ನವದೆಹಲಿ (ಮೇ 3): ಭಾರತದಲ್ಲಿ ಕೊರೋನಾ ಅಬ್ಬರ ಮುಂದುವರೆದಿದ್ದು, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರತಿದಿನ 40 ಸಾವಿರಕ್ಕೂ ಅಧಿಕ ಕೊರೋನಾ ಪಾಸಿಟಿವ್ ಕೇಸ್ಗಳು ದಾಖಲಾಗುತ್ತಿವೆ. ಆಕ್ಸಿಜನ್ ಸಿಲಿಂಡರ್ ಇಲ್ಲದೆ ರೋಗಿಗಳು ಸಾವನ್ನಪ್ಪಿದ ಪ್ರಕರಣಗಳೂ ನಡೆದಿವೆ. ಹೀಗಾಗಿ, ಈಗಾಗಲೇ ನಾನಾ ದೇಶಗಳು ಭಾರತಕ್ಕೆ ಆಕ್ಸಿಜನ್ ಸರಬರಾಜು ಮಾಡಿವೆ. ದೇಶದ ನಾನಾ ಭಾಗಗಳಿಗೆ ತ್ವರಿತವಾಗಿ ಆಕ್ಸಿಜನ್ ಪೂರೈಕೆ ಮಾಡಲು ಭಾರತೀಯ ವಾಯುಪಡೆ ಕೂಡ ಕೈ ಜೋಡಿಸಿದ್ದು, ಸೇನಾ ವಿಮಾನದ ಮೂಲಕ ಆಕ್ಸಿಜನ್ ಟ್ಯಾಂಕರ್ಗಳ ಸಾಗಾಟ ಮಾಡಲಾಗುತ್ತಿದೆ.
ಇದರ ಜೊತೆಗೆ ಇದೀಗ ಜರ್ಮನಿಯಿಂದ 4 ಆಕ್ಸಿಜನ್ ಕಂಟೇನರ್ಗಳನ್ನು ಭಾರತೀಯ ವಾಯುಪಡೆ ಭಾರತಕ್ಕೆ ಏರ್ಲಿಫ್ಟ್ ಮಾಡಿದೆ. ಭಾರತೀಯ ವಾಯುಸೇನೆಯ ಸಿ-17 ವಿಮಾನದ ಮೂಲಕ ಭಾನುವಾರ 4 ಕ್ರಿಯೋಜೆನಿಕ್ ಆಕ್ಸಿಜನ್ ಕಂಟೇನರ್ಗಳನ್ನು ದೆಹಲಿಯ ಹಿಂಡನ್ ವಾಯುನೆಲೆಗೆ ಶಿಫ್ಟ್ ಮಾಡಲಾಗಿದೆ.
ಇದರ ಜೊತೆಗೆ ವಾಯುಸೇನೆಯ ವಿಮಾನಗಳಲ್ಲಿ ಇಂಗ್ಲೆಂಡ್ನಿಂದ 450 ಆಕ್ಸಿಜನ್ ಸಿಲಿಂಡರ್ಗಳನ್ನು ತಮಿಳುನಾಡಿನ ಚೆನ್ನೈ ವಾಯುನೆಲೆಗೆ ಏರ್ಲಿಫ್ಟ್ ಮಾಡಲಾಗಿದೆ. ಹಾಗೇ, ಸಿ-17 ವಿಮಾನಗಳಲ್ಲಿ ಚಂಡೀಗಢದಿಂದ ಭುವನೇಶ್ವರಕ್ಕೆ 2 ಕ್ರಿಯೋಜೆನಿಕ್ ಆಕ್ಸಿಜನ್ ಕಂಟೇನರ್ಗಳನ್ನು ಏರ್ಲಿಫ್ಟ್ ಮಾಡಲಾಗಿದೆ.
ಜೋಧ್ಪುರದಿಂದ ಜಾಮ್ನಾಗರಕ್ಕೆ 2 ಆಕ್ಸಿಜನ್ ಕಂಟೇನರ್ಗಳು, ಹಿಂಡನ್ನಿಂದ ರಾಂಚಿಗೆ 2 ಆಕ್ಸಿಜನ್ ಕಂಟೇನರ್ಗಳು, ಇಂದೋರ್ನಿಂದ ಜಾಮ್ನಾಗರಕ್ಕೆ 2 ಮತ್ತು ಹಿಂಡನ್ನಿಂದ ಭುವನೇಶ್ವರಕ್ಕೆ 2 ಆಕ್ಸಿಜನ್ ಕಂಟೇನರ್ಗಳನ್ನು ಏರ್ಲಿಫ್ಟ್ ಮಾಡಲಾಗಿದೆ ಎಂದು ಭಾರತೀಯ ವಾಯುಪಡೆ ಮಾಹಿತಿ ನೀಡಿದೆ.
ದೇಶದಲ್ಲಿ ಕೊರೊನಾ ಆರ್ಭಟ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 3,68,147 ಮಂದಿಗೆ ಸೋಂಕು ಪತ್ತೆಯಾಗಿದೆ. ಈ ಮೂಲಕ ಕೊರೋನಾ ಪೀಡಿತರ ಸಂಖ್ಯೆ 1,99,25,604ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ ಗುಣ ಆದವರು 3,00,732 ಜನ. ಇನ್ನೂ ಸಕ್ರಿಯವಾಗಿರುವ ಪ್ರಕರಣಗಳು 34,13,642. ಕಳೆದ 24 ಗಂಟೆಯಲ್ಲಿ ಕೊರೋನಾಗೆ 3,417 ಜನ ಬಲಿಯಾಗಿದ್ದಾರೆ. ಭಾರತದಲ್ಲಿ ಈವರೆಗೆ ಕೊರೋನಾಗೆ 2,18,959 ಜನ ಬಲಿಯಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ