಗಿ ಕ್ಲಿನಿಕ್ ಬಂದ್ ಮಾಡಿದರೆ ಲೈಸೆನ್ಸ್ ರದ್ದು; ಆರೋಗ್ಯ ಸಚಿವ ಶ್ರೀರಾಮುಲು ಎಚ್ಚರಿಕೆ

  ಹೀಗಾಗಿ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲ ವೈದ್ಯರುಗಳನ್ನು ಕಡ್ಡಾಯವಾಗಿ ಕರ್ತವ್ಯ ನಿರ್ವಹಿಸುವಂತೆ ಸೂಚಿಸುವುದು. ಒಂದು ವೇಳೆ ಯಾವುದೇ ವೈದ್ಯರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸದೇ ಇರುವುದು ಕಂಡು ಬಂದಲ್ಲಿ, ಅಂಥವರನ್ನು ದೇಶದ್ರೋಹಿಗಳೆಂದು ಪರಿಗಣಿಸಿ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಶರತ್ ಎಚ್ಚರಿಸಿದ್ದಾರೆ. ಜಿಲ್ಲಾಧಿಕಾರಿಗಳ ಎಚ್ಚರಿಕೆ ವೈದ್ಯರನ್ನು ತಬ್ಬಿಬ್ಬಾಗುವಂತೆ ಮಾಡಿದ್ದು, ಕೊರೋನಾ ಸೋಂಕಿತರ ಚಿಕಿತ್ಸೆ ಮಾಡುವ ಅನಿವಾರ್ಯತೆಯಲ್ಲಿದ್ದಾರೆ.
  First published: