ಕಲಬುರ್ಗಿ; ಕೊರೋನಾ ಲಾಕ್ಡೌನ್ನಿಂದಾಗಿ ಜನರಿಗೆ ತೀವ್ರ ತೊಂದರೆಯಾಗುತ್ತಿದೆ. ಅದರಲ್ಲಿಯೂ ದೂರದ ಊರುಗಳಲ್ಲಿ ನಿಗದಿತ ಚಿಕಿತ್ಸೆ ಮಾಡಿಸಿಕೊಂಡು ಬರುವವರಿಗೆ ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ.
ಕಲಬುರ್ಗಿ ಜಿಲ್ಲೆಯ ವಾಡಿ ಪಟ್ಟಣದಲ್ಲಿ ಅಕ್ಕ-ತಂಗಿಯರು ಮಸಲ್ ಡಿಸ್ಪೋಬಿಯಾ ಎಂಬ ಕಾಯಿಲೆಗೆ ತುತ್ತಾಗಿ ಕಾಲಿನ ಸ್ವಾಧೀನ ಕಳೆದುಕೊಂಡಿದ್ದಾರೆ. ಅವರಿಗೆ ನಿಯಮಿತವಾಗಿ ಕೇರಳದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅದರಂತೆ ಈ ಕಳೆದ ತಿಂಗಳು ಚಿಕಿತ್ಸೆಗಾಗಿ ಕೇರಳಕ್ಕೆ ಕರೆದೊಯ್ಯಬೇಕಿತ್ತು. ಆದರೆ ಲಾಕ್ಡೌನ್ ಕಾರಣದಿಂದಾಗಿ ಹೋಗಲಾಗುತ್ತಿಲ್ಲ. ಕನಿಷ್ಠ ಅಲ್ಲಿಂದ ಮಾತ್ರಗಳನ್ನು ತರಿಸಲು ಕುಟುಂಬ ಪರಿತಪಿಸುವಂತಾಗಿದೆ.
ಕೊರೋನಾ ಸೋಂಕು ವ್ಯಾಪಕಗೊಳ್ಳಬಾರದೆಂದು ದೇಶಾದ್ಯಂತ ಲಾಕ್ ಡೌನ್ ಮಾಡಿ ಒಂದೂವರೆ ತಿಂಗಳಾಗಿದೆ. ಇದಿರಿಂದಾಗಿ ರೈತರಿಂದ ಹಿಡಿದು ಎಲ್ಲ ಸಮುದಾಯದವರೂ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಇನ್ನು ದೂರದ ಊರುಗಳಲ್ಲಿ ನಿಯಮಿತವಾಗಿ ಚಿಕಿತ್ಸೆ ಪಡೆಯಬೇಕಿದ್ದವರ ಪಾಡು ಕೇಳತೀರದು. ಕಲಬುರ್ಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಅಕ್ಕ-ತಂಗಿಯರಿಗೆ ಮಸಲ್ಸ್ ಡಿಸ್ಪೋಬಿಯಾ ಇದೆ. ಇಬ್ಬರು ಸಹೋದರಿಯರಿಗೂ ಕಾಲುಗಳು ಸ್ವಾಧೀನ ಕಳೆದುಕೊಂಡಿದ್ದಾರೆ.
ಸರಿತಾ ಐದು ವರ್ಷಗಳ ಹಿಂದೆ ಕಾಲುಗಳ ಸಂಪೂರ್ಣ ಸ್ವಾಧೀನ ಕಳೆದುಕೊಂಡಿದ್ದಾಳೆ. ಕಿರಿಯ ಸಹೋದರಿ ಮಹಾದೇವಿಗೆ ಕಳೆದ ಮೂರು ವರ್ಷಗಳಿಂದೆ ಕಾಲಿನ ಸ್ವಾಧೀನ ತಪ್ಪಿದೆ. ಈ ಕಾಯಿಲೆ ಕಾಣಿಸಿಕೊಂಡಾಗಿನಿಂದ ಇಬ್ಬರಿಗೂ ಕೇರಳದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಕೇರಳದಲ್ಲಿ ತಿಂಗಳಿಗೊಮ್ಮೆ ಚಿಕಿತ್ಸೆ ಪಡೆದುಕೊಂಡು, ಮಾತ್ರೆ ತೆಗೆದುಕೊಂಡು ವಾಪಸ್ಸಾಗುತ್ತಿದ್ದರು. ಅದಕ್ಕಾಗಿ ಪೋಷಕರು ಟಿಕೆಟ್ ಸಹ ಬುಕ್ ಮಾಡಿದ್ದರು. ಆದರೆ ಲಾಕ್ ಡೌನ್ ಕಾರಣದಿಂದಾಗಿ ರೈಲು ಸಂಚಾರ ರದ್ದಾಗಿದೆ. ಹೀಗಾಗಿ ಕೇರಳಕ್ಕೆ ಹೋಗಲು ಆಗುತ್ತಿಲ್ಲ, ಚಿಕಿತ್ಸೆ ಕೊಡಿಸಲೂ ಆಗುತ್ತಿಲ್ಲ. ಕನಿಷ್ಠ ಅಲ್ಲಿಂದ ಮಾತ್ರೆಗಳನ್ನು ತರಿಸಿಕೊಡಬೇಕೆಂದರೂ ಸಾಧ್ಯವಾಗುತ್ತಿಲ್ಲ ಎಂದು ತಾಯಿ ಪ್ರೇಮಾ ಹೀರಾಪುರ ಅಲವತ್ತುಕೊಂಡಿದ್ದಾರೆ.
ಇದನ್ನು ಓದಿ: Lock Down Extension - ಮತ್ತೆ ಎರಡು ವಾರಕ್ಕೆ ಲಾಕ್ಡೌನ್ ವಿಸ್ತರಣೆ; ಕೇಂದ್ರ ಆದೇಶ
ವಾಡಿಯ ಮಹಾದೇವ ಹೀರಾಪುರ ಅವರು ಅಷ್ಟೇನು ಸ್ಥಿತಿವಂತರಲ್ಲ. ಅವರಿಗೆ ನಾಲ್ಕು ಮಕ್ಕಳಿದ್ದು, ಇಬ್ಬರು ಗಂಡು ಮಕ್ಕಳಿಗೆ ಯಾವುದೇ ತೊಂದರೆಯಿಲ್ಲ. ಆದರೆ ಹೆಣ್ಣುಮಕ್ಕಳಿಗೆ ಮಾತ್ರ ಮಸಲ್ಸ್ ಡಿಸ್ಪೋಬಿಯಾ ಬಂದಿದ್ದು, ಹಣವನ್ನೆಲ್ಲಾ ಚಿಕಿತ್ಸೆಗೆ ಹಾಕುವಂತಾಗಿದೆ. ಇದೀಗ ಲಾಕ್ ಡೌನ್ ಕಾರಣದಿಂದಾಗಿ ಆ ಚಿಕಿತ್ಸೆಯನ್ನು ಕೊಡಿಸಲು ಆಗದೆ ಪರದಾಡುವಂತಾಗಿದೆ. ಕನಿಷ್ಠ ಮಾತ್ರೆಗಳನ್ನು ತಂದುಕೊಡಲಾದರೂ ವ್ಯವಸ್ಥೆ ಮಾಡಿಕೊಂಡಿ ಎಂದು ಪೋಷಕರು ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ