60 ದಿನಗಳ ನಿಷೇಧ ಕಾಲ ಮುಗಿದರೂ ಕರಾವಳಿಯಲ್ಲಿ ಮೀನುಗಾರಿಕೆ ಆರಂಭವಾಗುವುದು ಅನುಮಾನ!

ಮೀನುಗಾರಿಕೆ ಆರಂಭಗೊಂಡರೆ ಧಕ್ಕೆಯಲ್ಲಿ ಜನದಟ್ಟಣೆ ಹೆಚ್ಚಾಗಲಿದ್ದು, ಸಾಮಾಜಿಕ ಅಂತರ ಎಂಬುದು ಮರೀಚಿಕೆ ಆಗುವುದಂತೂ ಸತ್ಯ. ಈ ಕಾರಣಕ್ಕಾಗಿ ಮೀನುಗಾರಿಕೆ ಆರಂಭಿಸಲು ಜಿಲ್ಲಾಡಳಿತ ಅವಕಾಶ ಕಲ್ಪಿಸುವುದು ಅನುಮಾನ ಎಂದೇ ಹೇಳಲಾಗುತ್ತಿದೆ. ಈ ಎಲ್ಲಾ ಕಾರಣದಿಂದಾಗಿ ಪ್ರಸ್ತುತ ವರ್ಷ ಭಾರೀ ನಷ್ಟ ಅನುಭವಿಸುವ ಆತಂಕದಲ್ಲಿ ಮೀನುಗಾರಿದ್ದಾರೆ.

ದಡದಲ್ಲಿ ನಿಂತಿರುವ ದೋಣಿಗಳು

ದಡದಲ್ಲಿ ನಿಂತಿರುವ ದೋಣಿಗಳು

  • Share this:
ಮಂಗಳೂರು; ಕರಾವಳಿಯಲ್ಲಿ ಮಳೆಗಾಲ ಆರಂಭವಾಗುತ್ತಿದ್ದಂತೆ ಮೀನುಗಾರಿಕಾ ನಿಷೇಧ ಕಾಲ ಶುರುವಾಗುತ್ತದೆ. 60 ದಿನಗಳ ಈ ನಿಷೇಧದ ಅವಧಿ ಇದೇ ಜುಲೈ 31ಕ್ಕೆ ಅಂತ್ಯ ಗೊಳ್ಳಲಿದ್ದು ಆಗಸ್ಟ್ 1 ರಿಂದ ಮೀನುಗಾರಿಕಾ ಋತು ಆರಂಭಗೊಳ್ಳಲಿದೆ. ಆದರೆ ಒಂದೆಡೆ ಕೊರೋನಾ ಅಟ್ಟಹಾಸ ಹಾಗೂ ಇನ್ನೊಂದೆಡೆ ಕಾರ್ಮಿಕರ ಸಮಸ್ಯೆಯಿಂದಾಗಿ ಈ ಬಾರಿ ಮೀನುಗಾರಿಕಾ ಋತು ಆರಂಭಗೊಳ್ಳುವುದೇ ಬಹತೇಕ ಅನುಮಾನವಾಗಿದೆ.

ಕರಾವಳಿಯಲ್ಲಿ ಮಳೆಗಾಲ ಆರಂಭವಾಗುತ್ತಿದ್ದಂತೆ ಕಡಲು ಬಿರುಸುಗೊಳ್ಳುತ್ತದೆ. ಇದರ ಜೊತೆ ಮಳೆಗಾಲ ಮೀನುಗಳ ಸಂತಾನಾಭಿವೃಧಿಯ ಸಮಯವಾಗಿರುವುದರಿಂದ ಜೂನ್‌ನಿಂದ ಜುಲೈ ಅಂತ್ಯದವರೆಗೆ ಮೀನುಗಾರಿಕೆಗೆ ನಿಷೇಧ ಹೇರಲಾಗುತ್ತದೆ. ಆದರೆ ಈ ಬಾರಿ ಆಗಸ್ಟ್ 1 ರಂದು ಹೊಸ ನಿರೀಕ್ಷೆಗಳೊಂದಿಗೆ ಕಡಲಿಗೆ ಇಳಿಯುವ ಮೀನುಗಾರರಿಗೆ ನಿರಾಸೆಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಇದಕ್ಕೆ ಕಾರಣ ಇಡೀ ವಿಶ್ವವನ್ನೇ ಕಾಡುತ್ತಿರುವ ಕೊರೋನಾ ಎಂಬ ಮಹಾಮಾರಿ.

ಮಂಗಳೂರು ಮೀನುಗಾರಿಕಾ ಧಕ್ಕೆಯಲ್ಲಿ ಪರ್ಸಿನ್ ಹಾಗೂ ಟ್ರಾಲ್ ಬೋಟ್ ಗಳು ಸೇರಿ ಒಟ್ಟು 1200 ಹಾಗೂ ಮಲ್ಪೆ ಧಕ್ಕೆಯಲ್ಲಿ 1800 ಬೋಟ್​ಗಳಿವೆ. ಇದರಲ್ಲಿ ಸರಿಸುಮಾರು 25 ಸಾವಿರಕ್ಕೂ ಹೆಚ್ಚು ಕಾರ್ಮಿಕರು ದುಡಿಯುತ್ತಿದ್ದಾರೆ. ಇದರಲ್ಲಿ ಶೇಕಡಾ 80ರಷ್ಟು ಕಾರ್ಮಿಕರು ಆಂಧ್ರ, ತಮಿಳುನಾಡು, ಒಡಿಶಾ, ಪಶ್ಚಿಮ ಬಂಗಾಳ, ಬಿಹಾರ ರಾಜ್ಯಗಳಿಗೆ ಸೇರಿದವರು. ಇದಲ್ಲದೇ ಐಸ್ ಪ್ಲಾಂಟ್ ಮತ್ತು ಫಿಶ್ ಮಿಲ್‌ಗಳಲ್ಲೂ ಹೊರ ರಾಜ್ಯದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಆದರೆ ಕೊರೋನಾ ಎಂಬ ಮಹಾಮಾರಿಯ ಅಟ್ಟಹಾಸಕ್ಕೆ ಹೆದರಿ ಬಹುತೇಕ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರಳಿದ್ದಾರೆ. ಈ ಪರಿಣಾಮ ಮೀನುಗಾರಿಕಾ ದೋಣಿಗಳ ಮಾಲೀಕರು ಮೀನುಗಾರಿಕಾ ಋತು ಆರಂಭವಾಗುವ ಸಂದರ್ಭದಲ್ಲಿ ತಲೆ ಮೇಲೆ ಕೈ ಹೊತ್ತು ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಾರ್ಮಿಕರು ಊರುಗಳಿಂದ ಹಿಂದಿರುಗಲು ರೈಲು ಸಂಚಾರ ಇನ್ನೂ ಆರಂಭಗೊಂಡಿಲ್ಲ. ಒಂದು ವೇಳೆ ಅರಂಭಗೊಂಡರೂ ಕೊರೋನಾ ಭಯದಿಂದ ಕಾರ್ಮಿಕರು ಮೀನುಗಾರಿಕಾ ಧಕ್ಕೆಗಳಿಗೆ ಮರಳಲು ಹಿಂದೇಟು ಹಾಕುತ್ತಿದ್ದಾರೆ. ಆಗಸ್ಟ್ 1ಕ್ಕೆ ಕಾರ್ಮಿಕರು ಮರಳಿದರೂ ಅವರೆಲ್ಲಾ 14 ದಿನ ಹೋಂ ಕ್ವಾರಂಟೈನ್‌ನಲ್ಲಿ ಇರಬೇಕಾದ ಅನಿವಾರ್ಯತೆ ಇದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಏರುತ್ತಿರುವ ಕಾರಣ ಜನ ಸಂದಣಿಗೆ ಅವಕಾಶ ನೀಡಿದರೆ ಸೋಂಕು ಉಲ್ಬಣಿಸುವ ಆತಂಕವಿದೆ.

ಇದನ್ನು ಓದಿ: ದೇವರ ಅವಹೇಳನಕಾರಿ ಪೋಸ್ಟ್ ವಿಷಯವಾಗಿ ವಿವಾದಕ್ಕೆ ಸಿಲುಕಿ ಮತ್ತೆ ಸುದ್ದಿಯಾದ ಮಾಜಿ ಸಚಿವ ಮುರುಗೇಶ್ ನಿರಾಣಿ

ಮೀನುಗಾರಿಕೆ ಆರಂಭಗೊಂಡರೆ ಧಕ್ಕೆಯಲ್ಲಿ ಜನದಟ್ಟಣೆ ಹೆಚ್ಚಾಗಲಿದ್ದು, ಸಾಮಾಜಿಕ ಅಂತರ ಎಂಬುದು ಮರೀಚಿಕೆ ಆಗುವುದಂತೂ ಸತ್ಯ. ಈ ಕಾರಣಕ್ಕಾಗಿ ಮೀನುಗಾರಿಕೆ ಆರಂಭಿಸಲು ಜಿಲ್ಲಾಡಳಿತ ಅವಕಾಶ ಕಲ್ಪಿಸುವುದು ಅನುಮಾನ ಎಂದೇ ಹೇಳಲಾಗುತ್ತಿದೆ. ಈ ಎಲ್ಲಾ ಕಾರಣದಿಂದಾಗಿ ಪ್ರಸ್ತುತ ವರ್ಷ ಭಾರೀ ನಷ್ಟ ಅನುಭವಿಸುವ ಆತಂಕದಲ್ಲಿ ಮೀನುಗಾರಿದ್ದಾರೆ.
Published by:HR Ramesh
First published: