ನವದೆಹಲಿ(ಏ.20): ದೇಶಾದ್ಯಂತ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಮೇಲೆ ನಡೆಯುತ್ತಿರುವ ಹಲ್ಲೆ ಖಂಡಿಸಿ ಏಪ್ರಿಲ್ 23ನೇ ತಾರೀಕು ಕರಾಳ ದಿನಾಚರಣೆ ಮಾಡುವಂತೆ ಭಾರತೀಯ ವೈದ್ಯಕೀಯ ಸಂಘ ಕರೆ ನೀಡಿದೆ. ಭಾರತೀಯ ವೈದ್ಯಕೀಯ ಸಂಘದ ಕರೆ ಮೇರೆಗೆ ಅಂದು ತಮ್ಮ ಮೇಲಿನ ಹಲ್ಲೆಯನ್ನು ಖಂಡಿಸಿ ವೈದ್ಯರು ಮುಖಕ್ಕೆ ಕಪ್ಪು ಬಟ್ಟೆ ಧರಿಸಿ ಕೆಲಸ ಮಾಡಲಿದ್ದಾರೆ. ಜತೆಗೆ ಒಂದು ದಿನ ಮುನ್ನ ಏ.22ರ ರಾತ್ರಿ 9 ಗಂಟೆಗೆ ದೇಶಾದ್ಯಂತ ಮೇಣದ ಬತ್ತಿ ಹಚ್ಚುವ ಮೂಲಕ ತಮ್ಮ ಆಕ್ರೋಶ ಪ್ರತಿಭಟಿಸಲಿದ್ದಾರೆ.
ಇತ್ತೀಚೆಗೆ ದೇಶದ ಹಲವು ಪ್ರಮುಖ ನಗರಗಳಲ್ಲಿ ಕೊರೋನಾ ಸೋಂಕು ಪೀಡಿತನ್ನು ಪರೀಕ್ಷೆಗೊಳಪಡಿಸಲು ಮುಂದಾದಾಗ ವೈದ್ಯರ ಮೇಲೆ ಸ್ಥಳೀಯರು, ಸಾರ್ವಜನಿಕರು ಕಲ್ಲು ತೂರಾಟ ನಡೆಸಿ ಹಲ್ಲೆ ನಡೆಸಿರುವ ಹಲವು ಪ್ರಕರಣಗಳು ಬೆಳಕಿಗೆ ಬಂದಿದೆ. ಇದನ್ನು ಖಂಡಿಸುವ ಹಿನ್ನೆಲೆಯಲ್ಲಿ ಈ ಕರಾಳ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಘವೂ ಸ್ಪಷ್ಟನೆ ನೀಡಿದೆ.
ಮಧ್ಯಪ್ರದೇಶ, ಹೈದರಾಬಾದ್, ದೆಹಲಿ, ಮುಂಬೈ ಸೇರಿದಂತೆ ಹಲವು ಕಡೆ ವೈದ್ಯರ ಮೇಲೆ ಕಲ್ಲು ತೂರಾಟ, ಎಂಜಲು ಉಗುಳುವುದು, ಬಾಯಿಗೆ ಬಂದತೆ ಬೈಯ್ಯುವ ಪ್ರಕರಣಗಳು ಕಂಡು ಬಂದಿದ್ದವು. ನಮ್ಮನ್ನು ಉಳಿಸಲು ಜೀವ ಪಣಕ್ಕಿಟ್ಟು ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ಎಷ್ಟು ಸರಿ ಎಂದು ಪ್ರಶ್ನಿಸಿದ್ದರು.
ಇದನ್ನೂ ಓದಿ: ಕೊರೋನಾ ನಿಮ್ಮ ಧರ್ಮ ಮತ್ತು ಜಾತಿ ಕೇಳಿ ಬರೋದಿಲ್ಲ: ಪಾದರಾಯನಪುರ ಗಲಭೆಗೆ ಸಂಸದ ತೇಜಸ್ವಿ ಸೂರ್ಯ ಖಂಡನೆ
ಈ ಬೆನ್ನಲ್ಲೇ ಎಚ್ಚೆತ್ತ ಕೇಂದ್ರ ಸರ್ಕಾರವೂ ವೈದ್ಯರ ಮೇಲೆ ಹಲ್ಲೆ ನಡೆಸಿದರೆ ತಕ್ಷಣವೇ ಬಂಧಿಸಿ ಜೈಲಿಗೆ ಕಳುಹಿಸಲಾಗುವುದು. ಇಂತಹ ಕಠಿಣ ಸಂದರ್ಭದಲ್ಲಿ ರಾಜ್ಯದ ಯಾವುದೇ ಆಸ್ಪತ್ರೆಯ ವೈದ್ಯರಾಗಲಿ, ವೈದ್ಯ ಸಿಬ್ಬಂದಿಗಳ ಮೇಲೆ ಯಾವುದೇ ವ್ಯಕ್ತಿ ಹಲ್ಲೆ ನಡೆಸಬಾರದು ಎಂದು ಆದೇಶಿಸಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ