ಬೆಂಗಳೂರು; ರಾಜಧಾನಿ ಬೆಂಗಳೂರಿನಲ್ಲಿ ಎರಡನೇ ದಿನ ಲಾಕ್ ಡೌನ್ ಮುಂದುವರೆದಿದ್ದರೂ ವಾಹನ ಸಂಚಾರ ಮಾತ್ರ ಕಡಿಮೆಯಾಗಿಲ್ಲ. ಎಂದಿನಂತೆ ವಾಹನಗಳು ಓಡಾಡುತ್ತಿವೆ.
ಪ್ರಮುಖ ಜಂಕ್ಷನ್ಗಳಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ ತಪಾಸಣೆ ಮಾಡುತ್ತಿದ್ದಾರೆ. ಈ ನಡುವೆ ಮಡಿವಾಳ ಮತ್ತು ಎಲೆಕ್ಟ್ರಾನಿಕ್ ಸಿಟಿ ಮಾರ್ಗದಲ್ಲಿ ಅತಿ ಹೆಚ್ಚು ಸಂಚಾರ ದಟ್ಟಣೆಯಾಗಿ, ವಾಹನಗಳು ಸಾಲುಗಟ್ಟಿ ಕಿಲೋ ಮೀಟರ್ಗಟ್ಟಲೇ ನಿಂತಿವೆ. ಮಡಿವಾಳ ಪೊಲೀಸರು ಪ್ರತಿಯೊಬ್ಬರ ಐಡಿ ಕಾರ್ಡ್ ಚೆಕ್ ಮಾಡಿ, ಎಲ್ಲರನ್ನೂ ಕಳುಹಿಸುತ್ತಿದ್ದಾರೆ. ಜೊತೆಗೆ ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಜೋಶಿ, ಖುದ್ದು ವಾಹನ ಸವಾರರ ತಪಾಸಣೆ ಮಾಡಿ, ಅನವಶ್ಯಕವಾಗಿ ಓಡಾಡುವರಿಗೆ ಬಿಸಿ ಮುಟ್ಟಿಸಿದರು.
ಮಾಸ್ಕ್ ಹಾಕದೆ ವಾಹನ ಸವಾರರು ಓಡಾಡಿದರೆ ಅಂತಹವರಿಗೆ 200 ರೂ. ದಂಡವನ್ನು ಮಾರ್ಷಲ್ಗಳು ವಸೂಲಿ ಮಾಡಿದರು. ಇದೇ ರೀತಿ ನಗರದಾದ್ಯಂತ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಒಂದೊಂದು ಕಡೆ ಪೊಲೀಸ್ ಸಿಬ್ಬಂದಿ ಮಾನವೀಯತೆಯಿಂದ ಕಳಿಸಿ, ಬುದ್ದಿವಾದ ಹೇಳಿದ್ದಾರೆ.
ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಎಲ್ಲಾ ವಿಭಾಗದ ಡಿಸಿಪಿಗಳಿಗೆ ಖಡಕ್ ಸೂಚನೆ ಕೊಟ್ಟಿದ್ದಾರೆ. ಎಲ್ಲರೂ ಬೆಳಗ್ಗೆ ನಿಮ್ಮ ವ್ಯಾಪ್ತಿಗಳಲ್ಲಿ ರೌಂಡ್ಸ್ ಮಾಡಿ, ಕಠಿಣ ಲಾಕ್ಡೌನ್ಗೆ ಒತ್ತು ಕೊಡಿ. ಅನವಶ್ಯಕವಾಗಿ ಯಾರೇ ಓಡಾಡಿದರೂ ಶಿಸ್ತು ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಅದೇ ರೀತಿ ಕೊರೋನಾ ಭೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಆತ್ಮಸ್ತೈರ್ಯ ತುಂಬಿ ಎಂದು ಸೂಚನೆ ನೀಡಿದ್ದಾರೆ ಅದರಂತೆ ಹಿರಿಯ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ.
ಇದನ್ನು ಓದಿ: ಲಾಕ್ ಡೌನ್ ನಿಂದ ಹೆಚ್ಚಿದ ಕೆಲಸದ ಒತ್ತಡ ; ಪೊಲೀಸರಿಗೆ ಹೆಗಲು ಕೊಡಲು ಮುಂದಾದ ಸಾವಿರಾರು ಸ್ವಯಂ ಸೇವಕರು
ಕೆಲ ಜನರು ಬೇಜವಾಬ್ದಾರಿಯಿಂದ ಅನವಶ್ಯಕವಾಗಿ ಓಡಾಡುತ್ತಿದ್ದು, ಅಂತಹವರಿಗೆ ಬಿಸಿ ಮುಟ್ಟಿಸಲು ಖಾಕಿ ಪಡೆ ಸಜ್ಜಾಗಿದೆ. ಮತ್ತೊಂದೆಡೆ ಕರ್ತವ್ಯಕ್ಕೆ ಹಾಜರಾಗುವ ಎಲ್ಲಾ ಸಿಬ್ಬಂದಿ ಮಾಸ್ಕ್ ಹಾಗೂ ಶೀಲ್ಡ್ ಕಡ್ಡಾಯವಾಗಿ ಹಾಕಿಕೊಳ್ಳಬೇಕು. ಸ್ಯಾನಿಟೈಸರ್ ಮತ್ತು ಸಾಮಾಜಿಕ ಅಂತರ ಪಾಲಿಸಲು ಸಿಬ್ಬಂದಿಗೂ ಸೂಚನೆ ನೀಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ