ಇಸ್ರೇಲ್‌ನಲ್ಲಿ ವಯಸ್ಕರಿಗೆ ಬಹುತೇಕ ಎಲ್ಲರಿಗೂ ಲಸಿಕೆ ಹಾಕಲಾಗಿದೆ. ಇದರಿಂದ ಸೋಂಕಿನ ಪ್ರಮಾಣ ತೀವ್ರ ಕಡಿಮೆಯಾಗಿತ್ತು. ಆದರೂ, ಡೆಲ್ಟಾ ರೂಪಾಂತರದಿಂದ ಕ್ರಮೇಣವಾಗಿ ಕೊರೊನಾ ಸೋಂಕಿನ ಪ್ರಮಾಣ ಮತ್ತೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಈಗ 3 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರೂ ಕೋವಿಡ್ ವಿರುದ್ಧದ ಲಸಿಕೆ ಅಥವಾ ಕೋವಿಡ್ ನೆಗೆಟಿವ್ ರಿಪೋರ್ಟ್ ವರದಿಯನ್ನು ಇಸ್ರೇಲ್‌ನ ಅನೇಕ ಒಳಾಂಗಣ ಸ್ಥಳಗಳಿಗೆ ಪ್ರವೇಶಿಸುವ ಮೊದಲು ತೋರಿಸಬೇಕು ಎಂಬ ನಿಯಮ ಜಾರಿಗೆ ತರಲಾಗಿದೆ. ರೆಸ್ಟೋರೆಂಟ್‌ಗಳು, ಕೆಫೆಗಳು, ವಸ್ತುಸಂಗ್ರಹಾಲಯಗಳು, ಗ್ರಂಥಾಲಯಗಳು, ಜಿಮ್‌ಗಳು ಮತ್ತು ಪೂಲ್‌ಗಳು "ಗ್ರೀನ್ ಪಾಸ್" ವ್ಯವಸ್ಥೆಯಿಂದ ಆವೃತವಾದ ಸ್ಥಳಗಳಲ್ಲಿ ಸೇರಿವೆ. ಆದರೂ, ಅಂಗಡಿಗಳು ಅಥವಾ ಮಾಲ್‌ಗಳಿಗೆ ಹೋಗಲು ಇಮ್ಯುನಿಟಿಯ ಪುರಾವೆ ತೋರಿಸುವ ಅಗತ್ಯವಿಲ್ಲ ಎಂದು ತಿಳಿದುಬಂದಿದೆ. ವಿಶ್ವದ ಪ್ರಮುಖ ವ್ಯಾಕ್ಸಿನೇಷನ್ ಕಾರ್ಯಕ್ರಮದ ಹೊರತಾಗಿಯೂ ನಾವು ವೈರಸ್‌ನೊಂದಿಗೆ ಯುದ್ಧದಲ್ಲಿದ್ದೇವೆ ಎಂದು ಸರ್ಕಾರ ಹೇಳಿದೆ.
ಇದನ್ನೂ ಓದಿ:Ganesha Festival: ಗೌರಿ ಹಬ್ಬಕ್ಕೆ ಮತ್ತೆ ಕೊರೋನಾ ಕಂಟಕ; ಗಣೇಶ ಮೂರ್ತಿ ತಯಾರಕರ ಗೋಳು ಕೇಳೋರಿಲ್ಲ..!
ಜೂನ್ ಅಂತ್ಯದಿಂದ ಇಸ್ರೇಲ್‌ನಲ್ಲಿ ಹೆಚ್ಚು ಸಾಂಕ್ರಾಮಿಕ ಡೆಲ್ಟಾ ರೂಪಾಂತರದಿಂದ ಸೋಂಕುಗಳ ಉಲ್ಬಣ ಕಂಡಿದೆ. ಮಂಗಳವಾರ ಸುಮಾರು 7,870 ಹೊಸ ಕೋವಿಡ್ -19 ಪ್ರಕರಣಗಳನ್ನು ಆರೋಗ್ಯ ಸಚಿವಾಲಯವು ವರದಿ ಮಾಡಿದ್ದು, ಇದು ಸೋಮವಾರದ ಆರು ತಿಂಗಳ ದೈನಂದಿನ ದಾಖಲೆಯಾದ 8,752ಕ್ಕಿಂತ ಸ್ವಲ್ಪ ಕಡಿಮೆಯಾಗಿದೆ.
ಜೂನ್ ಮಧ್ಯದಲ್ಲಿ ತೆಗೆದುಹಾಕಿದ್ದ ನಿರ್ಬಂಧಗಳನ್ನು ಮರುಸ್ಥಾಪಿಸುವ ಮೂಲಕ ಮತ್ತು ಗ್ರೀನ್ ಪಾಸ್ ಮರಳಿ ತರುವ ಮೂಲಕ ಉಲ್ಬಣವನ್ನು ಎದುರಿಸಲು ಸರ್ಕಾರ ಪ್ರಯತ್ನಿಸಿದೆ. ಗ್ರೀನ್ ಪಾಸ್ ಮೂಲಕ ಜನರು ಸಂಪೂರ್ಣವಾಗಿ ಲಸಿಕೆ ಹಾಕಿಸಿಕೊಂಡಿದ್ದಾರೆಯೇ, ಇತ್ತೀಚೆಗೆ ಕೋವಿಡ್ -19 ನಿಂದ ಚೇತರಿಸಿಕೊಂಡಿದ್ದಾರೆಯೇ ಅಥವಾ ಹಿಂದಿನ 24 ಗಂಟೆಗಳಲ್ಲಿ ಕೋವಿಡ್ ರಿಪೋರ್ಟ್‌ನಲ್ಲಿ ನೆಗೆಟಿವ್ ಬಂದಿದೆಯೇ ಎಂಬುದನ್ನು ತೋರಿಸುತ್ತದೆ.
ಬುಧವಾರದ ಮೊದಲು 12 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳು ಮಾತ್ರ ಜೂನ್‌ನಿಂದ ಲಸಿಕೆ ಪಡೆಯಲು ಅರ್ಹರಾಗಿದ್ದಾರೆ ಮತ್ತು ವಯಸ್ಕರು ಮಾತ್ರ ಗ್ರೀನ್ ಪಾಸ್ ತೋರಿಸಬೇಕು ಎಂಬ ನಿಯಮವಿತ್ತು. ಆದರೀಗ, 3 ಮತ್ತು 11 ವರ್ಷದೊಳಗಿನ ಮಕ್ಕಳಿಗೂ ಈ ನಿಯಮ ಅನ್ವಯಿಸುತ್ತದೆ. 5 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದರೆ ಮತ್ತು ಕೋವಿಡ್ -19ನಿಂದ ಗಮನಾರ್ಹ ಅಪಾಯ ಹೊಂದಿಲ್ಲವೆಂದು ಪರಿಗಣಿಸದ ಹೊರತು, 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲ ಮಕ್ಕಳಿಗೆ ಲಸಿಕೆ ಹಾಕಿಸಿಕೊಳ್ಳಲು ಅನರ್ಹವಾಗಿರುವುದರಿಂದ ಅವರು ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿ ತೋರಿಸಬೇಕು. ಇನ್ನು, ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಸರ್ಕಾರವೇ ಧನಸಹಾಯ ನೀಡುತ್ತದೆ.
ಇನ್ನೊಂದೆಡೆ, ಇಸ್ರೇಲ್ ಜನಸಂಖ್ಯೆಯ ಸುಮಾರು 11% ಅಂದರೆ ಲಸಿಕೆ ಪಡೆಯಲು ಅರ್ಹರಾಗಿದ್ದರೂ ಲಸಿಕೆ ಪಡೆಯದ ಸರಿಸುಮಾರು ಒಂದು ಮಿಲಿಯನ್ ನಿವಾಸಿಗಳು ತಮ್ಮ ಕೋವಿಡ್ ಪರೀಕ್ಷೆಗೆ ತಾವೇ ಹಣ ಪಾವತಿಸಬೇಕಾಗಿದೆ.
ಇಸ್ರೇಲ್ 50 ಕ್ಕಿಂತ ಹೆಚ್ಚು ವಯಸ್ಸಿನವರಿಗೆ, ವೈದ್ಯಕೀಯ ಕಾರ್ಯಕರ್ತರಿಗೆ ಮತ್ತು ಇತರೆ ಆರೋಗ್ಯ ಸಮಸ್ಯೆ ಇರುವವರಿಗೆ ಫೈಜರ್ - ಬಯೋಎನ್‌ಟೆಕ್‌ಲಸಿಕೆಯ ಮೂರನೆಯ ಡೋಸ್ ನೀಡಲು ಆರಂಭಿಸಿದೆ. ಇಲ್ಲಿಯವರೆಗೆ, ಸುಮಾರು 1.1 ಮಿಲಿಯನ್ ಅರ್ಹ ಜನತೆ ತಮ್ಮ ಬೂಸ್ಟರ್ ಡೋಸ್‌ಗಳನ್ನು ಅಂದರೆ ಮೂರನೇ ಡೋಸ್ ಪಡೆದುಕೊಂಡಿದ್ದಾರೆ.
ಇಸ್ರೇಲ್ ಜನಸಂಖ್ಯೆಯ ಕಾಲು ಭಾಗವನ್ನು ಒಳಗೊಂಡಿರುವ ಇಸ್ರೇಲಿ ಹೆಲ್ತ್‌ಕೇರ್ ಪ್ರೊವೈಡರ್ ಮೆಕಾಬಿ ಪ್ರಕಾರ ಫೈಜರ್ ಲಸಿಕೆಯ ಮೂರನೇ ಡೋಸ್ 60 ವರ್ಷಕ್ಕಿಂತ ಮೇಲ್ಪಟ್ಟ ಜನರಲ್ಲಿ ಕೋವಿಡ್ -19 ಸೋಂಕನ್ನು ತಡೆಗಟ್ಟುವಲ್ಲಿ 86% ಪರಿಣಾಮಕಾರಿ ಎಂದು ಬುಧವಾರ ವರದಿ ಮಾಡಿದೆ.
ಆಸ್ಪತ್ರೆಯಲ್ಲಿ ಪ್ರಸ್ತುತ ಗಂಭೀರ ಸ್ಥಿತಿಯಲ್ಲಿರುವ ಯಾರಿಗೂ ಬೂಸ್ಟರ್ ಡೋಸ್ ನೀಡಿಲ್ಲ ಎಂದೂ ಸಲ್ಮಾನ್ ಜರ್ಕಾ ಮಾಹಿತಿ ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ