HOME » NEWS » Coronavirus-latest-news » INDIA FAILED IN LOCKDOWN THAT IS WHY PM NARENDRA MODI NOT COMING FRONT SAYS RAHUL GANDHI MAK

ಲಾಕ್‌ಡೌನ್ ಮಾಡಿಯೂ ವಿಫಲವಾದ ಏಕೈಕ ದೇಶ ಭಾರತ, ಅದಕ್ಕಾಗಿಯೇ ಮೋದಿ ಹಿಂದೆಸರಿದಿದ್ದಾರೆ: ರಾಹುಲ್ ಗಾಂಧಿ

ಲಾಕ್‌ಡೌನ್ ವಿಫಲವಾಗಿದೆ. ಮುಂದೆ ಸರ್ಕಾರ ಏನು ನಿರ್ಧಾರ ಕೈಗೊಳ್ಳಲಿದೆ? ಎಂದು ಜನರಿಗೆ ತಿಳಿಸುವ ಕರ್ತವ್ಯ ಸರ್ಕಾರದ ಮೇಲಿದೆ. ಬಡವರು ಬದುಕು ಕಟ್ಟಿಕೊಳ್ಳಲು ಏನು ಮಾಡಲಿದೆ? ಎಂದು ತಿಳಿಸಬೇಕು ಎಂದು ಸಂಸದ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.

news18-kannada
Updated:May 26, 2020, 2:47 PM IST
ಲಾಕ್‌ಡೌನ್ ಮಾಡಿಯೂ ವಿಫಲವಾದ ಏಕೈಕ ದೇಶ ಭಾರತ, ಅದಕ್ಕಾಗಿಯೇ ಮೋದಿ ಹಿಂದೆಸರಿದಿದ್ದಾರೆ: ರಾಹುಲ್ ಗಾಂಧಿ
ರಾಹುಲ್ ಗಾಂಧಿ
  • Share this:
ನವದೆಹಲಿ (ಮೇ 26): ನಾಲ್ಕು ಬಾರಿ ಲಾಕ್‌ಡೌನ್ ಜಾರಿಗೊಳಿಸಿಯೂ ಕೊರೊನಾವನ್ನು ನಿಯಂತ್ರಿಸದ ಮತ್ತು ಸೋಂಕು ‌ಹರಡುವಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಏಕೈಕ ದೇಶ ಭಾರತ. ಇದೇ ಕಾರಣಕ್ಕೆ ಆರಂಭದಲ್ಲಿ ಮುನ್ನೆಲೆಯಲ್ಲಿದ್ದ ಪ್ರಧಾನಿ ಲಾಕ್‌ಡೌನ್‌ ವಿಫಲವಾಗುತ್ತಿದ್ದಂತೆ ಹಿನ್ನಲೆ ಸರಿದಿದ್ದಾರೆ ಎಂದು ಸಂಸದ ರಾಹುಲ್ ಗಾಂಧಿ ವಿಷಾದ ವ್ಯಕ್ತಪಡಿಸಿದ್ದಾರೆ.

ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿರುವ ರಾಹುಲ್ ಗಾಂಧಿ, "ಕೇಂದ್ರ ಸರ್ಕಾರ ಜಾರಿಗೊಳಿಸಿದ ಲಾಕ್‌ಡೌನ್‌ನ ಗುರಿ ಮತ್ತು ಉದ್ದೇಶ ವಿಫಲವಾಗಿದೆ‌.‌ ವಿಫಲವಾದ ಲಾಕ್‌ಡೌನ್ ಫಲಿತಾಂಶವನ್ನು ಭಾರತ ಎದುರಿಸುತ್ತಿದೆ. ಕೊರೋನಾ ಆರಂಭವಾದಾಗ  ಪ್ರಧಾನ ಮಂತ್ರಿ ಮೋದಿ ಮುನ್ನೆಲೆಯಲ್ಲಿ ಕಾಣಿಸಿಕೊಳ್ಳುತ್ತಿದ್ದರು.‌ ಈಗ ಅವರು ಮುನ್ನೆಲೆಯಲ್ಲಿ ಕಂಡುಬರುತ್ತಿಲ್ಲ.‌

ಮುನ್ನೆಚ್ಚರಿಕೆ, ತಯಾರಿಗಳಿಲ್ಲದೆ ಅವರು‌ ಜಾರಿಗೊಳಿಸಿದ ಲಾಕ್‌ಡೌನ್‌ ವಿಫಲವಾಗುತ್ತಿದ್ದಂತೆ ಮೋದಿ ಹಿಂದೆ ಸರಿದಿದ್ದಾರೆ. ವಿಪಕ್ಷವಾಗಿ ನಾವು ಅವರಿಗೆ ಮನವಿ‌ ಮಾಡುತ್ತೇವೆ. ಮತ್ತೆ ದೇಶದ ಮುನ್ನಲೆಗೆ ಬಂದು ಅವರು ಮಾತನಾಡಲಿ, ಲಾಕ್‌ಡೌನ್ ಬಳಿಕ ಸರ್ಕಾರದ ಮುಂದಿನ ನಡೆ ಏನು? ಎಂಬುದನ್ನು ಸ್ಪಷ್ಟಪಡಿಸಲಿ" ಎಂದು ಆಗ್ರಹಿಸಿದ್ದಾರೆ.

"ಲಾಕ್‌ಡೌನ್ ವಿಫಲವಾಗಿದೆ. ಮುಂದೆ ಸರ್ಕಾರ ಏನು ನಿರ್ಧಾರ ಕೈಗೊಳ್ಳಲಿದೆ? ಎಂದು ಜನರಿಗೆ ತಿಳಿಸುವ ಕರ್ತವ್ಯ ಸರ್ಕಾರದ ಮೇಲಿದೆ. ಬಡವರು ಬದುಕು ಕಟ್ಟಿಕೊಳ್ಳಲು ಏನು ಮಾಡಲಿದೆ? ಎಂದು ತಿಳಿಸಬೇಕು. ಅಲ್ಲದೆ ಕೊರೋನಾ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರಕ್ಕೆ ಮಾರ್ಕ್ಸ್ ನೀಡಲು ನಾನು ಪ್ರೊಫೆಸರ್ ಅಲ್ಲ. ರಾಜ್ಯಗಳಿಗೆ ಕೇಂದ್ರ ಸರ್ಕಾರ ನೆರವು ಸಿಗುತ್ತಿಲ್ಲ. ರಾಜ್ಯಗಳಿಗೆ ಆರ್ಥಿಕ ಪ್ಯಾಕೇಜ್ ಅವಶ್ಯಕತೆ ಇದೆ" ಎಂದು ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.

20 ಲಕ್ಷ ಕೋಟಿ ಪ್ಯಾಕೇಜ್‌ನಿಂದ ಏನೂ ಪ್ರಯೋಜನವಿಲ್ಲ:

ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಘೋಷಿಸಿರುವ 20 ಲಕ್ಷ ಕೋಟಿ ಪ್ಯಾಕೇಜ್‌ ಕುರಿತು ಮಾತನಾಡಿರುವ ರಾಹುಲ್ ಗಾಂಧಿ, "20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ನಿಂದ ಏನು ಲಾಭ ಇಲ್ಲ. ಕೆಲಸ ಮತ್ತು ಕಾಸಿಲ್ಲದೆ ಪರಿತಪಿಸುತ್ತಿರುವ ಬಡವರ ಖಾತೆಗಳಿಗೆ ನೇರವಾಗಿ ಹಣ ವರ್ಗಾವಣೆ ಮಾಡದೆ ಆರ್ಥಿಕತೆಯನ್ನು ಸುಧಾರಿಸಲು ಬೇರೆ ಪರಿಹಾರ ಇಲ್ಲ.

ದೇಶದ ಶೇ50 ರಷ್ಟು ಬಡ ಜನರಿಗೆ 7,500 ಹಣ ವರ್ಗಾವಣೆ ಮಾಡಿ. ಅದೇ ರೀತಿ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಬಲಿಷ್ಠಗೊಳಿಸಬೇಕು. ಇಲ್ಲದೆ ಇದ್ದರೆ ದೇಶ ದೊಡ್ಡ ಆರ್ಥಿಕ ಮುಗ್ಗಟ್ಟನ್ನು  ಎದುರಿಸಬೇಕಾಗುತ್ತದೆ" ಎಂದು ಎಚ್ಚರಿಕೆ ನೀಡಿದ್ದಾರೆ.ಇದಲ್ಲದೆ, "ಭಾರತ ಸರ್ಕಾರ ನಮ್ಮ ದೇಶದ ಜನರನ್ನು ರಕ್ಷಿಸಬೇಕು. ಚೀನಾ ಗಡಿಯಲ್ಲಿ ಏನು ನಡೆಯುತ್ತಿದೆ? ಎನ್ನುವುದು ಸ್ಪಷ್ಟಪಡಿಸಬೇಕು. ಎರಡು ರೀತಿಯ ಅಭಿಪ್ರಾಯಗಳು ಕೇಳಿ ಬರುತ್ತಿದೆ. ಕೇಂದ್ರ ಸರ್ಕಾರ ನಡೆಸುತ್ತಿರುವವರು ವಾಸ್ತವವನ್ನು ದೇಶದ ಮುಂದಿಡಬೇಕು. ಆಗ ಮಾತ್ರ ಜನ ಗಡಿಯಲ್ಲಿ ಏನು ನಡೆಯುತ್ತಿದೆ ಎಂದು ಅರ್ಥೈಸಿಕೊಳ್ಳಲಿದ್ದಾರೆ" ಎಂದು ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ : ಶತ್ರುದೇಶಗಳ ಗಡಿ ಕಾಯುವ ಅರೆಸೇನಾ ಪಡೆಗಳಲ್ಲಿ ಕಾಡುತ್ತಿದೆ ಟಾಪ್ ಆಫೀಸರ್​ಗಳ ಕೊರತೆ
First published: May 26, 2020, 2:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories