ನವದೆಹಲಿ (ಮಾ.16): ಮಹಾಮಾರಿ ಕೊರೋನಾ ವೈರಸ್ ಇಟಲಿ ದೇಶಕ್ಕೆ ದುಃಸ್ವಪ್ನವಾಗಿ ಕಾಡುತ್ತಿದೆ. ಇಟಲಿಯಲ್ಲಿ ಭಾನುವಾರ ಒಂದೇ ದಿನ 368 ಜನರು ಮೃತಪಟ್ಟಿದ್ದು, ಈ ಮೂಲಕ ಸಾವಿನ ಸಂಖ್ಯೆ 1,809ಕ್ಕೆ ಏರಿಕೆ ಆಗಿದೆ.
ಜನವರಿ ಅಂತ್ಯಕ್ಕೆ ಕೊರೋನಾ ವೈರಸ್ ಚೀನಾದಲ್ಲಿ ತನ್ನ ಪ್ರಭಾವ ಬೀರಲು ಆರಂಭಿಸಿತ್ತು. ಮೊದಲು 30 ಜನರು ಮೃತಪಟ್ಟಿದ್ದರು. ಈ ಸಂಖ್ಯೆ ಈಗ 3,199ಕ್ಕೆ ಏರಿಕೆ ಆಗಿದೆ. ನಂತರ ಈ ವೈರಸ್ ಇಟಲಿಗೂ ಹಬ್ಬಿದ್ದು, ಈ ಮಹಾಮಾರಿ ವೈರಸ್ನಿಂದ ದಿನೇ ದಿನೇ ಸಾವಿನ ಸಂಖ್ಯೆ ಹೆಚ್ಚುತ್ತಲೆ ಇದೆ.
ಭಾನುವಾರ ಒಂದೇ ದಿನ 3,477 ಹೊಸ ಪ್ರಕರಣ ದಾಖಲಾಗಿವೆ. ಇದು ಇಟಲಿ ಜನತೆಯಲ್ಲಿ ಆತಂಕ ಹೆಚ್ಚಿಸಿದೆ. ಈ ದೇಶದಲ್ಲಿ ಮಾಸ್ಕ್ಗಳ ಕೊರತೆ ಎದುರಾಗಿದೆ. ಅಲ್ಲದೆ, ಕೆಲವೇ ದಿನಗಳಲ್ಲಿ ಸಾವಿನ ಸಂಖ್ಯೆಯಲ್ಲಿ ಚೀನಾವನ್ನು ಇಟಲಿ ಹಿಂದಿಕ್ಕುವ ಸಾಧ್ಯತೆ ಇದೆ.
ಇನ್ನು, ಚೀನಾದಲ್ಲಿ ಸಾವಿನ ಸಂಖ್ಯೆ ನಿಯಂತ್ರಣಕ್ಕೆ ಬಂದಿದೆ. ದಿನಕ್ಕೆ 10-15 ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಸಾವಿನ ಸಂಖ್ಯೆಯಲ್ಲೂ ಗಣನೀಯ ಇಳಿಕೆ ಕಂಡಿದೆ. ಇನ್ನು, ಜರ್ಮನಿ, ಫ್ರಾನ್ಸ್ ಹೊಸ ಪ್ರಕರಣಗಳ ಸಂಖ್ಯೆ 700ರ ಗಡಿ ದಾಟಿದೆ.
ಈಸ್ಟರ್ ಆಚರಣೆ ರದ್ದು
ಇಟಲಿಯಲ್ಲಿ ಏಪ್ರಿಲ್ 5ರಿಂದ ಈಸ್ಟರ್ ವಾರವನ್ನು ಆಚರಣೆ ಮಾಡಲು ಸಿದ್ಧತೆ ನಡೆಸಲಾಗಿತ್ತು. ಆದರೆ, ಕೊರೋನಾ ವೈರಸ್ ಹಿನ್ನಲೆಯಲ್ಲಿ ಈ ಆಚರಣೆಯನ್ನು ರದ್ದು ಮಾಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ