Indian Railways: ಇಂದಿನಿಂದ‌ ಆರಂಭವಾಗಲಿದೆ 15 ಜೋಡಿ ರೈಲುಗಳ ಪ್ರಯಾಣ; ಬುಕಿಂಗ್ ಆರಂಭವಾಗುತ್ತಿದ್ದಂತೆ ಎಲ್ಲಾ ಸೀಟುಗಳು ಭರ್ತಿ

ಸದ್ಯಕ್ಕೆ ದೆಹಲಿಯಿಂದ ಬೆಂಗಳೂರು, ಚೆನ್ನೈ, ದಿಬ್ರುಘರ್, ಅಗರ್ತಲ, ಹೌರಾ, ಪಾಟ್ನಾ, ಬಿಲಾಸ್ ಪುರ್, ರಾಂಚಿ, ಭುವನೇಶ್ವರ್, ಸಿಕಂದರಾಬಾದ್, ತಿರುವನಂತಪುರ, ಮಡಗಾಂವ್, ಮುಂಬೈ, ಅಹಮದಾಬಾದ್ ಮತ್ತು ಜಮ್ಮುವಿನ ನಡುವೆ ಮಾತ್ರ ರೈಲುಗಳು ಸಂಚರಿಸಲಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವದೆಹಲಿ (ಮೇ 12): ಲಾಕ್‌ಡೌನ್ ಹಿನ್ನೆಲೆಯಲ್ಲಿ 47 ದಿನಗಳ ಬಳಿಕ ಇಂದಿನಿಂದ ದೇಶಾದ್ಯಂತ ರೈಲು ಸಂಚಾರ ಪುನರಾರಂಭವಾಗುತ್ತಿದೆ‌. ಆದರೆ ಪೂರ್ಣ ಪ್ರಮಾಣದಲ್ಲಲ್ಲ. ಬದಲಿಗೆ ಪ್ರಾಯೋಗಿಕವಾಗಿ 15 ಜೋಡಿ ರೈಲುಗಳು. ಅಂದರೆ ಪ್ರತಿದಿನ 15 ರೈಲುಗಳು ದೆಹಲಿಯಿಂದ ದೇಶದ ವಿವಿಧ ನಗರಗಳಿಗೆ ಹೊರಡಲಿವೆ. ಅದೇ ರೀತಿ ದೇಶದ ವಿವಿಧ ನಗರಗಳಿಂದ ದೆಹಲಿಗೆ ಮರಳಲಿವೆ.

ಸದ್ಯಕ್ಕೆ ದೆಹಲಿಯಿಂದ ಬೆಂಗಳೂರು, ಚೆನ್ನೈ, ದಿಬ್ರುಘರ್, ಅಗರ್ತಲ, ಹೌರಾ, ಪಾಟ್ನಾ, ಬಿಲಾಸ್ ಪುರ್, ರಾಂಚಿ, ಭುವನೇಶ್ವರ್, ಸಿಕಂದರಾಬಾದ್, ತಿರುವನಂತಪುರ, ಮಡಗಾಂವ್, ಮುಂಬೈ, ಅಹಮದಾಬಾದ್ ಮತ್ತು ಜಮ್ಮುವಿನ ನಡುವೆ ಮಾತ್ರ ರೈಲುಗಳು ಸಂಚರಿಸಲಿವೆ. ಪ್ರಾಯೋಗಿಕವಾಗಿ ಆರಂಭಿಸಲಾಗುತ್ತಿರುವ ರೈಲು ಓಡಾಟವನ್ನು ಹಂತಹಂತವಾಗಿ ಹೆಚ್ಚಿಸಲು ಸಹ ರೈಲ್ವೆ ಇಲಾಖೆ ಯೋಜನೆ ರೂಪಿಸಿದೆ.

ಆದರೆ, ಈ ರೈಲುಗಳಲ್ಲಿ ಪ್ರಯಾಣಮಾಡಲು ಆನ್ ಲೈನ್ ನಲ್ಲಿ ಮಾತ್ರ ಟಿಕೆಟ್ ಬುಕಿಂಗ್ ಮಾಡಲು ಅವಕಾಶ ನೀಡಲಾಗಿದೆ‌. ಪ್ರಯಾಣಮಾಡಲು ಇಚ್ಛಿಸುವವರು ರೈಲ್ವೆ ಇಲಾಖೆಯ IRCTC ವೆಬ್ ಸೈಟಿನಲ್ಲಿ ಟಿಕೆಟ್ ಬುಕಿಂಗ್ ಮಾಡಬಹುದು. ಲಾಲ್‌ಡೌನ್ ಹಿನ್ನೆಲೆಯಲ್ಲಿ ರೈಲ್ವೆ ನಿಲ್ದಾಣಗಳೆಲ್ಲವೂ ಸೀಲ್ ಡೌನ್ ಆಗಿರುವುದರಿಂದ ನಿಲ್ದಾಣಗಳಲ್ಲಿ ಟಿಕೆಟ್ ಬುಕಿಂಗ್ ವ್ಯವಸ್ಥೆ ಇರುವುದಿಲ್ಲ.

ಟಿಕೆಟ್ ಬುಕಿಂಗ್ ಖಚಿತವಾಗಿದ್ದವರಿಗೆ ಮಾತ್ರ ರೈಲ್ವೆ ನಿಲ್ದಾಣಕ್ಕೆ ಪ್ರವೇಶವಕಾಶ ಇರುತ್ತದೆ. ಜೊತೆಯಲ್ಲಿ ಬರುವವರಿಗೆ, ಸಹಾಯಕರಿಗೆ ಅವಕಾಶ ನಿರಾಕರಿಸಲಾಗಿದೆ. ಪ್ರಯಾಣಿಕರು ಮಾಸ್ಕ್ ಧರಿಸುವುದು ಮತ್ತು ರೈಲ್ವೆ ನಿಲ್ದಾಣ ಹಾಗೂ ರೈಲು ಬೋಗಿಯೊಳಗೆ ಸಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ.

ಟಿಕೆಟ್ ಬುಕಿಂಗ್ ಖಚಿತವಾಗಿದ್ದವರು ರೈಲು ಹೊರಡುವ 90 ನಿಮಿಷ ಮೊದಲೇ ರೈಲ್ವೆ ನಿಲ್ದಾಣಕ್ಕೆ ಬರಬೇಕು. ಕಡ್ಡಾಯವಾಗಿ ಆರೋಗ್ಯ ಸೇತು ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿರಬೇಕು. ರೈಲ್ವೆ ನಿಲ್ದಾಣದಲ್ಲಿ ಅವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಸ್ಯಾನಿಟೈಸ್ ಮಾಡಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ.

ರೈಲ್ವೆ ನಿಲ್ದಾಣದಲ್ಲಿ ಅಂಗಡಿಗಳಿರುವುದಿಲ್ಲ. ಆದುದರಿಂದ ಪ್ಯಾಕ್ ಆಗಿರುವ ಆಹಾರ ಕೊಂಡೊಯ್ಯಲು ಪ್ರಯಾಣಿಕರಿಗೆ ಅವಕಾಶ ನೀಡಲಾಗಿದೆ. ಪ್ಯಾಕ್ ಆಗಿರುವ ಆಹಾರ ರೈಲು ಬೋಗಿಯೊಳಗೂ ಸಿಗಲಿದೆ. ಹಣ ಕೊಟ್ಟು ಖರೀದಿಸಬಹುದು.

ಮೇ 11ರ ಸಂಜೆ 4ಗಂಟೆಯಿಂದಲೇ ಟಿಕೆಟ್ ಬುಕಿಂಗ್​ಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಕೆಲವು ತಾಂತ್ರಿಕ ಕಾರಣದಿಂದಾಗಿ ಟಿಕೆಟ್ ಬುಕಿಂಗ್ ಸಾಧ್ಯವಾಗುತ್ತಿರಲಿಲ್ಲ. ಸ್ವಲ್ಪ ಸಮಯದ ಬಳಿಕ ಟಿಕೆಟ್ ಬುಕಿಂಗ್ ಅನ್ನು ಮತ್ತೆ ಆರಂಭಿಸಲಾಗಿತ್ತು. ಟಿಕೆಟ್ ಬುಕಿಂಗ್ ಆರಂಭವಾಗುತ್ತಿದ್ದಂತೆ ಕೆಲವೇ ಕ್ಷಣಗಳಲ್ಲಿ ಎಲ್ಲಾ ಸೀಟುಗಳು ಭರ್ತಿಯಾಗಿವೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ : Indian Railways: 48 ದಿನಗಳ ನಂತರ ಕೊನೆಗೂ ಆರಂಭವಾಯ್ತು ರೈಲು ಸೇವೆ; ಇಂದು ಸಂಜೆ 8.30ಕ್ಕೆ ಬೆಂಗಳೂರಿನಿಂದ ದೆಹಲಿಗೆ ಮೊದಲ ಪ್ರಯಾಣ
First published: