ಕ್ವಾರಂಟೈನ್​ನಲ್ಲಿರುವ, ಕೊರೋನಾ ಪಾಸಿಟಿವ್ ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಿಂದ ವಿನಾಯಿತಿ; ಸಚಿವ ಸುರೇಶ್ ಕುಮಾರ್

ಕಲಬುರಿಗಿ ಜಿಲ್ಲೆಯ ಜೇವರ್ಗಿ ಬಳಿ ಸೇತುವೆ ಕುಸಿದಿದ್ದು, ಪರೀಕ್ಷೆಗೆ ಬರಬೇಕಾಗಿದ್ದ ಮಕ್ಕಳಿಗೆ ತೊಂದರೆಯಾಗಿ ಆಚೆಯೇ ನಿಲ್ಲುವಂತಾಗಿತ್ತು. ಈ ಸಂದರ್ಭದಲ್ಲಿ ಸಕಾಲಕ್ಕೆ ಅಗ್ನಿಶಾಮಕ ದಳದವರು ಬಂದು ತಾವೇ ತಮ್ಮ ಅಲ್ಯೂಮಿನಿಯಂನ ದೊಡ್ಡ ಏಣಿ ಮೂಲಕ ತಾತ್ಕಾಲಿಕ ಸೇತುವೆ ನಿರ್ಮಿಸಿ ಮಕ್ಕಳಿಗೆ ಅನುಕೂಲ ಮಾಡಿಕೊಟ್ಟರು.

ಸಚಿವ ಸುರೇಶ್​ ಕುಮಾರ್

ಸಚಿವ ಸುರೇಶ್​ ಕುಮಾರ್

  • Share this:
ಬೆಂಗಳೂರು; ಹೋಂ ಕ್ವಾರಂಟೈನ್​ನಲ್ಲಿರುವ ಹಾಗೂ ಕೋವಿಡ್ ಪಾಸಿಟಿವ್ ಎಂದು ಗುರುತಿಸಲಾದ ವಿದ್ಯಾರ್ಥಿಗಳಿಗೆ ಈಗಿನ ಪರೀಕ್ಷೆಯನ್ನು ಬರೆಯುವುದರಿಂದ ವಿನಾಯ್ತಿ ನೀಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಸಚಿವ ಸುರೇಶ್ ಕುಮಾರ್, ಹೋಂ ಕ್ವಾರಂಟೈನಲ್ಲಿರುವ ಹಾಗೂ ಕೋವಿಡ್ ಪಾಸಿಟಿವ್ ಎಂದು ಗುರುತಿಸಲಾದ ವಿದ್ಯಾರ್ಥಿಗಳಿಗೆ ಸಕಾರಣದ ಆಧಾರದ ಮೇಲೆ ಮುಂದಿನ ಪೂರಕ ಪರೀಕ್ಷೆಯಲ್ಲಿ ಅವಕಾಶ ನೀಡುವ ವ್ಯವಸ್ಥೆ ಮಾಡಲಾಗುವುದು. ಪರೀಕ್ಷಾ ಕೇಂದ್ರಕ್ಕೆ 3212 ಬಸ್ ಹಾಗೂ ಇತರೆ ವಾಹನಗಳನ್ನು ಒಪ್ಪಂದದ ಮೇರೆಗೆ ಪಡೆದು ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ಸಾರಿಗೆ ಸೌಲಭ್ಯ ಒದಗಿಸಲಾಗಿದೆ ಎಂದು ವಿವರಿಸಿದ್ದಾರೆ.

ಆರನೇ ದಿನವಾದ ಗುರುವಾರ ನಡೆದ ಕನ್ನಡ ಸೇರಿದಂತೆ ಪ್ರಥಮ ಭಾಷಾ ಪರೀಕ್ಷೆಗಳಿಗೆ ನೋಂದಾಯಿತ 7,78,618 ವಿದ್ಯಾರ್ಥಿಗಳ ಪೈಕಿ 7,64,006 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಒಟ್ಟಾರೆ ಶೇ. 98.12ರಷ್ಟು ಇಂದು ಹಾಜರಾತಿ ಇದೆ. 14,612 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಈ ವಿಷಯದ ಪರೀಕ್ಷೆಗೆ ಕಳೆದ 2018-19ನೇ ಸಾಲಿಗೆ 7,75,988 ವಿದ್ಯಾರ್ಥಿಗಳ ಪೈಕಿ 7,67,756 ವಿದ್ಯಾರ್ಥಿಗಳು ಹಾಜರಾಗಿದ್ದು, 8232 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಶೇ. 98.93 ಹಾಜರಾತಿ ಇತ್ತು ಎಂದು ತಿಳಿಸಿದ್ದಾರೆ.

ಕಂಟೈನ್ಮೆಂಟ್ ಪ್ರದೇಶಗಳ 3890 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಕೋವಿಡೇತರ ಅನಾರೋಗ್ಯ ಕಾರಣಗಳಿಂದ ವಿಶೇಷ ಕೊಠಡಿಗಳಲ್ಲಿ 670 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾದ 04 ಪ್ರಕರಣಗಳು ನಡೆದಿದ್ದು, ಅವರನ್ನು ಪರೀಕ್ಷೆಯಿಂದ ಡಿಬಾರ್ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಮೊದಲ ಬಾರಿಗೆ 7,44,843 ಶಾಲಾ ವಿದ್ಯಾರ್ಥಿಗಳು ಹಾಗೂ 20,957 ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದಾರೆ. ಸರ್ಕಾರಿ/ಖಾಸಗಿ ವಸತಿ ನಿಲಯಗಳಲ್ಲಿ ಇದ್ದು 1448 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ನೆರೆ ರಾಜ್ಯಗಳಿಂದ 639 ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಿದ್ದು, 45 ವಿದ್ಯಾರ್ಥಿಗಳು ಗೈರು ಹಾಜರಿಯಾಗಿ 594 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. 12644 ವಲಸೆ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದು, 12540 ವಿದ್ಯಾರ್ಥಿಗಳು ಹಾಜರಾಗಿದ್ದರೆ, 104 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

ಕೊಪ್ಪಳ ಜಿಲ್ಲೆಯ ಕಾರಟಗಿಯ ಶರಣಬಸವೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾರ್ಥಿಯೊಬ್ಬನಿಗೆ ಕೋವಿಡ್ ಸೋಂಕು ದೃಢಪಟ್ಟ  ವಿದ್ಯಾರ್ಥಿಯೊಂದಿಗೆ ಆ ಕೊಠಡಿಯಲ್ಲಿ ಪರೀಕ್ಷೆಗೆ ಹಾಜರಾಗಿದ್ದ 17 ವಿದ್ಯಾರ್ಥಿಗಳ ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ಫಲಿತಾಂಶ ಬಂದಿದೆ. ಅವರೆಲ್ಲ ಪ್ರತ್ಯೇಕ ಕೊಠಡಿಯಲ್ಲಿ ಇಂದು ಪರೀಕ್ಷೆಗೆ ಹಾಜರಾಗಿದ್ದಾರೆ.

ಇದನ್ನು ಓದಿ: ಪುಸ್ತಕ ನೀಡುವ ನೆಪದಲ್ಲಿ ಡೊನೇಷನ್ ವಸೂಲಿ ದಂಧೆ; ಕೊಡಗಿನಲ್ಲಿ ಖಾಸಗಿ ಶಾಲೆಗಳ ದರ್ಪಕ್ಕೆ ಬೆಚ್ಚಿದ ಪೋಷಕರು

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯ ನೂತನ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ ನಂದೀಶ್ ಕುಮಾರನ ತಾಯಿ ಕ್ಯಾನ್ಸರ್ ರೋಗದಿಂದಾಗಿ ಜೂನ್ 30ರಂದು ನಿಧನರಾಗಿದ್ದರು. ಆದರೂ ಆ ವಿದ್ಯಾರ್ಥಿ ಮುಂದಿನ ಎಲ್ಲ ಪರೀಕ್ಷೆಗಳಿಗೆ ಹಾಜರಾಗುವ ಮೂಲಕ ಧೈರ್ಯ ತೋರಿದ್ದಾನೆ. ಕಲಬುರಿಗಿ ಜಿಲ್ಲೆಯ ಜೇವರ್ಗಿ ಬಳಿ ಸೇತುವೆ ಕುಸಿದಿದ್ದು, ಪರೀಕ್ಷೆಗೆ ಬರಬೇಕಾಗಿದ್ದ ಮಕ್ಕಳಿಗೆ ತೊಂದರೆಯಾಗಿ ಆಚೆಯೇ ನಿಲ್ಲುವಂತಾಗಿತ್ತು. ಈ ಸಂದರ್ಭದಲ್ಲಿ ಸಕಾಲಕ್ಕೆ ಅಗ್ನಿಶಾಮಕ ದಳದವರು ಬಂದು ತಾವೇ ತಮ್ಮ ಅಲ್ಯೂಮಿನಿಯಂನ ದೊಡ್ಡ ಏಣಿ ಮೂಲಕ ತಾತ್ಕಾಲಿಕ ಸೇತುವೆ ನಿರ್ಮಿಸಿ ಮಕ್ಕಳಿಗೆ ಅನುಕೂಲ ಮಾಡಿಕೊಟ್ಟರು.
First published: