Vijayasarthy SNVijayasarthy SN
|
news18-kannada Updated:April 6, 2021, 10:37 AM IST
ಲಸಿಕೆ ಸಾಂದರ್ಭಿಕ ಚಿತ್ರ
ನವದೆಹಲಿ(ಏ. 06): ದೇಶದಲ್ಲಿ ಕೊರೋನಾದ ಎರಡನೇ ಅಲೆ ಭೀಕರವಾಗಿ ಆರ್ಭಟಿಸುತ್ತಿದೆ. ಮೊದಲ ಅಲೆ ನಿಧಾನವಾಗಿ ಪ್ರವಹಿಸಿದರೆ, ಎರಡನೇ ಅಲೆ ಸುನಾಮಿಯಂತೆ ರೊಚ್ಚಿಗೆದ್ದಿದೆ. ದೇಶಾದ್ಯಂತ ಪ್ರಕರಣಗಳು ದಿವೊಂದಕ್ಕೆ ಲಕ್ಷ ಮೀರಿ ದಾಖಲಾಗುತ್ತಿರುವುದು ಆತಂಕ ತಂದಿದೆ. ಅಮೆರಿಕವನ್ನೂ ಹಿಂದಿಕ್ಕುವ ನಿಟ್ಟಿನಲ್ಲಿ ಭಾರತದಲ್ಲಿ ಕೊರೋನಾ ಮುನ್ನುಗ್ಗುತ್ತಿದೆ. ಲಸಿಕೆ ಬಂದು ಕೆಲ ತಿಂಗಳುಗಳೇ ಕಳೆದರೂ ಜನಸಂಖ್ಯೆಯ ಕೆಲವೇ ಪ್ರಮಾಣದ ಜನರು ಮಾತ್ರ ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾರೆ. ಇದೀಗ 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ಲಭ್ಯವಾಗಿದೆ. ಆದರೂ ಕೊರೋನಾ ಪ್ರಕರಣಗಳ ಏರಿಕೆಯಲ್ಲಿ ಯಾವುದೇ ಇಳಿಮುಖದ ಸೂಚನೆ ಕಾಣುತ್ತಿಲ್ಲ. ಸಾಂದರ್ಭಿಕ ಗಂಭೀರತೆಯನ್ನ ದೃಷ್ಟಿಯಲ್ಲಿಟ್ಟುಕೊಂಡು ಇಂಡಿಯನ್ ಮೆಡಿಕಲ್ ಅಸೋಷಿಯೇಶನ್ ಐಎಂಎ ಕೆಲ ಸಲಹೆಗಳನ್ನ ನೀಡಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದೆ. ಅದರಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಮುಕ್ತವಾಗಿ ಸಿಗುವಂತೆ ಮಾಡಬೇಕು ಎಂಬ ಸಲಹೆಯೂ ಒಳಗೊಂಡಿದೆ.
ಕೊರೋನಾ ಸೋಂಕು ಬಹಳ ವೇಗವಾಗಿ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ನಮ್ಮ ಲಸಿಕೆ ಅಭಿಯಾನವನ್ನು ಇನ್ನೂ ತೀವ್ರಗೊಳಿಸುವ ತುರ್ತು ಅಗತ್ಯತೆ ಇದೆ. ಪ್ರತಿಯೊಬ್ಬ ವ್ಯಕ್ತಿಗೂ ತಮ್ಮ ಸಮೀಪದ ಸ್ಥಳದಲ್ಲೇ ಉಚಿತವಾಗಿ ಲಸಿಕೆ ಸಿಗುವಂತೆ ವ್ಯವಸ್ಥೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಲಿ ಎಂದು ಐಎಂಎ ತನ್ನ ಪತ್ರದಲ್ಲಿ ಬರೆದಿದೆ. ಕೊರೋನಾ ಅತಿ ಹೆಚ್ಚು ಬಾಧಿಸುತ್ತಿರುವ ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು 25 ವರ್ಷ ಮೇಲ್ಪಟ್ಟವರಿಗೆ ಲಸಿಕೆಯ ವ್ಯವಸ್ಥೆ ಮಾಡಬೇಕೆಂದು ಕೇಂದ್ರವನ್ನು ಒತ್ತಾಯಿಸಿದ್ದಾರೆ. 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಬೇಕೆಂಬ ಪ್ರಸ್ತಾವವನ್ನು ಮೊದಲು ಮುಂದಿಟ್ಟು ಠಾಕ್ರೆಯವರೇ. ತನ್ನ ಆ ಸಲಹೆಯನ್ನ ಪರಿಗಣಿಸಿ ಜಾರಿಗೆ ತಂದಿದ್ದಕ್ಕೆ ಪ್ರಧಾನಿಗೆ ಉದ್ಧವ್ ಧನ್ಯವಾದ ಹೇಳಿದ್ದಾರೆ.
ಇದನ್ನೂ ಓದಿ: ಕೇಂದ್ರದೊಂದಿಗೆ ಇಂದು ಕರ್ನಾಟಕ ಸೇರಿ 11 ರಾಜ್ಯಗಳ ಆರೋಗ್ಯ ಸಚಿವರ ಸಭೆ
ಪ್ರಧಾನಿಗೆ ಐಎಂಎ ಬರೆದ ಪತ್ರದಲ್ಲಿನ ಮುಖ್ಯ ಅಂಶಗಳು:
* 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ವ್ಯಕ್ತಿಗೂ ಲಸಿಕೆ ಹಾಕಿಸಿಕೊಳ್ಳಲು ಅವಕಾಶ ಕೊಡಿ
* ಲಸಿಕೆ ಅಭಿಯಾನದಲ್ಲಿ ಸರ್ಕಾರದ ಜೊತೆ ಖಾಸಗಿ ಆಸ್ಪತ್ರೆಗಳು ಕೈಜೋಡಿಸಿವೆ. ಅದೇ ರೀತಿ ಖಾಸಗಿ ವಲಯದ ಫ್ಯಾಮಿಲಿ ಕ್ಲಿನಿಕ್ಗಳನ್ನೂ ಲಸಿಕೆಗೆ ಬಳಸಿಕೊಳ್ಳಬಹುದು.
* ವ್ಯಾಪಕವಾಗಿ ಲಸಿಕೆ ಕಾರ್ಯ ಮಾಡಲು ಮತ್ತು ಪರಿವೀಕ್ಷಿಸಲು ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಜಿಲ್ಲಾ ಮಟ್ಟದಲ್ಲಿ ವ್ಯಾಕ್ಸಿನ್ ಟ್ಯಾಸ್ಕ್ ಫೋರ್ಸ್ಗಳ ರಚನೆಯಾಗಬೇಕು.* ಸಾರ್ವಜನಿಕ ಸ್ಥಳಗಳನ್ನ ಪ್ರವೇಶಿಸುವ ಮತ್ತು ಪಡಿತರ ಪಡೆಯಲು ಬರುವ ವ್ಯಕ್ತಿ ಬಳಿ ವ್ಯಾಕ್ಸಿನ್ ಸರ್ಟಿಫಿಕೇಟ್ ಇರುವುದು ಕಡ್ಡಾಯವಾಗಬೇಕು.
* ಸಿನಿಮಾ, ಸಾಂಸ್ಕೃತಿಕ, ಧಾರ್ಮಿಕ, ಕ್ರೀಡೆ ಇತ್ಯಾದಿ ಅತ್ಯಗತ್ಯವಲ್ಲದ ಕ್ಷೇತ್ರಗಳಲ್ಲಿ ಸೀಮಿತ ಅವಧಿಯವರೆಗೆ ನಿರಂತರ ಲಾಕ್ಡೌನ್ ಮಾಡಬೇಕು.
“ಕೋವಿಡ್ ವಿರುದ್ಧದ ಹೋರಾಟದಲ್ಲಿ ನಮಗೆ ಸಾಕ್ಷ್ಯ ಪೂರಕ ಸಂಪನ್ಮೂಲ ಎಂದರೆ ಲಸಿಕೆ ಮಾತ್ರವೇ. ವ್ಯಕ್ತಿಯ ರೋಗ ನಿರೋಧಕ ಶಕ್ತಿ ಜಾಗೃತಿಗೊಳಿಸಿ ಹರ್ಡ್ ಇಮ್ಯೂನಿಟಿಗೆ ದಾರಿ ಮಾಡಿಕೊಡುವ ಮೂಲಕ ಕೋವಿಡ್ ರೋಗದ ತೀವ್ರತೆಯನ್ನು ಈ ಲಸಿಕೆ ಕಡಿಮೆ ಮಾಡಬಲ್ಲುದು” ಎಂದು ಭಾರತೀಯ ವೈದ್ಯಕೀಯ ಸಂಸ್ಥೆ ಹೇಳಿದೆ.
ಇದನ್ನೂ ಓದಿ: ಪಂಚರಾಜ್ಯ ಚುನಾವಣೆ; ಇಂದು ಮಹತ್ವದ ದಿನ – 4 ರಾಜ್ಯಗಳಲ್ಲಿ ಇಂದೇ ಮತದಾನ ಮುಕ್ತಾಯ
ಜನವರಿ ತಿಂಗಳಲ್ಲೇ ಭಾರತದಲ್ಲಿ ಲಸಿಕಾ ಅಭಿಯಾನ ಶುರುವಾಗಿದೆ. ಆದ್ಯತಾ ವರ್ಗಗಳನ್ನ ಗುರುತಿಸಿ ಹಂತ ಹಂತವಾಗಿ ಲಸಿಕೆ ಹಾಕಲಾಗುತ್ತಿದೆ. ಮೊದಲ ಹಂತದಲ್ಲ ಕೊರೋನಾ ಸೋಂಕಿಗೆ ಹೆಚ್ಚು ತುತ್ತಾಗುವ ಅಪಾಯದಲ್ಲಿರುವ ಆರೋಗ್ಯ ಕಾರ್ಯಕರ್ತರು ಮತ್ತು ಫ್ರಂಟ್ ಲೈನ್ ವರ್ಕರ್ಸ್ಗೆ ಲಸಿಕೆ ಕೊಡಲಾಗಿತ್ತು. ಎರಡನೇ ಹಂತದಲ್ಲಿ 60 ವರ್ಷ ಮೇಲ್ಪಟ್ಟ ವೃದ್ಧರು ಮತ್ತು ಬೇರೆ ನಿರ್ದಿಷ್ಟ ರೋಗಗಳಿರುವ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ವ್ಯವಸ್ಥೆ ಮಾಡಲಾಗಿತ್ತು. ಇದೀಗ ಕೆಲ ದಿನಗಳಿಂದ 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ಪಡೆಯುವ ಅವಕಾಶ ಮಾಡಿಕೊಡಲಾಗಿದೆ. ಇಲ್ಲಿಯವರೆಗೆ ಸುಮಾರು 8 ಕೋಟಿಯಷ್ಟು ಮಂದಿ ಲಸಿಕೆ ಪಡೆದಿದ್ದಾರೆ. ಇವರ ಪೈಕಿ ಒಂದು ಕೋಟಿ ಜನರು ಎರಡೂ ಡೋಸ್ಗಳನ್ನ ಪಡೆದಿದ್ದಾರೆ. ದೇಹದಲ್ಲಿ ಇಮ್ಯೂನಿಟಿ ಬರಬೇಕೆಂದರೆ ಎರಡು ಡೋಸ್ ಲಸಿಕೆ ಪಡೆಯುವುದು ಅತ್ಯಗತ್ಯ. ಒಂದು ಡೋಸ್ನಿಂದ ರೋಗನಿರೋಧಕ ಶಕ್ತಿ ಉತ್ಪತ್ತಿಯಾಗುವುದಿಲ್ಲ.
Published by:
Vijayasarthy SN
First published:
April 6, 2021, 10:37 AM IST