ಬೆಂಗಳೂರು(ಮಾ. 18): ದೇಶದಲ್ಲೆಡೆ ಕೊರೋನಾ ವೈರಸ್ ಮಾರಕವಾಗಿ ಹರಡುತ್ತಿದ್ದು ಇಷ್ಟು ದಿನ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನಲ್ಲೆಡೆ ಕೋವಿಡ್ ಹರಡಿಲ್ಲವೆಂದು ಸಾರ್ವಜನಿಕರು ಸಮಾಧಾನದಿಂದ ಇದ್ದರು. ಆದರೆ, ಇದೀಗ ಕೊರೋನಾ ಮಹಾಮಾರಿ ಆತಂಕ ನೆಲಮಂಗಲ ತಾಲ್ಲೂಕಿನ ಡಾಬಸ್ಪೇಟೆಯಲ್ಲಿ ಸೃಷ್ಟಿಯಾಗಿದೆ. ಬೆಂಗಳೂರು ನಗರದ ಶಿವಾಜಿ ನಗರದಲ್ಲಿ ಕಳೆದ ಒಂದು ವಾರದಿಂದ ರೋಗಿ ಸಂಖ್ಯೆ 653 ರಿಂದ 50ಕ್ಕೂ ಹೆಚ್ಚು ಜನರಿಗೆ ಕೊರೊನಾ ಮಹಾಮಾರಿ ಹರಡಿದ್ದು, ಡಾಬಸ್ಪೇಟೆಯ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬನಿಗೆ ರೋಗಿ ನಂ. 653 ಸಂಪರ್ಕದಿಂದ ಕೊರೋನಾ ಕಾಣಿಸಿಕೊಂಡಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಕೊರೋನಾ ಸೋಂಕಿತ ವ್ಯಕ್ತಿಯು ಸೋಂಪುರ ಹೋಬಳಿಯ ಬಿಲ್ಲಿನಕೋಟೆ - ಗುಂಡೇನಹಳ್ಳಿ ಬಳಿಯಿರುವ ಅಲಂಕಾರ್ ಎಂಬ ಡಾಬವೊಂದರಲ್ಲಿ ಸಪ್ಲೈಯರ್ ಕೆಲಸ ಮಾಡುತ್ತಿದ್ದು, ಇಲ್ಲಿಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಡಾಬಸ್ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೋಂಕಿತನ ಪ್ರಾಥಮಿಕ ಸಂಪರ್ಕಿತರ ಮಾಹಿತಿ ಕಲೆಹಾಕಲು ತೀವ್ರ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಸೋಂಕಿತ ಯುವಕ ಕಳೆದ 15 ದಿನಗಳ ಹಿಂದೆಯಷ್ಟೇ ಕೆಲಸ ಬಿಟ್ಟಿದ್ದ ಎಂದು ಡಾಬಾದ ಮಾಲೀಕರು ತಿಳಿಸಿದರು.
ಸೋಂಕಿನ ಸಂಪರ್ಕದಲ್ಲಿದ್ದ 12 ಜನರ ಪೈಕಿ ಒಬ್ಬ ಶಿವಾಜಿನಗರದಲ್ಲಿದ್ದು ಇನ್ನುಳಿದಂತೆ ಡಾಬಾ ಮಾಲೀಕರು ಹಾಗೂ ಅಲ್ಲಿ ಕೆಲಸ ಮಾಡುವವರನ್ನು ಸೇರಿದಂತೆ 9 ಜನರನ್ನ ಸ್ಥಳದಲ್ಲೇ ಥರ್ಮಲ್ ಸ್ಕ್ರೀನಿಂಗ್ ನಡೆಸಿದ್ದಾರೆ. ನಂತರ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ಸ್ವಾಬ್ ಟೆಸ್ಟ್ಗಾಗಿ ರವಾನಿಸಲಾಗಿದ್ದು, ಪರೀಕ್ಷಾ ವರದಿ ಬರುವವರೆಗು ಸಂಪರ್ಕಿತರನ್ನು ಐಸೋಲೇಷನ್ನಲ್ಲಿ ಇರಿಸಲಾಗುವುದು, ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದವರಲ್ಲಿ ಇಬ್ಬರು ನೆನ್ನೆಯಷ್ಟೆ ಬಿಹಾರಕ್ಕೆ ತೆರಳಿದ್ದಾರೆ ಎಂದು ತಿಳಿದುಬಂದಿವೆ.
ಅಲಂಕಾರ್ ಡಾಬ ರಾಷ್ಟ್ರೀಯ ಹೆದ್ದಾರಿ 4ರ ಪಕ್ಕದಲ್ಲೇ ಇದ್ದು, ಬೆಂಗಳೂರು -ಪುಣೆ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಹಾದು ಹೋಗುತ್ತದೆ. ಈ ರಸ್ತೆಯಲ್ಲಿ ಪ್ರತಿದಿನ ನೂರಾರು ಲಾರಿಗಳು ಊಟಕ್ಕಾಗಿ ಡಾಬ ಬಳಿ ನಿಲ್ಲಿಸುತ್ತವೆ. ಇದೀಗ ಲಾರಿ ಮಾಲೀಕರಿಗೂ ಅತಂಕ ಎದುರಾಗಿದೆ. ವರದಿ ನೆಗೆಟಿವ್ ಬಂದರೂ ಸಹ ಹೋಮ್ ಕ್ವಾರಂಟೈನ್ನಲ್ಲಿ ಇರಿಸಲಾಗುವುದು ಹಾಗೂ ಡಾಬವನ್ನು ಮುಂದಿನ ಆದೇಶದವರೆಗೂ ಸೀಲ್ ಮಾಡಲಾಗುವುದು ಎಂದು ತಾಲೂಕು ವೈಧ್ಯಾಧಿಕಾರಿ ಡಾ. ಹರೀಶ್ ತಿಳಿಸಿದರು.
(ವರದಿ: ಅಭಿಷೇಕ್ ಚಿಕ್ಕಮಾರನಹಳ್ಳಿ,
ನೆಲಮಂಗಲ)
Moto G8 Power Lite: ಮೇ 21ರಂದು ಬಿಡುಗಡೆಯಾಗುತ್ತಿದೆ ತ್ರಿವಳಿ ಕ್ಯಾಮೆರಾವಿರುವ ಮೊಟೊ G8 ಪವರ್ ಲೈಟ್ ಸ್ಮಾರ್ಟ್ಫೋನ್!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ