ಕೊರೋನಾ ವೇಳೆ 22 ಸಾವಿರ ಜನರಿಗೆ ಉಚಿತ ಆಹಾರ ನೀಡಿದ ಮುಂಬೈನ ಅಮ್ಮ-ಮಗ!

ಮುಂಬೈನ ಹೀನಾ ಮಾಂಡವಿಯಾ ಮತ್ತು ಅವರ ಮಗ ಹರ್ಷ್ 'ಹರ್ಷ್ ಥಾಲಿ ಮತ್ತು ಪರಾಟಾಸ್' ಎನ್ನುವ ಸಣ್ಣ ಹೋಟೆಲ್‌ನ ಮಾಲೀಕರು.

ಮುಂಬೈನಲ್ಲಿ ಉಚಿತ ಊಟ ನೀಡುತ್ತಿರುವ ಅಮ್ಮ-ಮಗ

ಮುಂಬೈನಲ್ಲಿ ಉಚಿತ ಊಟ ನೀಡುತ್ತಿರುವ ಅಮ್ಮ-ಮಗ

  • Share this:
ಕೊರೊನಾ ಸಾಂಕ್ರಾಮಿಕ ರೋಗ ಆರೋಗ್ಯ ಮತ್ತು ಆರ್ಥಿಕ ದುಸ್ಥಿತಿಯನ್ನು ತಂದೊಡ್ಡಿದೆ. ಲಾಕ್‌ಡೌನ್‌ನಿಂದ ಕೆಲಸವಿಲ್ಲದೇ, ಹಸಿವಿನಿಂದ ನರಳುವ ಎಷ್ಟೋ ಜೀವಗಳ ಪ್ರಾರ್ಥನೆ ಮುಗಿಲು ಮುಟ್ಟುತ್ತಿದೆ. ಇಂತಹ ಸಂದರ್ಭದಲ್ಲಿ ಆಸರೆ ಇಲ್ಲದೇ ದಿಕ್ಕೆಟ್ಟ ಜೀವಗಳ ತುತ್ತಿನ ಬಟ್ಟಲು ತುಂಬಲು ಅನೇಕ ಕರುಣಾಮಯಿ ಮನಸ್ಸುಗಳು ಕೆಲಸ ಮಾಡುತ್ತಿವೆ. ಅವರಲ್ಲಿ ಮುಂಬೈನ ಹೀನಾ ಮಾಂಡವಿಯಾ ಮತ್ತು ಅವರ ಮಗ ಹರ್ಷ್ ಕೂಡ ಒಬ್ಬರು. ಉಚಿತವಾಗಿ ಆಹಾರವನ್ನು ಕೊಟ್ಟು ಹಸಿದು ಬಸವಳಿದ ಜೀವಕ್ಕೆ ಪುನರ್ಜೀವ ನೀಡುತ್ತಿದ್ದಾರೆ. ಆ ಮೂಲಕ ಈ ಸಂದರ್ಭದಲ್ಲಿ ತಮ್ಮ ಕೈಲಾದ ಸಮಾಜ ಸೇವೆ ಮಾಡುತ್ತಿದ್ದಾರೆ.

ಹೀನಾ ಮಾಂಡವಿಯಾ ಮತ್ತು ಹರ್ಷ್ ಅವರು 'ಹರ್ಷ್ ಥಾಲಿ ಮತ್ತು ಪರಾಟಾಸ್' ಎನ್ನುವ ಸಣ್ಣ ಹೋಟೆಲ್‌ನ ಮಾಲೀಕರು. ಹಾಗಂತ ಇವರು ಹುಟ್ಟುತ್ತಲೇ ಕೋಟಿ ಕುಳ ಎಂದು ಭಾವಿಸಬೇಡಿ. ಮಾಂಡವಿಯಾ ಅವರು 1998 ರಲ್ಲೇ ಪತಿಯನ್ನು ಕಳೆದುಕೊಂಡು 5 ವರ್ಷದ ಪುಟ್ಟ ಮಗನನ್ನು ಮಡಿಲಲ್ಲಿಟ್ಟುಕೊಂಡು ಬದುಕು ಕಟ್ಟಲು ಸಾಕಷ್ಟು ಕಷ್ಟಪಟ್ಟಿದ್ದಾರೆ. ಎಲ್ಲೂ ಕೂಡ ಅಂಜದೇ, ಧೈರ್ಯ ಕಳೆದುಕೊಳ್ಳದೇ ಮಗನ ಉತ್ತಮ ವಿದ್ಯಾಭ್ಯಾಸದ ಗುರಿ ಇಟ್ಟುಕೊಂಡು ಅದನ್ನು ಸಾಧಿಸಿದ ಗಟ್ಟಿಗಿತ್ತಿ. 20 ವರ್ಷಗಳ ಹಿಂದೆ ಮನೆಯಿಂದಲೇ ಟಿಫನ್ ಮಾರಾಟವನ್ನು ಆರಂಭಿಸಿ ನಿಂತ ಬದುಕಿನ ಬಂಡಿಯನ್ನು ಮುಂದಕ್ಕೆ ತಳ್ಳಿದ ಛಲಗಾತಿ.

ಅಂತಾರಾಷ್ಟ್ರೀಯ ಶಾಲೆಯಲ್ಲಿ ಮಗನನ್ನು ಓದಿಸಲು ಹಣವಿಲ್ಲದ ಸಂದರ್ಭದಲ್ಲಿ ಶಾಲೆಯ ನಿರ್ದೇಶಕರು ಮಗನ ಓದಿಗೆ ನೆರವಾಗಿದ್ದು ಬದುಕನ್ನು ಇನ್ನಷ್ಟು ಸಹ್ಯವಾಗಿಸಿತ್ತು. ಇನ್ನು ತಾಯಿಯ ಕಷ್ಟಕ್ಕೆ ಕೈ ಜೋಡಿಸಲು ಹರ್ಷ್ ಶಾಲೆ ಜೊತೆಗೆ ತಾಯಿಯ ಕೆಲಸಕ್ಕೆ ನೆರವಾದರು. ಅಮ್ಮ ತಯಾರಿಸುವ ಆಹಾರವನ್ನು ಗ್ರಾಹಕರ ಮನೆಗೆ ತಲುಪಿಸುವ ಹೊಣೆ ಹೊತ್ತುಕೊಂಡರು. ಇವರ ಶ್ರಮದ ಬದುಕಿಗೆ ಪ್ರೋತ್ಸಾಹ ನೀಡಲು ಗ್ರಾಹಕರೊಬ್ಬರು 70,000 ರೂಪಾಯಿಗಳ ಆರ್ಥಿಕ ನೆರವು ನೀಡಿದರು. ಇದು ಸಣ್ಣದಾಗಿ ಹೋಟೆಲ್ ತೆರೆಯಲು ಭರವಸೆ ತುಂಬಿತು.

ಇದನ್ನೂ ಓದಿ: Cryptocurrency: ಕ್ರಿಪ್ಟೋಕರೆನ್ಸಿ ಮೌಲ್ಯ 700 ಪಟ್ಟು ಹೆಚ್ಚಾಗುತ್ತಿದ್ದಂತೆ ಉದ್ಯೋಗಿಯ ಸಂಬಳ ವಾಪಾಸ್ ಕೇಳಿದ ಕಂಪನಿ!

ಈ ಸಂದರ್ಭದಲ್ಲಿ ಹರ್ಷ್ ಅವರು ಪದವಿ ಪರೀಕ್ಷೆಯಲ್ಲಿ ಶೇಕಡಾ 93 ರಷ್ಟು ಅಂಕ ಗಳಿಸಿ ಕೆಲಸಕ್ಕೆ ಹೊರಡಲು ಸಿದ್ಧವಾಗುತ್ತಿದ್ದರು. ಅಷ್ಟರಲ್ಲೇ ಅವರ ಅಜ್ಜಿ ತೀರಿಕೊಂಡ ಕಾರಣ ಮಾಂಡವಿಯಾ ಅವರು ಗುಜರಾತ್‌ಗೆ ತೆರಳಬೇಕಾಯಿತು. ಆ ಸಂದರ್ಭದಲ್ಲಿ ಹರ್ಷ್ ಆಹಾರದ ವ್ಯವಹಾರವನ್ನು ತಾವೇ ಮುಂದುವರೆಸಿದರು. ಕಾರು ಕೊಳ್ಳುವ ಮಟ್ಟಕ್ಕೆ ಬಂದರು. ಈ ಸಂದರ್ಭದಲ್ಲಿ ತಮಗೆ ಸಹಾಯ ಮಾಡಿದವರಿಗೆ ಹಣ ಹಿಂದಿರುಗಿಸಲು ಹೋದಾಗ ನೆರವು ನೀಡಿದವರ ಮಾತುಗಳು ಹರ್ಷ್ ಕಣ್ಣು ತೆರೆಸಿತು.

ಹರ್ಷ್ ಕುಟುಂಬಕ್ಕೆ ಸಹಾಯ ಹಸ್ತ ಚಾಚಿದ್ದವರು ತಮಗೆ ಹಣ ಬೇಡವೆಂದು, 'ನಾವು ನಿಮಗೆ ಸಹಾಯ ಮಾಡಿದ್ದೇವೆ. ನೀವು ಇನ್ನೂ ಹತ್ತು ಜನರಿಗೆ ಸಹಾಯ ಮಾಡಿ' ಎಂದರು. ಈ ಮಾತು ಹರ್ಷ್ ಅವರ ಕಣ್ಣು ತೆರೆಸಿತು. 'ಆಗಲೇ 2020 ರಲ್ಲಿ ಲಾಕ್ಡೌನ್ ಜಾರಿಯಾಗಿತ್ತು. ಆಗ ವ್ಯಕ್ತಿಯೊಬ್ಬರು ಕರೆ ಮಾಡಿ 100 ಜನರಿಗೆ ಉಚಿತವಾಗಿ ಆಹಾರ ನೀಡಬೇಕು ನೀವು ಸಹಕರಿಸುವಿರಾ ಎಂದು ಕೇಳಿದರು. ಆ ಸಂದರ್ಭದಲ್ಲಿ ನಾವು ಇನ್ನೊಬ್ಬರಿಗೆ ಸಹಾಯ ಮಾಡಬೇಕು ಎನಿಸಿತು. ಆದ್ದರಿಂದ ನಾನು ಮತ್ತು ಅಮ್ಮ 100 ಆಹಾರ ಡಬ್ಬಗಳನ್ನು ಸಿದ್ಧ ಮಾಡಿ ಉಚಿತವಾಗಿ ಬಡವರಿಗೆ ಹಂಚಿದೆವು. ಆ ನಂತರ ದಾನಿಗಳ ಹಣದಿಂದ ನಾವು ಆಹಾರ ತಯಾರಿಸಿಕೊಡುತ್ತೇವೆ ಎಂದು ಒಂದು ಆನ್ಲೈನ್ ಪೊಸ್ಟ್ ಹಾಕಿದಾಗ 1.5 ಲಕ್ಷ ದಾನದ ಹಣ ಸಂಗ್ರಹವಾಯಿತು. ಅದರಿಂದ 22,000 ಊಟ ಮತ್ತು 55,000 ರೋಟಿಗಳನ್ನು ಬಡವರಿಗೆ ಹಂಚಿದೆವು' ಎಂದರು.

'ಅಪರಿಚಿತರಿಗಾಗಿ ನೀವೇಕೆ ನಿಮ್ಮ ಜೀವನವನ್ನು ಅಪಾಯಕ್ಕೀಡು ಮಾಡಿಕೊಳ್ಳುತ್ತಿದ್ದೀರಿ ಎಂದು ಸಾಕಷ್ಟು ಜನ ಕೇಳುತ್ತಾರೆ. ಎಲ್ಲವನ್ನೂ ನಾವು ಹಾಗೇ ಯೋಚಿಸಲಾಗುವುದಿಲ್ಲ ಎನ್ನುವುದನ್ನು ನಮ್ಮ ಬದುಕು ನಮಗೆ ಕಲಿಸಿಕೊಟ್ಟಿದೆ. ಏಕೆಂದರೆ ಇಂದು ನಾವು ಈ ಹಂತಕ್ಕೆ ತಲುಪಲು ನೆರವಾದವರ ಸಹಾಯವನ್ನು ನೆನಪಿಸಿಕೊಳ್ಳುತ್ತೇನೆ. ನಾವು ಕಷ್ಟದಲ್ಲಿ ಇದ್ದಾಗ ನಮಗೆ ಸಹಾಯ ಮಾಡಿದ ಯಾರಾದರೂ ಒಬ್ಬರು ಇವರಿಗೆ ಸಹಾಯ ಮಾಡುವುದರಿಂದ ನಮಗೇನು ಲಾಭ!? ಎಂದು ಯೋಚಿಸಿದ್ದರೇ ನಾವು ಇಂದು ಈ ಹಂತವನ್ನು ತಲುಪುತ್ತಿರಲಿಲ್ಲ ಅಲ್ಲವೇ?' ಎನ್ನುವ ಮೂಲಕ ಎಲ್ಲರಲ್ಲೂ ಮಾನವೀಯತೆಯ ಸ್ಪಂದನೆಯನ್ನು ಪ್ರಚೋದಿಸುತ್ತಾರೆ ಹರ್ಷ್. ದಾನದಿಂದ ಬದುಕು ಅಕ್ಷಯವಾಗುತ್ತದೆ ಎನ್ನುವುದಕ್ಕೆ ಇಂತಹ ಘಟನೆಗಳೇ ಸಾಕ್ಷಿ ಅಲ್ಲವೇ!
Published by:Sushma Chakre
First published: