Coronavirus India: ದೇಶದಲ್ಲಿ ಒಂದೇ ದಿನ 8 ಸಾವಿರಕ್ಕೂ‌ ಹೆಚ್ಚು ಕೊರೋನಾ ಪ್ರಕರಣಗಳು ಪತ್ತೆ, ಏಳನೇ ಸ್ಥಾನಕ್ಕೆ ಜಿಗಿದ ಭಾರತ

Coronavirus India Updates: ನಿನ್ನೆ ಒಂದೇ ದಿನ ಕೊರೊನಾದಿಂದ 230 ಜನ ಮೃತಪಟ್ಟಿದ್ದಾರೆ. ಇದರಿಂದ ದೇಶದಲ್ಲಿ ಕೊರೊನಾದಿಂದ ಸತ್ತವರ ಸಂಖ್ಯೆ 5,394ಕ್ಕೆ ಏರಿಕೆಯಾಗಿದೆ. ಕೊರೋನಾದಿಂದ ಈವರೆಗೆ 91,819 ಜನ ಮಾತ್ರ  ಗುಣಮುಖ ಆಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿಗಳು ತಿಳಿಸಿವೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ನವದೆಹಲಿ (ಜೂ. 1): ಕೊರೋನಾ ಸೋಂಕು ಹರಡುವಿಕೆ ಕಡಿಮೆ ಇದ್ದಾಗ ಲಾಕ್​ಡೌನ್ ಮಾಡಿ, ಸೋಂಕು ಹರಡುವಿಕೆ ತೀವ್ರವಾಗಿರುವಾಗ ಹೆಸರಿಗೆ ಮಾತ್ರ ಲಾಕ್​ಡೌನ್ ಜಾರಿಗೊಳಿಸಿದ ಪರಿಣಾಮ ಭಾರತದಲ್ಲಿ  ಸೋಂಕು ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ದುಪ್ಪಟ್ಟಾಗುತ್ತಿದೆ. ಇದಲ್ಲದೆ ನಿನ್ನೆ ಒಂದೇ ದಿನ‌ 8 ಸಾವಿರಕ್ಕೂ‌ ಹೆಚ್ಚು ಕೊರೋನಾ ಪ್ರಕರಣಗಳು ಕಂಡುಬಂದಿದ್ದರಿಂದ ಭಾರತ, ಜಾಗತಿಕವಾಗಿ ಕೊರೊನಾ ಸೋಂಕು ಪೀಡಿತರ ಪಟ್ಟಿಯಲ್ಲಿ ಒಂದೇ ದಿನ 2 ದೇಶಗಳನ್ನು ಹಿಂದಿಕ್ಕಿ 7 ಸ್ಥಾನಕ್ಕೆ ಬಂದಿದೆ.

ಕಳೆದ ವಾರ ಪ್ರತಿನಿತ್ಯ 7 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುವ ಟ್ರೆಂಡ್ ಶುರುವಾಗಿತ್ತು. ಮೊನ್ನೆಯಿಂದ 8 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಭಾನುವಾರ ಒಂದೇ ದಿನ ದೇಶದಲ್ಲಿ 8,392 ಪ್ರಕರಣಗಳು ಕಂಡುಬಂದಿವೆ. ಇದರಿಂದ ಭಾರತದ ಕೊರೋನಾ ವೈರಸ್ ಪೀಡಿತರ ಸಂಖ್ಯೆ 1,90,535ಕ್ಕೆ ಏರಿಕೆಯಾಗಿದೆ. ಪರಿಣಾಮವಾಗಿ 9ನೇ ಸ್ಥಾನದಲ್ಲಿದ್ದ ಭಾರತ ಒಂದೇ ದಿನ ಜಾಗತಿಕವಾಗಿ ಅತಿಹೆಚ್ಚು ಕೊರೊನಾ ಪೀಡಿತರಿರುವ ದೇಶಗಳ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದ್ದ ಜರ್ಮನಿ ಮತ್ತು 7ನೇ ಸ್ಥಾನದಲ್ಲಿದ್ದ ಫ್ರಾನ್ಸ್ ಅನ್ನು ಹಿಂದೂಡಿದೆ. 8ನೇ ಸ್ಥಾನದಲ್ಲಿರುವ ಫ್ರಾನ್ಸ್ ದೇಶದ ಕೊರೋನಾ ಪೀಡಿತರ ಸಂಖ್ಯೆ 188,882 ಮತ್ತು 9ನೇ ಸ್ಥಾನದಲ್ಲಿರುವ ಜರ್ಮನಿಯ ಕೊರೊನಾ ಸೋಂಕು ಪೀಡಿತರ ಸಂಖ್ಯೆ 183,494 ಎಂದು 'ವರ್ಲ್ಡೋಮೀಟರ್' ವೆಬ್ ಸೈಟ್ ಮಾಹಿತಿಗಳು ತಿಳಿಸುತ್ತವೆ.

ಇದಲ್ಲದೆ ‌ನಿನ್ನೆ ಒಂದೇ ದಿನ ಕೊರೊನಾದಿಂದ 230 ಜನ ಮೃತಪಟ್ಟಿದ್ದಾರೆ. ಇದರಿಂದ ದೇಶದಲ್ಲಿ ಕೊರೊನಾದಿಂದ ಸತ್ತವರ ಸಂಖ್ಯೆ 5,394ಕ್ಕೆ ಏರಿಕೆಯಾಗಿದೆ. ಕೊರೋನಾದಿಂದ ಈವರೆಗೆ 91,819 ಜನ ಮಾತ್ರ  ಗುಣಮುಖ ಆಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿಗಳು ತಿಳಿಸಿವೆ.

ಇದನ್ನೂ ಓದಿ: ಇಂದು 200 ವಿಶೇಷ ರೈಲುಗಳಲ್ಲಿ ಪ್ರಯಾಣಿಸಲಿದ್ದಾರೆ 1.45 ಲಕ್ಷ ಪ್ರಯಾಣಿಕರು; ರಾಜ್ಯದಿಂದಲೂ 5 ರೈಲುಗಳು ಸಂಚಾರ

ಕೇಂದ್ರ ಆರೋಗ್ಯ ಇಲಾಖೆ ಮಾಹಿತಿಗಳ ಪ್ರಕಾರ ಮೇ 10ರಿಂದ  ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಪ್ರತಿನಿತ್ಯ ನಾಲ್ಕು ಸಾವಿರಕ್ಕಿಂತ ಹೆಚ್ಚಾಗುತ್ತಲೇ ಇದೆ.‌ ಮೇ 10ರಂದು 4,213 ಜನರಿಗೆ, ಮೇ 11ರಂದು 3,064 ಮಂದಿಗೆ, ಮೇ 12 ರಂದು 3,525 ಜನರಿಗೆ, ಮೇ13ರಂದು 3,722 ಮಂದಿಗೆ ಹಾಗೂ ಮೇ 14ರಂದು 3,967 ಜನರಿಗೆ, ಮೇ 15ರಂದು 3,970 ಮಂದಿಗೆ, ಮೇ 16ರಂದು 4,987 ಜನರಿಗೆ, ಮೇ 17ರಂದು 5,242, ಮೇ 18ರಂದು 4,970, ಮೇ 19ರಂದು 5,611, ಮೇ 20ರಂದು 5,609, ಮೇ 21ರಂದು 6,088, ಮೇ 22ರಂದು 6,654, ಮೇ 23ರಂದು 6,767, ಮೇ 24ರಂದು 6,977, ಮೇ 25ರಂದು 6,535, ಮೇ 26ರಂದು 6,387, ಮೇ 27ರಂದು 6,566, ಮೇ 28ರಂದು 7,466, ಮೇ 29ರಂದು 7,964, ಮೇ 30ರಂದು 8,380 ಹಾಗೂ ಮೇ 31ರಂದು 8,392 ಹೊಸ ಪ್ರಕರಣಗಳು ಪತ್ತೆಯಾಗಿವೆ.

ಈಗಾಗಲೇ 1,90,535 ಪೀಡಿತರಿರುವುದರಿಂದ ಮತ್ತು ವ್ಯಾಪಕವಾಗಿ ಹರಡುತ್ತಿರುವುದರಿಂದ ಒಂದೆರಡು ದಿನದಲ್ಲಿ ಭಾರತದಲ್ಲಿ ಕೊರೊನಾ ಸೋಂಕು ಪೀಡಿತರ ಸಂಖ್ಯೆ 2 ಲಕ್ಷವನ್ನೂ‌ ದಾಟಿ ಮುಂದೆಹೋಗಲಿದೆ. ಅಲ್ಲದೆ 6ನೇ ಸ್ಥಾನದಲ್ಲಿರುವ ಇಟಲಿಯನ್ನೂ ಹಿಂದಿಕ್ಕಲಿದೆ.
First published: