news18 Updated:March 29, 2020, 10:30 PM IST
ಹಿಂದೂ ಮುಸ್ಲಿಮ್ ಐಕ್ಯತೆಯ ಪ್ರಾತಿನಿಧಿಕ ಚಿತ್ರ
- News18
- Last Updated:
March 29, 2020, 10:30 PM IST
ಲಕ್ನೋ(ಮಾ. 29): ಸಂಕಷ್ಟದ ಸಂದರ್ಭದಲ್ಲಿ ಜಾತಿ ಧರ್ಮ ಲಿಂಗ ಯಾವ ಭೇದಭಾವೂ ಮುಖ್ಯವೆನಿಸುವುದಿಲ್ಲ. ಮನುಷ್ಯತ್ವವೇ ಮುಂದೆ ನಿಂತು ನಗೆ ಬೀರುತ್ತದೆ ಎಂಬುದಕ್ಕೆ ಉತ್ತರ ಪ್ರದೇಶದ ಬುಲಂದ್ಶಹರ್ ಜಿಲ್ಲೆಯಲ್ಲಿ ನಡೆದ ಈ ಘಟನೆಯೇ ಸಾಕ್ಷಿಯಾಗಿದೆ. ಕೋಮುಗಲಭೆಗೆ ಕುಖ್ಯಾತವಾಗಿರುವ ಬುಲಂದ್ಶಹರ್ನ ಆನಂದ್ ವಿಹಾರ್ ಎಂಬಲ್ಲಿ ಹಿಂದೂ ವ್ಯಕ್ತಿಯೊಬ್ಬರ ಅಂತ್ಯಕ್ರಿಯೆಯನ್ನು ಮುಸ್ಲಿಮರೇ ಮುಂದೆ ನಿಂತು ಮಾಡಿದ್ಧಾರೆ. ಕ್ಯಾನ್ಸರ್ನಿಂದ ಸತ್ತ ರವಿಶಂಕರ್ ಅವರ ಬಂಧುಬಾಂಧವರು ಕೊರೋನಾಗೆ ಹೆದರಿ ಅಂತ್ಯಕ್ರಿಯೆಗೆ ಬರಲಿಲ್ಲ. ಆದರೂ ಮುಸ್ಲಿಮರು ಅಂತಿಮ ಯಾತ್ರೆಗೆ ಹೆಗಲುಕೊಟ್ಟು ನಡೆದ್ದಾರೆ.
“ನಮ್ಮ ನೆರೆಹೊರೆಯಲ್ಲಿರುವ ಮುಸ್ಲಿಮರು ಅಂತ್ಯಕ್ರಿಯೆಯಲ್ಲಿ ನಮಗೆ ಸಹಾಯ ಮಾಡಿದರು. ಪ್ರತಿಯೊಬ್ಬರೂ ಬೆಂಬಲವಾಗಿ ನಿಂತರು” ಎಂದು ರವಿಶಂಕರ್ ಅವರ ಮಗ ಪ್ರಮೋದ್ ಹೇಳುತ್ತಾರೆ.
ಪ್ರಮೋದ್ ಅವರಿಗೆ ಇಬ್ಬರು ಸೋದರಿಯರು ಮತ್ತು ಒಬ್ಬ ಸೋದರ ಇದ್ದಾರೆ. 21 ದಿನ ಲಾಕ್ ಡೌನ್ ಇದ್ದುದ್ದರಿಂದ ದೂರದ ಪ್ರದೇಶಗಳಿಂದ ಬಂಧುಗಳ್ಯಾರೂ ಅಂತ್ಯಕ್ರಿಯೆಗೆ ಬರಲಿಲ್ಲ. ಅಂತಿಮ ದರ್ಶನಕ್ಕೂ ಬರಲಿಲ್ಲ ಎನ್ನಲಾಗಿದೆ. ನಾಲ್ಕೈದು ಮಂದಿ ಮಾತ್ರ ಅಂತ್ಯ ಕ್ರಿಯೆಗೆ ಸಜ್ಜಾಗಿದ್ದರು. ಈ ಸಂದರ್ಭದಲ್ಲಿ ನೆರೆಹೊರೆಯ ಮುಸ್ಲಿಮರು ಆಗಮಿಸಿ ರವಿಶಂಕರ್ ಕುಟುಂಬಕ್ಕೆ ಬೆಂಬಲವಾಗಿ ನಿಂತಿದ್ಧಾರೆ. ಅಂತಿಮ ಯಾತ್ರೆಯಲ್ಲಿ ರಾಮ್ ನಾಮ್ ಸತ್ಯ್ ಹೈ ಎಂಬ ಮಂತ್ರ ಕೂಡ ಜಪಿಸಿ ಈ ಪ್ರದೇಶದ ಮುಸ್ಲಿಮರು ಸೌಹಾರ್ದತೆಗೆ ಮಾದರಿಯಾಗಿದ್ದಾರೆ.
ಇದನ್ನೂ ಓದಿ: 21 ದಿನದಲ್ಲಿ 21 ಸಂಗತಿ: ಮಕ್ಕಳ ಪಾಲನೆ ಮತ್ತು ಪೋಷಕರ ಜವಾಬ್ದಾರಿ - ಅಣ್ಣಾಮಲೈ ಲೇಖನಮಾಲೆ
“ರವಿ ಶಂಕರ್ ನಮ್ಮ ನೆರೆಹೊರೆಯವರು. ಎರಡು ದಿನದ ಹಿಂದೆ ತೀರಿಕೊಂಡರು. ಈ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ಸಹಾಯ ಮಾಡಲು ನಿರ್ಧರಿಸಿದೆವು. ನಮ್ಮ ಪ್ರದೇಶದ ಎಲ್ಲಾ ಮುಸ್ಲಿಮರು ಒಟ್ಟು ಸೇರಿ ಅವರ ಮೃತದೇಹವನ್ನ ಚಿತಾಗಾರಕ್ಕೆ ತೆಗೆದುಕೊಂಡು ಹೋದೆವು. ಮನುಷ್ಯತ್ವವೇ ಎಲ್ಲಕ್ಕಿಂತ ಮುಖ್ಯ ಅಲ್ವೇ?” ಎಂದು ಸ್ಥಳೀಯ ನಿವಾಸಿ ಮೊಹಮ್ಮದ್ ಜುಬೇರ್ ಹೇಳುತ್ತಾರೆ.
ಉತ್ತರ ಪ್ರದೇಶದ ಬುಲಂದ್ಶಹರ್ ಜಿಲ್ಲೆಯಲ್ಲಿ ಈ ಹಿಂದೆ ಹಲವು ಬಾರಿ ಕೋಮುಗಲಭೆಗಳಾಗಿವೆ. ಸೂಕ್ಷ್ಮ ಘಟನೆಗಳು ಸಂಭವಿಸಿದಾಗೆಲ್ಲಾ ಇಲ್ಲಿನ ಜನರಿಗೆ ಗಲಭೆಯ ಭೀತಿ ಎದುರಾಗುತ್ತದೆ. ಇಂಥ ಹಿನ್ನೆಲೆಯಲ್ಲಿ ಕೊರೋನಾ ವೈರಸ್ನ ಸಂಕಷ್ಟದ ಸ್ಥಿತಿ ಎದುರಾದಾಗ ಧರ್ಮಗಳನ್ನು ಮೀರಿ ಮಾನವೀಯ ಮುಖವೇ ತೋರ್ಪಡುವುದು ಸೋಜಿಗದ ಸಂಗತಿಯೇ.
ವರದಿ: ಖಾಜಿ ಫರಾಜ್ ಅಹ್ಮದ್
First published:
March 29, 2020, 10:30 PM IST