ಕೊರೋನಾ ವೈರಸ್ ಬಿಕ್ಕಟ್ಟಿನ ಈ ಸಮಯದಲ್ಲಿ ಜನರು ಫಿಟ್ನೆಸ್ ಬಗ್ಗೆ ತಲೆಕೆಡಿಸಿಕೊಳ್ಳಲು ಆರಂಭಿಸಿದ್ದಾರೆ. ಒಂದೆರಡು ದಶಕಗಳಿಗೆ ಮುನ್ನ ನಾವು ಈ ಫಿಟ್ನೆಸ್ ಅಥವಾ ದೈಹಿಕ ಕ್ಷಮತೆ ಬಗ್ಗೆ ಯಾರಾದರೂ ಮಾತನಾಡಿದ್ದನ್ನ ಕೇಳಿದ್ದೇವೆಯೇ? ಆಗಿನ ಕಾಲದಲ್ಲಿ ಫಿಟ್ನೆಸ್ ಅಂದರೆ ಯಾರಿಗೂ ವಿಶೇಷ ಆಸಕ್ತಿ ಇರುತ್ತಿರಲಿಲ್ಲ. ಅದು ತಿನ್ನಬೇಕು, ಇದು ತಿನ್ನಬಾರದು ಎಂಬ ಪ್ರಜ್ಞೆಯೂ ಆಗಿನ ಜನರಿಗೆ ಇರಲಿಲ್ಲ. ಜನರು ಸಹಜವಾಗಿಯೇ ತಿಂದುಂಡು ಆನಂದದಿಂದ ಇರುತ್ತಿದ್ದರು. ಅವರ ಜೀವನಶೈಲಿಯೇ ಫಿಟ್ನೆಸ್ ಕೊಡುವಂತಿರುತ್ತಿತ್ತು. ಕೆಲಸಕ್ಕೆ ನಡೆದೇ ಹೋಗುತ್ತಿದ್ದರು. ಆಗ 5 ಕಿಮೀ ದೂರ ನಡೆಯುವುದು ಒಂದು ಸಾಧಾರಣ ಕೆಲಸ. ಕೂಲಿ ಎಂದರೆ ಸಂಪೂರ್ಣ ದೈಹಿಕ ಶ್ರಮ ಬೇಡುವ ಕೆಲಸವೇ ಆಗಿರುತ್ತಿತ್ತು. ಜಂಕ್ ಫುಡ್, ಕ್ಯಾಲೊರಿ ಫುಡ್ ಎಂಬ ವಿಚಾರವೇ ಜನರಿಗೆ ಗೊತ್ತಿರಲಿಲ್ಲ. ಅವರು ತಿಂದಿದ್ದೆಲ್ಲವನ್ನೂ ಜೀರ್ಣಿಸಿಕೊಳ್ಳುತ್ತಿದ್ದರು. ಅವರು ತಿನ್ನುತ್ತಿದ್ದ ಆಹಾರವೆಲ್ಲವೂ ಪೌಷ್ಟಿಕಾಂಶ ಉಳ್ಳವೇ ಆಗಿರುತ್ತಿತ್ತು. ಫಿಟ್ನೆಸ್ ಎಂದರೆ ಇಂಗ್ಲೀಷ್ ನಿಘಂಟಿನಲ್ಲಿ ದೈಹಿಕವಾಗಿ ಶಕ್ತಿಯುತ ಮತ್ತು ಆರೋಗ್ಯಯುತವಾಗಿ ಇರುವುದು ಎಂಬರ್ಥವಿದೆ. ಸಾಮಾನ್ಯ ಜನರ ಪಾಲಿಗೆ ಫಿಟ್ನೆಸ್ ಎಂದರೆ ದಿನನಿತ್ಯದ ಸಾಧಾರಣ ಕೆಲಸಗಳನ್ನ ಕ್ಷಮತೆಯಿಂದ ಮಾಡಲು ಸಾಧ್ಯವಾಗಬೇಕು ಅಷ್ಟೇ.
ಕೆಲವರು ಫಿಟ್ನೆಸ್ ಅಂದರೆ ದೀರ್ಘಾಯಸ್ಸು ಎಂದು ತಪ್ಪಾಗಿ ಭಾವಿಸುವುದುಂಟು. ಹಿಂದಿನ ತಲೆಮಾರಿಗಿಂತ ಈಗಿನ ಜನರ ಸರಾಸರಿ ಆಯಸ್ಸು ಹೆಚ್ಚೇ ಇದೆ ಎಂಬುದನ್ನು ಒಪ್ಪಿಕೊಳ್ಳೋಣ. ಇದು ಹೌದಾದರೂ ಈಗಿನ ತಲೆಮಾರಿನಲ್ಲಿ 85ಕ್ಕಿಂತ ಹೆಚ್ಚು ವರ್ಷ ಬದುಕುವವರ ಪ್ರಮಾಣ ಎಷ್ಟಿದೆ? ಹೆಚ್ಚೇನೂ ಇಲ್ಲ. ಇಲ್ಲಿ ಒಂದು ವಿಚಾರ ಸ್ಪಷ್ಟಪಡಿಸಬೇಕು. ಆಧುನಿಕ ವೈದ್ಯಶಾಸ್ತ್ರ ತೋರಿರುವ ಪ್ರಗತಿಯ ಫಲವಾಗಿ ಜನರ ಸರಾಸರಿ ಆಯಸ್ಸು ಹೆಚ್ಚಾಗಿದೆ. ಒಂದು ಕಾಲದಲ್ಲಿ ಮನುಷ್ಯರನ್ನು ತರಗೆಲೆಗಳು ಉದುರುವಂತೆ ಬಲಿಪಡೆಯುತ್ತಿದ್ದ ಹೃದಯ ಸಂಬಂಧಿ ಕಾಯಿಲೆಗಳು, ಸಿಡುಬು (Chicken Pox), ದಡಾರ (Measles) ರೋಗಗಳನ್ನ ಮಾನವಕುಲ ಒಗ್ಗಟ್ಟಿನಿಂದ ಈಗ ಮೆಟ್ಟಿನಿಂತಿದೆ. ಇವತ್ತಿನ ತಲೆಮಾರಿನ ಬಗ್ಗೆ ಒಂದು ವಿಷಯ ಹೇಳಲೇಬೇಕು. ಆಹಾರದ ಕೊರತೆಯಿಂದ ಸಾಯುವವರಿಗಿಂತ ಸಿಕ್ಕಾಪಟ್ಟೆ ತಿಂದು ಸಾಯುತ್ತಿರುವವರೇ ಹೆಚ್ಚಾಗಿದ್ದಾರೆ. ಅಂದರೆ, ಬೊಜ್ಜು ಸಂಬಂಧಿತ ಆರೋಗ್ಯ ಸಮಸ್ಯೆಯಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ದೊಡ್ಡದಿದೆ. ಇನ್ನು, ಫಿಟ್ನೆಸ್ ವಿಚಾರಕ್ಕೆ ಮರಳೋಣ. ಹಿಂದಿನ ತಲೆಮಾರುಗಳಿಗೆ ಹೋಲಿಸಿದರೆ ಈಗನ ಜನರು ನಿಶ್ಚಿತವಾಗಿ ಫಿಟ್ನೆಸ್ ಕಳೆದುಕೊಂಡಿದ್ಧಾರೆ. 60 ವರ್ಷ ವಯಸ್ಸು ದಾಟಿದ ಬಳಿಕ ಜನರು ಹೆಜ್ಜೆ ಮುಂದಿರಿಸಲು ತಡವರಿಸುತ್ತಾರೆ. ನಮ್ಮ ಬ್ಯುಸಿ ಲೈಫಲ್ಲಿ ಅದೆಷ್ಟೋ ರೋಗ ರುಜಿನಗಳು ಮೆತ್ತಿಕೊಂಡು ಹೆಚ್ಚು ಅಶಕ್ತರಾಗುತ್ತಿದ್ದೇವೆ. ನಾವು ಹೆಚ್ಚು ವರ್ಷ ಬದುಕುತ್ತೇವಾದರೂ ನಮ್ಮ ಜೀವನ ಆರಾಮದಾಯಕವಂತೂ ಇಲ್ಲ. ಇದು ನಿಜವಾಗಿಯೂ ಆತಂಕದ ವಿಷಯ.
ಫಿಟ್ನೆಸ್ ಸಂಸ್ಕೃತಿ ಹೇಗೆ ಪಡೆಯುವುದು?
ಫಿಟ್ನೆಸ್ ಅಂದರೆ ನಮ್ಮ ಮನಸ್ಸಿಗೆ ದುತ್ತನೆ ಏನು ಸುಳಿಯುತ್ತದೆ? ಬಹುಶಃ ಬಣ್ಣಬಣ್ಣದ ಜಿಮ್ಗಳು, ಸಿಕ್ಸ್ ಪ್ಯಾಕ್ ಮೈಕಟ್ಟು ಹೊಂದಿರುವ ನಟರು, ಡಯಟಿಷಿಯನ್ಸ್, ಸೀಸನ್ಗೆ ತಕ್ಕಂತೆ ಬದಲಾಗುವ ಆಹಾರ ಕ್ರಮದ ಶಿಫಾರಸು ಇತ್ಯಾದಿ ವಿಚಾರಗಳು ನಮ್ಮ ಕಣ್ಮುಂದೆ ಹಾಗೇ ಬಂದುಹೋಗಬಹುದು. ಇವುಗಳು ಪ್ರಯೋಜನಕಾರಿಯೇ. ಆದರೆ, ನಮ್ಮ ವಾಸ್ತವ ಜೀವನದಲ್ಲಿ ಇವನ್ನೆಲ್ಲಾ ಪೂರ್ಣವಾಗಿ ಪಾಲಿಸಲು ಸಾಧ್ಯವಾ? ತಮಾಷೆ ಎಂದರೆ ಏರ್ ಕಂಡೀಷನ್ ಇರುವ ಜಿಮ್ನಲ್ಲಿ ನಾವು ವರ್ಕೌಟ್ ಮಾಡುವ ಮಹಡಿಗೆ ಹೋಗಲು ಲಿಫ್ಟ್ ಬಳಸುತ್ತೇವೆ. ಜಿಮ್ನಲ್ಲಿ ಕಸರತ್ತು ಮಾಡಿ ನಾವು ಎಷ್ಟು ಕೊಬ್ಬು ತಾನೇ ಕರಗಿಸಬಹುದು? ಸರಾಸರಿಯಾಗಿ 800 ಕ್ಯಾಲೊರಿ ಇರಬಹುದು. ಎರಡು ಕಪ್ ಕಾಫಿ ಮತ್ತು ಒಂದು ಸ್ವೀಟ್ ತಿನ್ನುವುದರೊಳಗೆ ಅಷ್ಟು ಕ್ಯಾಲರಿ ಮತ್ತೆ ನಮ್ಮ ಮೈ ಸೇರಿಕೊಳ್ಳುತ್ತದೆ. ನಾವು ಕುಡಿಯುವ ಜ್ಯೂಸ್ ಮತ್ತು ಪಾನೀಯಗಳಾದರೂ ಎಂಥವು? ನಮ್ಮ ನೆಲದ ಗುಣವಿಲ್ಲದ, ನಮಗೆ ಅಗತ್ಯವಿಲ್ಲದ, ವಿದೇಶದಿಂದ ಆಮದಾದ ಹಣ್ಣುಗಳ ಜ್ಯೂಸ್ ಕುಡಿಯುತ್ತೇವೆ. ನಮಗೆ ಫಿಟ್ನೆಸ್ ಸಂಸ್ಕೃತಿ ಬರಬೇಕೆಂದರೆ ಮೊದಲು ಒಳ್ಳೆಯ ಅಭ್ಯಾಸಗಳನ್ನ ರೂಢಿಸಿಕೊಳ್ಳಬೇಕು.
ಕೆ. ಅಣ್ಣಾಮಲೈ ಅವರ ಈ ಲೇಖನಮಾಲೆಯ ಎಲ್ಲಾ ಲೇಖನಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಏನು ಬುನಾದಿ?
ಫಿಟ್ನೆಸ್ ಸಂಸ್ಕೃತಿ ಗಳಿಸುವ ಮಾರ್ಗದಲ್ಲಿ ಮೊದಲ ಹೆಜ್ಜೆ ಎಂದರೆ ನಮ್ಮ ಜೀವನಶೈಲಿ ಬದಲಿಸುವುದು. ಪಕ್ಕದ ರಸ್ತೆಯ ಅಂಗಡಿಗೂ ಗಾಡಿ ಸವಾರಿಯಲ್ಲಿ ಹೋಗುತ್ತೇವೆ; ಆಫೀಸ್ನಲ್ಲಿ ಲಿಫ್ಟ್ ಬಳಸುತ್ತೇವೆ, ಮನೆಯೂಟಕ್ಕಿಂತ ಹೊರಗಿನ ಆಹಾರವನ್ನೇ ಅರಸಿಹೋಗುತ್ತೇವೆ. ಕ್ಯಾಲೋರಿ ಹೆಚ್ಚು ದಯಪಾಲಿಸುವ ನೂಡಲ್ಸ್, ಫ್ರೈ ಫುಡ್, ಚಾಕೊಲೇಟ್, ಪೀಜ್ಜಾ ಇತ್ಯಾದಿ ಆಹಾರ ತಿನ್ನುವ ದುರಭ್ಯಾಸ ನಮ್ಮಲ್ಲಿ ಬೆಳೆಸಿಕೊಂಡುಬಿಟ್ಟಿರುತ್ತೇವೆ. ಮೊದಲು ಇವನ್ನು ತಪ್ಪಿಸಬೇಕು. ಸಹಜವಾಗಿ ಇರುವುದು ನಮ್ಮ ಫಿಟ್ನೆಸ್ ಸಂಸ್ಕೃತಿಯ ಪ್ರಮುಖ ಭಾಗವಾಗಿರಬೇಕು. ನಮ್ಮ ದೇಹದಲ್ಲಿ ಸ್ವಲ್ಪ ಕೊಬ್ಬು ಹೆಚ್ಚಾದರೂ ನಾವು ನಾವಾಗಿ ಉಳಿಯುವುದಿಲ್ಲ. ಒಂದು ಗ್ರಾಮ್ನಷ್ಟು ಕೊಬ್ಬಿನಲ್ಲಿ 9 ಕ್ಯಾಲೋರಿ ಇರುತ್ತದೆ. ಅದೇ ಒಂದು ಗ್ರಾಮ್ ಪ್ರೋಟೀನ್ ಅಥವಾ ಕಾರ್ಬೊಹೈಡ್ರೇಟ್ನಲ್ಲಿ 4 ಕ್ಯಾಲೊರಿ ಇರುತ್ತದೆ. ಇದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ನಮ್ಮ ದೇಹಕ್ಕೆ ಏನು ಅವಶ್ಯವೋ ಅದೇ ಕೇಳುತ್ತದೆ. ಹಾಗಾಗಿ, ಸ್ವಾಭಾವಿಕವಾಗಿ ತಿನ್ನುವ ಅಭ್ಯಾಸ ಇಟ್ಟುಕೊಳ್ಳಬೇಕು.
ಆಫೀಸ್ನಲ್ಲಾಗಲೀ, ನಮ್ಮ ಅಪಾರ್ಟ್ಮೆಂಟ್ನಲ್ಲಾಗಲೀ ನಾನು ಲಿಫ್ಟ್ ಬಳಸುವುದಿಲ್ಲ; ಹಾಲು ಇತ್ಯಾದಿ ದಿನಸಿ ವಸ್ತು ತರಲು ನಡೆದೇ ಹೋಗುತ್ತೇನೆ; ಇಂತಿಷ್ಟು ದೂರದವರೆಗೆ ಹೋಗಲು ಕಾಲ್ನಡಿಗೆಯೇ ಸಾಕು ಎಂದು ನೀವು ಪ್ರತಿಜ್ಞೆ ಮಾಡಿಕೊಳ್ಳಿ. ದಿನವೂ ಅದರಂತೆ ನಡೆದುಕೊಳ್ಳಿ.
ಇದು ಆರಂಭ. ಇದು ನಿಮಗೆ ಬುನಾದಿ. ಇದರ ಮೇಲೆ ಇನ್ನೂ ಬೇರೆ ಅಭ್ಯಾಸಗಳನ್ನ ಯಶಸ್ವಿಯಾಗಿ ರೂಢಿಸಿಕೊಳ್ಳಬಹುದು. ಆ ಇತರ ಅಭ್ಯಾಸಗಳು ಕ್ರಮವಾಗಿ ಇಲ್ಲಿವೆ ನೋಡಿ:
1) ಒಳ್ಳೆಯ ನಿದ್ರೆ: ಉತ್ತಮ ಆರೋಗ್ಯಕ್ಕೆ ನಿದ್ರೆ ಅವಶ್ಯಕ ಎಂದು ಅನೇಕ ಅಧ್ಯಯನಗಳು ಖಚಿತಪಡಿಸಿವೆ. ರಾತ್ರಿ 10 ಗಂಟೆಗೆ ಮುನ್ನವೇ ಮಲಗುವ ಅಭ್ಯಾಸ ಇಟ್ಟುಕೊಳ್ಳಿ. ಏಳರಿಂದ ಎಂಟು ಗಂಟೆ ಸುಖನಿದ್ರೆ ಪಡೆಯಿರಿ. ಇಂಥ ಪರಿಪೂರ್ಣ ನಿದ್ರೆಯಿಂದಲೇ ನಮ್ಮ ದೇಹಕ್ಕೆ ಬೇಕಾದ ಅನೇಕ ಪ್ರತಿರೋಧ(Immunity) ಶಕ್ತಿ ದೊರಕಿಬಿಡುತ್ತದೆ. ಈ ನಿದ್ರೆಯ ವೇಳೆಯೇ ನಮ್ಮ ದೇಹದ ರೀಚಾರ್ಜ್ ಕೂಡ ಆಗಿಹೋಗುತ್ತದೆ.
2) ಒಳ್ಳೆಯ ಧ್ಯಾನ (Meditation): ನಿಮಗೆ ಧ್ಯಾನ ಮಾಡಿ ಗೊತ್ತಿಲ್ಲವೆಂದರೆ ಮೊದಲು ಅದನ್ನು ಅಭ್ಯಾಸ ಮಾಡಿಕೊಳ್ಳಿ. ನಿತ್ಯವೂ ನೀವು ಧ್ಯಾನ ಮಾಡಬೇಕು. ಮೊದಲು 10 ನಿಮಿಷ ಏಕಾಗ್ರತೆಯಿಂದ ಧ್ಯಾನ ಮಾಡುವುದನ್ನು ಕಲಿಯಿರಿ. ಹೋಗುಹೋಗುತ್ತಾ ನಿಮಗೆ ಧ್ಯಾನದ ಚಮತ್ಕಾರ ಅರಿವಾಗುತ್ತಾ ಹೋಗುತ್ತದೆ. ಬಹಳ ಬೇಗ ನೀವು 30ಕ್ಕಿಂತ ಹೆಚ್ಚು ನಿಮಿಷ ಕಾಲ ಧ್ಯಾನದಲ್ಲಿ ತಲ್ಲೀನರಾಗಬಲ್ಲಿರಿ. ನಿದ್ರೆಯಂತೆ ಈ ಧ್ಯಾನ ಕೂಡ ನಮ್ಮ ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ಬಹಳ ಒಳ್ಳೆಯದು.
3) ದೈಹಿಕ ಕಸರತ್ತು: ಯೋಗ, ವಾಕಿಂಗ್, ಜಾಗಿಂಗ್, ಜಿಮ್ ಇತ್ಯಾದಿ ಇವು ಮೇಲಿನ ಹಂತದ ಅಭ್ಯಾಸಗಳಾಗಿವೆ. 45 ನಿಮಿಷ ವಾಕ್ ಅಥವಾ 30 ನಿಮಿಷ ಜಾಗ್ ಇತ್ಯಾದಿ ಮಾಡಬಹುದು. ಹೆಚ್ಚು ವಯಸ್ಸಾದಂತೆ ಕೃಶಗೊಳ್ಳುವ ನಮ್ಮ ಸ್ನಾಯುವಿಗೆ (Skeletal Muscle) ಚೇತರಿಕೆ ನೀಡಲು ನಾವು ಜಿಮ್ಗೆ ಹೋಗಬೇಕಾಗಬಹುದು. ನೀವು ಯೋಗಾಸನ ಮಾಡಬಹುದು. ಯೋಗ ಕ್ರಿಯೆ, ಪ್ರಾಣಾಯಾಮವನ್ನಾದರೂ ರೂಢಿಸಿಕೊಳ್ಳಬಹುದು. ಇವು ನಿಜಕ್ಕೂ ಅಚ್ಚರಿಯ ಬದಲಾವಣೆ ತರಬಲ್ಲುವು.
ನಾವು ಫಿಟ್ ಅಥವಾ ಕ್ಷಮತೆಯಿಂದ ಇರುವ ಸಂಸ್ಕೃತಿ ಅಳವಡಿಸಿಕೊಳ್ಳೋಣ. ಎಲ್ಲವೂ ನಮ್ಮ ಕೈಯಲ್ಲೇ ಇದೆ. ನಮ್ಮ ಜೀವನಶೈಲಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳೋಣ. ನಮ್ಮಲ್ಲಿನ ಪ್ರತಿರೋಧ ಶಕ್ತಿಯನ್ನು ಜಾಗೃತಗೊಳಿಸೋಣ ಬನ್ನಿ. ನಾಳೆ, ಮಾನಸಿಕ ಕ್ಷಮತೆ ಅಥವಾ ಮೆಂಟಲ್ ಫಿಟ್ನೆಸ್ ಬಗ್ಗೆ ತಿಳಿಸಿಕೊಡುತ್ತೇನೆ.
ಲೇಖಕರು: ಕೆ. ಅಣ್ಣಾಮಲೈ, ಮಾಜಿ ಐಪಿಎಸ್ ಅಧಿಕಾರಿ
(ಕೋವಿಡ್-19 ಸೋಂಕು ವ್ಯಾಪಿಸದಂತೆ ದೇಶಾದ್ಯಂತ 21 ದಿನ ಕಾಲ ದಿಗ್ಬಂಧನ ವಿಧಿಸಲಾಗಿದೆ. ಜನರೆಲ್ಲರೂ ಅನವಶ್ಯಕವಾಗಿ ರಸ್ತೆಗೆ ಬರುವಂತಿಲ್ಲ. ಮನೆಯಲ್ಲೇ ಇರಬೇಕೆಂದು ಸರ್ಕಾರ ಕಟ್ಟಪ್ಪಣೆ ಮಾಡಿದೆ. ಈ ಸಂದರ್ಭದಲ್ಲಿ 21 ದಿನಗಳನ್ನ ಹೇಗೆ ಸದುಪಯೋಗಪಡಿಸಿಕೊಳ್ಳಬೇಕೆಂದು ಲೇಖಕರು ತಿಳಿಹೇಳಿದ್ದಾರೆ. ಅವರ ಲೇಖನಮಾಲೆಯ 11ನೇ ಲೇಖನ ಇದು.)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ