KM Shivalinge Gowda: ಜೆಡಿಎಸ್ ಶಾಸಕ ಶಿವಲಿಂಗೇಗೌಡಗೆ ಕೊರೋನಾ ಪಾಸಿಟಿವ್
ವೈದ್ಯರ ಸಲಹೆ ಮೇರೆಗೆ ಎಂಟು ದಿನ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯಬೇಕಿದೆ. ನನ್ನೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದವರು ಕೂಡಲೇ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಶಿವಲಿಂಗೇಗೌಡ ಮನವಿ ಮಾಡಿದ್ದಾರೆ.
ಬೆಂಗಳೂರು(ಆ.25): ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬೆನ್ನಲ್ಲೀಗ ಜೆಡಿಎಸ್ನ ಅರಸೀಕೆರೆ ಕ್ಷೇತ್ರದ ಶಾಸಕ ಕೆ. ಎಂ ಶಿವಲಿಂಗೇಗೌಡರಿಗೂ ಕೋವಿಡ್-19 ಪಾಸಿಟಿವ್ ಬಂದಿದೆ. ಹೀಗಾಗಿ ಇವರನ್ನು ನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಪ್ರತ್ಯೇಕ ಕೊಠಡಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ತನಗೆ ಕೊರೋನಾ ಸೋಂಕು ಕಾಣಿಸಿಕೊಂಡಿರುವ ವಿಚಾರವನ್ನು ಖುದ್ದು ಜೆಡಿಎಸ್ ಶಾಸಕ ಶಿವಲಿಂಗೇಗೌಡರೇ ಸ್ಪಷ್ಟಪಡಿಸಿದ್ದಾರೆ. ನನಗೆ ಯಾವುದೇ ಕೊರೋನಾ ರೋಗ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಆದರೆ, ವೈದ್ಯಕೀಯ ಪರೀಕ್ಷೆಗೆ ಒಳಪಟ್ಟಾಗ ಕೊರೋನಾ ಸೋಂಕು ಇರುವುದು ಮಾತ್ರ ದೃಢಪಟ್ಟಿದೆ ಎಂದಿದ್ದಾರೆ.
ಇನ್ನು, ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಕ್ಷೇತ್ರದ ಜನರು ಆತಂಕಪಡುವ ಅವಶ್ಯಕತೆ ಇಲ್ಲ. ವೈದ್ಯರ ಸಲಹೆ ಮೇರೆಗೆ ಎಂಟು ದಿನ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯಬೇಕಿದೆ. ನನ್ನೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದವರು ಕೂಡಲೇ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಶಿವಲಿಂಗೇಗೌಡ ಮನವಿ ಮಾಡಿದ್ದಾರೆ.
ಕೊರೋನಾ ಸೋಂಕು ರಾಜಕಾರಣಿಗಳನ್ನೂ ಬಿಟ್ಟಿಲ್ಲ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ, ಸಂಪುಟದ ಅನೇಕ ಸಚಿವರು ಸೇರಿದಂತೆ ರಾಜ್ಯದ ಬಹುತೇಕ ಜನಪ್ರತಿನಿಧಿಗಳು ಕೊರೋನಾ ಸೋಂಕಿಗೆ ತುತ್ತಾಗಿದ್ದರು. ಹಾಗೆಯೇ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೂ ಕೊರೋನಾ ಸೋಂಕು ದೃಢಪಟ್ಟಿದೆ. ಈ ಬೆನ್ನಲ್ಲೀಗ ಶಿವಲಿಂಗೇಗೌಡರಿಗೂ ಕೊರೋನಾ ವಕ್ಕರಿಸಿದೆ.