ಲಂಡನ್: ಹೊಸದಾಗಿ ಪತ್ತೆಯಾಗಿರುವ ರೂಪಾಂತರಿ ಕೊರೋನಾ ವೈರಸ್ ಇಂಗ್ಲೆಂಡ್ ದೇಶವನ್ನು ಬಿಟ್ಟೂ ಬಿಡದೆ ಕಾಡುತ್ತಿದೆ. covid-19 ಗಿಂತಲೂ ಈ ವೈರಸ್ ಸಾಕಷ್ಟು ವೇಗವಾಗಿ ಹರಡುತ್ತಿರುವುದು ಇಂಗ್ಲೆಂಡ್ಗೆ ತಲೆನೋವಾಗಿ ಪರಿಣಮಿಸಿದೆ. ಇದೇ ಕಾರಣಕ್ಕೆ ಬ್ರಿಟೀಷ್ ದೇಶದಲ್ಲಿ ಮುಂದಿನ 6 ವಾರಗಳ ಕಾಲ ಮತ್ತೊಂದು ಸುತ್ತಿನ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಆದರೆ, ಮುಂದಿನ ಜನವರಿ 26 ರಂದು ಭಾರತದ ಗಣರಾಜ್ಯೋತ್ಸವಕ್ಕೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರನ್ನು ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಲಾಗಿತ್ತು. ಬೋರಿಸ್ ಸಹ ಭಾರತದ ಗಣರಾಜ್ಯೋತ್ಸವ ಸಂಭ್ರಮದಲ್ಲಿ ಪಾಲ್ಗೊಳ್ಳುವ ಇಂಗಿತವನ್ನು ವ್ಯಕ್ತಪಡಿಸಿದ್ದರು. ಆದರೆ, ಇದೀಗ ಇಂಗ್ಲೆಂಡ್ನಲ್ಲಿ ಕೊರೋನಾ ಸ್ಥಿತಿ ಕೈಮೀರಿದ್ದು, ಬೋರಿಸ್ ಜಾನ್ಸನ್ ಏಕಾಏಕಿ ಭಾರತದ ಭೇಟಿಯನ್ನು ರದ್ದು ಮಾಡಿದ್ದಾರೆ. ಈ ಮೂಲಕ ಭಾರತ ಕಳೆದ 50 ವರ್ಷದಲ್ಲಿ ಮೊದಲ ಭಾರಿಗೆ ವಿಶೇಷ ಅತಿಥಿ ಇಲ್ಲದೆ ಗಣರಾಜ್ಯೋತ್ಸವ ಆಚರಿಸುವಂತಾಗಿದೆ.
ಇನ್ನೂ ಜಾನ್ಸನ್ ಬೋರಿಸ್ ಅವರ ಭಾರತದ ಭೇಟಿ ರದ್ದುಗೊಂಡಿರುವ ಕುರಿತು ನಿನ್ನೆ ಸಂಜೆಯೇ ಟ್ವೀಟ್ ಮಾಡುವ ಮೂಲಕ ಸ್ಪಷ್ಟಪಡಿಸಿದ್ದ ಎಎನ್ಐ, "ಕಳೆದ ರಾತ್ರಿ ಘೋಷಿಸಿದ ರಾಷ್ಟ್ರೀಯ ಲಾಕ್‌ಡೌನ್ ಮತ್ತು ಕೊರೋನಾ ವೈರಸ್‌ನ ಹೊಸ ರೂಪಾಂತರ ಪ್ರಭೇದವು ವೇಗವಾಗಿ ಹರಡುತ್ತಿರುವುದರಿಂದ ಇಂಗ್ಲೆಂಡ್ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಬ್ರಿಟನ್‌ನಲ್ಲಿ ಉಳಿಯಬೇಕಾಗಿದೆ ಎಂದು ಬ್ರಿಟನ್ ಸರ್ಕಾರ ಹೇಳಿದೆ" ಎಂದು ವರದಿ ಮಾಡಿತ್ತು.
In light of the national lockdown announced last night, and the speed at which the new coronavirus variant is spreading, the Prime Minister said that it was important for him to remain in the UK so he can focus on the domestic response to the virus: UK Government https://t.co/2cOdJjXfUZ
— ANI (@ANI) January 5, 2021
ಇದನ್ನೂ ಓದಿ: Union Budget 2021: ಜನವರಿ 29 ರಿಂದ ಸಂಸತ್ ಅಧಿವೇಶನ : ಫೆಬ್ರವರಿ 1ಕ್ಕೆ ಬಜೆಟ್ ಮಂಡನೆ
"ಪ್ರಧಾನಿ ನರೇಂದ್ರ ಮೋದಿ ಸಹ ಬೋರಿಸ್ ಜಾನ್ಸನ್ ಅವರಿಗೆ ಧೈರ್ಯ ತುಂಬಿದ್ದು, ಯುಕೆಯಲ್ಲಿನ ಅಸಾಧಾರಣ ಪರಿಸ್ಥಿತಿಯ ಬಗ್ಗೆ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಕೊರೋನಾ ಸಾಂಕ್ರಾಮಿಕ ರೋಗ ಹರಡುವಿಕೆಯನ್ನು ತ್ವರಿತವಾಗಿ ನಿಯಂತ್ರಿಸಲು ಶುಭ ಕೋರಿದ್ದಾರೆ" ಎಂದು ತಿಳಿದುಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ