ಲಾಕ್ ಡೌನ್ ಮುಂದುವರಿದಲ್ಲಿ ಭಾರತಕ್ಕೆ ಇನ್ನಷ್ಟು ಆರ್ಥಿಕ ಪೆಟ್ಟು: ಖ್ಯಾತ ಅರ್ಥತಜ್ಞ ಜೀನ್ ಡ್ರೆಜ್ ಎಚ್ಚರಿಕೆ

ಕನಿಷ್ಠ ಆದಾಯ ಯೋಜನೆ ಬದಲು ಈಗಿರುವ ಸಾರ್ವತ್ರಿಕ ವಿತರಣಾ ವ್ಯವಸ್ಥೆ (ಪಿಡಿಎಸ್), ಸಾಮಾಜಿಕ ಭದ್ರತಾ ಪಿಂಚಣಿ ಇತ್ಯಾದಿ ಯೋಜನೆಗಳನ್ನ ಬಲಪಡಿಸುವ ಅಗತ್ಯ ಇದೆ ಎಂದು ಜೀನ್ ಹೇಳಿದ್ಧಾರೆ.

ಕೊರೋನಾ ಪ್ರಾತಿನಿಧಿಕ ಚಿತ್ರ

ಕೊರೋನಾ ಪ್ರಾತಿನಿಧಿಕ ಚಿತ್ರ

 • Share this:
  ನವದೆಹಲಿ(ಏ. 05): ಭಾರತದ ಸ್ಥೂಲ ಆರ್ಥಿಕತೆ (ಮ್ಯಾಕ್ರೋ ಎಕಾನಮಿ) ಈಗಾಗಲೇ ದುರ್ಬಲ ಸ್ಥಿತಿಯಲ್ಲಿದೆ. ಈಗ ಇನ್ನಷ್ಟು ಕಾಲ ದೇಶವ್ಯಾಪಿ ಲಾಕ್ ಡೌನ್ ಮುಂದುವರಿದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ ಎಂದು ವಿಶ್ವಖ್ಯಾತ ಅರ್ಥಶಾಸ್ತ್ರಜ್ಞ ಜೀನ್ ಡ್ರೀಜ್ ಅಭಿಪ್ರಾಯಪಟ್ಟಿದ್ಧಾರೆ.

  ಕೊರೋನಾ ವೈರಸ್ ಸೋಂಕು ಹೆಚ್ಚು ವ್ಯಾಪಿಸದಂತೆ ನಿಗ್ರಹಿಸುವ ಉದ್ದೇಶದಿಂದ ಮಾರ್ಚ್ 24ರಿಂದ 21 ದಿನಗಳವರೆಗೆ ಭಾರತದಾದ್ಯಂತ ಲಾಕ್ ಡೌನ್ ಘೋಷಿಸಲಾಗಿದೆ. ಅನೇಕ ಕಾರ್ಖಾನೆಗಳು ಬಂದ್ ಆಗಿವೆ. ದಿನಸಿ ವಸ್ತು, ಔಷಧ ಅಂಗಡಿ ಹೊರತುಪಡಿಸಿ ಉಳಿದ ಬಹುತೇಕ ವ್ಯವಹಾರ ನಿಂತುಹೋಗಿದೆ. ಕೊರೋನಾ ಮಹಾಮಾರಿ ವಕ್ಕರಿಸುವ ಮುನ್ನವೇ ಭಾರತ ಆರ್ಥಿಕ ಮುಗ್ಗಟ್ಟಿನಲ್ಲಿತ್ತು. ಈಗ ಇನ್ನಷ್ಟು ಕಷ್ಟಕ್ಕೆ ಸಿಲುಕಿದೆ.

  ಬೆಲ್ಜಿಯನ್ ದೇಶದವರಾದ ಜೀನ್ ಬ್ರೀಜ್ ಪ್ರಕಾರ ಭಾರತಕ್ಕೆ ಈ ಪರಿಸ್ಥಿತಿ ನಿಭಾಯಿಸಲು ಕಷ್ಟಸಾಧ್ಯವಾಗಬಹುದು.

  “ಪರಿಸ್ಥಿತಿ ಇನ್ನೂ ಬಿಗಡಾಯಿಸುತ್ತದೆ. ವಿವಿಧ ಸ್ತರದಲ್ಲಿ ದೇಶವ್ಯಾಪಿ ಲಾಕ್ ಡೌನ್ ಮುಂದುವರಿಯುವ ಸಾಧ್ಯತೆ ಇದೆ. ಒಂದು ವೇಳೆ, ಲಾಕ್ ಡೌನ್ ಮುಂದುವರಿಯದಿದ್ದರೂ ವಿಶ್ವಾದ್ಯಂತ ಇರುವ ಆರ್ಥಿಕ ಹಿಂಜರಿತವು ಭಾರತದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ” ಎಂದು ಜೀನ್ ಡ್ರೆಜೆ ಹೇಳಿದ್ಧಾರೆ.

  ಇದನ್ನೂ ಓದಿ: ಕೊರೋನಾಗೆ ವಿಶ್ವಾದ್ಯಂತ 64,729 ಜನ ಬಲಿ; ಭಾರತದಲ್ಲಿ ಸೋಂಕಿತರ ಸಂಖ್ಯೆ 3,313ಕ್ಕೆ ಏರಿಕೆ

  ವೈದ್ಯಕೀಯದಂಥ ಕೆಲ ಕ್ಷೇತ್ರಗಳು ಬೆಳವಣಿಗೆ ಕಾಣಬಹುದು. ಆದರೆ, ಇತರ ಕ್ಷೇತ್ರಗಳು ಹಿನ್ನಡೆ ಅನುಭವಿಸುತ್ತಿರುವಾಗ ಬಹುತೇಕ ಕ್ಷೇತ್ರಗಳು ಬೆಳವಣಿಗೆ ಹೊಂದಲು ಸಾಧ್ಯವಿಲ್ಲ. ಒಂದು ಚಕ್ರ ಪಂಕ್ಚರ್ ಆದ ಸೈಕಲ್ ಒಂದೇ ಚಕ್ರದಲ್ಲಿ ಓಡಲು ಆಗುತ್ತದೆಯೇ? ಈ ಬಿಕ್ಕಟ್ಟು ಇನ್ನಷ್ಟು ಕಾಲ ಮುಂದುವರಿದರೆ ಅದು ಬ್ಯಾಂಕಿಂಗ್ ವ್ಯವಸ್ಥೆಯನ್ನೂ ಸೇರಿ ಆರ್ಥಿಕತೆಯ ಆಳಕ್ಕೆ ಹೋಗಿ ಹಾಳುಗೆಡವುತ್ತದೆ ಎಂದು ಅವರು ತಿಳಿಸಿದ್ದಾರೆ.

  ವಿವಿಧೆಡೆ ಸಿಲುಕಿಕೊಂಡಿರುವ ವಲಸಿಗ ಕಾರ್ಮಿಕರು ಲಾಕ್ ಡೌನ್ ಹಿಂಪಡೆಯುತ್ತಿದ್ದಂತೆಯೇ ತಮ್ಮ ಊರುಗಳಿಗೆ ಮರಳಿಹೋಗುತ್ತಾರೆ. ಸ್ವಲ್ಪ ಕಾಲ ಅವರು ಮತ್ತೆ ಹೊರಗೆ ಹೋಗುವುದೇ ಇರಬಹುದು. ಜಮೀನು ಇದ್ದವರು ಕೃಷಿ ಮಾಡಬಹುದು. ಇದೇ ವೇಳೆ, ವಲಸಿಗ ಕಾರ್ಮಿಕರನ್ನು ನೆಚ್ಚಿಕೊಂಡಿದ್ದ ಕ್ಷೇತ್ರಗಳಿಗೆ ಅನನುಕೂಲವಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ಧಾರೆ.

  ಈ ಸಂಕಷ್ಟದ ಸಂದರ್ಭದಲ್ಲಿ ಸಾರ್ವತ್ರಿಕ ಕನಿಷ್ಠ ಆದಾಯ ಯೋಜನೆಯನ್ನು ಜಾರಿಗೆ ತರುವ ಅಗತ್ಯ ಇದೆ ಎಂಬ ವಾದವನ್ನು ಅವರು ತಳ್ಳಿಹಾಕಿದ್ದಾರೆ.

  ಕನಿಷ್ಠ ಆದಾಯ ಯೋಜನೆ ಬದಲು ಈಗಿರುವ ಸಾರ್ವತ್ರಿಕ ವಿತರಣಾ ವ್ಯವಸ್ಥೆ (ಪಿಡಿಎಸ್), ಸಾಮಾಜಿಕ ಭದ್ರತಾ ಪಿಂಚಣಿ ಇತ್ಯಾದಿ ಯೋಜನೆಗಳನ್ನ ಬಲಪಡಿಸುವ ಅಗತ್ಯ ಇದೆ. ಕನಿಷ್ಠ ಆದಾಯ ಯೋಜನೆ ಈ ಸಂದರ್ಭದಲ್ಲಿ ಭಾರತಕ್ಕೆ ಸೂಕ್ತ ಅಲ್ಲ ಎಂಬುದು ಜೀನ್ ಡ್ರೇಜ್ ಅನಿಸಿಕೆ.

  ಕಳೆದ ವರ್ಷ 4.5 ಜಿಡಿಪಿ ಪ್ರಗತಿ ಹೊಂದಿದ್ದ ಭಾರತ ಈ ವರ್ಷ ಶೇ. 2-3ರಷ್ಟು ಮಾತ್ರ ಅಭಿವೃದ್ಧಿ ಸಾಧಿಸಬಹುದು ಎಂದು ಕೆಲ ಹಣಕಾಸು ವಿಶ್ಲೇಷಣಾ ಸಂಸ್ಥೆಗಳು ಅಂದಾಜು ಮಾಡಿವೆ.

  First published: