12 ದೇಶ, 64 ವಿಮಾನ, 14,800 ಭಾರತೀಯರು; ಮೇ 7ರಿಂದ ಸರ್ಕಾರದಿಂದ ಅನಿವಾಸಿಗಳ ರಕ್ಷಣಾ ಕಾರ್ಯಾಚರಣೆ

ಗುರುವಾರದಿಂದ ಅಂದರೆ ಮೇ 7ರಿಂದ ಅನಿವಾಸಿ ಭಾರತೀಯರನ್ನು ವಾಪಾಸ್ ಕರೆತರುವ ಕಾರ್ಯಾಚರಣೆ ಶುರುವಾಗಲಿದೆ. ಮೇ 7ರಿಂದ 14ರವರೆಗೆ 64 ವಿಮಾನಗಳ ಮೂಲಕ 14,800 ಜನರನ್ನು ಕರೆತರಲು ನಿರ್ಧರಿಸಲಾಗಿದೆ.

Sushma Chakre | news18-kannada
Updated:May 5, 2020, 2:50 PM IST
12 ದೇಶ, 64 ವಿಮಾನ, 14,800 ಭಾರತೀಯರು; ಮೇ 7ರಿಂದ ಸರ್ಕಾರದಿಂದ ಅನಿವಾಸಿಗಳ ರಕ್ಷಣಾ ಕಾರ್ಯಾಚರಣೆ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ (ಮೇ 5): ದೇಶಾದ್ಯಂತ ಮೇ 17ರವರೆಗೆ ಲಾಕ್​ಡೌನ್​ ವಿಸ್ತರಿಸಲಾಗಿದೆ. ಸುಮಾರು ಒಂದೂವರೆ ತಿಂಗಳಿಂದ ಲಾಕ್​ಡೌನ್​ ಇರುವುದರಿಂದ ವಿದೇಶಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರು ತಾಯ್ನಾಡಿಗೆ ಬರಲು ತುದಿಗಾಲಲ್ಲಿ ನಿಂತಿದ್ದಾರೆ. ಹೀಗಾಗಿ, ದೇಶದಲ್ಲಿ ಅತಿದೊಡ್ಡ ರಕ್ಷಣಾ ಕಾರ್ಯಾಚರಣೆ ನಡೆಸಲು ಮುಂದಾಗಿರುವ ಕೇಂದ್ರ ಸರ್ಕಾರ 64 ವಿಮಾನಗಳ ಮೂಲಕ 14,800 ಅನಿವಾಸಿ ಭಾರತೀಯರನ್ನು ವಾಪಾಸ್ ಕರೆತರಲು ಮುಂದಾಗಿದೆ.

ಗುರುವಾರದಿಂದ ಅಂದರೆ ಮೇ 7ರಿಂದ ಅನಿವಾಸಿ ಭಾರತೀಯರನ್ನು ವಾಪಾಸ್ ಕರೆತರುವ ಕಾರ್ಯಾಚರಣೆ ಶುರುವಾಗಲಿದೆ. ಮೇ 7ರಿಂದ 14ರವರೆಗೆ 64 ವಿಮಾನಗಳ ಮೂಲಕ 14,800 ಜನರನ್ನು ಕರೆತರಲು ನಿರ್ಧರಿಸಲಾಗಿದೆ. ಮೊದಲ ವಿಮಾನ ಮೇ 7ರಂದು ಅಭುದಾಬಿಯಿಂದ ಕೇರಳದ ಕೊಚ್ಚಿಗೆ ಹೊರಡಲಿದ್ದು, 209 ಪ್ರಯಾಣಿಕರನ್ನು ಕರೆತರಲಾಗುವುದು. ಯುಎಇ, ಅಮೆರಿಕ, ಇಂಗ್ಲೆಂಡ್, ಮಲೇಷ್ಯಾ, ಸಿಂಗಾಪುರ್, ಫಿಲಿಪ್ಪೀನ್ಸ್​, ಸೌದಿ ಅರೇಬಿಯ, ಕತಾರ್, ಬಾಂಗ್ಲಾದೇಶ, ಬಹ್ರೇನ್, ಕುವೈತ್ ಮತ್ತಿತರ ದೇಶಗಳಿಂದ ಭಾರತದ ನಾನಾ ರಾಜ್ಯಗಳಿಗೆ ವಿಮಾನದಲ್ಲಿ ಅನಿವಾಸಿ ಭಾರತೀಯರನ್ನು ಕರೆತರಲಾಗುವುದು.

ಇದನ್ನೂ ಓದಿ: ಯುಎಇ ದೇಶವೊಂದರಿಂದಲೇ ಭಾರತಕ್ಕೆ ಮರಳಲು ಹೆಸರು ನೊಂದಾಯಿಸಿದ ಜನರು ಎಷ್ಟು ಗೊತ್ತಾ?

ಈಗಾಗಲೇ ಯುಎಇ ಮತ್ತು ಮಾಲ್ಡೀವ್ಸ್​ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಇಂದು ನೌಕಾಸೇನೆಯ 3 ಹಡಗುಗಳನ್ನು ಕಳುಹಿಸಲಾಗಿದೆ. ಗಲ್ಫ್​ ರಾಷ್ಟ್ರಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ವಾಪಾಸ್ ಕರೆತರಲು ಭಾರತ ಸರ್ಕಾರ ನಿರ್ಧರಿಸಿದೆ. ಹೀಗಾಗಿ, ವಿದೇಶಗಳಲ್ಲಿ ಸಿಲುಕಿಕೊಂಡು, ಭಾರತಕ್ಕೆ ಮರಳಲು ಬಯಸಿರುವ ಭಾರತೀಯರನ್ನು ಕರೆತರಲು ಭಾರತೀಯ ಹಡಗುಗಳ ಮೂಲಕ ಕರೆತರಲಾಗುತ್ತಿದೆ.

ಅನಿವಾಸಿ ಭಾರತೀಯರನ್ನು ಕರೆತರಲು ಇಂದು ಮುಂಬೈ ಬಂದರಿನಿಂದ ಐಎನ್​ಎಸ್​ ಜಲಾಶ್ವ, ಐಎನ್​ಎಸ್​ ಮಗಾರ್, ಐಎನ್​ಎಸ್​ ಶಾರ್ದೂಲ್ ಹಡಗುಗಳನ್ನು ಕಳುಹಿಸಲಾಗಿದೆ. ಐಎನ್​ಎಸ್​ ಜಲಾಶ್ವ ಭಾರತೀಯ ನೌಕಾ ಸೇನೆಯ ಎರಡನೇ ಅತಿ ದೊಡ್ಡ ಹಡಗಾಗಿದೆ. ಇದು ಒಂದೇ ಬಾರಿಗೆ 500 ಜನರನ್ನು ಕರೆತರುವ ಸಾಮರ್ಥ್ಯ ಹೊಂದಿದೆ. ಇವುಗಳ ಜೊತೆಗೆ ಇನ್ನೂ 11 ಹಡಗುಗಳು ಮತ್ತು 30 ವಿಮಾನಗಳು ಕೂಡ ಗಲ್ಫ್​ನಲ್ಲಿರುವ ಭಾರತೀಯರು ಮತ್ತು ಮಾಲ್ಡೀವ್ಸ್​ನಲ್ಲಿರುವ ಭಾರತೀಯರನ್ನು ಕರೆತರಲು ಸಿದ್ಧಗೊಂಡಿವೆ.

ಇದನ್ನೂ ಓದಿ: ಭಾರತೀಯ ನೌಕಾಪಡೆಯಿಂದ ಅತಿದೊಡ್ಡ ರಕ್ಷಣಾ ಕಾರ್ಯಾಚರಣೆ; ದುಬೈ, ಮಾಲ್ಡೀವ್ಸ್​ನತ್ತ ಹೊರಟ 3 ಹಡಗುಗಳು

ಮುಂಬೈನಿಂದ ಐಎನ್​ಎಸ್​ ಜಲಾಶ್ವ ಮತ್ತು ಐಎನ್​ಎಸ್​ ಮಗಾರ್​ ಹಡಗುಗಳು ಸೋಮವಾರ ರಾತ್ರಿ ಮಾಲ್ಡೀವ್ಸ್​ನತ್ತ ತೆರಳಿವೆ. ಐಎನ್​ಎಸ್​ ಶಾರ್ದೂಲ್ ಹಡಗು ದುಬೈಗೆ ತೆರಳಿದೆ. ಈ ಮೂರೂ ಹಡಗುಗಳು ಕೊಚ್ಚಿಗೆ ವಾಪಾಸ್ ಆಗಲಿವೆ. ಅಲ್ಲಿಂದ ಜನರನ್ನು ತಪಾಸಣೆ ನಡೆಸಿ, ಅವರವರ ಊರುಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು.
First published: May 5, 2020, 2:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading