India vs England| ಭಾರತದ ಜೂನಿಯರ್ ಫಿಸಿಯೋಗೆ ಕೊರೋನಾ ಪಾಸಿಟಿವ್; 5ನೇ ಟೆಸ್ಟ್ ಪಂದ್ಯ ಅನುಮಾನ?
ಕೋಚ್ ರವಿಶಾಸ್ತ್ರಿ ಹಾಗೂ ಸಹಾಯಕ ಸಿಬ್ಬಂದಿಗಳಾದ ಭರತ್ ಅರುಣ್, ಮತ್ತು ಆರ್ ಶ್ರೀಧರ್ ಅವರಿಗೆ ಈ ಹಿಂದೆ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆಯಲ್ಲಿ ಮೂವರಿಗೂ ಪಾಸಿಟಿವ್ ಬಂದಿದ್ದ ಕಾರಣ ಈ ಮೂವರೂ ಭಾರತ ತಂಡದೊಂದಿಗೆ ಮ್ಯಾಂಚೆಸ್ಟರ್ಗೆ ಪ್ರಯಾಣಿಸದೆ ಲಂಡನ್ನಲ್ಲೇ ಉಳಿದುಕೊಂಡಿದ್ದರು.
ಮ್ಯಾಂಚೆಸ್ಟರ್ (ಸೆಪ್ಟೆಂಬರ್ 09); ಶುಕ್ರವಾರದಿಂದ ಮ್ಯಾಂಚೆಸ್ಟರ್ನಲ್ಲಿ (Manchester) ಭಾರತ ಮತ್ತು ಇಂಗ್ಲೆಂಡ್ (India vs England) ನಡುವೆ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ನಡೆಯಬೇಕಿದೆ. ಈ ಪಂದ್ಯದಲ್ಲಿ ಇಂಗ್ಲೆಂಡ್ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಒಳಗಾಗಿರುವ ಕಾರಣ ಆಂಗ್ಲರ ಪಾಲಿಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ. ಆದರೆ, ಪಂದ್ಯದ ಹಿಂದಿನ ದಿನವಾದ ಇಂದು ಮುಖ್ಯ ಕೋಚ್ ರವಿಶಾಸ್ತ್ರಿ (Ravi Shastri) ಬೆನ್ನಿಗೆ ಭಾರತದ ಸಹಾಯಕ ಸಿಬ್ಬಂದಿ ಜೂನಿಯರ್ ಫಿಸಿಯೋ ಯೋಗೀಶ್ ಪರ್ಮಾರ್ ಅವರಿಗೂ ಕೊರೋನಾ ಪಾಸಿಟಿವ್ ಇರುವುದು ಧೃಡವಾಗಿದೆ. ಅಲ್ಲದೆ, ಎಲ್ಲಾ ಆಟಗಾರರನ್ನೂ ಸಹ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರ RT-PCR ಪರೀಕ್ಷೆಯ ವರದಿಗಾಗಿ ಎಲ್ಲರೂ ಕಾಯುತ್ತಿದ್ದಾರೆ. ಒಂದು ವೇಳೆ ಯಾವುದೇ ಓರ್ವ ಆಟಗಾರನಿಗೆ ಕೊರೋನಾ ಇರುವುದು ಧೃಢವಾದರೆ 5ನೇ ಟೆಸ್ಟ್ ಪಂದ್ಯ ನಡೆಯುವುದು ಅನುಮಾನ ಎನ್ನಲಾಗಿದೆ.
ಈ ಬಗ್ಗೆ ಲ್ಕತ್ತಾದಲ್ಲಿ ನಡೆದ 'ಮಿಷನ್ ಡೊಮಿನೇಷನ್' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಸ್ವತಃ ಮಾತನಾಡಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, "ಇಂತಹ ಕಠಿಣ ಸಮಯದಲ್ಲಿ ಕೊರೋನಾ ಭಯದ ನಡುವೆ ನಾಳೆ ಆಂಗ್ಲರ ವಿರುದ್ಧ ಅಂತಿಮ ಟೆಸ್ಟ್ ಪಂದ್ಯ ನಡೆಯುತ್ತದೆಯೇ? ಎಂಬುದು ಅನುಮಾನವಾಗಿಯೇ ಇದೆ. ಆದರೆ, ನಾವು ಆಶಾದಾಯಕತೆಯಿಂದ ಪಂದ್ಯವನ್ನು ನಿರೀಕ್ಷಿಸುತ್ತಿದ್ದೇವೆ" ಎಂದು ತಿಳಿಸಿದ್ದಾರೆ.
ಭಾರತದ ಮುಖ್ಯ ಕೋಚ್ ರವಿಶಾಸ್ತ್ರಿ ಹಾಗೂ ಸಹಾಯಕ ಸಿಬ್ಬಂದಿಗಳಾದ ಭರತ್ ಅರುಣ್, ಮತ್ತು ಆರ್ ಶ್ರೀಧರ್ ಅವರಿಗೆ ಈ ಹಿಂದೆ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆಯಲ್ಲಿ ಮೂವರಿಗೂ ಪಾಸಿಟಿವ್ ಬಂದಿದ್ದ ಕಾರಣ ಈ ಮೂವರೂ ಭಾರತ ತಂಡದೊಂದಿಗೆ ಮ್ಯಾಂಚೆಸ್ಟರ್ಗೆ ಪ್ರಯಾಣಿಸದೆ ಲಂಡನ್ನಲ್ಲೇ ಉಳಿದುಕೊಂಡಿದ್ದರು.
ಈ ನಡುವೆ ಇಂದು ಪರೀಕ್ಷೆಗೆ ಒಳಗಾದ ಫಿಸಿಯೋ ಯೋಗೀಶ್ ಪರ್ಮಾರ್ ಕೊರೋನಾ ವರದಿ ಸಹ ಪಾಸಿಟಿವ್ ಆಗಿದೆ. ಈಗಾಗಲೇ ಮುಖ್ಯ ಫಿಸಿಯೊ ನಿತಿನ್ ಪಟೇಲ್ ಸಹ ಐಸೊಲೇಶನ್ನಲ್ಲಿರುವ ಕಾರಣ ಭಾರತ ತಂಡಕ್ಕೆ ಮುಂದಿನ ಪಂದ್ಯದಲ್ಲಿ ಫಿಸಿಯೋ ಇಲ್ಲದಂತಾಗಿದೆ.
ಈ ಎಲ್ಲಾ ಗೊಂದಲಗಳ ನಡುವೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು (BCCI) ಟೆಸ್ಟ್ ಅನ್ನು ಮುಂದುವರಿಸಲು ಉತ್ಸುಕರಾಗಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ. ಇಂಗ್ಲೆಂಡ್ ಟೆಸ್ಟ್ ಸರಣಿಯ ನಂತರ ಭಾರತೀಯ ಆಟಗಾರರು ಐಪಿಎಲ್ಗಾಗಿ ಯುಎಇಗೆ ತೆರಳಲಿದ್ದಾರೆ. ಹೀಗಾಗಿ ಐಪಿಎಲ್ ಪಂದ್ಯಾವಳಿಯ ಮೇಲೆ ಇದು ಯಾವುದೇ ಪರಿಣಾಮ ಬೀರದಂತೆ ನೋಡಿಕೊಳ್ಳಲು ಬಿಸಿಸಿಐ ಬಯಸುತ್ತದೆ ಎನ್ನಲಾಗುತ್ತಿದೆ.
ನಾಲ್ಕನೇ ಟೆಸ್ಟ್ ನ ಅಂತಿಮ ದಿನದಂದು ಭಾರತವು ಡ್ರೆಸ್ಸಿಂಗ್ ರೂಂನಲ್ಲಿ ವಿಕ್ರಮ್ ರಾಥೋರ್ (ಬ್ಯಾಟಿಂಗ್ ಕೋಚ್) ಮಾತ್ರ ಹೊಂದಿದ್ದು, ಇತರ ಕೋಚ್ ಗಳು ಪ್ರತ್ಯೇಕವಾಗಿದ್ದರು. ಇಲ್ಲಿಯವರೆಗೆ ಯಾವುದೇ ಆಟಗಾರರ ಮೇಲೆ ಕೊರೋನಾ ಪರಿಣಾಮ ಬೀರಿಲ್ಲ, ಆದರೆ ಮತ್ತಷ್ಟು ಹರಡುವಿಕೆಯನ್ನು ತಳ್ಳಿಹಾಕಲಾಗುವುದಿಲ್ಲ. ಐದನೇ ಮತ್ತು ಅಂತಿಮ ಟೆಸ್ಟ್ ಶುಕ್ರವಾರ (ಸೆಪ್ಟೆಂಬರ್ 10) ಆರಂಭವಾಗಲಿದೆ. ಸರಣಿಯಲ್ಲಿ ಭಾರತ 2-1 ಮುನ್ನಡೆ ಸಾಧಿಸಿದೆ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ