ಬೆಂಗಳೂರು (ಜೂ.05):ಬಹುತೇಕ ಬೆಂಗಳೂರನ್ನು ಕಾಡುತ್ತಿರುವ ಆತಂಕವೇ ಅದು. ಪರಿಸ್ಥಿತಿ ಕೈ ಮೀರಿದ್ದೇ ಆದಲ್ಲಿ, ಮುಂಬೈನಲ್ಲಿ ಧಾರಾವಿ ಸ್ಲಂನಲ್ಲಿ ಹರಡಿದ ಕೊರೋನಾ ಸಾಂಕ್ರಾಮಿಕತೆಯನ್ನೇ ನೆನಪಿಸುವಂಥ ದುರಂತ ರಾಗಿಗುಡ್ಡ ಸ್ಲಂನಲ್ಲೂ ಮರುಕಳಿಸಬಹುದು ಎನ್ನಲಾಗುತಿದೆ. ಅಂತಹ ಯಾವುದೇ ಸನ್ನಿವೇಶ ನಿರ್ಮಾಣವಾಗಲು ಅವಕಾಶ ಕೊಡದ ರೀತಿಯಲ್ಲಿ ಬಿಬಿಎಂಪಿ, ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆ ಇಡೀ ಸ್ಲಂನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಸಧ್ಯ ರಾಗಿಗುಡ್ಡ ಸ್ಲಂನ್ನು ಅತ್ಯಂತ ಸೂಕ್ಷ್ಮ ಪ್ರದೇಶವನ್ನಾಗಿ ಘೋಷಣೆ ಮಾಡಿದೆ.
ಜಯನಗರ ವಿಧಾನಸಭಾ ಕ್ಷೇತ್ರದ ಪ್ರತಿಷ್ಠಿತ ಬಡಾವಣೆಗಳಲ್ಲೊಂದಾದ ಜೆಪಿ ನಗರಕ್ಕೆ ಹೊಂದಿಕೊಂಡಿರುವ ರಾಗಿಗುಡ್ಡ ಸ್ಲಂ ರಾತ್ರೋರಾತ್ರಿ ಕೊರೋನಾ ಕಾರಣಕ್ಕೆ ಕುಖ್ಯಾತಿಗೆ ಪಾತ್ರವಾಗಿದೆ. ಶಿವಾಜಿನಗರ, ಪಾದರಾಯನಪುರ, ಹೊಂಗಸಂದ್ರಕ್ಕಿಂತ ಹೆಚ್ಚು ಅಪಾಯಕಾರಿಯಾದ ಸನ್ನಿವೇಶದ ಸೃಷ್ಟಿಗೆ ವೇದಿಕೆಯಾಗುತ್ತಾ ಎನ್ನುವ ಆತಂಕದಾಯಕ ಶಂಕೆ ಮೂಡಿಸಿದೆ. ನೆನಪಿರಲಿ ಪರಿಸ್ಥಿತಿ ಕೈ ಮೀರಿದ್ದೇ ಆದರೆ, ಮಾತ್ರ ಇಷ್ಟು ದಿನ ಸೃಷ್ಟಿಯಾಗಿದ್ದ ಕೊರೋನಾ ಸನ್ನಿವೇಶದ ಚಿತ್ರಣವನ್ನೇ ಬುಡಮೇಲು ಮಾಡುವಂಥ ಅಪಾಯಕಾರಿಸ್ಥಿತಿ ನಿರ್ಮಾಣವಾಗವುದು ಎನ್ನುವ ಆತಂಕವನ್ನು ಆರೋಗ್ಯಾಧಿಕಾರಿಗಳೇ ವ್ಯಕ್ತಪಡಿಸಿದ್ದಾರೆ.
ಬಹುತೇಕ ಮಂದಿಗೆ ಗೊತ್ತಿಲ್ಲ ಜೆಪಿ ನಗರದಲ್ಲಿರುವ ರಾಗಿಗುಡ್ಡ ರಾಜ್ಯದ ಅತೀ ದೊಡ್ಡ ರಾಗಿಗುಡ್ಡ ಸ್ಲಂಗಳಲ್ಲೊಂದು. ಇದನ್ನು ಸರ್ಕಾರವೇ ದೃಢೀಕರಿಸಿದೆ. ಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚು ಮನೆಗಳ ಈ ಸಮುಚ್ಛಯದಲ್ಲಿ 8 ಸಾವಿರಕ್ಕೂ ಹೆಚ್ಚು ಜನ ವಾಸವಾಗಿದ್ದಾರೆ. ಈ ಸ್ಲಂನಲ್ಲಿ ಕೊರೋನಾ ಸ್ಪೋಟವಾಗಿರುವುದು ಸಮುದಾದಲ್ಲಿ ಹರಡಿರುವುದು ಎನ್ನುವ ಭೀತಿ ಸೃಷ್ಟಿಸಿದೆ. ದೆಹಲಿಯಿಂದ ವಾಪಸ್ಸಾದ 58 ವರ್ಷದ ಮಹಿಳೆ ಹಾಗೂ 38 ವರ್ಷದ ಮಗನಿಂದಾಗಿ ಇಡೀ ಸ್ಲಂಗೆ ಸೋಂಕು ಹರಡುವ ಸ್ಥಿತಿ ನಿರ್ಮಾಣವಾಗಿದೆ. ಅವರಿಬ್ಬರ ಸಂಪರ್ಕಕ್ಕೆ ನೂರಾರು ಜನರು ಬಂದಿರುವುದರಿಂದಾಗಿ ಆತಂಕ ಇಮ್ಮುಡಿಯಾಗಿದೆ.
ಆತಂಕಕ್ಕೆ ಕಾರಣವೇ ಆ ಮಹಿಳೆ ಹಾಗೂ ಆಕೆಯ ಮಗ:
ಸ್ಲಂನಲ್ಲಿ ವಾಸವಾಗಿರುವವರ ಪೈಕಿ ಕಳೆದ 3 ತಿಂಗಳ ಹಿಂದೆ ದೆಹಲಿಯ ತನ್ನ ಮಗಳ ಮನೆಗೆ ಮಗನೊಂದಿಗೆ ಮಹಿಳೆ ತೆರಳಿದಳು. ಲಾಕ್ ಡೌನ್ ಜಾರಿಯಾಗಿರುವುದರಿಂದ ತಾಯಿ ಮಗ ಅಲ್ಲೇ ಉಳಿದುಕೊಂಡಿದ್ದರು. ಲಾಕ್ ಡೌನ್ ಸಡಿಲವಾದ ಮೇಲೆ ಅಲ್ಲಿಂದ ದಿಢೀರ್ ಹೊರಡಲು ಅಣಿಯಾದರು ಈ ತಾಯಿ ಮಗ. ರೈಲಿನಲ್ಲಿ ಬಂದ್ರೆ ಪರೀಕ್ಷೆ, ಕ್ವಾರಂಟೈನ್ ಮಾಡುತ್ತಾರೆ ಎಂದು ತಾಯಿ ಮಗ ರಾತ್ರೋರಾತ್ರಿ ಅದೇಗೆ ಬೆಂಗಳೂರಿಗೆ ಬಂದು ಯಾರಿಗೂ ಗೊತ್ತಾಗದೇ ಸ್ಲಂನಲ್ಲಿರುವ ಮನೆ ಸೇರಿಕೊಂಡು ಬಿಟ್ಟರು.
ಒಂದೆರೆಡು ದಿನ ಮನೆಯಲ್ಲಿ ಕದ್ದುಮುಚ್ಚಿ ಇದ್ದ ಅಮ್ಮ-ಮಗ, ಯಾರಿಗೇ ಏಕೆ ಹೆದರಬೇಕೆಂದುಕೊಂಡು ಮನೆಯಿಂದ ಎಲ್ಲರಂತೆ ಅಡ್ಡಾಡಲು ಶುರುಮಾಡಿಕೊಂಡಿದ್ದರು. ಸ್ಲಂನಲ್ಲಿರುವ ಮಂದಿ ಅವತ್ತೇ ಅದನ್ನು ಬಿಬಿಎಂಪಿ ಗಮನಕ್ಕೆ ತಂದಿದ್ದೇ ಆಗಿದಿದ್ದರೆ ಪರಿಸ್ಥಿತಿ ಇಷ್ಟು ಹದಗೆಡುತ್ತಿರಲಿಲ್ಲವಾಗಿತ್ತು. ಆದರೆ, ನಮ್ಮವರಲ್ಲ ಎಂದು ಸುಮ್ಮನಾದದ್ದೇ ಇವತ್ತು ಸೋಂಕು ಇಡೀ ಸ್ಲಂಗೆ ಹರಡುವ ಆತಂಕಕ್ಕೆ ಕಾರಣವಾಗಿದೆ. ಆದರೆ, ಕಳ್ಳ ಯಾವತ್ತಿದ್ದರೂ ಸಿಕ್ಕಾಕೊಳ್ಳಬೇಕು ಎನ್ನುವ ಗಾಧೆಯಂತೆ. ಸೋಂಕು ತಗುಲಿದವರ ಟ್ರಾವೆಲ್ ಹಿಸ್ಟರಿಯಿಂದ ಸ್ಲಂಗೆ ತಲುಪಿದ ಬಿಬಿಎಂಪಿ ಸಿಬ್ಬಂದಿ ಕಳೆದ ವಾರ ಅಮ್ಮ-ಮಗನನ್ನು ಪರೀಕ್ಷೆಗೆ ಕರೆದೊಯ್ದು ಕ್ವಾರಂಟೈನ್ ಗೆ ಒಳಪಡಿಸುತ್ತಾರೆ. ಆ ವೇಳೆ ಸ್ವಾಬ್ ಟೆಸ್ಟ್ ಕೂಡ ಮಾಡುತ್ತಾರೆ.
ಬಿಬಿಎಂಪಿಯಿಂದ ಮತ್ತೊಂದು ಯಡವಟ್ಟು :
ಈ ವೇಳೆ ಬಿಬಿಎಂಪಿಯ ಸಿಬ್ಬಂದಿ ಮಾಡಿದ ಪ್ರಮಾದದಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ ಎನ್ನಲಾಗಿದೆ. ಸ್ವಾಬ್ ಟೆಸ್ಟ್ ಮಾಡಿದ ಮೇಲೆ ಅದರ ಪರೀಕ್ಷೆ ಬರುವವರಿಗೆ ಅವರನ್ನು ಹೊರಗೆ ಬಿಡಬಾರದಿತ್ತು. ಆದರೆ, ಅದನ್ನು ಮಾಡದೆ ಹೆಬ್ಬಾಳ ಡಿಸಿಎಂ ಹಾಸ್ಟೆಲ್ ನ ಕ್ವಾರಂಟೈನ್ ಕೇಂದ್ರದಿಂದ ಬಿಡುಗಡೆ ಮಾಡಿದರು. ತಮಗೇನೂ ಆಗಿಲ್ಲ ಎನ್ನುವ ಆತ್ಮವಿಶ್ವಾಸದಲ್ಲಿ ಆ ತಾಯಿ ಮಗ ಇಡೀ ಸ್ಲಂ ಸುತ್ತಿದ್ದಾರೆ. ನೂರಾರು ಜನರ ಜತೆ ಬೆರೆತಿದ್ದಾರೆ. ಸರದಿ ಸಾಲಿನಲ್ಲಿ ನಿಂತು ನಲ್ಲಿಯಲ್ಲಿ ನೀರು ಹಿಡಿದಿದ್ದಾರೆ. ದಿನಸಿ-ತರಕಾರಿ ತಂದಿದ್ದಾರೆ. ಸಾಮುದಾಯಿಕವಾಗಿ ಬಹುದೊಡ್ಡ ಸಂಪರ್ಕ ಹೊಂದಿದ್ದಾರೆ.
ಆಮೇಲೆ ಬಂದ ರಿಪೋರ್ಟ್ ಗೆ ಶಾಕ್?!
ಕ್ವಾರಂಟೈನ್ ನಿಂದ ಆರಾಮಾಗಿ ಬಂದು ಜನರ ಜೊತೆಗೆ ಬೆರೆಯಲಾರಂಭಿಸಿದ್ದ ಅಮ್ಮ-ಮಗನ ಸ್ವಾಬ್ ಟೆಸ್ಟ್ ನ ರಿಪೋರ್ಟ್ ಹೊರಬಿದ್ದ ಮೇಲೆ ಬಿಬಿಎಂಪಿ ಸಿಬ್ಬಂದಿನೇ ಶಾಕ್ ಗೆ ಒಳಗಾದರು. ನಾವೆಂಥಾ ಯಡವಟ್ಟು ಮಾಡಿಬಿಟ್ವಿ ಎಂದು ಕೈ ಕೈ ಹಿಸುಕಿಕೊಳ್ಳಲಾರಂಭಿಸಿದರು. ರಿಪೋರ್ಟ್ ನಲ್ಲಿ ತಾಯಿ ಮಗನಿಗೆ ಕೊರೋನಾ ಪಾಸಿಟಿವ್ ಇರೋದು ಪತ್ತೆಯಾಗಿರುವುದರಿಂದ ಆತಂಕಗೊಂಡರು. ಈ ಕಾರಣಕ್ಕೆ ಇಡೀ ಸ್ಲಂನ್ನು ಸೀಲ್ ಡೌನ್ ಕೂಡ ಮಾಡಿ, ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ. ಪರಿಸ್ಥಿತಿಯನ್ನು ಜೆಪಿನಗರ ಠಾಣೆ ಇನ್ಸ್ ಪೆಕ್ಟರ್ ಮಂಜುನಾಥ್ ತಮ್ಮ ಕಂಟ್ರೋಲ್ ಗೆ ತೆಗೆದುಕೊಂಡು ಕೈ ಮೀರಿ ಹೋಗದಂತೆ ಎಲ್ಲಾ ವ್ಯವಸ್ಥೆಯನ್ನು ಮಾಡಿದ್ದಾರೆ.
ಇದನ್ನೂ ಓದಿ :
ಲಾಬಿ, ಗುಂಪುಗಾರಿಕೆ ಬಿಜೆಪಿಗೆ ಸೂಟ್ ಆಗಲ್ಲ - ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಿದ್ರೆ ತಪ್ಪೇನಿಲ್ಲ ; ಕೆ.ಎಸ್.ಈಶ್ವರಪ್ಪ
ತಾಯಿ ಹಾಗೂ ಮಗನಿಗೆ ಕೊರೋನಾ ಸೋಂಕು ದೃಢಪಟ್ಟಿರುವುದರಿಂದ ಸ್ಲಂ ಜನತೆ ಬೆಚ್ಚಿಬಿದ್ದಿದೆ. ಮಾಹಿತಿ ಕಲೆ ಹಾಕಿದ ಬಿಬಿಎಂಪಿ ತಕ್ಷಣಕ್ಕೆ ಸ್ಥಳಕ್ಕೆ ಧಾವಿಸಿ ಇಡೀ ಸ್ಲಂ ನ್ನು ಕಂಟ್ರೋಲ್ಗೆ ಪಡೆದಿದೆ. ಇಡೀ ಸ್ಲಂಗೆ ರಾಸಾಯನಿಕ ಸಿಂಪಡಣೆ ಮಾಡಲಾಗಿದೆ. ಆದರೆ, ಈಗ ಆತಂಕ ಇರುವುದು ಮಹಿಳೆ ಹಾಗೂ ಆಕೆಯ ಮಗ ಯಾರ ಜೊತೆಗೆ ಸಂಪರ್ಕಕ್ಕೆ ಬಂದಿದ್ದಾರೆ ಅವರ ಪೈಕಿ ಯಾರಿಗೆಲ್ಲಾ ಸೋಂಕು ಇರಬಹುದು ಎನ್ನುವ ಲೆಕ್ಕಾಚಾರದಲ್ಲಿ ಬಿಬಿಎಂಪಿ. ತಲೆಕೆಡಿಸಿಕೊಂಡು ಕೂತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ