ಸೀಜ್ ಆದ ವಾಹನಗಳನ್ನು ಪಡೆಯಲು ಮಾಲೀಕರು ಅನುಸರಿಸಬೇಕಾದ ಕ್ರಮಗಳೇನು?

ಲಾಕ್ ಡೌನ್ ಅವಧಿಯಲ್ಲಿ ಅನಗತ್ಯವಾಗಿ ರಸ್ತೆಗೆ ಇಳಿದ ಹಲವು ಸಾವಿರ ವಾಹನಗಳನ್ನು ರಾಜ್ಯಾದ್ಯಂತ ಪೊಲೀಸರು ಜಫ್ತಿ ಮಾಡಿದ್ದಾರೆ. ಈಗ ಇವುಗಳಿಗೆ ದಂಡ ಕಟ್ಟಿಸಿಕೊಂಡು ವಾಪಸ್ ಕೊಡುವಂತೆ ಹೈಕೋರ್ಟ್ ಸೂಚಿಸಿದೆ.

ಬ್ಯಾರಿಕೇಡ್ ಹಾಕಿರುವ ಪೊಲೀಸರು

ಬ್ಯಾರಿಕೇಡ್ ಹಾಕಿರುವ ಪೊಲೀಸರು

  • Share this:
ಬೆಂಗಳೂರು(ಮೇ 01): ಲಾಕ್ ಡೌನ್ ಅವಧಿಯಲ್ಲಿ ಸೀಜ್ ಆದ ವಾಹನಗಳನ್ನು ಮಾಲಿಕರಿಗೆ ಹಿಂದಿರುಗಿಸಿವು ಕಾರ್ಯ ಇವತ್ತಿನಿಂದ ನಡೆಯುತ್ತಿದೆ. ಪೊಲೀಸ್ ಠಾಣೆಗಳಲ್ಲೇ ವಾಹನಗಳ ವಾಪಸಾಗಿ ಕೆಲಸ ಆಗಲಿ ಎಂದು ಕೋರ್ಟ್ ಹೇಳಿದೆ. ಕೋರ್ಟ್​ನ ಮುಂದಿನ ಆದೇಶದವರೆಗೆ ವಾಹನಗಳನ್ನು ಹಿಂದಿರುಗಿಸಲು ಹೈ ಕೋರ್ಟ್ ಅನುಮತಿಸಿದೆ. ಆದರೆ, ವಾಹನ ಹಿಂದಿರುಗಿಸುವ ಕಾರ್ಯದಲ್ಲಿ ಅನುಸರಿಸಬೇಕಾದ ಕ್ರಮಗಳನ್ನು ಸ್ಪಷ್ಟಪಡಿಸಿ ಪೊಲೀಸ್ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಸೀಜ್ ಆದ ವಾಹನ ಮಾಲೀಕರು ಏನು ಮಾಡಬೇಕು?

1) ಸೀಜ್ ಆದ ವಾಹನ ಮಾಲೀಕರು ಮೊದಲು ಟ್ರಾಫಿಕ್ ಪೊಲೀಸ್ ಠಾಣೆಗೆ ಹೋಗಿ ಹಳೆಯ ಪೆಂಡಿಂಗ್ ಕೇಸ್​ಗಳಿದ್ದರೆ ದಂಡ ಕಟ್ಟಿ ಕ್ಲಿಯರ್ ಮಾಡಿಕೊಳ್ಳಬೇಕು.
2) ಟ್ರಾಫಿಕ್ ಪೊಲೀಸ್ ಠಾಣೆಯಿಂದ ಕ್ಲಿಯರೆನ್ಸ್ ರಸೀದಿ ಪಡೆದು ನಂತರ ಲಾ ಅಂಡ್ ಆರ್ಡರ್ ಸ್ಟೇಷನ್​ಗೆ ಹೋಗಬೇಕು. ಇಲ್ಲಿ ವಾಹನ ದಾಖಲೆಯ ಫೋಟೋಕಾಪಿ ಕೊಡಬೇಕು. ಅಲ್ಲಿ ಸೀಜ್ ಆದ ವಾಹನಕ್ಕೆ ನಿಗದಿತ ದಂಡ ಕಟ್ಟಿ ಮತ್ತೊಂದು ರಸೀದಿ ಪಡೆಯಬೇಕು.
3) ಲಾಕ್ ಡೌನ್ ಮುಗಿಯುವವರೆಗೂ ಹೊರಗಡೆ ಬರೋದಿಲ್ಲ ಎಂದು ಲಾ ಅಂಡ್ ಆರ್ಡರ್ ಸ್ಟೇಷನ್​ನಲ್ಲಿ ಮುಚ್ಚಳಿಕೆ ಬರೆದುಕೊಡಬೇಕು.
4) ಇದಾದ ಬಳಿಕ ವಾಹನ ವಿಲೇವಾರಿ ಮಾಡುವ ಜಾಗಕ್ಕೆ ಹೋಗಿ ಮುಂದಿನ ಪ್ರಕ್ರಿಯೆಯಲ್ಲಿ ಭಾಗಿಯಾಗಬೇಕು. ದಾಖಲೆಗಳು ಸರಿಯಾಗಿದ್ದರೆ ಮಾತ್ರ ವಾಹನ ನಿಮ್ಮ ಕೈ ಸೇರುತ್ತದೆ. ಇಲ್ಲದಿದ್ದರೆ ಕೋರ್ಟ್​ನಲ್ಲಿ ತೀರ್ಮಾನ ಆಗುವವರೆಗೂ ಕಾಯಬೇಕಾಗಬಹುದು.

ಇದನ್ನೂ ಓದಿ: ಲಾಕ್ ಡೌನ್ ಸಡಿಲಗೊಳಿಸುವುದು ಹೇಗೆ?: ನೀತಿ ಆಯೋಗ್ ಸಿಇಒರಿಂದ 6 ಅಂಶ ಪ್ರಸ್ತಾಪ

ಸೀಜ್ ಆದ ವಾಹನಗಳ ವಿಲೇವಾರಿಗೆ ಪೊಲೀಸ್ ಇಲಾಖೆಯ ಮಾರ್ಗಸೂಚಿಗಳು:

* ಠಾಣೆಯ ಹೊರಭಾಗದಲ್ಲಿ ವಿಶಾಲವಾದ ಸ್ಥಳದಲ್ಲಿ ವಾಹನ ವಿಲೇವಾರಿ ನಡೆಸುವುದು. ಆ ವೇಳೆಯಲ್ಲಿ ಸಾಮಾಜಿಕ ಅಂತರದ ಬಗ್ಗೆ ಕಾಳಜಿ ವಹಿಸಬೇಕು. ವಾಹನ ಮಾಲೀಕರಿಂದ ದಾಖಲೆ ಸ್ವೀಕರಿಸುವವರು ಕಡ್ಡಾಯವಾಗಿ ಕೈಗೆ ಗ್ಲೌಸ್ ಮತ್ತು ಫೇಸ್ ಪ್ರೊಟೆಕ್ಟರ್ ಮಾಸ್ಕ್ ಧರಿಸಬೇಕು. ಇಡೀ ಪ್ರಕ್ರಿಯೆಯಲ್ಲಿ ಸ್ಯಾನಿಟೈಸರ್ ಬಳಕೆ ಮತ್ತಿತರ ಸುರಕ್ಷತಾ ಕ್ರಮ ಅನುಸರಿಸುವುದು.

* ಬ್ಯಾರಿಕೇಡ್ ಮತ್ತು ಧ್ವನಿವರ್ದಕ ಅಳವಡಿಸಿ ಜನರನ್ನು ಸೂಕ್ತವಾಗಿ ನಿಯಂತ್ರಿಸುವುದು

* ವಾಹನ ಬಿಡುಗಡೆ ವೇಳೆ ಮೊದಲು ಬಂದವರಿಗೆ ಮೊದಲ ಆದ್ಯತೆ; ಪ್ರಕ್ರಿಯೆ ವೇಳೆ ಜನರೊಂದಿಗೆ ಸೌಜನ್ಯದಿಂದ ವರ್ತಿಸುವುದು

* ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ಮಾಲಿಕರಿಗೆ 500 ರೂ ದಂಡ; ನಾಲ್ಕು ಚಕ್ರ ವಾಹನ ವಾರಸುದಾರರಿಗೆ 1,000 ರೂ ದಂಡ (ಅವರು ಇಚ್ಛೆ ಪಟ್ಟಲ್ಲಿ ಮಾತ್ರ). ಈ ದಂಡ ಮೊತ್ತದ ಹಣ ಸಂದಾಯದ ರಸೀದಿ ನೀಡಬೇಕು.

* ದಂಡ ಪಾವತಿಸಲು ಇಚ್ಛಿಸದ ವಾಹನ ಮಾಲಿಕರಿಂದ ದಂಡ ವಸೂಲಿ ಮಾಡುವಂತಿಲ್ಲ. ವಾಹನವನ್ನೂ ಹಿಂದಿರುಗಿಸುವಂತಿಲ್ಲ. ಸ್ಥಳೀಯ ನ್ಯಾಯಾಲಯದ ಆದೇಶದಂತೆ ಮುಂದಿನ ಕ್ರಮ ತೆಗೆದುಕೊಳ್ಳುವುದು.

* ಪಡೆಯಬೇಕಾದ ವಾಹನ ದಾಖಲೆಗಳು: ಆರ್.ಸಿ. ಬುಕ್, ಡಿಎಲ್, ಆಧಾರ್ ಕಾರ್ಡ್/ವೋಟರ್ ಐಡಿ. ಇವುಗಳ ಮೂಲ ಪ್ರತಿ ಮತ್ತು ಫೋಟೋಕಾಪಿಯನ್ನು ತರುವಂತೆ ಮುಂಚಿತವಾಗಿ ವಾಹನ ಮಾಲಿಕರಿಗೆ ದೂರವಾಣಿ ಕರೆ ಮಾಡಿ ತಿಳಿಸಬೇಕು. ನಂತರ, ಎಲ್ಲಾ ದಾಖಲೆಗಳನ್ನ ಪರಿಶೀಲಿಸಿದ ಬಳಿಕವೇ ಮುಂದಿನ ಕ್ರಮ.

* ವಾಹನದ ಆರ್.ಸಿ. ಮಾಲಿಕ ಹಾಜರಾಗಲು ಸಾಧ್ಯವಿಲ್ಲದಿದ್ದರೆ ಅವರಿಂದ ಅಧಿಕಾರ ಪತ್ರ ಪಡೆದಿರುವ ವ್ಯಕ್ತಿಗೆ ವಾಹನ ಒಪ್ಪಿಸಬಹುದು.

* ಆರ್.ಸಿ. ಪುಸ್ತಕದಲ್ಲಿರುವ ವಿವರ ಹಾಗೂ ವಾಹನದ ಎಂಜಿನ್ ಮತ್ತು ಚಾಸಿಸ್ ನಂಬರ್​ಗಳನ್ನು ತಾಳೆ ಮಾಡಿ ಖಚಿತಪಡಿಸಿಕೊಳ್ಳುವುದು

* ಸೀಜ್ ಆದ ವಾಹನಗಳ ಹಿಂದಿನ ಸಂಚಾರ ನಿಯಮ ಉಲ್ಲಂಘನೆ ಇತ್ಯಾದಿ ಪ್ರಕರಣಗಳಿದ್ದರೆ ಅವೆಲ್ಲ ದಂಡವನ್ನೂ ಕಟ್ಟಿಸಿಕೊಳ್ಳುವುದು.

First published: