ಬೆಂಗಳೂರು(ಮೇ.05): ರಾಜ್ಯ ಸರ್ಕಾರದ ಮನವಿಗೆ ಸ್ಪಂದಿಸಿ ಬೆಂಗಳೂರಿನಲ್ಲೇ ಉಳಿ ವಲಸೆ ಕಾರ್ಮಿಕರು ನಾಳೆಯಿಂದ ಕೆಲಸ ಶುರು ಮಾಡಲಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಕೇಂದ್ರ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರು ತಮ್ಮ ರಾಜ್ಯಗಳಿಗೆ ಹೋಗಲು ಸಿದ್ದರಿದ್ದರು. ಈಗಾಗಲೇ ಕೆಲವರು ತಮ್ಮ ತವರಿಗೆ ಹೋಗಿದ್ದಾರೆ. ನಾವು ಇಲ್ಲೇ ಇದ್ದು ಕೆಲಸ ಮಾಡಿ ಎಂದು ಉಳಿದ ಕಾರ್ಮಿಕರಿಗೆ ಮನವಿ ಮಾಡಿದ್ದೆವು. ಈಗ ಮನವಿಗೆ ಸ್ಪಂದಿಸಿದ ಇವರು ಕ್ಯಾಂಪ್ಗೆ ವಾಪಸ್ಸು ಹೋಗಿದ್ದು, ನಾಳೆಯಿಂದ ಕೆಲಸ ಮಾಡಲಿದ್ದಾರೆ ಎಂದರು.
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ನಾಳೆಯಿಂದ ಬೆಂಗಳೂರಿನಲ್ಲಿ ಒಂದಷ್ಟು ಕಾಮಗಾರಿ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಹೀಗಾಗಿ ಈ ವಲಸೆ ಕಾರ್ಮಿಕರಿಗೆ ತಮ್ಮ ಕ್ಯಾಂಪ್ನಲ್ಲಿ ಉಳಿಯಲು ವ್ಯವಸ್ಥೆ ಮಾಡಿದ್ದೇವೆ. ಎಂದಿನಂತೆಯೇ ನಾಳೆಯಿಂದ ಕೆಲಸ ಆರಂಭವಾಗಲಿದೆ. ಅವರ ರಾಜ್ಯಗಳಿಂದ ಪ್ರತಿಕ್ರಿಯೆ ಸಿಕ್ಕ ಮೇಲೆ ಬೇಕಾದರೆ ಉಳಿದ ಕಾರ್ಮಿಕರನ್ನು ತಮ್ಮ ತವರಿಗೆ ಕಳಿಸುವ ಕೆಲಸ ಮಾಡುತ್ತೇವೆ ಎಂದರು.
ಹೀಗೆ ಮುಂದುವರಿದ ಅವರು, ವಿದೇಶದಿಂದ ಬಂದ ಕನ್ನಡಿಗರನ್ನು ಕ್ವಾರಂಟೇನ್ ಮಾಡುವ ಸಂಬಂಧ ಕ್ರಮ ತೆಗೆದುಕೊಳ್ಳುತ್ತೇವೆ. ಈಗಾಗಲೇ ಶಾಸಕರು, ಸಂಸದರು ಆಯಾ ಜಿಲ್ಲೆಯ ಅಧಿಕಾರಿಗಳು ವಿದೇಶದಿಂದ ಬಂದೋರನ್ನ ಕ್ವಾರಂಟೇನ್ ಮಾಡಲು ಮನವಿ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ ಎಂದು ಹೇಳಿದರು.
ಇದನ್ನೂ ಓದಿ: ತವರಿಗೆ ಮರಳಲು ಮುಂದಾದ ವಲಸೆ ಕಾರ್ಮಿಕರು: ಇಲ್ಲೇ ಉಳಿಯಿರಿ ಎಂದು ಮನವೊಲಿಕೆಗೆ ಆರ್. ಅಶೋಕ್ ಯತ್ನ
ಬಗರ್ ಹುಕುಂ ಸಾಗುವಳಿ ಸಕ್ರಮಕ್ಕೆ ಅರ್ಜಿ ಸಲ್ಲಿಸಲು ರೈತರಿಗೆ ಮತ್ತೊಂದು ಅವಕಾಶ ನೀಡಲಾಗುವುದು. ಈ ಹಿಂದೆ ಅರ್ಜಿ ಸಲ್ಲಿಸಿದ್ದ ಹಲವಾರು ರೈತರ ಅರ್ಜಿ ತಿರಸ್ಕೃತಗೊಂಡಿತ್ತು. ಇದೀಗ ಭೂ ಸುಧಾರಣಾ ಕಾಯ್ದೆಯಡಿ ಅಕ್ರಮ ಭೂಮಿಯನ್ನು ಸಕ್ರಮ ಮಾಡಿಸಿಕೊಳ್ಳಲು ಅರ್ಜಿ ಅಹ್ವಾನಿಸಲಾಗಿದೆ. ಈಗ ರೈತರಿಗೆ ಮತ್ತೊಂದು ಅವಕಾಶ ನೀಡಿದ್ದೇವೆ. ಇದರಿಂದ ಲಕ್ಷಾಂತರ ರೈತರಿಗೆ ಅನುಕೂಲ ಆಗಲಿದೆ ಎಂದು ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ