ನವದೆಹಲಿ: ದೇಶಾದ್ಯಂತ ಮಾರಕ ಕೊರೋನಾ ಸೋಂಕಿನ ಎರಡನೇ ಅಲೆ ತೀವ್ರವಾಗಿ ಬಾಧಿಸುತ್ತಿದೆ. ಸೋಂಕು ನಿಯಂತ್ರಣಕ್ಕಾಗಿ ಭಾರತ ಸರ್ಕಾರ ಲಸಿಕೆ ಅಭಿಯಾನ ಆರಂಭಿಸಿದೆ. ಆದರೆ, ಕೆಲವೆಡೆ ಲಸಿಕೆ ಅಭಾವದಿಂದ ನಿರೀಕ್ಷಿತ ಮಟ್ಟದಲ್ಲಿ ಲಸಿಕೆ ನೀಡಲು ಸಾಧ್ಯವಾಗುತ್ತಿಲ್ಲ. ಇನ್ನು ಇದೇ ವಿಷಯವಾಗಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಪ್ರಕರಣದ ವಿಚಾರಣೆ ವೇಳೆ ದೇವರನ್ನು ಪ್ರಾರ್ಥಿಸಿದ ಘಟನೆ ನಡೆದಿದೆ. ಅದು ಕೊರೋನಾ ಲಸಿಕೆ ಮತ್ತು ದೇಶದ ಜನರ ಸುರಕ್ಷೆ ವಿಚಾರವಾಗಿ.
ದೇಶದ ಎಲ್ಲರಿಗೂ ಕೊರೋನಾ ಲಸಿಕೆ ದೊರೆಯುವಂತಾಗಿ ಭೌತಿಕ ವಿಚಾರಣೆಗೆ ನ್ಯಾಯಾಲಯಗಳು ಮರಳುವಂತಾಗಲಿ ಎಂದು ಸುಪ್ರೀಂ ಕೋರ್ಟ್ ನ್ಯಾ. ಡಿ ವೈ ಚಂದ್ರಚೂಡ್ ಅವರು ಮಂಗಳವಾರ ಪ್ರಕರಣದ ವಿಚಾರಣೆಯೊಂದರ ವೇಳೆ ಆಶಿಸಿದರು.
ಈ ವರ್ಷದ ಆಗಸ್ಟ್ ತಿಂಗಳಿಗೆ ಪಟ್ಟಿ ಮಾಡಲಾಗಿರುವ ಪ್ರಕರಣ ಒಂದರ ವಿಚಾರಣೆ ನಡೆಸುವ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ಈ ಅಭಿಪ್ರಾಯ ವ್ಯಕ್ತಪಡಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಜರಾದ ವಕೀಲರೊಬ್ಬರು, “ಆಗಸ್ಟ್ ವೇಳೆಗೆ ಭೌತಿಕ ವಿಚಾರಣೆ ನಡೆಯಲಿ ಎಂದು ನಾವು ದೇವರನ್ನು ಪ್ರಾರ್ಥಿಸೋಣ” ಎಂದರು. ಇದಕ್ಕೆ ಸ್ಪಂದಿಸಿದ ನ್ಯಾಯಮೂರ್ತಿಗಳು “ಎಲ್ಲರಿಗೂ ಲಸಿಕೆ ದೊರೆಯಲಿ ಎಂದು ಪ್ರಾರ್ಥಿಸೋಣ, ನಂತರವಷ್ಟೇ ಭೌತಿಕ ವಿಚಾರಣೆ ಆರಂಭಿಸಬಹುದು” ಎಂದು ಪ್ರತಿಕ್ರಿಯಿಸಿದರು. ದೇಶದ ಕೋವಿಡ್ ಪರಿಸ್ಥಿತಿ ನಿರ್ವಹಣೆ ಕುರಿತು ದಾಖಲಿಸಿಕೊಳ್ಳಲಾಗಿರುವ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆಯನ್ನು ನ್ಯಾ. ಚಂದ್ರಚೂಡ್ ನೇತೃತ್ವದ ನ್ಯಾ. ಎಲ್ ನಾಗೇಶ್ವರ ರಾವ್, ನ್ಯಾ. ರವೀಂದ್ರ ಭಟ್ ಅವರನ್ನು ಒಳಗೊಂಡ ಪೀಠ ವಿಚಾರಣೆ ನಡೆಸುವ ವೇಳೆ ಈ ಭಾವನೆ ವ್ಯಕ್ತವಾಯಿತು.
ಕೋವಿಡ್ ಲಸಿಕೆ ಬೆಲೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತಳೆದಿರುವ ದ್ವಿಮುಖ ನೀತಿಯನ್ನು ಸೋಮವಾರ ಪ್ರಶ್ನಿಸಿದ್ದ ಪೀಠ “ದೊಡ್ಡ ಪ್ರಮಾಣದಲ್ಲಿ ಖರೀದಿ ಮಾಡುತ್ತಿರುವುದರಿಂದ ಕಡಿಮೆ ಬೆಲೆಗೆ ಪಡೆಯುತ್ತಿರುವುದಾಗಿ ಕೇಂದ್ರ ಹೇಳುತ್ತಿದೆ. ಇದು ತರ್ಕಬದ್ಧವಾಗಿದ್ದರೆ ರಾಜ್ಯಗಳು ಏಕೆ ಹೆಚ್ಚಿನ ಬೆಲೆ ನೀಡಬೇಕು? ದೇಶಾದ್ಯಂತ ಲಸಿಕೆಗಳಿಗೆ ಒಂದೇ ಬೆಲೆ ನಿಗದಿಯಾಗಬೇಕು. ಕಳೆದ ಎರಡು ತಿಂಗಳಲ್ಲಿ ಸಾಂಕ್ರಾಮಿಕ ಉಲ್ಬಣಿಸಿದೆ” ಎಂದಿತ್ತು. ಡಿಜಿಟಲ್ ಕಂದರದಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಲಸಿಕೆ ಪಡೆಯಲು ಜನ ಎದುರಿಸುತ್ತಿರುವ ಸಮಸ್ಯೆಗಳನ್ನು ಪ್ರಸ್ತಾಪಿಸಿ ಬೇಗ ಎಚ್ಚೆತ್ತುಕೊಳ್ಳಿ ಎಂದು ಕಿವಿಮಾತು ಹೇಳಿತ್ತು.
ಇದನ್ನು ಓದಿ: ಕೊರೋನಾ ಲಸಿಕೆಗಳಿಗೆ ಏಕರೂಪದ ಬೆಲೆ ನಿಗದಿಪಡಿಸುವಂತೆ ಕೇಂದ್ರಕ್ಕೆ ಸುಪ್ರೀಂಕೋರ್ಟ್ ಸೂಚನೆ!
ಕಳೆದ ಮಾರ್ಚ್ 15ರಿಂದ ಸೀಮಿತ ರೀತಿಯಲ್ಲಿ ಭೌತಿಕ ವಿಚಾರಣೆ ಆರಂಭಿಸಲು ಸುಪ್ರೀಂಕೋರ್ಟ್ ಮುಂದಾಗಿತ್ತು. ಅಲ್ಲದೆ ಭೌತಿಕ ಮತ್ತು ವರ್ಚುವಲ್ ವಿಚಾರಣೆಗಳೆರಡಕ್ಕೂ ಆಸ್ಪದ ಕೊಡುವ ಹೈಬ್ರಿಡ್ ವ್ಯವಸ್ಥೆಯನ್ನು ಕೂಡ ಅಳವಡಿಸಿಕೊಂಡಿತ್ತು. ಆದರೆ ಕೋವಿಡ್ ಎರಡನೇ ಅಲೆಯಿಂದಾಗಿ ಸೋಂಕು ಉಲ್ಪಣಿಸಿದ ಪರಿಣಾಮ ತಮ್ಮ ಮನೆಗಳಿಂದಲೇ ವೀಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಲು ಮುಂದಾಯಿತು.
ಗ್ರಾಮೀಣ ಪ್ರದೇಶದ ಜನ ಕೋವಿನ್ ಅಪ್ಲಿಕೇಷನ್ ಮೂಲಕ ಲಸಿಕೆ ಪಡೆಯಲು ನೋಂದಾಯಿಸಿಕೊಳ್ಳಬಹುದು ಎಂದು ನೀವು ಹೇಳುತ್ತೀರಿ. ನಮ್ಮ ಕಾನೂನು ಗುಮಾಸ್ತರು ಮತ್ತು ಕಾರ್ಯದರ್ಶಿಗಳು ಕೋವಿನ್ ಆಪ್ ಮೂಲಕ ನೋಂದಾಯಿಸಲು ಯತ್ನಿಸಿದ್ದು ಅದು ಹೇಗೆ ಕೆಲಸ ಮಾಡುತ್ತದೆ ಎಂದು ನಮಗೆ ಗೊತ್ತು ಎಂದರು. ಇದೆಲ್ಲವನ್ನೂ ಸರಿಪಡಿಸಲು ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಇದೇ ವೇಳೆ ಪೀಠ ಹೇಳಿತು. "ನಾವೇ ಇದೆಲ್ಲವನ್ನೂ ಮಾಡಬೇಕು ಎಂದರೆ ಹದಿನೈದು ದಿನದ ಹಿಂದೆಯೇ ಮಾಡಬಹುದಿತ್ತು. ನೀವು (ಕೇಂದ್ರ) ದೇಶದಲ್ಲಿ ಏನು ನಡೆಯುತ್ತಿದೆ ಎನ್ನುವ ಬಗ್ಗೆ ಎಚ್ಚೆತ್ತುಕೊಂಡು ಸೂಕ್ತ ಮಾರ್ಪಾಡುಗಳನ್ನು ಮಾಡಬೇಕು. ದಯವಿಟ್ಟು ಎಚ್ಚೆತ್ತುಕೊಳ್ಳಿ" ಎಂದು ನ್ಯಾಯಾಲಯ ಹೇಳಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ